varthabharthi


ನಿಮ್ಮ ಅಂಕಣ

ಪಿ.ಡಿ.ಒ.ಗಳಿಂದ ಈ ಕೆಲಸ ಸಾಧ್ಯವೇ?

ವಾರ್ತಾ ಭಾರತಿ : 18 May, 2022
ಎನ್. ಮಹೇಶ, ಕೆಲ್ಲಂಬಳ್ಳಿ

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಒ.)ಗಳಿಗೆ ರಾಜ್ಯ ಸರಕಾರ ಇತ್ತೀಚೆಗೆ ‘ವಿವಾಹ ನೋಂದಾವಣೆ’ ಮಾಡಿಸುವ ಮಹತ್ತರವಾದ ಅಧಿಕಾರವನ್ನು ನೀಡಿದೆ. ಇಲ್ಲಿಯ ತನಕ ನಿರ್ವಹಿಸುತ್ತಿದ್ದ ತಮ್ಮ ಕೆಲಸದ ಜೊತೆಗೆ ಪಿ.ಡಿ.ಒ.ಗಳಿಗೆ ಈಗ ಹೊಸ ಜವಾಬ್ದಾರಿಯ ‘ಪ್ರಮೋಷನ್’ ಸಿಕ್ಕಿದಂತಾಗಿದೆ. ಆದರೆ ‘‘ಮುಂದೈತೆ ಮಾರಿ ಹಬ್ಬ’’ ಅಂದಹಾಗೆ ಈ ವಿಷಯದಲ್ಲಿ ತಮ್ಮ ಸುತ್ತಮುತ್ತಲೇ ಇರುವ ಕಾಣದ ‘ಗುಮ್ಮ’ ಪಿ.ಡಿ.ಒ.ಗಳನ್ನು ಮುಂದೆ ಕಾಡಬಹುದು. ಈ ಬಗ್ಗೆ ಎಚ್ಚರವಹಿಸಬೇಕಿದೆ.

ಹಾಗಾದರೆ, ಈ ಗುಮ್ಮ ಯಾರು? ಸಮಸ್ಯೆ ಏನು? ಗೊತ್ತಾಗಬೇಕಲ್ಲವೆ? ಅವರೇ ಗ್ರಾಮದ ಯಜಮಾನ, ಊರಗೌಡ, ದೊಡ್ಡ ಯಜಮಾನ, ಚಿಕ್ಕ ಯಜಮಾನ ಗಡಿ ಯಜಮಾನ ಇತ್ಯಾದಿ ಹೆಸರಿನಲ್ಲಿ ಕರೆಯಲ್ಪಡುವ ಸ್ವಯಂಘೋಷಿತ ವ್ಯಕ್ತಿಗಳು. ಇವರು ಹಳ್ಳಿಯಲ್ಲಿ ಯಾವುದಾದರೂ ಅರಳಿಮರದ ಕಟ್ಟೆಯ ಕೆಳಗೋ, ಮಂದಿರ ಅಥವಾ ಚಾವಡಿ ಎಂಬ ಪಡಸಾಲೆಯಲ್ಲಿ ಕುಳಿತು ತಮ್ಮ ಯಜಮಾನಗಿರಿ ನಡೆಸುವವರು. ಕೆಲವು ಸಿನೆಮಾಗಳ ಕಥಾ ಪಾತ್ರಗಳಲ್ಲಿ ಇಂತಹವರನ್ನು ವೈಭವೀಕರಿಸಿರುವುದನ್ನು ನಾವು ಕಾಣುತ್ತೇವೆ.
ಊರಿನ ಜಾತ್ರೆ ಹೇಗೆ ನಡೆಯಬೇಕು ಎಂಬುದರಿಂದ ಹಿಡಿದು, ಗಂಡ-ಹೆಂಡತಿ ಜಗಳ, ಆಸ್ತಿ ವಿವಾದ ಮುಂತಾದ ವಿಷಯಗಳ ಬಗ್ಗೆ ತಾವೇ ಕಾನೂನು ಪಂಡಿತರಂತೆ ತೀರ್ಪು ಕೊಡುವವರಾಗಿರುತ್ತಾರೆ. ಕ್ಷುಲ್ಲಕ ಪ್ರಕರಣಗಳಿಗೆ ದಂಡಹಾಕುವ, ಬಹಿಷ್ಕಾರ ಹಾಕುವ ಮತ್ತು ಯಾವುದೇ ರಸೀದಿ, ಸೀಲು ಇಲ್ಲದೆ ಹಣಕಾಸು ಸಂಗ್ರಹಿಸುವ ‘ಇಷ್ಟು ಕೊಡಬೇಕು’ ಎಂದು ನಿಗದಿಪಡಿಸುವ ಈ ತರಹದ ಒಂದು ಅಸಾಂವಿಧಾನಾತ್ಮಕವಾದ ಮತ್ತು ಕಾನೂನು ಬಾಹಿರ ವ್ಯವಸ್ಥೆಯನ್ನು ಬಹಿರಂಗವಾಗಿಯೂ ಮತ್ತು ನಿಗೂಢವಾಗಿಯೂ ಮುಂದುವರಿಸಿಕೊಂಡು ಇಡೀ ಗ್ರಾಮ, ಕೇರಿಯನ್ನು ತಾವೇ ನಿಯಂತ್ರಿಸುತ್ತಿದ್ದಾರೆ. ಈ ಗುಂಪು ಬಹಿಷ್ಕಾರ ಹಾಕಿದ ಎಷ್ಟೋ ಪ್ರಕರಣಗಳನ್ನು ತಾಲೂಕು ಆಡಳಿತ, ಜಿಲ್ಲಾಡಳಿತ, ಪೊಲೀಸ್ ಮಧ್ಯೆ ಪ್ರವೇಶಿಸಿ, ರಾಜಿ ಮಾಡಿಸಿದ ಮತ್ತು ಬಹಿಷ್ಕಾರ ರದ್ದುಪಡಿಸಿದ ಉದಾಹರಣೆಗಳು ಸಾಕಷ್ಟು ಇವೆ. ವಿಶೇಷವೆಂದರೆ ಇಲ್ಲಿ ‘ಹಳ್ಳಿಯ ಯಜಮಾನಿ’ ಎಂಬ ಪಾತ್ರ ಇಲ್ಲ. ಬಹುಶ: ಮಹಿಳೆಯನ್ನು ಒಳಗೊಳ್ಳದ ಕ್ಷೇತ್ರ ಯಾವುದಾದರೂ ಇದ್ದರೆ ಇದೇ ಇರಬೇಕು ಎಂದು ಅನಿಸುತ್ತೆ. ಎಲ್ಲಾ ಪುರುಷರದ್ದೇ ಮೇಲುಗೈ.
ಇವರು ತಮ್ಮದೇ ವರ್ಚಸ್ಸಿನಿಂದ ಸ್ಥಳೀಯ ಪಂಚಾಯತ್‌ನಲ್ಲಿ ಜನಪ್ರತಿನಿಧಿಯಾಗಿ ಸದಸ್ಯ ಅಥವಾ ಅಧ್ಯಕ್ಷನ ಪಟ್ಟವನ್ನು ಅಲಂಕರಿಸುವುದನ್ನು ನೋಡುತ್ತೇವೆ.
ಹೀಗಿದ್ದಲ್ಲಿ ಇಲ್ಲೇ ಶುರುವಾಗುವುದು ಅಸಲಿ ಸಮಸ್ಯೆ. ಹೀಗೊಂದು ಯಜಮಾನ ಗುಂಪು ಸಹಜವಾಗಿಯೇ ಅಂತರ್ಜಾತಿ ಮದುವೆ ಮಾತಿರಲಿ ಸ್ವಜಾತಿ ಮದುವೆಗಳಿಗೂ ಅಡ್ಡಿ ಪಡಿಸುತ್ತಾರೆ. ಮುಂದೆ ಈ ಪರಿ ಮದುವೆಗಳು ಏರ್ಪಟ್ಟರೆ ಇಂತಹವರು ಪಿ.ಡಿ.ಒ.ಗಳಿಗೆ ಬೆಂಬಲ ಕೊಡುವರೇ? ಖಂಡಿತಾ ಇಲ್ಲ ಅಂದುಕೊಳ್ಳಬಹುದು ಮತ್ತು ಈ ವಿಷಯವನ್ನು ತಮ್ಮದೇ ಚಾವಡಿಗೆ ವರ್ಗಾಯಿಸಿ, ‘‘ನಾವೇ ನ್ಯಾಯ ಪಂಚಾಯಿತಿ ಮಾಡಿ ಸರಿಪಡಿಸುತ್ತೇವೆ’’ ಎಂದು ಪಟ್ಟು ಹಿಡಿಯಬಹುದು. ಈ ಪರಿಸ್ಥಿತಿಯಲ್ಲಿ ಪಿ.ಡಿ.ಒ.ಗಳು ಇವರನ್ನು ಎದುರು ಹಾಕಿಕೊಂಡು ಸಂಬಂಧಪಟ್ಟ ಮದುವೆ ಮಾಡಿಸಲು ಮುಂದಾಗುವರೇ? ಇದು ಘಟಿಸಿದಾಗಲೇ ತಿಳಿಯಬೇಕು. ಇದರಿಂದಾಗಿ ಮದುವೆ ಆಗುವ ಜೋಡಿಗಳು ಗ್ರಾಮದ ಮುಖಂಡರಿಗೆ ಹೆದರುವ ಅನಿವಾರ್ಯತೆ ಉಂಟಾಗಬಹುದು. ಇಷ್ಟು ದಿನ ಊರ ಕಣ್ಣು ತಪ್ಪಿಸಿ, ಸದ್ದಿಲ್ಲದೆ ತಾಲೂಕು ನೋಂದಾವಣೆ ಕಚೇರಿಯಲ್ಲಿ ವಿವಾಹವಾಗುತ್ತಿದ್ದ ಜೋಡಿಗಳಿಗೆ ಸ್ಥಳೀಯ ಮಟ್ಟದಲ್ಲಿ ಆಗಲು ಧೈರ್ಯ ಬರುವುದಿಲ್ಲ ಮತ್ತು ಮುಜುಗರವೂ ಹೌದು. ಇಲ್ಲಿ ರಾಜಕೀಯವೂ ನುಸುಳಬಹುದು. ಒಟ್ಟಿನಲ್ಲಿ ಪಿ.ಡಿ.ಒ.ಗಳಿಗೆ ಕಿರಿಕಿರಿ ಕಟ್ಟಿಟ್ಟ ಬುತ್ತಿ.
ದೇಶವು ಪ್ರಜಾಪ್ರಭುತ್ವ ಆಧಾರದಲ್ಲಿ ನಡೆಯುತ್ತಿರುವಾಗ ‘ಯಜಮಾನ’ ಎನ್ನುವ ವ್ಯವಸ್ಥೆಯನ್ನು ನಾವು ಒಪ್ಪಿಕೊಳ್ಳಬೇಕೇ? ಇದು ಪಾಳೇಗಾರಿಕೆ ಸಂಸ್ಕೃತಿಯಲ್ಲವೇ? ಇದನ್ನು ನಿಯಂತ್ರಿಸುವ ಹೊಣೆ ಯಾರದ್ದು? ಸರಕಾರ ಈ ಬಗ್ಗೆ ಸ್ಪಷ್ಟ ಪಡಿಸಬೇಕಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)