varthabharthi


ಕರ್ನಾಟಕ

90ನೇ ವರ್ಷಕ್ಕೆ ಕಾಲಿಟ್ಟ ಎಚ್.ಡಿ.ದೇವೇಗೌಡ: ಪ್ರಧಾನಿ ಸಹಿತ ಗಣ್ಯರಿಂದ ಶುಭಾಶಯ

ವಾರ್ತಾ ಭಾರತಿ : 18 May, 2022

ಬೆಂಗಳೂರು, ಮೇ 18: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಇಂದು (ಮೇ 18) 90ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌, ಲೋಕಸಭಾ ಸಭಾಪತಿ ಓಂ ಬಿರ್ಲಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ.

 ‘ನಮ್ಮ ಮಾಜಿ ಪ್ರಧಾನಿ ಮತ್ತು ಗೌರವಾನ್ವಿತ ರಾಜಕಾರಣಿ ಎಚ್‌.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೇವರು ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಟ್ವೀಟ್  ಮೂಲಕ ಶುಭ ಹಾರೈಸಿದ್ದಾರೆ.

ಹಿರಿಯ ನಾಯಕರು, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತಾ, ನಮ್ಮ ನಾಡಿಗೆ ಅವರ ಮಾರ್ಗದರ್ಶನ ಇನ್ನಷ್ಟು ದೀರ್ಘಕಾಲ ದೊರಕಲಿ ಎಂದು ಆಶಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

'ಹಿರಿಯರು, ಮಾಜಿ ಪ್ರಧಾನ ಮಂತ್ರಿ, ಆತ್ಮೀಯರಾದ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

'ಭಾರತದ ಮಾಜಿ ಪ್ರಧಾನಮಂತ್ರಿಗಳು, ಮಣ್ಣಿನಮಗ, ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು ಹಾಗೂ ನನ್ನ ಗೌರವಪೂರ್ವಕ ಪ್ರಣಾಮಗಳು.  ಅಲ್ಪಕಾಲವಷ್ಟೇ ಅಧಿಕಾರದಲ್ಲಿದ್ದರೂ ಕರ್ನಾಟಕ ಮತ್ತು ಭಾರತಕ್ಕೆ ಆವಿಸ್ಮರಣೀಯ ಕೊಡುಗೆ ನೀಡಿದವರು ಇವರು. ಕಾಯಾ ವಾಚಾ, ಮನಸಾ ಜನರ ಉದ್ಧಾರಕ್ಕಾಗಿ ಶ್ರಮಿಸಿದ ಅವರು ಭಾರತದ ರಾಜಕೀಯ ಕರ್ಮಯೋಗಿ. ತೊಂಬತ್ತರ ಹರೆಯದಲ್ಲೂ ಜನರಪರ ಹೋರಾಟ ನಡೆಸುತ್ತಿರುವ ಧಣಿವರಿಯದ ಕಾಯಕಯೋಗಿ.  ಸದಾ ನನ್ನ ಕೈಹಿಡಿದು ಮುನ್ನಡೆಸಿದ ಅವರು ನನ್ನ ಪಾಲಿಗೆ ತಂದೆಯಷ್ಟೇ ಅಲ್ಲ; ಗುರು, ದೈವ, ಶಕ್ತಿಯೂ ಹೌದು. ನನಗಷ್ಟೇ ಅಲ್ಲ, ಈ ನಾಡಿಗೆ, ದೇಶಕ್ಕೆ ಇನ್ನಷ್ಟು ದೀರ್ಘಕಾಲ ಅವರ ಸೇವೆ-ಮಾರ್ಗದರ್ಶನ ಅಗತ್ಯವಿದೆ. ಆ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ'  ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)