varthabharthi


ರಾಷ್ಟ್ರೀಯ

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರೋಪಿ ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ವಾರ್ತಾ ಭಾರತಿ : 18 May, 2022

ಹೊಸದಿಲ್ಲಿ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಆರೋಪಿಗಳಲ್ಲಿ ಒಬ್ಬನಾದ ಎಜಿ ಪೆರಾರಿವಾಲನ್ ನನ್ನು ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.

ಈ ತೀರ್ಪು ಶ್ರೀಲಂಕಾ ಪ್ರಜೆಯಾದ ನಳಿನಿ ಶ್ರೀಹರನ್  ಹಾಗೂ ಆಕೆಯ ಪತಿ ಮುರುಗನ್ ಸೇರಿದಂತೆ ಇತರ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

ಹತ್ಯೆಯ ಸಮಯದಲ್ಲಿ ಹತ್ತೊಂಬತ್ತು ವರ್ಷ ವಯಸ್ಸಿನವನಾಗಿದ್ದ ಪೆರಾರಿವಾಲನ್ ಹತ್ಯೆಯ ಮಾಸ್ಟರ್‌ಮೈಂಡ್‌ನ ಎಲ್‌ಟಿಟಿಇ ವ್ಯಕ್ತಿ ಶಿವರಾಸನ್‌ಗಾಗಿ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದನೆಂದು ಆರೋಪಿಸಲಾಯಿತು. ರಾಜೀವ್ ಗಾಂಧಿ ಹತ್ಯೆಗೆ ಬಾಂಬ್ ನಲ್ಲಿ ಬ್ಯಾಟರಿಗಳನ್ನು ಬಳಸಲಾಗಿತ್ತು.

1998 ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣದಂಡನೆ ವಿಧಿಸಿತ್ತು. ಮರು ವರ್ಷ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿದಿದೆ. ಆದರೆ 2014 ರಲ್ಲಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಈ ವರ್ಷದ ಮಾರ್ಚ್‌ನಲ್ಲಿ, ಉನ್ನತ ನ್ಯಾಯಾಲಯವು ಪೆರಾರಿವಾಲನ್ ಗೆ ಜಾಮೀನು ನೀಡಿತ್ತು.

ಸ್ವಲ್ಪ ಸಮಯದ ನಂತರ ಪೆರಾರಿವಾಲನ್ ಜೈಲಿನಿಂದ ಬೇಗನೆ ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದ.

ಪೆರಾರಿವಾಲನ್ ಅವರ ಮನವಿಯನ್ನು ವಿರೋಧಿಸಿದ ಕೇಂದ್ರವು, ತಮಿಳುನಾಡು ರಾಜ್ಯಪಾಲರು ಈ ವಿಷಯವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದು, ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿತ್ತು.

ಪ್ರಕರಣದ ವಿಳಂಬ ಹಾಗೂ  ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)