varthabharthi


ರಾಷ್ಟ್ರೀಯ

ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಜಾಮೀನು

ವಾರ್ತಾ ಭಾರತಿ : 18 May, 2022

ಹೊಸದಿಲ್ಲಿ,ಮೇ 18: ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಮಾಧ್ಯಮ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿರುವ ಸರ್ವೋಚ್ಚ ನ್ಯಾಯಾಲಯವು,ಅವರು ಈಗಾಗಲೇ ಆರೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ಹೇಳಿದೆ.

ತನಗೆ ಜಾಮೀನು ನಿರಾಕರಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ನವಂಬರ್ 2021ರ ಆದೇಶವನ್ನು ಪ್ರಶ್ನಿಸಿ ಮುಖರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್,ಬಿ.ಆರ್.ಗವಾಯಿ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು,‘ಕೇವಲ ಶೇ.50ರಷ್ಟು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದರಿಂದ ವಿಚಾರಣೆಯು ಶೀಘ್ರ ಮುಗಿಯುವ ಸಾಧ್ಯತೆಗಳಿಲ್ಲ. ಪ್ರಕರಣವು ಸಾಂದರ್ಭಿಕ ಸಾಕ್ಷಗಳನ್ನು ಆಧರಿಸಿದೆ. ಅರ್ಜಿದಾರರು ಈಗಾಗಲೇ ಸುದೀರ್ಘ ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ಅವರು ಷರತ್ತುಗಳೊಂದಿಗೆ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಪ್ರಕರಣದ ಅರ್ಹತೆಯ ಬಗ್ಗೆ ನಾವು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ,ಹಾಗೆ ಮಾಡಿದರೆ ಅದು ವಿಚಾರಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ ’ಎಂದು ಹೇಳಿತು.


ಮುಖರ್ಜಿ 2012,ಎ.24ರಂದು ಕಾರಿನಲ್ಲಿ ತನ್ನ ಪುತ್ರಿ ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಶೀನಾಳ ಶವವನ್ನು ಸುಟ್ಟು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅರಣ್ಯದಲ್ಲಿ ಎಸೆಯಲಾಗಿತ್ತು. ಮುಖರ್ಜಿಯನ್ನು 2015ರಲ್ಲಿ ಬಂಧಿಸಲಾಗಿತ್ತು.ಮುಖರ್ಜಿಯ ಪತಿ ಪೀಟರ್ ಮುಖರ್ಜಿ,ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮವರ್ ರಾಯ್ ಅಪರಾಧದಲ್ಲಿ ಶಾಮೀಲಾಗಿದ್ದ ಆರೋಪಿಗಳಾಗಿದ್ದಾರೆ.
ಪೀಟರ್ ಮುಖರ್ಜಿ 2020,ಮಾರ್ಚ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)