ಮಾಲಿನ್ಯಕ್ಕೆ ಬಲಿಯಾದ ಭಾರತ
ಅಧ್ಯಯನ ವರದಿಯಂತೆ ಮನೆಗಳಲ್ಲಿ ಉರುವಲಾಗಿ ಕಟ್ಟಿಗೆಯ ಬಳಕೆಯು ಭಾರತದಲ್ಲಿ ವಾಯುಮಾಲಿನ್ಯ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಕಲ್ಲಿದ್ದಲು ದಹನ ಮತ್ತು ಕೃಷಿತ್ಯಾಜ್ಯ ಸುಡುವಿಕೆ ನಂತರದ ಸ್ಥಾನದಲ್ಲಿವೆ.
2019ರಲ್ಲಿ ವಾಯುಮಾಲಿನ್ಯದಿಂದಾಗಿ ಸಂಭವಿಸಿದ ಸಾವುಗಳು ಸೇರಿದಂತೆ ಭಾರತದಲ್ಲಿ ಎಲ್ಲ ವಿಧಗಳ ಮಾಲಿನ್ಯಗಳಿಂದಾಗಿ 23.5 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನದಾಗಿದೆ ಎಂದು ‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್’ ಪ್ರಕಟಿಸಿರುವ ನೂತನ ಅಧ್ಯಯನವು ಹೇಳಿದೆ.
ಭಾರತದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಾವುಗಳ ಪೈಕಿ ಹೆಚ್ಚಿನ, ಅಂದರೆ 9.8 ಲಕ್ಷ ಸಾವುಗಳಿಗೆ ಪಿಎಂ2.5 ಮಾಲಿನ್ಯವು ಕಾರಣವಾಗಿದೆ. ಇವು ವಾತಾವರಣದಲ್ಲಿಯ ಎರಡೂವರೆ ಮೈಕ್ರೋನ್ ಅಥವಾ ಅದಕ್ಕಿಂತ ಕಡಿಮೆ ಅಗಲವನ್ನು ಹೊಂದಿರುವ ಪುಟ್ಟ ಮಾಲಿನ್ಯ ಕಣಗಳಾಗಿವೆ. ಮನೆಗಳಲ್ಲಿಯ ವಾಯು ಮಾಲಿನ್ಯದಿಂದಾಗಿ 6.1 ಲಕ್ಷ ಸಾವುಗಳು ಸಂಭವಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಜಾಗತಿಕವಾಗಿ 2019ರಲ್ಲಿ ಎಲ್ಲ ವಿಧದ ಮಾಲಿನ್ಯಗಳಿಂದಾಗಿ 90 ಲಕ್ಷ ಸಾವುಗಳು ಸಂಭವಿಸಿವೆ. ಅಂದರೆ ವಿಶ್ವದಲ್ಲಿಯ ಪ್ರತಿ ಆರು ಸಾವುಗಳಲ್ಲಿ ಒಂದಕ್ಕೆ ಮಾಲಿನ್ಯ ಕಾರಣವಾಗಿತ್ತು. ಈ ಪೈಕಿ 66.7 ಲಕ್ಷ ಸಾವುಗಳು ಮನೆಗಳಲ್ಲಿಯ ಮತ್ತು ವಾತಾವರಣದಲ್ಲಿಯ ವಾಯು ಮಾಲಿನ್ಯದಿಂದ ಸಂಭವಿಸಿದ್ದವು.
ಮಾಲಿನ್ಯವು ಆರೋಗ್ಯದ ಮೇಲೆ ಅಗಾಧ ದುಷ್ಪರಿಣಾಮಗಳನ್ನು ಬೀರುತ್ತಿದ್ದು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಹೆಚ್ಚಿನ ಬೆಲೆ ತೆರುತ್ತಿವೆ. ತೀವ್ರ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ದುಷ್ಪರಿಣಾಮಗಳ ಹೊರತಾಗಿಯೂ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಮಾಲಿನ್ಯ ತಡೆಗಟ್ಟುವಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಅಧ್ಯಯನ ವರದಿಯ ಮುಖ್ಯ ಲೇಖಕ, ಜಿನಿವಾದ ‘ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಆ್ಯಂಡ್ ಪೊಲ್ಯುಷನ್’ನ ರಿಚರ್ಡ್ ಫುಲರ್ ಹೇಳಿದ್ದಾರೆ. ಸ್ಥಳಾಕೃತಿ ಮತ್ತು ಹವಾಮಾನ ಸಂಬಂಧಿ ಕಾರಣಗಳಿಂದಾಗಿ ಉತ್ತರ ಭಾರತದಲ್ಲಿ ಶಕ್ತಿ, ಚಲನಶೀಲತೆ, ಕೈಗಾರಿಕೆ, ಕೃಷಿ ಮತ್ತು ಇತರ ಚಟುವಟಿಕೆಗಳ ಮೂಲಕ ಮಾಲಿನ್ಯಕಣಗಳು ವಾತಾವರಣದಲ್ಲಿ ದಟ್ಟಗೊಳ್ಳುತ್ತಿದ್ದು, ದೇಶದಲ್ಲಿಯೇ ಈ ಪ್ರದೇಶದಲ್ಲಿ ವಾಯುಮಾಲಿನ್ಯ ಅತ್ಯಂತ ತೀವ್ರವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನ ವರದಿಯಂತೆ ಮನೆಗಳಲ್ಲಿ ಉರುವಲಾಗಿ ಕಟ್ಟಿಗೆಯ ಬಳಕೆಯು ಭಾರತದಲ್ಲಿ ವಾಯುಮಾಲಿನ್ಯ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಕಲ್ಲಿದ್ದಲು ದಹನ ಮತ್ತು ಕೃಷಿತ್ಯಾಜ್ಯ ಸುಡುವಿಕೆ ನಂತರದ ಸ್ಥಾನದಲ್ಲಿವೆ.
ವಾತಾವರಣದಲ್ಲಿಯ ಮಾಲಿನ್ಯಕ್ಕೆ ಜನಸಂಖ್ಯಾ ಆಧಾರಿತ ಸರಾಸರಿ ಒಡ್ಡುವಿಕೆಯು 2014ರಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತುಂಗಕ್ಕೇರಿದ್ದು, ಪ್ರತೀ ಘನ ಮೀಟರ್‌ಗೆ 95 ಮಿ.ಗ್ರಾಂ ಆಗಿತ್ತು. ಇದು 2017ರಲ್ಲಿ ಪ್ರತೀ ಘನ ಮೀಟರ್‌ಗೆ 82 ಮಿ.ಗ್ರಾಂ ಗೆ ಇಳಿದಿತ್ತು. ಆದರೆ ಇತ್ತೀಚೆಗೆ ಮತ್ತೆ ನಿಧಾನವಾಗಿ ಏರುತ್ತಿದೆ ಎಂದು ವರದಿಯು ಹೇಳಿದೆ.
ಭಾರತವು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ ಸೇರಿದಂತೆ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು 2019ರಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗವೊಂದನ್ನು ಸ್ಥಾಪಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮಾಲಿನ್ಯ ಮೂಲಗಳ ಮೇಲೆ ನಿರ್ಬಂಧಗಳನ್ನು ಹೇರಲು ನಿಯಂತ್ರಣಾಧಿಕಾರಗಳನ್ನು ಹೊಂದಿವೆ ಎಂದು ಹೇಳಿರುವ ವರದಿಯು, ಭಾರತವು ತನ್ನ ವಾಯು ಮಾಲಿನ್ಯ ನಿಯಂತ್ರಣ ಪ್ರಯತ್ನಗಳಿಗೆ ಒತ್ತು ನೀಡಲು ಸದೃಢ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಹೊಂದಿಲ್ಲ. ಪರಿಣಾಮವಾಗಿ ಒಟ್ಟಾರೆ ವಾಯು ಗುಣಮಟ್ಟದಲ್ಲಿ ಸುಧಾರಣೆಗಳು ಸೀಮಿತ ಮತ್ತು ಅಸಮವಾಗಿವೆ ಎಂದು ಬೆಟ್ಟು ಮಾಡಿದೆ.
ಭಾರತದ ಪಿಎಂ2.5 ಮಾಲಿನ್ಯವು ದೇಶದ ಶೇ.93ರಷ್ಟು ಪ್ರದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿನ ಪ್ರತೀ ಘನ ಮೀಟರ್‌ಗೆ 10 ಮೈಕ್ರೋಗ್ರಾಮ್‌ಗಿಂತ ಸಾಕಷ್ಟು ಅಧಿಕವೇ ಇದೆ ಎಂದು ವರದಿಯು ತಿಳಿಸಿದೆ.
ಭಾರತದಲ್ಲಿ ಸಾಂಪ್ರದಾಯಿಕ ಮಾಲಿನ್ಯ (ಘನ ಇಂಧನಗಳು ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಮತ್ತು ಕೈತೊಳೆಯುವಿಕೆಗೆ ಸಂಬಂಧಿಸಿದ ಮನೆಗಳಲ್ಲಿನ ವಾಯು ಮಾಲಿನ್ಯ)ದಿಂದಾಗಿ ಸಾವುಗಳ ಸಂಖ್ಯೆಯು 2000ದಿಂದೀಚೆಗೆ ಅರ್ಧಕ್ಕೂ ಹೆಚ್ಚು ಇಳಿಕೆಯಾಗಿದೆ ಎಂದಿರುವ ವರದಿಯು, ವಾತಾವರಣದಲ್ಲಿಯ ಪಾರ್ಟಿಕ್ಯುಲೇಟ್ ಕಣಗಳ ವಾಯುಮಾಲಿನ್ಯ, ಓರೆನ್ ಮಾಲಿನ್ಯ, ಸೀಸಕ್ಕೆ ತೆರೆದುಕೊಳ್ಳುವಿಕೆ, ಔದ್ಯೋಗಿಕ ಕ್ಯಾನ್ಸರ್‌ಕಾರಕಗಳು, ಅನಿಲಗಳು ಮತ್ತು ಹೊಗೆಯಂತಹ ಮಾಲಿನ್ಯದ ಆಧುನಿಕ ರೂಪಗಳಿಂದಾಗಿ ಭಾರತದಲ್ಲಿ ಆರ್ಥಿಕ ನಷ್ಟವು 2000 ಮತ್ತು 2019ರ ನಡುವಿನ ಅವಧಿಯಲ್ಲಿ ಹೆಚ್ಚಳವಾಗಿದ್ದು, ಈಗ ಅದರ ಜಿಡಿಪಿಯ ಅಂದಾಜು ಶೇ.1ರಷ್ಟಿದೆ ಎಂದು ತಿಳಿಸಿದೆ.
ಮಾಲಿನ್ಯವು ಈಗಲೂ ಮಾನವನ ಆರೋಗ್ಯಕ್ಕೆ ಅತಿದೊಡ್ಡ ಬೆದರಿಕೆಯಾಗಿದ್ದು, ಆಧುನಿಕ ಸಮಾಜಗಳ ಸುಸ್ಥಿರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಅಧ್ಯಯನ ವರದಿಯ ಸಹಲೇಖಕರಾಗಿರುವ ಅಮೆರಿಕದ ಬಾಸ್ಟನ್ ಕಾಲೇಜಿನ ಪ್ರೊ.ಫಿಲಿಪ್ ಲ್ಯಾಂಡ್ರಿಗನ್ ಹೇಳಿದ್ದಾರೆ.
ಜಲಮಾಲಿನ್ಯವು ಜಾಗತಿಕವಾಗಿ 13.6 ಲಕ್ಷ ಅಕಾಲಿಕ ಸಾವುಗಳಿಗೆ ಕಾರಣವಾಗಿದೆ. ಸೀಸದಿಂದ ಒಂಭತ್ತು ಲಕ್ಷ ಅಕಾಲಿಕ ಸಾವುಗಳು ಸಂಭವಿಸಿದ್ದರೆ, ಕೆಲಸದ ಸ್ಥಳಗಳಲ್ಲಿಯ ವಿಷಕಾರಿ ವಾತಾವರಣವು 8,70,000 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಸಂಶೋಧಕರು ಹೇಳಿದ್ದಾರೆ.