ಅನುಗಾಲ
ನ್ಯಾಯ ನಿರಾಕರಣೆ ಮತ್ತು ಪ್ರಭುತ್ವ

ಅವರಿಗೆ ಅನಾರೋಗ್ಯದ ಕಾರಣದಿಂದಲೇ ಜಾಮೀನು ಲಭಿಸಬೇಕಾಗಿತ್ತು. ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಅವರನ್ನು ಬಿಡುಗಡೆಗೊಳಿಸುವ ಕುರಿತು ನಿತ್ಯಚಿಂತಿಸುವ ಸರಕಾರ, ನ್ಯಾಯಾಲಯಗಳು, ಸಾಯಿಬಾಬಾ ಅವರ ಕುರಿತು ಮೂಕವಾಗಿವೆ. ಕೊನೆಗೆ ಅದನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಇರಾದೆಯೂ ಇದ್ದಂತಿಲ್ಲ. ಸ್ಟಾನ್‌ಸ್ವಾಮಿಯ ಅಂತ್ಯ ಅವರದ್ದಾಗದಿದ್ದರೆ ಅದೃಷ್ಟ.
ಇತ್ತೀಚೆಗೆ ಭಾರತವು ವೈವಿಧ್ಯದ ಬದಲು ವೈರುಧ್ಯವನ್ನು ಪ್ರದರ್ಶಿಸುತ್ತಿದೆ. ಏಕತೆಯ ಬದಲು ಏಕಮುಖೀ ಸಂಸ್ಕೃತಿಯನ್ನು ಹೇರುತ್ತಿದೆ. ಯಾರು ಸರಿ ಯಾರು ತಪ್ಪೆಂದು ನಿರ್ಣಯಿಸಲು ಸಾಧ್ಯವಿಲ್ಲ. ಏಕೆಂದರೆ ಇವೆಲ್ಲ ಆಳುವವರ, ಅಧಿಕಾರಸ್ಥರ ಅವಿವೇಕಿ ನಿರ್ಣಯಗಳೇ. ಅಧಿಕಾರದ ಮೂಲಕ ಪ್ರತಿಸ್ಪರ್ಧಿಗಳನ್ನು, ವಿರೋಧಿಗಳನ್ನು ಬಗ್ಗುಬಡಿಯಲು ಬೇಕಾದ ಸೂತ್ರ ಹಸ್ತ ಪ್ರಭುತ್ವದಲ್ಲಿದೆ. ನಕ್ಸಲ್ ಹಣೆಪಟ್ಟಿ ಕಟ್ಟಿಕೊಂಡ ಹತ್ತಾರು ಸುಶಿಕ್ಷಿತ ಬುುದ್ಧಿಜೀವಿಗಳು, ಒಂದಲ್ಲ ಒಂದು ಅಸಂಬದ್ಧ ಕಾರಣಗಳಿಂದಾಗಿ ಕಂಬಿ ಎಣಿಸುತ್ತಿದ್ದಾರೆ. ಉಮರ್ ಖಾಲಿದ್, ಸಿದ್ದೀಕಿ ಕಪ್ಪನ್ ಸೇರಿದಂತೆ ಅನೇಕ ವಿದ್ಯಾರ್ಥಿ ನಾಯಕರು, ಪತ್ರಕರ್ತರು ಸರಕಾರದ ಬಿಗಿಮುಷ್ಟಿಗೆ ಸಿಲುಕಿ ನರಳುತ್ತಿದ್ದಾರೆ. ಇನ್ನೊಂದೆಡೆ ದೇಶದ ಗೃಹ ಮಂತ್ರಿ ಐಎಎಸ್ ಅಧಿಕಾರಿ(ಣಿ)ಯೊಂದಿಗಿರುವ/ಇದ್ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇದು ಕೇಂದ್ರದ ಸಂಚೆಂದು ಭಾವಿಸುವವರು ಇದೇ ಕಾಲಕ್ಕೆ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಸಂದೇಶವನ್ನು ಹರಿಯಬಿಟ್ಟರೆಂಬ ಆರೋಪದಡಿ ಸಿನೆಮಾ ನಟಿಯೊಬ್ಬರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಆಕೆಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ಹಾಜರು ಮಾಡಿದಾಗ ನ್ಯಾಯಾಲಯವು ಆಕೆಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇದು ಕೇಂದ್ರಕ್ಕೆ ವಿರೋಧಿಯಾಗಿರುವ ಮತ್ತು ಕೇಂದ್ರದ ದಬ್ಬಾಳಿಕೆಯನ್ನು ಸರ್ವಾಧಿಕಾರವೆಂದು ಹಳಿಯುವ ಶಿವಸೇನೆ ಬಣದ ಸರಕಾರದಡಿ ನಡೆದ ಕೃತ್ಯ. ಇದರಲ್ಲಿ ಕಾಂಗ್ರೆಸ್ ಮತ್ತು ಪವಾರ್ ಪಕ್ಷವೂ ಸೇರಿವೆ. ಯಾರು ಸರಿ ಯಾರು ತಪ್ಪು? ಯಾವುದು ಸರಿ? ಯಾವುದು ತಪ್ಪು?
ಈಚೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿತವಾದ ಸಂಚಯಗಳ ವಿರುದ್ಧ ಪೊಲೀಸ್, ಜಾರಿ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ದಳ ಮುಂತಾದವು ಹಿಂದು ಮುಂದು ನೋಡದೆ (ಅಥವಾ ಪ್ರಭುತ್ವದ ಹಿತ ಮತ್ತು ಸನ್ನೆಯನ್ನು ನೋಡಿಕೊಂಡು) ಪ್ರಕರಣಗಳನ್ನು ದಾಖಲಿಸುತ್ತವೆ. ಇವೆಲ್ಲ ಆಳುವವರು ಯಾರೋ ಕೊಟ್ಟ ದೂರಿಗೆ ಆರೋಪಿ ತಮ್ಮವರೋ ಪ್ರತಿಸ್ಪರ್ಧಿಗಳೋ ಎಂಬುದನ್ನು ಅಳೆದು ಸುರಿದು ತಾಳೆ ಹಾಕಿ ನೀಡುವ ಪ್ರತಿಕ್ರಿಯೆ. ಆದರೆ ಇವುಗಳು ಬಹುತೇಕ ವಿದ್ಯುನ್ಮಾನ ದಾಖಲಿತ ವಿಚಾರಗಳು. ಇಲ್ಲಿ ದಸ್ತಗಿರಿ ಯಾಕೆ ಬೇಕು? ಒಂದು ವೇಳೆ ಇವು ಭಯವನ್ನು ಸೃಷ್ಟಿಸಲೋಸುಗ ಅಥವಾ ಟೀಕೆ, ಪ್ರತಿಭಟನೆಗಳನ್ನು ಬಗ್ಗು ಬಡಿಯುವ ರಾಜಕೀಯ ತಂತ್ರಗಳಾದರೂ ಅವರನ್ನು ನ್ಯಾಯಾಲಯದಲ್ಲಿ ಹಾಜರುಮಾಡಿದ ಬಳಿಕ ಪೊಲೀಸ್ ಕಸ್ಟಡಿ ಯಾಕೆ ಬೇಕು? ನ್ಯಾಯಾಲಯಗಳು ಕನಿಷ್ಠ ವಿವೇಕ-ವಿವೇಚನೆಯನ್ನು ಬಳಸಿದರೂ ಇಂತಹ ಪ್ರಕರಣಗಳು ಕಡಿಮೆಯಾದಾವು. ಇಂತಹ ನೂರಾರು ಉದಾಹರಣೆಗಳನ್ನು, ನಿದರ್ಶನಗಳನ್ನು ಇಲ್ಲಿ ಪೋಣಿಸಬಹುದು. ಭಾರತದ ಮುಖ್ಯ ನ್ಯಾಯಾಧೀಶರು ನ್ಯಾಯ ನಿರಾಕರಣೆಯು ಅರಾಜಕತೆಯನ್ನು ಸೃಷ್ಟಿಸಲಿದೆಯೆಂಬ ಎಚ್ಚರವನ್ನು ಹೇಳಿದ್ದಾರೆ. ಆದರೆ ನ್ಯಾಯ ನಿರಾಕರಣೆಯಲ್ಲಿ ನ್ಯಾಯಾಂಗದ ಪಾತ್ರವೆಷ್ಟು, ಅಂಶವೆಷ್ಟು ಎಂಬುದನ್ನು ಯಾವ ನ್ಯಾಯಾಲಯವೂ ಗಮನಿಸಿದಂತಿಲ್ಲ. ಭಾರತದ ಮುಖ್ಯ ನ್ಯಾಯಾಧೀಶರು ತಮ್ಮ ಕಾಲಬುಡದಲ್ಲಿ ನಡೆಯುವ ಇಂತಹ ಕ್ರಮಗಳನ್ನು ಗಮನಿಸಿದರೆ ಅವರು ಹೇಳುವ ಮಾತಿಗೆ ಅರ್ಥ ಬಂದೀತು. ಹೋಗಲಿ, ಅನೇಕರು ತಮಗೆ ವಿಧಿಸಲಾದ ಶಿಕ್ಷೆಯ ಅವಧಿಯನ್ನು ಮೀರಿ ಸೆರೆಮನೆಗಳಲ್ಲಿದ್ದಾರೆಂಬುದು ನ್ಯಾಯಾಂಗಕ್ಕೆ ಗೊತ್ತಿದೆ. ಅನೇಕರು ಜಾಮೀನು ಸಿಕ್ಕಿದರೂ ಅವು ಅನುಷ್ಠಾನಗೊಳ್ಳದೆ ಬಲಿಯಾಗಿದ್ದಾರೆ. ಇವಕ್ಕೆಲ್ಲ ಯಾರು ಹೊಣೆ?
ಇವನ್ನೆಲ್ಲ ಗಮನಿಸಿದರೆ ಇಲ್ಲಿರುವುದು ಎರಡೇ ಪಕ್ಷಗಳು ಅಥವಾ ಗುಂಪುಗಳು. ಆಳುವ ಮತ್ತು ವಿರೋಧಿಸುವ ಎರಡು ಬಣಗಳು. ಇವರು ಕಾಲಾನುಕಾಲಕ್ಕೆ ಅದಲು-ಬದಲಾಗುತ್ತ ಹೋಗುತ್ತಾರೆ. ಇದು ಭಾರತದಲ್ಲಿ ಮಾತ್ರ ಸತ್ಯವಲ್ಲ; ಜಾಗತಿಕ ಸತ್ಯ. ಇಸ್ರೇಲ್ ಇತ್ತೀಚೆಗೆ ಪತ್ರಕರ್ತೆಯೊಬ್ಬಳನ್ನು ಕೊಂದು ಹಾಕಿತು. ಅಷ್ಟೇ ಅಲ್ಲ, ಆಕೆಯ ಶವಯಾತ್ರೆಯ ಸಂದರ್ಭ ನೆರೆದ ಭಾರೀ ಜನಸಂದಣಿಯ ಮೇಲೆ ಹಿಂಸಾಚಾರ ನಡೆಸಿತು. ಅಫ್ಘಾನಿಸ್ತಾನದಲ್ಲಿ ವರದಿ ಮಾಡಹೋದ ಭಾರತೀಯ ಪತ್ರಕರ್ತ ಮೃತರಾದಾಗ ಭಾರೀ ಕೂಗಾಡಿದ ಭಾರತ, ಉಕ್ರೇನ್‌ನಲ್ಲಿ ರಶ್ಯನ್ನರು ಕೊಂದವರ ಕಡೆಗೆ ನಿರ್ಲಕ್ಷದ ಮನೋಭಾವ ತಾಳಿದ ಬಗ್ಗೆ ಮೌನವಿದೆ. ರಶ್ಯನ್ನರ ತೈಲ ನಮ್ಮ ಬಾಯಿಕಟ್ಟಿಸಿತು. ನಿಜಕ್ಕೂ ವಿಶ್ವದ ವಿವಿಧ ದೇಶಗಳ ಗಡಿಗುರುತು ಅಮಾನವೀಯತೆಯ ಸಂದರ್ಭದಲ್ಲಿ ಅಳಿಸಿಹೋಗುತ್ತದೆ. ನಮ್ಮ ವ್ಯವಹಾರಕ್ಕೆ ಯಾರು ಬೇಕೋ ಅವರಿಗಷ್ಟೇ ಸನ್ಮಾನ. ಸಂಯುಕ್ತ ಅರಬ್ ಎಮಿರೇಟ್ಸ್‌ನ ನಾಮಪದಾಧ್ಯಕ್ಷರ ಸಾವಿಗೆ ಭಾರತದಲ್ಲಿ ಒಂದು ದಿನದ ಸಂತಾಪ ಆಚರಿಸಲ್ಪಟ್ಟಿತು.
ವ್ಯಾಪಾರ ಸಂಬಂಧದ ಹೊರತು ಬೇರೆ ಸಮರ್ಪಕ ಕಾರಣಗಳಿರಲಿಲ್ಲ. ಇತರ ದೇಶಗಳ ನಾಯಕರು ಸತ್ತಾಗ ಎಷ್ಟು ಬಾರಿ ಭಾರತದಲ್ಲಿ ಸಂತಾಪ ನಡೆದಿದೆ? ಒಂದು ಫೋನ್ ಕರೆ; ಒಂದು ಹೇಳಿಕೆ; ಈಗ ಟ್ವೀಟ್. ಎಲ್ಲರೂ-ಎಲ್ಲವೂ ಒಂದೇ. ಎಲ್ಲರೂ ವಸಾಹತುಶಾಹಿಗಳೇ; ಈಸ್ಟ್ ಇಂಡಿಯಾ ಕಂಪೆನಿಗಳೇ. ನ್ಯಾಯದ ಪ್ರಶ್ನೆ ಉದ್ಭವಿಸುವುದು ವೈಯಕ್ತಿಕ ಅಥವಾ ರಾಜಕೀಯ ನಷ್ಟ ಉಂಟಾದಾಗ ಮಾತ್ರ. ಐದು ಶತಮಾನಗಳ ಹಿಂದೆ ದಾಸರು ಹೇಳಿದ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬುದಷ್ಟೇ ಸತ್ಯ. ಇವೆಲ್ಲ ವಿಶ್ವತೋಮುಖವಾದ ನ್ಯಾಯ ನಿರಾಕರಣೆಯ ಸೂಚನೆಗಳು. ಬಹುತೇಕ ಇಂತಹ ಪ್ರಸಂಗಗಳಲ್ಲಿ ಪೊಲೀಸ್ ಪಡೆ ಸರಕಾರಿ ಗೂಂಡಾಪಡೆಗಳಂತೆ ವರ್ತಿಸಿವೆ. ‘ಎನ್‌ಕೌಂಟರ್’ ಎಂಬ ಹೆಸರಿನಲ್ಲಿ ನಡೆಯುವ ಕಾನೂನಿನ ನೇರ ಮತ್ತು ಕ್ರೂರ ಉಲ್ಲಂಘನೆಯು ಮಾಮೂಲು ವಿದ್ಯಮಾನವಾಗಿದೆ. ನ್ಯಾಯಾಲಯಗಳು ಅಂಚೆಕಚೆೇರಿಯಂತೆ ನಡೆದುಕೊಂಡಿವೆ. ಆತ್ಮಸಾಕ್ಷಿ ಮೂಕವಾಗಿದೆ; ಸತ್ತುಹೋಗಿದೆ. ನ್ಯಾಯಾಂಗದ ಸಂಕೇತವೇ ಕಣ್ಣಿಗೆ ಬಟ್ಟೆ ಸುತ್ತಿಕೊಂಡು ಗಾಂಧಾರಿಯಂತೆ ಸ್ವಯಿಚ್ಛೆಯಿಂದ ಕುರುಡರಂತೆ ವರ್ತಿಸುವ ನ್ಯಾಯ ದೇವತೆ. ರಸಾಯನಶಾಸ್ತ್ರದ ಪಿತಾಮಹರಲ್ಲೊಬ್ಬನೆನಿಸಿಕೊಂಡ, ಲೆವೋಷಿಯೆಗೆ ಮರಣದಂಡನೆ ನೀಡಿದ ಫ್ರಾನ್ಸಿನ ನ್ಯಾಯಾಧೀಶನು ಹೇಳಿದಂತೆ ‘‘ನೀನೆಷ್ಟೇ ಬುದ್ಧಿವಂತನಾದರೂ ಸಮಾಜಕ್ಕೆ ನಿನ್ನ ಅಗತ್ಯವೆಷ್ಟೇ ಇದ್ದರೂ ನಮಗೆ ಅದು ಪ್ರಸ್ತುತವೇ ಅಲ್ಲ’’. ನೂರಾರು ಪ್ರಸಂಗಗಳನ್ನು ಉದಾಹರಿಸಬಹುದು. ಅವು ವರದಿಗಳಾದಾವೇ ಹೊರತು ಪರಿಣಾಮ-ಫಲ-ಪ್ರಭಾವ ಬೀರವು. ನ್ಯಾಯಾಲಯಗಳು ಹೆಚ್ಚು ಸೂಕ್ಷ್ಮವಾಗುವ ಅಗತ್ಯವಿದೆ.
ಇದರ ನಿದರ್ಶನವಾಗಿ ಒಂದು ಸೃಜನಶೀಲ ವಿದ್ವತ್ಪೂರ್ಣ ಮನಸ್ಸಿನ ಮಾರ್ಮಿಕ ಉದಾಹರಣೆ ನಮ್ಮೆದುರಿಗಿದೆ. ಬಡ ಕುಟುಂಬದಿಂದ ಬಂದ, ಸಣ್ಣ ವಯಸ್ಸಿನಲ್ಲೇ ಪೋಲಿಯೊ ಪೀಡಿತರಾಗಿ ನಡೆಯಲಾಗದೆ ಕಷ್ಟಪಟ್ಟರೂ (ಬಾಲ್ಯದಲ್ಲಿ ಕೈಗಳಿಗೆ ಚಪ್ಪಲಿ ಹಾಕಿಕೊಂಡು ತೆವಳುತ್ತ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಪಿಎಚ್.ಡಿ. ಪದವಿ ಸಂಪಾದಿಸಿ ದಿಲ್ಲಿ ವಿಶ್ವವಿದ್ಯಾನಿಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ, ಗಾಲಿಕುರ್ಚಿಯಲ್ಲೇ ಸಂಚರಿಸುತ್ತಿದ್ದ, ಜಿ.ಎನ್.ಸಾಯಿಬಾಬಾರನ್ನು 2014ರ ಮೇ 14ರಂದು ದಿಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯ್ದೆ(ಯುಎಪಿಎ) ಎಂಬ ಭಯಾನಕ ಕಾನೂನಿನನ್ವಯ ದಸ್ತಗಿರಿಮಾಡಿದರು. (ಆಗ ಇನ್ನೂ ಯುಪಿಎ ಸರಕಾರವಿತ್ತು!) ಅವರ ಮೇಲಿದ್ದ ಆಪಾದನೆಯೆಂದರೆ ಅವರು ನಕ್ಸಲ್ ಸಿದ್ಧಾಂತದೊಂದಿಗಿದ್ದರು ಎಂಬುದೇ ಆಗಿತ್ತು. ಅವರ ಲ್ಯಾಪ್‌ಟಾಪ್ ಮತ್ತಿತರ ಉಪಕರಣಗಳನ್ನು ಜಪ್ತಿಮಾಡಲಾಯಿತು. ಮಹಾರಾಷ್ಟ್ರದ ಗಾಗ್ರಿಚೋಳಿ ಸೆಷನ್ಸ್ ನ್ಯಾಯಾಲಯದ ಮುಂದೆ ಅವರ ವಿಚಾರಣೆ (?) ನಡೆಯಿತು. 2017ರ ಮಾರ್ಚ್ ತಿಂಗಳಿನಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು.
ಎಡಪಂಥೀಯ ಚಿಂತಕ ಗ್ರಾಮ್ಷಿಯನ್ನು ಸೆರೆಮನೆಗೆ ದೂಡಿದ್ದ ನೆಪೋಲಿಯನ್ (ಗ್ರಾಮ್ಷಿಗೆ) ‘‘ಏನು ಬೇಕಾದರೂ ಕೊಡಿ; ಆದರೆ ಓದಲು ಪುಸ್ತಕ ಮಾತ್ರ ಕೊಡಬೇಡಿ’’ ಎಂದಿದ್ದನಂತೆ. ಚಿಂತನಶೀಲ ಮನಸ್ಸಿಗೆ ಇದಕ್ಕಿಂತ ಹೆಚ್ಚಿನ ಹಿಂಸೆಯ ಪರಿಸ್ಥಿತಿಯಿಲ್ಲ. ಸಾಯಿಬಾಬರ ಮನಸ್ಸು ಮತ್ತು ಬುದ್ಧಿಯ ಮೂಲಕವಷ್ಟೇ ಬದುಕುವ ವಿದ್ವಾಂಸ. ಎಡಪಂಥೀಯ ಚಿಂತನೆಗಳನ್ನು ಗ್ರಹಿಸಿದರೆ ಅದು ಅಪರಾಧವಾಗುವುದಿಲ್ಲ. ಹಿಂಸೆಗೆ ಪ್ರಚೋದನೆ ನೀಡುವ ಸಾಕ್ಷ ಬೇಕು. ಆದರೆ ನ್ಯಾಯಾಲಯವು ಅವರ ಚಿಂತನೆಗಳನ್ನು ಆಧರಿಸಿ ಅವರಿಗೆ ಜೀವಾವಧಿ ಸೆರೆಮನೆವಾಸ ವಿಧಿಸಿದೆ. ಪ್ರಾಯಃ ನ್ಯಾಯಾಧೀಶರು ಸಾಯಿಬಾಬಾ ಅವರ ಚಿಂತನೆಗಳನ್ನು ಓದಿರಲಿಕ್ಕಿಲ್ಲ. (ಈ ದೇಶದ ದೊಡ್ಡ ದುರಂತವೆಂದರೆ ಧರ್ಮದಿಂದ ಮೊದಲ್ಗೊಂಡು ಕ್ರೀಡೆ, ವಿಜ್ಞಾನ, ಸಾಹಿತ್ಯದವರೆಗೆ ಕೊನೆಗೆ ನಂಬಿಕೆಯವರೆಗೂ ನ್ಯಾಯಾಲಯಗಳು ತೀರ್ಪು ನೀಡುವುದು. ಪ್ರಾಯಃ ನ್ಯಾಯಾಧೀಶರು ಸರ್ವಜ್ಞರಲ್ಲವೆಂಬ ಕಾರಣಕ್ಕಾಗಿಯೇ ಹಿಂದೆ ಜ್ಯೂರಿ ಪದ್ಧತಿಯಿದ್ದಿರಬೇಕು.) ಕಾನೂನು ನ್ಯಾಯದ ಖಾತ್ರಿ ನೀಡುವುದಿಲ್ಲ. ಕಾನೂನಿಗೆ ಸಾಕ್ಷಿಯಿದೆ; ನ್ಯಾಯಕ್ಕೇನಿದೆ? ಅವರೀಗ ಮೇಲ್ಮನವಿಯನ್ನು ಸಲ್ಲಿಸಿದರೂ ಜಾಮೀನು ಸಿಕ್ಕಿಲ್ಲ. ನಾಗಪುರದ ‘ಅಂಡಾ’ (ಮೊಟ್ಟೆಯಾಕಾರದ) ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ಅವರ ಆರೋಗ್ಯ ತೀರಾ ಹದಗೆಟ್ಟಿದೆ. ಎರಡು ಬಾರಿ ಕೊರೋನ ಪೀಡಿತರಾಗಿದ್ದಾರೆ. ಮಾನಸಿಕವಾಗಿ ಕುಗ್ಗಿಹೋಗುವುದಕ್ಕೆ ಏನು ಬೇಕೋ ಅದನ್ನೆಲ್ಲ ಅವರು ಪಡೆದಿದ್ದಾರೆ. ಕೊಳೆಯುತ್ತಿದ್ದಾರೆ. ಏಕೆಂದರೆ ಅವರು ಎಲ್ಲ ಆರೋಪಿ/ಅಪರಾಧಿಗಳಂತಲ್ಲ. ಹೇಗೂ ಇರಲಿ, ಪ್ರಕರಣವೀಗ ಮೇಲ್ಮನವಿಯ ಹಂತದಲ್ಲಿದೆ.
ಕಾನೂನಿನ ಸತ್ವಪರೀಕ್ಷೆ ನಡೆಯಲಿದೆ. ಆದ್ದರಿಂದ ಅವರು ಮಾಡಿದರೆನ್ನಲಾದ ಅಪರಾಧಗಳ ಬಗ್ಗೆ ಇದಕ್ಕಿಂತ ಹೆಚ್ಚಿನ ಚರ್ಚೆ ನ್ಯಾಯಾಲಯ ನಿಂದನೆಯಾಗುವ ಸಾಧ್ಯತೆಯಿದೆ. ಆದರೆ ಅವರಿಗೆ ಅನಾರೋಗ್ಯದ ಕಾರಣದಿಂದಲೇ ಜಾಮೀನು ಲಭಿಸಬೇಕಾಗಿತ್ತು. ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಅವರನ್ನು ಬಿಡುಗಡೆಗೊಳಿಸುವ ಕುರಿತು ನಿತ್ಯಚಿಂತಿಸುವ ಸರಕಾರ, ನ್ಯಾಯಾಲಯಗಳು, ಸಾಯಿಬಾಬಾ ಅವರ ಕುರಿತು ಮೂಕವಾಗಿವೆ. ಕೊನೆಗೆ ಅದನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಇರಾದೆಯೂ ಇದ್ದಂತಿಲ್ಲ. ಸ್ಟಾನ್‌ಸ್ವಾಮಿಯ ಅಂತ್ಯ ಅವರದ್ದಾಗದಿದ್ದರೆ ಅದೃಷ್ಟ. ಈಗಷ್ಟೇ ಅವರು ತನಗೆ ಚಿಕಿತ್ಸೆ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಹೂಡುವ ಬೆದರಿಕೆ ಹಾಕಿ ಅದನ್ನು ಪಡೆಯಬೇಕಾಯಿತು. ಈ ಎಲ್ಲ ನಿರ್ಬಂಧ, ಬಂಧನಗಳ ನಡುವೆಯೂ ಅವರ ಸೃಜನಶೀಲತೆೆ, ಸೈದ್ಧಾಂತಿಕ ಬದ್ಧತೆ ಸತ್ತಿಲ್ಲ. ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಈಗ ಅವರಿಗೆ ಸೆರೆಮನೆಯೇ ಮನೆ. ಅದಕ್ಕಾಗಿಯೇ ಅವರು ತನ್ನ ಸಮಕಾಲೀನ ಚಿಂತಕ, ಸಾಹಿತಿ, ಬಂಧುಗಳಿಗೆ ಪತ್ರಗಳ ಮೂಲಕ, ಕವಿತೆಗಳ ಮೂಲಕ, ತನ್ನ ಚಿಂತನೆಗಳನ್ನು ಹಂಚಿದ್ದಾರೆ. ಒಂದೆಡೆ ಅವರು ‘‘ನಾನು ಸಾಯಲು ನಿರಾಕರಿಸುತ್ತೇನೆ’’ ಎನ್ನುತ್ತಾರೆ.
ಹೀಗೆ ಹೇಳುವಾಗ ಅವರಿಗೆ ಭೌತಿಕ ಸಾವಿನ ಕಲ್ಪನೆಯಿದೆ. ಆದರೆ ಸರಕಾರ ಮತ್ತು ವ್ಯವಸ್ಥೆ ತನ್ನ ಕುರಿತು ಇಷ್ಟೇಕೆ ಹೆದರಿದೆಯೆಂಬುದೂ ಅವರಿಗೆ ಸಮಸ್ಯೆಯಾಗಿದೆ. ಜೊತೆಗೆ ಹೆಮ್ಮೆಯ ಸಂಗತಿಯೂ ಆಗಿದೆ. ನಮ್ಮ ಪ್ರಭುತ್ವದ ನಿಯಮಗಳ ಕುರಿತು ಒಂದು ಮಾತನ್ನು ಹೇಳಬೇಕಾಗಿದೆ: ಸಾಯಿಬಾಬಾ ಅವರ ಮಾತೃಭಾಷೆ ತೆಲುಗು. ಪತ್ರಗಳನ್ನು, ಕವಿತೆಗಳನ್ನು, ತೆಲುಗಿನಲ್ಲೇ ಬರೆಯುವುದು ಅವರ ಹವ್ಯಾಸ. ಆದರೆ ಮಹಾರಾಷ್ಟ್ರದ ಜೈಲ್ ಅಧಿಕಾರಿಗಳು ಅವರು ತೆಲುಗಿನಲ್ಲಿ ಬರೆಯಬಾರದೆಂಬ ನಿರ್ಬಂಧವನ್ನು ಹೇರಿದ್ದರು. ಇದರಿಂದಾಗಿ ಅವರು ತಮ್ಮ ಬಂಧು-ಬಳಗದಿಂದ ಎಷ್ಟು ದೂರ ಸಾಧ್ಯವೋ ಅಷ್ಟೂ ದೂರವಿರಬೇಕಾಗಿದೆ. ಜೈಲಿನಲ್ಲಿ ಸಾಯಿಬಾಬಾ ಬರೆದ ಕವಿತೆಗಳು, ಪತ್ರಗಳು ‘‘ಈಗ ನೀವೇಕೆ ನನ್ನ ಹಾದಿಯ ಬಗ್ಗೆ ಇಷ್ಟು ಭೀತರಾಗಿದ್ದೀರಿ?’’ (Why Do You Fear My Way So Much?) ಎಂಬ ಶೀರ್ಷಿಕೆಯೊಂದಿಗೆ ಹೊಸದಿಲ್ಲಿಯ ‘ಸ್ಪೀಕಿಂಗ್ ಟೈಗರ್ ಬುಕ್ಸ್’ ಮೂಲಕ ಪ್ರಕಟವಾಗಿದೆ. ಸುಮಾರು 200 ಪುಟಗಳನ್ನು ಮೀರಿದ ಈ ಕೃತಿಗೆ ಅವರ ಪತ್ನಿ (ಚಿಂತಕಿ, ಬರಹಗಾರ್ತಿ, ಪ್ರಾಧ್ಯಾಪಕಿ) ಎ.ಎಸ್.ವಸಂತಕುಮಾರಿಯವರ ದೀರ್ಘ ಪ್ರವೇಶಿಕೆಯಿದೆ. ಅಮೆರಿಕದಲ್ಲಿ ಅವರ ಪರ ಕಾರ್ಯಪ್ರವೃತ್ತರಾದ ಸಮಾಜಶಾಸ್ತ್ರಜ್ಞ ಅಶೋಕ್‌ಕುಂಬಮ್ ಅವರು ಸಾಯಿಬಾಬಾ ಅವರ ಪರಿಚಯನುಡಿಗಳನ್ನಾಡಿದ್ದಾರೆ. ಕೆನ್ಯಾದ ಪ್ರಸಿದ್ಧ ಕಾದಂಬರಿಕಾರ ಎನ್ಗುಗಿ ವ ತಿಯಾಂಗ್‌ಒ ಸಾಯಿಬಾಬಾ ಅವರ ಈ ಕೃತಿಯ ಕುರಿತು ಮಾತುಗಳನ್ನಾಡಿದ್ದಾರೆ. ಲೇಖಕಿ ಮೀನಾಕಂದಸ್ವಾಮಿ ಮುನ್ನುಡಿ ಬರೆದಿದ್ದಾರೆ. (ಇವೆಲ್ಲವು ದಬ್ಬಾಳಿಕೆಯ ಪ್ರಭುತ್ವದೆದುರು ವ್ಯರ್ಥವೆಂಬುದು ಎಲ್ಲ ಚಿಂತಕರ ಅನುಭವ!) ಕೃತಿಯಲ್ಲಿ 62 ಕವಿತೆಗಳೂ, ಸಾಯಿಬಾಬಾ ಅವರ 4 ಪತ್ರಗಳೂ, ಅವರ ಪತ್ನಿ ಸಾಯಿಬಾಬಾ ಅವರ ಅಭಿಮಾನಿಗಳಿಗೆ ಬರೆದ ಪತ್ರವೂ ಇವೆ. ಕೃತಿಯ ಬಗ್ಗೆ ವಿವರವಾದ ವಿಶ್ಲೇಷಣೆ ಅಗತ್ಯವಿದೆಯಾದರೂ ಇಲ್ಲಿ ಸಾಯಿಬಾಬಾ ಅವರಿಗಾದ ನ್ಯಾಯ ನಿರಾಕರಣೆಯೇ ಪಠ್ಯವಾದ್ದರಿಂದ ವಿಮರ್ಶೆಯನ್ನು ಬದಿಗಿಟ್ಟಿದೆ. ಅವರು ಈ ತೀರ್ಪು ನಮ್ಮ ನ್ಯಾಯಾಂಗ ವ್ಯವಸ್ಥೆಯ ಅಣಕ. ಪ್ರತಿ ದಿನವೂ ಒಂದು ಶತಮಾನದಷ್ಟು ದೀರ್ಘವಾಗಿದೆ. ಆದರೂ ಅವರ ಬರಹಗಳ ಹೊಳಪು, ಜೀವನಪ್ರೀತಿ ಇವು ಪುಟಪುಟಗಳಲ್ಲೂ ಕಾಣಿಸುತ್ತವೆ. ಸಾಯಿಬಾಬಾ ಬರೆಯುತ್ತಾರೆ: ‘‘ನಾನು ಸಾಯುವುದನ್ನು ಸೆಟೆದು ನಿಂತು ನಿರಾಕರಿಸುತ್ತೇನೆ, ದುಃಖದ ಸಂಗತಿಯೆಂದರೆ ಅವರಿಗೆ ನನ್ನನ್ನು ಕೊಲ್ಲುವ ಬಗೆ ಹೇಗೆಂದು ತಿಳಿಯದು, ಏಕೆಂದರೆ ನಾನು ಮೊಳೆಯುವ ಹುಲ್ಲಿನ ಸದ್ದನ್ನೂ ಪ್ರೀತಿಸುತ್ತೇನೆ’’
ನಮ್ಮ ಪ್ರಭುತ್ವವನ್ನು (ಇದನ್ನು ನಾವು ಪ್ರಜಾಪ್ರಭುತ್ವವೆಂದು ಕರೆಯುತ್ತೇವೆ!) ಮತ್ತು ರಾಜಕಾರಣಿಗಳನ್ನು ಅವರು ಅಣಕಿಸುವ ರೀತಿ ಇದು: ‘‘ಕೆಟ್ಟ ಭಾಷೆಯು ಪ್ರಜಾಪ್ರಭುತ್ವದ ಪವಿತ್ರ ಆಟವನ್ನು ನಿರೂಪಿಸುತ್ತದೆ.’’, ‘‘ನಿಮ್ಮ ಮಿಲಿಟರಿ ಮತ್ತು ಯುದ್ಧದ ಸಂಕೀರ್ಣವು ದೊಡ್ಡದಾದಷ್ಟೂ ವಿಶ್ವದಲ್ಲಿ ನಿಮ್ಮ ಪ್ರಜಾಪ್ರಭುತ್ವವು ಶ್ರೇಷ್ಠವೆನಿಸುತ್ತದೆ.’’
ತಿವಿಯುವ ತೀವ್ರವಾದ ಭಾಷೆ ಇಲ್ಲಿದೆ: ‘‘ಪ್ರಜಾಪ್ರಭುತ್ವದ ಸರ್ವಾಧಿಕಾರಿಯ ಆಪಾನವಾಯುವೂ ಸುವಾಸನಾಭರಿತ.’’ ಸಾಯಿಬಾಬಾ ತನ್ನ (ಸಂ)ಕಷ್ಟಗಳು ತನ್ನನ್ನು ಸೋಲಿಸಲು ಅವಕಾಶಕೊಡರು. ಜೈಲಿನಿಂದ ಬಿಡುಗಡೆಯಾದವನೊಬ್ಬ ‘‘ಈಗ ವಿಶಾಲವಾದ ಸೆರೆಮನೆಗೆ ಬಂದೆ’’ ಎಂದನಂತೆ. ಹಾಗೆಯೇ ಹೊರಗೂ ಒಳಗೂ ಹೋರಾಟದ ಬದುಕೇ ಸಾಯಿಬಾಬಾ ಅವರಿಗೆ. ಸಾಯಿಬಾಬಾ ಅವರ ಬಗ್ಗೆ ಎನ್‌ಗುಗಿಒ ಬರೆಯುತ್ತಾ ‘‘ವಿಕ್ಟರ್ ಜಾರಾ ಎಂಬ ಚಿಲಿಯ ಗಿಟಾರ್‌ವಾದಕನ ಬೆರಳುಗಳನ್ನು ಅಲ್ಲಿನ ಸರ್ವಾಧಿಕಾರಿ ಮಿಲಿಟರಿ ಆಡಳಿತವು ಸಾರ್ವಜನಿಕವಾಗಿ ಕತ್ತರಿಸಿಹಾಕಿ ಅವನು ಭವಿಷ್ಯದಲ್ಲಿ ತನ್ನ ಕಲೆಯನ್ನು ಪ್ರಸ್ತುತಪಡಿಸಲು ಸಾಧ್ಯವಾಗದಂತೆ ಮಾಡಿತು.’’ ಎಂಬ ಸಾದೃಶ್ಯವನ್ನು ಉದಾಹರಿಸಿದ್ದಾರೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ (ಮಹಾ)ಭಾರತದಲ್ಲಿ ಏಕಲವ್ಯನಿಗೆ ಬದುಕಿಲ್ಲ. ವ್ಯವಸ್ಥೆಯ ಭಾಗವಾದ ಅರ್ಜುನನಿಗೆ ಮಾತ್ರ. (ಈ ಕುರಿತು ಸಾಯಿಬಾಬಾ ಅವರ ಕವಿತೆಯೂ ಇಲ್ಲಿದೆ.) ನ್ಯಾಯ ನಿರಾಕರಣೆ ಅರಾಜಕತೆಯನ್ನು ಸೃಷ್ಟಿಸುತ್ತದೆ, ಮಾತ್ರವಲ್ಲ ಅರಾಜಕತೆ ಸೃಷ್ಟಿಯಾಗುವಷ್ಟು ನ್ಯಾಯ ನಿರಾಕರಣೆಯಾಗಿದೆ. ಸಾಯಿಬಾಬಾ ಅವರ ಕತೆ ಎಲ್ಲ ಮುಕ್ತಮನಸ್ಸಿನ ಚಿಂತಕರದ್ದೂ ಹೌದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ