varthabharthi


ಉಡುಪಿ

ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳನ್ನು ಮಾರಾಟ ಮಾಡುವಂತಿಲ್ಲ: ಚೆನ್ನೈನ ಹಸಿರು ಪೀಠದಿಂದ ಮಹತ್ವದ ತೀರ್ಪು

ವಾರ್ತಾ ಭಾರತಿ : 19 May, 2022

ಉಡುಪಿ : ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯ ನದಿಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ವೇಳೆ ಸಂಗ್ರಹಿಸಿದ  ಮರಳನ್ನು ಮಾರಾಟ ಮಾಡುವಂತಿಲ್ಲ ಎಂದು ಚೈನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠ ಬುಧವಾರ ನೀಡಿದ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.

ಮರಳು ದಿಬ್ಬಗಳಿಂದ ಸಂಗ್ರಹಿಸಿದ ಮರಳನ್ನು ತೀರಾ ಕೆಳಮಟ್ಟದಲ್ಲಿರುವ ನದಿ ತಳವನ್ನು ಎತ್ತರಿಸಲು, ನದಿದಡಗಳನ್ನು ಬಲಿಷ್ಠಗೊಳಿಸಲು ಅಥವಾ ಬೀಚ್‌ಗಳಲ್ಲಿ ಬೇಕಿದ್ದರೆ ಬಳಸಬಹುದಾಗಿದೆ ಎಂದು ಚೆನ್ನೈನ ದಕ್ಷಿಣ ವಲಯದ ಇಬ್ಬರು ಸದಸ್ಯರ ಪೀಠ ಬುಧವಾರ ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಮರಳುಗಾರಿಕೆ ನಡೆಯುತ್ತಿರುವ ಪ್ರದೇಶಗಳ ಜನರ ಬವಣೆಯಿಂದ ಬೇಸತ್ತು, ಇಲ್ಲಿ ನಡೆಯುತ್ತಿರುವ ಕಾನೂನಿನ ಉಲ್ಲಂಘನೆಯಿಂದ ಆಕ್ರೋಶಿತರಾಗಿ ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಭದ್ರಗಿರಿಯ ಉದಯ ಸುವರ್ಣ ಹಾಗೂ ಕಲ್ಯಾಣಪುರದ ದಿನೇಶ್ ಕುಂದರ್ ಎಂಬವರು ಎರಡನೇ ಬಾರಿಗೆ  ಹಸಿರು ಪೀಠಕ್ಕೆ ಸಲ್ಲಿಸಿದ ಅರ್ಜಿ (ನಂ.೨೫೨/೨೦೧೭)ಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಹಾಗೂ ವಿಷಯತಜ್ಞ ಸದಸ್ಯ ಡಾ.ಸತ್ಯಗೋಪಾಲ ಕೊರಾಲ್‌ಪತಿ ಅವರನ್ನೊಳಗೊಂಡ ಪೀಠ ಬುಧವಾರ ತನ್ನ ತೀರ್ಪನ್ನು ನೀಡಿತು. 

ಉಡುಪಿ ಜಿಲ್ಲೆಯಲ್ಲಿ ಗ್ರಾಮಸ್ಥರ ದೂರು ಹಾಗೂ ಜನರ ಪ್ರತಿಭಟನೆಯ ಹೊರತಾಗಿಯೂ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ  ಮರಳು ಮಾಫಿಯಾ ಸಕ್ರಿಯವಾಗಿದೆ. ಪರಿಸರದ ಎಲ್ಲಾ ಕಾನೂನು ಕಾಯ್ದೆಗಳನ್ನು ಉಲ್ಲಂಘಿಸಿ ಇಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ಈ ಬಗ್ಗೆ ತಾವು ನಡೆಸಿದ ಎಲ್ಲಾ ಹೋರಾಟಗಳು ವಿಫಲವಾದ ಬಳಿಕ ಚೆನ್ನೈನ ಹಸಿರುಪೀಠಕ್ಕೆ ಇದರ ವಿರುದ್ಧ ದೂರು ಅರ್ಜಿ ಸಲ್ಲಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು.

೨೦೧೭ರ ಫೆ.೨೭ರಂದು ನೀಡಿದ ತೀರ್ಪಿನಲ್ಲಿ ೨೦೧೬ರಲ್ಲಿ ಮರಳುಗಾರಿಕೆಗಾಗಿ  ನೀಡಿದ ಎಲ್ಲಾ ಪರವಾನಿಗೆ ಗಳನ್ನು ರದ್ದುಪಡಿಸಿತ್ತು. ಇದರ ಹೊರತಾಗಿಯೂ  ೨೦೧೭ರಲ್ಲಿ ರಾ.ಹಸಿರು ಪೀಠದ ತೀರ್ಪು ಹಾಗೂ ಸಿಆರ್‌ಝಡ್ ಕಾನೂನನ್ನು ಉಲ್ಲಂಘಿಸಿ ಮರಳುಗಾರಿಕೆಗೆ ಪರವಾನಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಉದಯ ಸುವರ್ಣ ಹಾಗೂ ಇತರರು ಅದೇ ವರ್ಷ ಮತ್ತೆ ಹಸಿರು ಪೀಠದ ಮೊರೆ ಹೋಗಿದ್ದು, ರಾಜ್ಯದ ವಿವಿಧ ಸರಕಾರಿ ಸಂಸ್ಥೆಗಳಿಗೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿ ನಿನ್ನೆ ತಮ್ಮ ತೀರ್ಪು ಪ್ರಕಟಿಸಿದರು.

ಕಾನೂನಿನ ಉಲ್ಲಂಘನೆ: ಪರವಾನಿಗೆದಾರರಿಂದ ಅತ್ಯಲ್ಪ ಮೊತ್ತವನ್ನು ಪಡೆದು, ಅವರು ಮರಳನ್ನು ಹೊರಗಿನವರಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲು ಅವಕಾಶ ನೀಡುವ ರಾಜ್ಯ ಸರಕಾರದ ನೀತಿಯನ್ನು ತೀವ್ರವಾಗಿ ಟೀಕಿಸಿದ ಪೀಠ, ಇದು ಮರಳು ಗಣಿಗಾರಿಕೆಗೆ ಸಮನಾಗಿದ್ದು, ಸಿಆರ್‌ಝಡ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸಿದೆ.

‘ಸರಕಾರ ಈ ಅಭ್ಯಾಸವನ್ನು, ನೀತಿಯನ್ನು ತಕ್ಷಣದಿಂದ ನಿಲ್ಲಿಸಬೇಕು.’ ಎಂದು ದ್ವಿಸದಸ್ಯ ಪೀಠ ಸ್ಪಷ್ಟವಾದ ಶಬ್ದಗಳಲ್ಲಿ ತಿಳಿಸಿದೆ.

ಪರವಾನಿಗೆದಾರರಿಗೆ ಮಾತ್ರ ಅವಕಾಶ: ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಮರಳನ್ನು ಕೇವಲ ಪರವಾನಿಗೆ ಪಡೆದವರು ಅಥವಾ ಅವರ ಕುಟುಂಬಿಕರು ಮಾತ್ರ ತೆಗೆಯಬೇಕು. ಮರಳನ್ನು ತೆಗೆಯಲು ಸಾಂಪ್ರದಾಯಿಕ ಪದ್ಧತಿಯನ್ನು ಮಾತ್ರ ಅವಲಂಬಿಸಬೇಕು. ಇದರಲ್ಲಿ ಯಾವುದೇ ಉಪಗುತ್ತಿಗೆದಾರರಿಗಾಗಲೀ,  ಹೊರಗಿನ ಕಾರ್ಮಿಕರಿಗಾಗಲೀ ಅವಕಾಶವನ್ನೇ ನೀಡಬಾರದು ಎಂದು ಪೀಠ  ಸ್ಪಷ್ಟವಾಗಿ ಆದೇಶಿಸಿದೆ.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈವರೆಗೆ ಹೊರತೆಗೆಯಲಾದ ಮರಳಿನ ಪ್ರಮಾಣವನ್ನು ನೋಡಿದಾಗ, ಸಾಂಪ್ರದಾಯಿಕ ಪದ್ಧತಿಯಂತೆ ಮಾನವನ ಬಳಕೆಯಿಂದ ಮಾತ್ರ ಇಷ್ಟೊಂದು ಪ್ರಮಾಣದ ಮರಳು ತೆಗೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮರಳು ತೆಗೆಯಲು ಯಾವುದೇ ವಿಧದ ಯಂತ್ರಗಳನ್ನು ಬಳಸುವಂತಿಲ್ಲ ಎಂದೂ ಪೀಠ ವಿಶೇಷ ಒತ್ತಿನೊಂದಿಗೆ ತಿಳಿಸಿದೆ.

ಉದಯ ಸುವರ್ಣ ಹಾಗೂ ದಿನೇಶ್ ಕುಂದರ್ ಅವರು ತಮ್ಮ ಅರ್ಜಿಯಲ್ಲಿ ೨೦೧೭ ಫೆ.೨೭ರ ಹಸಿರು ಪೀಠದ ನಿರ್ದೇಶನವನ್ನು ಉಡುಪಿ ಜಿಲ್ಲಾಡಳಿತ ಪಾಲಿಸಲೇ ಇಲ್ಲ. ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ನದಿಯಲ್ಲಿ ಮೀನುಗಾರಿಕಾ ದೋಣಿಗಳ ಚಲನೆಗೆ ಅಡ್ಡಿಯಾಗುವ ಮರಳು ದಿಬ್ಬಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಬೇಕೆಂಬ ಸೂಚನೆಯನ್ನು ಪಾಲಿಸಲೇ ಇಲ್ಲ ಎಂದು ದೂರು ನೀಡಿದ್ದರು.

ಜಿಲ್ಲೆಯ ಸೌಪರ್ಣಿಕಾ, ವಾರಾಹಿ, ಪಾಪನಾಶಿನಿ, ಸ್ವರ್ಣ ನದಿ, ಸೀತಾನದಿ ಹಾಗೂ ಎಡಮಾವಿನ ಹೊಳೆ ನದಿಗಳಲ್ಲಿರುವ ೨೮ ಮರಳು ದಿಬ್ಬಗಳನ್ನು ತೆರವು ಗೊಳಿಸಲು ಒಟ್ಟು ೧೭೦ ಮರಳು ತೆರವಿನ ಪರವಾನಿಗೆ ನೀಡಲಾಗಿತ್ತು ಎಂದು  ಉದಯ ಸುವರ್ಣ ತಿಳಿಸಿದ್ದರು. ಮರಳು ದಿಬ್ಬಗಳನ್ನು ಮಾತ್ರ ತೆರವುಗೊಳಿಸದೇ  ಯಂತ್ರಗಳನ್ನು ಬಳಸಿ, ವಲಸೆ ಕಾರ್ಮಿಕರನ್ನು ಬಳಸಿ ನದಿಯ ತಳದಿಂದ ಹಾಗೂ ಇತರ ಕಡೆಗಳಿಂದ ನಿಗದಿಗಿಂತ ಭಾರೀ ಪ್ರಮಾಣದ ಮರಳನ್ನು ಹೊರತೆಗೆಯ ಲಾಗಿತ್ತು ಎಂದವರು ಅರ್ಜಿಯಲ್ಲಿ ಆರೋಪಿಸಿದ್ದರು.

ಈ ಮೂಲಕ ಜಿಲ್ಲಾಡಳಿತದಿಂದ ಪರವಾನಿಗೆ ಪಡೆದವರು ಎನ್‌ಜಿಟಿ ಆದೇಶ, ಸಿಆರ್‌ಝಡ್ ಕಾನೂನು, ಅರಣ್ಯ ಮತ್ತು ಪರಿಸರ ಸಚಿವಾಲಯದ ಆದೇಶಗಳನ್ನೂ ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.

ಹಸಿರು ಪೀಠ ಪ್ರತಿಯೊಂದು ಪರಿಸ್ಥಿತಿಯನ್ನು ಅವಲೋಕಿಸುತ್ತಿರಲು ಸಾಧ್ಯವಿಲ್ಲ. ನಮ್ಮ ಪ್ರಾಕೃತಿಕ ಸಂಪನ್ಮೂಲ ಗಳನ್ನು ರಕ್ಷಿಸಲು ಸರಕಾರದ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯವೆಸಗದಿದ್ದರೆ, ಕರಾವಳಿಯ ಪ್ರಕೃತಿ, ಪರಿಸರ, ಅದರ ಪ್ರಾಕೃತಿಕ ಸಂಪತ್ತಿನ ಅವನತಿಗೆ ಇದು ಕಾರಣವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲಾಡಳಿತಕ್ಕೆ ಸೂಚನೆ: ಹಸಿರು ಪೀಠವು ರಾಜ್ಯ ಸರಕಾರ ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ನಿರ್ದೇಶನ ವೊಂದನ್ನು ನೀಡಿ, ಜಿಲ್ಲೆಯ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ತಡೆಯಾಗುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಪರವಾನಿಗೆ ನೀಡುವ ಮುನ್ನ ಜಿಲ್ಲೆಯ ನದಿಗಳ ಸ್ಥಿತಿಗತಿ ಹಾಗೂ ಅಲ್ಲಿ ಲಭ್ಯವಿರುವ ಮರಳು ದಿಬ್ಬದ ಕುರಿತಂತೆ ಸ್ವತಂತ್ರ ಸಂಸ್ಥೆಯಿಂದ ಅಧ್ಯಯನ ನಡೆಸುವಂತೆ ತಿಳಿಸಿದೆ.

ಮರಳು ತೆರವುಗೊಳಿಸುವ ಪ್ರದೇಶದಲ್ಲಿ ಮೀನುಗಾರಿಕಾ ದೋಣಿಗಳು ಸಂಚರಿಸುತಿದ್ದರೆ ಮಾತ್ರ ಆ ಪ್ರದೇಶದ ಮರಳುದಿಬ್ಬಗಳ ತೆರವಿಗೆ ಪರವಾನಿಗೆ ನೀಡಬೇಕು. ಇಂಥ ನದಿಗಳಲ್ಲಿ ಸಂಚರಿಸುವ ಎಲ್ಲಾ ಮೀನುಗಾರಿಕಾ ದೋಣಿಗಳನ್ನು ಸರಕಾರ ನೋಂದಣಿ ಮಾಡಿಕೊಳ್ಳುವಂತೆಯೂ ಪೀಠ ಸರಕಾರಕ್ಕೆ ಸೂಚನೆ ನೀಡಿದೆ.

ಜಿಲ್ಲಾಡಳಿತ ಮರಳು ತೆರವುಗೊಳಿಸಲು ಪರವಾನಿಗೆ ನೀಡಿರುವ ಹಲವು  ಪ್ರದೇಶಗಳಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರವೇ ನಡೆಯುವುದು. ಒಂದು ವೇಳೆ ಇದ್ದರೂ ಇಡೀ ಆಸುಪಾಸಿನ ಮರಳನ್ನು ತೆರವುಗೊಳಿಸುವ ಅಗತ್ಯ ಇರುವುದಿಲ್ಲ ಎಂದು ಅರ್ಜಿದಾರರು ಪೀಠದ ಮುಂದೆ ಮನವಿ ಮಾಡಿದ್ದರು.

ಮರಳುದಿಬ್ಬದ ತೆರವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರುಪೀಠದ  ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯದ ಈ ಹಿಂದಿನ ಎಲ್ಲಾ ಆದೇಶ, ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚೆನ್ನೈ ಹಸಿರು ಪೀಠ  ಮಹತ್ವದ ಆದೇಶದಲ್ಲಿ ತಿಳಿಸಿದೆ.

ಐತಿಹಾಸಿಕ ತೀರ್ಪು

ಚೆನ್ನೈನ ಹಸಿರು ಪೀಠ ಬುಧವಾರ ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ನದಿಗಳಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲಿ ಇದನ್ನೊಂದು ದಂದೆಯಾಗಿ ನಡೆಸಲಾಗುತ್ತಿತ್ತು. ಈ ತೀರ್ಪಿನಿಂದ ಇದು ಸಂಪೂರ್ಣ ನಿಲ್ಲಲ್ಲಿದೆ. ಇಲ್ಲಿ ತೆಗೆದ ಮರಳನ್ನು ಮಾರಾಟ ಮಾಡು ವಂತಿಲ್ಲ ಎಂದು ಪೀಠ ಹೇಳಿರುವುದರಿಂದ ಇನ್ನು ಯಾರೂ ಸಹ ಇಲ್ಲಿ ಮರಳು ತೆಗೆಯಲು ಬರುವುದಿಲ್ಲ. ತೀರ್ಪಿನ ವಿರುದ್ಧ  ರಾಜ್ಯ ಸರಕಾರವಾಗಲೀ, ಮರಳುಗಾರರಾಗಲೀ ಸುಪ್ರೀಂ ಕೋರ್ಟ್‌ಗೆ ಹೋಗುವ ಸಾಧ್ಯತೆ ಕಡಿಮೆ. ಹೋದರೆ ಅವರ ಇರಾದೆ ಜನರಿಗೆ ಸ್ಪಷ್ಟವಾಗುತ್ತದೆ.

-ರಂಜನ್ ಶೆಟ್ಟಿ ಬೆಂಗಳೂರು, ಅರ್ಜಿದಾರರ ವಕೀಲರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)