varthabharthi


ದಕ್ಷಿಣ ಕನ್ನಡ

ಬಿ.ಕೆ.ಹರಿಪ್ರಸಾದ್ ಹಾಗೂ ಯು.ಟಿ.ಖಾದರ್ ರಿಗೆ ಅಭಿನಂದನಾ ಕಾರ್ಯಕ್ರಮ

ಬಿ.ಕೆ.ಹರಿಪ್ರಸಾದ್ ಅಧಿಕಾರದ ಹಿಂದೆ ಹೋಗದೆ ಪಕ್ಷದ ಹಿತಕ್ಕಾಗಿ ದುಡಿದ ರಾಜಕಾರಣಿ: ಡಿ.ಕೆ. ಶಿವಕುಮಾರ್

ವಾರ್ತಾ ಭಾರತಿ : 19 May, 2022

ಮಂಗಳೂರು: ಸ್ವಾಭಿಮಾನ ಬಿಟ್ಟು ಅಧಿಕಾರದ ಹಿಂದೆ ಹೋಗದೆ ಪಕ್ಷಕ್ಕಾಗಿ ದುಡಿದ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿಂದು (ದಿ.ಆಸ್ಕರ್ ಫೆರ್ನಾಂಡಿಸ್ ವೇದಿಕೆ ) ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ  ಬಿ.ಕೆ.ಹರಿಪ್ರಸಾದ್ ಹಾಗೂ ಕರ್ನಾಟಕ ವಿಧಾನ ಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಮಾಜದ ಎಲ್ಲಾ ವರ್ಗದ ಜನರ ಹಿತಕ್ಕಾಗಿ ಬದ್ಧತೆಯನ್ನು ತೋರಿದ ಪಕ್ಕದ ಪ್ರಮುಖ ಕಾರ್ಯಕರ್ತ, ಇಂತಹ ರಾಜಕಾರಣಿಗೆ ಸಲ್ಲುವ ಗೌರವ ಪಕ್ಷದ ಕಾರ್ಯಕರ್ತರಿಗೆ ಸಲ್ಲುವ ಗೌರವ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿಗೆ ಪ್ರತ್ಯೇಕವಾದ ಅಭಿವೃದ್ಧಿ ಯೋಜನೆಯನ್ನು ರೂಪಿಸುತ್ತೇವೆ. ಧಾರ್ಮಿಕ ವಿಚಾರದಲ್ಲಿ ಪರಸ್ಪರ ಹುಟ್ಟಿಸುವ ದ್ವೇಷದ ರಾಜಕಾರಣದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ಉದ್ಯೋಗ ಸೃಷ್ಟಿ, ಆದಾಯ ವೃದ್ಧಿಗೆ ಕೊಡುಗೆ ನೀಡದೆ ಭ್ರಷ್ಟಾಚಾರ ತುಂಬಿರುವ ಬಿಜೆಪಿಗೆ ಅಧಿಕಾರ ನೀಡಿದ ಕಾರಣ ಜನರು ನಿರಂತರ ಕಷ್ಟ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಸಮಗ್ರ ಜನರ ಹಿತಕ್ಕಾಗಿ ಕಾಂಗ್ರೆಸ್ ಗೆ ಅವಕಾಶ ನೀಡಬೇಕು ಪಕ್ಷ ಯುವಕರು, ಮಹಿಳೆಯರಿಗೆ ಅವಕಾಶ ನೀಡಲಿದೆ ಎಂದು ಮನವಿ ಮಾಡುವುದಾಗಿ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ, ಬಿ.ಕೆ. ಹರಿಪ್ರಸಾದ್ ಕೋಮುವಾದ, ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ನಿಷ್ಠೆಯೊಂದಿಗೆ 45ವರ್ಷದಿಂದ ರಾಜಕೀಯ ಮಾಡುತ್ತಾ ಬಂದಿರುವ ಅಪರೂಪದ ರಾಜಕಾರಣಿ. ವಿಧಾನ ಪರಿಷತ್ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ನಿರಂತರ ವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ರಾಜಕಾರಣಿ ಎಂದು ಅಭಿನಂದಿಸಿದರು.

ಅಭಿನಂದನಾ ಭಾಷಣ ಮಾಡಿದ ರಾಜ್ಯ ಸಭಾ ಸದಸ್ಯರಾದ ಡಾ.ಎಲ್. ಹನುಮಂತಯ್ಯ ಮಾತನಾಡುತ್ತಾ, ವಿದ್ಯಾರ್ಥಿಯಾಗಿದ್ದಾಗಲೇ  ದಲಿತರ ಪರ ಹೋರಾಟಕ್ಕೆ ಬೆಂಬಲ ನೀಡಿದ ಯುವ ಮುಖಂಡ, ಹೊರ ರಾಜ್ಯದಲ್ಲಿ ದುಡಿಯುತ್ತಿದ್ದ ಕರಾವಳಿಯ, ಕರ್ನಾಟಕದ ಜನತೆಗೆ ತೊಂದರೆ ಯಾದಾಗ ಅವರ ಪರ ನಿಂತ ರಾಜಕಾರಣಿ ಬಿ.ಕೆ.ಹರಿಪ್ರಸಾದ್, ದಿ. ಇಂದಿರಾಗಾಂಧಿಗೆ ರಾಜಕೀಯದ ಮೂಲಕ ಮರು ಪ್ರವೇಶಕ್ಕೆ ಯುವ ಪಡೆಯ ಮೂಲಕ ಶ್ರಮವಹಿಸಿದ ಕಾಂಗ್ರೆಸ್ ನ ನಿಷ್ಠಾವಂತ ಸೇವಕ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ.ಜಾ,ಪ.ಪಂಗಡದ ಜೊತೆ ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀತಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಸತ್ ನಲ್ಲಿ ಪ್ರಖರ ವಾಗ್ಮಿ, ಸಾಮಾಜಿಕ ಬದ್ಧತೆ, ಸಾಮಾಜಿಕ ನ್ಯಾಯದ ಪರ ಸ್ಪಷ್ಟ ನಿಲುವು ಹೊಂದಿದ್ದ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಎಂದರು. ವಿಪಕ್ಷ ಉಪ ನಾಯಕ ಯು.ಟಿ.ಖಾದರ್  ಅವರನ್ನೂ ಅಭಿನಂದಿಸಿದರು.

ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರ ಪರ ಹೋರಾಟ ನಡೆಸಿದ, ಕೋಮುವಾದಿಗಳ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ನಿಷ್ಠಾವಂತ ರಾಜಕಾರಣಿ ಬಿ.ಕೆ ಹರಿಪ್ರಸಾದ್. ಯು.ಟಿ.ಫರೀದ್ ನಂತರ  ತಂದೆಯ ಹಾದಿಯಲ್ಲಿ ಬಂದ ಕ್ರಿಯಾಶೀಲ ರಾಜಕಾರಣಿ ಯು.ಟಿ.ಖಾದರ್ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಅಭಿನಂದಿಸಿದರು.

ಕೋಮುವಾದಿ ಶಕ್ತಿಗಳಿಗೆ ಹೆದರಬೇಕಾಗಿಲ್ಲ, ಸೌಹಾರ್ದತೆಯ ಉಳಿವಿಗಾಗಿ ನನ್ನ ಹೋರಾಟ ನಿರಂತರವಾಗಿದೆ. ನಾನು ಏನಾದರೂ  ಸಾಧನೆ ಮಾಡಿದ್ದರೆ ಅದು ಈ ಕರಾವಳಿಯ, ಪೊರ್ಚ್ ಗೀಸರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ಆಳಿದ ಈ ಮಣ್ಣಿನ ಗುಣ ಎಂದು ಅಭಿನಂದನೆ ಸ್ವೀಕರಿಸಿ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಕರಾವಳಿ ಯಲ್ಲಿ ಕೋಮುವಾದಿ ಶಕ್ತಿಗಳು ಹಿಜಾಬ್ ವಿಚಾರದಲ್ಲಿ ಮಹಿಳೆಯರಿಗೆ ಶಿಕ್ಷಣ ನಿರಾಕರಿಸುತ್ತಿವೆ. ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಡುವ ಮೂಲಕ ಶೂದ್ರರ ಅಭಿವೃದ್ಧಿ, ಶಿಕ್ಷಣ ವನ್ನು ಸಹಿಸಲು ಸಾಧ್ಯವಾಗದೆ ಈ ಪ್ರಯತ್ನ ಮಾಡುತ್ತಿವೆ ಇದನ್ನು ವಿಫಲಗೊಳಿಸ ಬೇಕಾಗಿದೆ ಸೌಹಾರ್ದತೆ ಗಾಗಿ ಶ್ರಮಿಸಬೇಕಾಗಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಸಂವಿಧಾನ ಮತ್ತು ಅದರ ಆಶಯದ ಉಳಿವಿಗಾಗಿ ಕಾಂಗ್ರೆಸ್ ಹೋರಾಟ ನಡೆಸುತ್ತಾ ಬಂದಿದೆ. ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರಲು ಜನರೊಂದಿಗೆ ಒಗ್ಗಟ್ಟಾಗಿ ಹಿರಿಯರ ಮಾರ್ಗ ದರ್ಶನದಲ್ಲಿ ಸಾಗಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಸಂಸದ ಇಬ್ರಾಹಿಂ, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಶಾಸಕ  ಕೆ.ಎಸ್ . ಮುಹಮ್ಮದ್ ಮಸೂದ್, ವಿಜಯ ಕುಮಾರ್ ಶೆಟ್ಟಿ, ವಸಂತ ಬಂಗೇರ, ಮೊಹಿಯುದ್ದೀನ್ ಬಾವ, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ರಾಜಶೇಖರ್ ಕೋಟ್ಯಾನ್, ಡಾ. ರಘು, ಕವಿತಾ ಸನಿಲ್, ಧನಂಜಯ ಅಡ್ಪಂಗಾಯ, ಅಮೃತ ಶೆಣೈ, ಬಿ.ಟಿ.ಶ್ರೀ ನಿವಾಸ್,  ಪಿ.ವಿ. ಮೋಹನ್, ಕೋಡಿಜಾಲ್ ಇಬ್ರಾಹಿಂ, ಹೇಮನಾಥ ಶೆಟ್ಟಿ ಮೊದಲಾ ದವರು  ಉಪಸ್ಥಿತರಿದ್ದರು.

ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಅಭಿನಂದನಾ ಸಮಿತಿಯ ಸಂಚಾಲಕ ಶಶಿಧರ ಹೆಗ್ಡೆ ಸ್ವಾಗತಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)