ಅಸಮಾನತೆ ಇರುವವರೆಗೂ ಮೀಸಲಾತಿ ಇರಲೇಬೇಕು
ಭಾರತದಲ್ಲಿ ಮೀಸಲಾತಿಯ ಕುರಿತಾದ ಚರ್ಚೆಗಳು ಕಳೆದ ದಶಕದಿಂದೀಚೆಗೆ ಸಾಕಷ್ಟು ವ್ಯಾಪಕವಾಗಿ ನಡೆಯುತ್ತಿವೆ. ಕೆಲವರು ಮೀಸಲಾತಿಯನ್ನು ರದ್ದು ಮಾಡಬೇಕೆಂಬ ವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯದ ಅನುಪಸ್ಥಿತಿಯಲ್ಲಿ ಮೀಸಲಾತಿಯ ಕುರಿತು ಚರ್ಚಿಸುವುದು ಯಾವುದೇ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ದಲಿತ ಮತ್ತು ಶೂದ್ರ ಸಮುದಾಯಗಳು ಸಹಸ್ರಾರು ವರ್ಷಗಳಿಂದ ತಾರತಮ್ಯವನ್ನು ಎದುರಿಸುತ್ತಿವೆ. ಈ ತಾರತಮ್ಯ ಇಂದಿಗೂ ಕೂಡ ಮುಂದುವರಿದಿದೆ. ಅಸಮಾನತೆ, ಅಸ್ಪಶ್ಯತೆ, ಮೇಲು-ಕೀಳು, ಜಾತಿ ವ್ಯವಸ್ಥೆಗಳು ಮುಂದುವರಿದೇ ಇವೆ. ಭಾರತದಲ್ಲಿ ಜಾತಿ ದೌರ್ಜನ್ಯಗಳು, ದಬ್ಬಾಳಿಕೆಗಳು, ಸಾಮಾಜಿಕ ಅಸಮಾನತೆ, ಬಡತನ, ಲಿಂಗ ತಾರತಮ್ಯ, ಆರ್ಥಿಕ ತಾರತಮ್ಯಗಳು ಇರುವವರೆಗೂ ಮೀಸಲಾತಿ ಇರಬೇಕು. ಮೀಸಲಾತಿಯು ಕಾನೂನು ಸಮ್ಮತ ಮತ್ತು ಬದ್ಧತೆಯುಳ್ಳ ಸಾಮಾಜಿಕ ಹಕ್ಕಾಗಿದೆ.
ಮೀಸಲಾತಿ ಕುರಿತಾದ ಇತ್ತೀಚಿನ ಗ್ರಹಿಕೆಯಲ್ಲಿ ಸರಿಯಾದ ಅಂಶಗಳಿಗಿಂತ ಅಪಪ್ರಚಾರಗಳೇ ಹೆಚ್ಚು. ಜನ ಸಾಮಾನ್ಯರಿರಲಿ ಕಾನೂನು ತಜ್ಞರು, ವಿದ್ಯಾವಂತರು ಹಾಗೂ ಸಮಾಜದ ಅಗ್ರಗಣ್ಯರೆನಿಸಿದ ಕೆಲವರೂ ಮೀಸಲಾತಿಯ ಕುರಿತು ಸ್ಪಷ್ಟವಾದ ಹಾಗೂ ನಿಖರವಾದ ತಿಳುವಳಿಕೆಯನ್ನು ಹೊಂದಿಲ್ಲದಿರುವುದು ದುರದೃಷ್ಟವೇ ಸರಿ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಭಾರತದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ನ್ಯಾಯಾಲಯದ ಆದೇಶದ ಅನ್ವಯ ಮೀಸಲಾತಿಯ ಪ್ರಮಾಣವು ಶೇ.50ನ್ನು ಮೀರಬಾರದು. ಆದರೆ ಭಾರತದ ಕೆಲವೊಂದು ರಾಜ್ಯಗಳಲ್ಲಿ ಈ ಮಿತಿಯನ್ನು ಮೀರಲಾಗಿದೆ. ಮೀಸಲಾತಿಯ ಪ್ರಮುಖ ಉದ್ದೇಶ ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುವ ಜನರ ಹಕ್ಕುಗಳನ್ನು ರಕ್ಷಿಸುವುದಾಗಿದೆ.
ಭಾರತದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಮತ್ತು ಶೂದ್ರ ಸಮುದಾಯಗಳು ಸಮಾಜಕ್ಕೆ ಒಡ್ಡಿಕೊಳ್ಳುವುದು ಎಷ್ಟು ಭಯಾನಕವಾಗಿದೆಯೆಂದರೆ ತಾರತಮ್ಯಗಳ ಸರಮಾಲೆಯೇ ಅಲ್ಲಿ ನಡೆಯುತ್ತಿದೆ. ದಲಿತರು ಮೇಲ್ವರ್ಗದವರ ಮನೆಯನ್ನು ಪ್ರವೇಶಿಸುವಂತಿಲ್ಲ, ಹೋಟೆಲ್ಗಳಲ್ಲಿ ಅವರು ಚಹಾ ಕುಡಿಯುವಂತಿಲ್ಲ. ಕುಡಿದರೆ ಅವರಿಗಾಗಿಯೇ ಇಟ್ಟಿರುವ ಪ್ರತ್ಯೇಕವಾದ ಲೋಟಗಳಲ್ಲಿ ಕುಡಿಯಬೇಕು, ದೇವಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ಎಷ್ಟೋ ಕಡೆ ಇಂದಿಗೂ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗೆಂದ ಮಾತ್ರಕ್ಕೆ ನಗರ ಪ್ರದೇಶಗಳಲ್ಲಿ ತಾರತಮ್ಯಗಳು ಇಲ್ಲವೆಂದೇನೂ ಇಲ್ಲ. ಇಂದಿಗೂ ಖಾಲಿ ಇರುವ ಮನೆಗಳ ಗೇಟುಗಳು ಮೇಲೆ ಸಸ್ಯಾಹಾರಿಗಳಿಗೆ ಮಾತ್ರ ಎಂಬ ಫಲಕಗಳು ರಾರಾಜಿಸುತ್ತಿವೆ. ಇದರ ಅರ್ಥವಾದರೂ ಏನು? ಇವೆಲ್ಲಾ ಮನುಷ್ಯ ಸಮಾಜಕ್ಕೆ ಸ್ವೀಕಾರಾರ್ಹವಲ್ಲ. ಆದ್ದರಿಂದ ಈ ಅಸಮಾನತೆಗಳು, ಅಸ್ಪಶ್ಯತೆ, ಜಾತಿ ವ್ಯವಸ್ಥೆಗಳು ಅಳಿಯುವವರೆಗೂ ಮೀಸಲಾತಿ ಭಾರತದಲ್ಲಿ ಶಾಪವಲ್ಲ.
ಒಬ್ಬ ವ್ಯಕ್ತಿಯು ತನ್ನ ಸಾಮಾನ್ಯ ಹಕ್ಕುಗಳನ್ನು ಪಡೆಯಲು ಅವಕಾಶಗಳು ಇಲ್ಲದಿದ್ದಾಗ ಸಮಾನ ಅವಕಾಶಗಳಿಗಾಗಿ ತನ್ನ ವಿಶೇಷ ಹಕ್ಕುಗಳನ್ನು ಬಳಸಬೇಕಾಗುತ್ತದೆ. ಇಂತಹ ಹಕ್ಕುಗಳಲ್ಲಿ ಮೀಸಲಾತಿಯೂ ಒಂದು. ಮೀಸಲಾತಿ ಎಂಬುದು ಜಾತಿ, ಧರ್ಮ ಮತ್ತು ಲಿಂಗಕ್ಕೆ ಸೀಮಿತವಾಗಿರಲಾಗದ ವರ್ತಮಾನದ ಅಗತ್ಯವಾಗಿದೆ. ಭಾರತದ ಆರ್ಥಿಕ ಅಭಿವೃದ್ಧಿಗೆ ಮೀಸಲಾತಿ ಬಹಳ ದೊಡ್ಡ ಆಧಾರ ಸ್ತಂಬವಾಗಿದೆ. ಇಂದು ಹಿಂದುಳಿದ ವರ್ಗಗಳು ಮತ್ತು ಶೂದ್ರರು ಸ್ವಲ್ಪಮಟ್ಟಿಗಾದರೂ ಜೀವನವನ್ನು ಸುಧಾರಿಸಿಕೊಂಡು ಶಿಕ್ಷಣ ಕ್ಷೇತ್ರ ಮತ್ತು ಉದ್ಯೋಗಗಳಲ್ಲಿ ಪ್ರವೇಶ ಪಡೆದಿದ್ದರೆ ಅದು ಮೀಸಲಾತಿಯಿಂದಲೇ ಸಾಧ್ಯವಾಗಿದೆ. ಹಲವಾರು ಸಮುದಾಯಗಳು ಅಸ್ಪಶ್ಯತೆ ಮತ್ತು ಜಾತಿಯ ಪರಿಣಾಮದಿಂದಾಗಿ ಶಿಕ್ಷಣದ ಹಕ್ಕು, ಹಣಕಾಸಿನ ಹಕ್ಕು ಸೇರಿದಂತೆ ಹಲವು ನಾಗರಿಕ ಹಕ್ಕುಗಳಿಂದ ವಂಚಿತವಾಗಿವೆ. ಐತಿಹಾಸಿಕವಾಗಿ ನಡೆದು ಬಂದ ಇಂತಹ ತಾರತಮ್ಯಗಳನ್ನು ಹೋಗಲಾಡಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ರಕ್ಷಿಸಲು ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಎಲ್ಲಿಯವರೆಗೆ ನಾವು ಜನರನ್ನು ಎಲ್ಲರೂ ಒಂದೇ, ಎಲ್ಲರೂ ಸರಿಸಮಾನರು, ಮೇಲು-ಕೀಳುಗಳು ಇಲ್ಲ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೂ ಜನರಿಗೆ ಕೆಲವು ಸೌಲಭ್ಯಗಳು ಬೇಕೇ ಬೇಕು. ಅವುಗಳಲ್ಲಿ ಮೀಸಲಾತಿಯೂ ಒಂದು. ಅದಕ್ಕಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ರಾಜಕೀಯ ಸಮಾನತೆಯನ್ನು ಮಾತ್ರ ಆಗ್ರಹಿಸಲಿಲ್ಲ. ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಹಾಗೂ ಶೈಕ್ಷಣಿಕ ಸಮಾನತೆಗಳಿಗೂ ಆಗ್ರಹಿಸಿದರು ಹಾಗೂ ಇವುಗಳನ್ನು ನೊಂದ ಮತ್ತು ಶೋಷಿತ ಜನರಿಗೂ ಒದಗಿಸಲು ಕಾನೂನುಗಳನ್ನೂ ರೂಪಿಸಿದರು. ನಾವೆಲ್ಲರೂ ಒಂದೇ ಆದ್ದರಿಂದ ಎಲ್ಲರಿಗೂ ಸಮಾನ ಅವಕಾಶಗಳಿರಬೇಕಾದುದು ಅತ್ಯವಶ್ಯಕ. ಯಾರೂ ಯಾವುದೇ ರೀತಿಯ ಅವಕಾಶಗಳಿಂದ ವಂಚಿತರಾಗಬಾರದು. ಆ ರೀತಿ ಏನಾದರೂ ವಂಚನೆಗೊಳಗಾದರೆ ಅದು ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲದೆ ಮತ್ತೇನೂ ಆಗಲಾರದು.
ಮೀಸಲಾತಿಯ ಕುರಿತಾದ ಅಸಮಾಧಾನ ಇಂದು, ನಿನ್ನೆಯದಲ್ಲ. ಮೊದಲ ಬಾರಿಗೆ ಮೈಸೂರು ಸಂಸ್ಥಾನದಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1921ರಲ್ಲಿ ಎಲ್ಲಾ ಹಿಂದುಳಿದ ಜಾತಿಗಳಿಗೆ ಶೇ.75ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು. ಅದೇ ವರ್ಷ ಮದ್ರಾಸ್ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಶೇ.44, ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರಿಗೆ ಶೇ.16, ಕ್ರಿಶ್ಚಿಯನ್ನರಿಗೆ ಶೇ.16, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಶೇ.8ರಷ್ಟು ಮೀಸಲಾತಿ ನೀಡಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಸಂವಿಧಾನ ಜಾರಿಗೆ ಬಂದ ನಂತರ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3, ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನಿಗದಿಗೊಳಿಸಲಾಯಿತು. ಭಾರತದ ಸಂವಿಧಾನದ 330 ಮತ್ತು 332ನೇ ವಿಧಿಗಳ ಅನ್ವಯ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಲಾಯಿತು ಮತ್ತು ಸಂವಿಧಾನದ 340ರ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಆಯೋಗವನ್ನು ರಚಿಸಿ ಅವರ ಅಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಭಾರತದ ಸಂವಿಧಾನಕ್ಕೆ 124ನೇ ತಿದ್ದುಪಡಿ ಮಾಡುವ ಮೂಲಕ 2019ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಇದರ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಮಿಲ್ಲರ್ ಸಮಿತಿಯನ್ನು ನೇಮಿಸಿದಾಗ ಮತ್ತು ಅದರ ವರದಿಯನ್ನು ಅನುಷ್ಠಾನ ಮಾಡುವ ಮೂಲಕ ಮೀಸಲಾತಿಯನ್ನು ನೀಡಲು ಹೊರಟಾಗಲೂ ಒಂದು ವರ್ಗದ-ಸಮುದಾಯದ ಮುಖಂಡರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಸಮಾನತೆಗಾಗಿ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಡೆದ ಮೊದಲ ಪ್ರಯತ್ನಗಳಲ್ಲಿ ಒಂದಾಗಿದ್ದ ಮಿಲ್ಲರ್ ಸಮಿತಿಯ ಶಿಫಾರಸುಗಳ ಕುರಿತು ಅಂದಿನ ಕಾಲಘಟ್ಟದಲ್ಲಿಯೇ ಅಸಮಾಧಾನಗಳು ಎದ್ದಿದ್ದವು. ಆಗ ಶಿಕ್ಷಣದ ಆಡಳಿತಗಾರರಾಗಿದ್ದ ಸಿ.ಆರ್.ರೆಡ್ಡಿಯವರನ್ನು ಹೊರತುಪಡಿಸಿ ಉಳಿದ ಯಾವ ಅಧಿಕಾರಿಗಳೂ ಮಿಲ್ಲರ್ ಸಮಿತಿಯ ಶಿಫಾರಸುಗಳನ್ನು ಒಪ್ಪಲಿಲ್ಲ. ಅಂದು ಯಾವ ವರ್ಗದ ಕೆಲವರು ಮಿಲ್ಲರ್ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿದ್ದರೋ ಅದೇ ಮನೋಭಾವನೆಯ ಜನರು ಇಂದಿಗೂ ಮೀಸಲಾತಿಯನ್ನು ವಿರೋಧಿಸುತ್ತಿದ್ದು ಮೀಸಲಾತಿ ವಿರೋಧಿ ಭಾವನೆಗಳು ಜೀವಂತವಾಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಕುದ್ಮುಲ್ ರಂಗರಾವ್, ಕಂಬಳಿ ಸಿದ್ದಪ್ಪ, ಶಾಹು ಮಹಾರಾಜರು, ಪೆರಿಯಾರ್ ಮುಂತಾದ ಮಹನೀಯರು ಸಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಮೀಸಲಾತಿ ಅತ್ಯಂತ ಅವಶ್ಯಕ ಎಂದು ಘೋಷಿಸಿದ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಶಾಹು ಮಹಾರಾಜರು ಮೀಸಲಾತಿಯನ್ನು ಯಾರಿಗೂ ಅಂಜದೆ ಜಾರಿಗೆ ತಂದು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರ ಪಾಲಿನ ಕಲ್ಪವೃಕ್ಷವಾದರು.
ಇಂತಹ ಎಷ್ಟೋ ಸಮಾಜ ಸುಧಾರಕರ ವ್ಯಕ್ತಿತ್ವಗಳು ಮತ್ತು ಅವರು ಜಾರಿಗೆ ತಂದ ಸುಧಾರಣೆಗಳು ಇತ್ತೀಚೆಗಷ್ಟೆ ಹೆಚ್ಚು ಬೆಳಕಿಗೆ ಬರುತ್ತಿವೆ. ಇಂದು ಕಲಿಯುವ ಮಕ್ಕಳಿಗೆ ಸಮ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸಿದ ನಾರಾಯಣಗುರು, ಶಾಹು ಮಹಾರಾಜರು, ಕುದ್ಮುಲ್ ರಂಗರಾವ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಸಮಾಜ ಸುಧಾರಕರ ಪಾಠಗಳು ಮತ್ತು ವಿಚಾರಗಳು ಎಷ್ಟು ಪ್ರಮಾಣದಲ್ಲಿ ದೊರೆತಿವೆ? ಇಂದು ನಡೆಯುತ್ತಿರುವ ಮೀಸಲಾತಿ ವಿರೋಧಿ ಭಾವನೆಗಳಿಗೂ ಅಂದು ಮಿಲ್ಲರ್ ಸಮಿತಿಯ ವರದಿಯನ್ನು ವಿರೋಧಿಸಿದ ಕ್ರಮಗಳಿಗೂ ಹಲವು ಸಾಮ್ಯತೆಗಳಿವೆ. ಕೆಲವರು ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಹಲವಾರು ದಶಕಗಳಿಂದ ಜಾತಿಯ ಕಾರಣದಿಂದಾಗಿಯೇ ಲಕ್ಷಾಂತರ ಜನರು ಹಲವು ಹಕ್ಕುಗಳನ್ನು ಮತ್ತು ಅವಕಾಶಗಳನ್ನು ಕಳೆದುಕೊಂಡು ಬಂದಿದ್ದಾರೆ. ಕೆಳಜಾತಿಯ ಜನರಿಗೆ ಹಲವಾರು ಅವಕಾಶಗಳನ್ನು ನಿರಾಕರಿಸುತ್ತಾ ಬರಲಾಗಿದೆ. ಆದ್ದರಿಂದ ಕೆಳ ಮತ್ತು ತಳಮಟ್ಟದ ಜಾತಿಗಳ ಜನರ ಮೇಲೆ ನಡೆಯುತ್ತಿರುವ ಎಲ್ಲಾ ಬಗೆಯ ಅನ್ಯಾಯ, ಶೋಷಣೆ, ತಾರತಮ್ಯಗಳಿಂದ ರಕ್ಷಿಸಲು ಜಾತಿಯ ಆಧಾರದ ಮೇಲಿನ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಈ ರೀತಿಯ ಮೀಸಲಾತಿ ಶೋಷಣೆಗಳು ಕೊನೆಗೊಳ್ಳುವವರೆಗೂ ಮುಂದುವರಿಯಬೇಕಾಗಿರುವುದು ಅನಿವಾರ್ಯವಾಗಿದೆ.
ತಳ ಜಾತಿಗಳ ಜನರ ಇವತ್ತಿನ ಆರ್ಥಿಕ ಪರಿಸ್ಥಿತಿಗೆ ಬಡತನವೇ ಮುಖ್ಯ ಕಾರಣವಾಗಿದೆ. ವೈಯಕ್ತಿಕವಾಗಿ ಒಬ್ಬನ ಆದಾಯದಲ್ಲಿ ಬದಲಾವಣೆಯಾಗಬಹುದು. ಆದರೆ ಹಣದಿಂದ ಕೊಳ್ಳುವ ಶಕ್ತಿಯು ಭಾರತದಲ್ಲಿ ಇಂದಿಗೂ ಅವನ ಜಾತಿಯ ಮೇಲೆ ಆಧಾರಿತವಾಗಿದೆ. ಮೀಸಲಾತಿ ಬಡತನ ನಿವಾರಣೆ ಕಾರ್ಯಕ್ರಮವಲ್ಲ. ಜಾತಿ ದೌರ್ಜನ್ಯಗಳಿಂದ ತುಳಿತಕ್ಕೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಒಂದು ಅಸ್ತ್ರವಾಗಿದೆ. ಭಾರತದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ. ಮೀಸಲಾತಿಯ ವಿರುದ್ಧದ ಹಿಡನ್ ಅಜೆಂಡಾಗಳು ಏನೇ ಇರಲಿ ಮೀಸಲಾತಿ ಒಂದು ರೀತಿಯಲ್ಲಿ ಸಮಾನತೆಯ ಹಕ್ಕಾಗಿದೆ. ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳು, ಷಡ್ಯಂತ್ರಗಳಿಗೆ ಅಂಜದೆ ಪರಿಶಿಷ್ಟ ಜಾತಿ/ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಜಾತಿಗಳವರು ಜೀವಪರವಾದ ಮೀಸಲಾತಿಯನ್ನು ಮತ್ತು ಸಂವಿಧಾನವನ್ನು ರಕ್ಷಿಸಿಕೊಂಡು ಹೋಗಬೇಕಾದುದು ಇಂದಿನ ಅಗತ್ಯವಾಗಿದೆ.