varthabharthi


ಸಂಪಾದಕೀಯ

ಮುಂಗಾರು ಪೂರ್ವ ಮಳೆ; ಮುನ್ನೆಚ್ಚರಿಕೆ ಅಗತ್ಯ

ವಾರ್ತಾ ಭಾರತಿ : 20 May, 2022

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗ ತತ್ತರಿಸಿ ಹೋಗಿದೆ. ಮಳೆ ಬರಬಾರದೆಂದಲ್ಲ, ಮಳೆ ಸುರಿದರೆ ಇಳೆಯ ಮೇಲಿನ ಜೀವ ಜಗತ್ತು ಉಸಿರಾಡುತ್ತದೆ.ಮಳೆಯಿಲ್ಲದಿದ್ದರೆ ಕುಡಿಯುವ ನೀರಿನ ಅಭಾವ ಮಾತ್ರವಲ್ಲ, ದೇಶದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರ ಸೊರಗಿ ಹೋಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯಿಂದಾಗಿ ಮಳೆಯ ಹದ ತಪ್ಪಿದೆ. ತಾಪ ಜಾಸ್ತಿಯಾದ ಕೂಡಲೇ ಇಳೆಯನ್ನು ತಣಿಸಲು ಮಳೆಯಾಗುವುದು ಸಹಜ ಪ್ರಕ್ರಿಯೆ. ಆದರೆ ತಾಪಮಾನದ ಅತಿರೇಕದಿಂದಾಗಿ ವಾಡಿಕೆಗಿಂತ ಮೊದಲೇ ಮಳೆ ಸುರಿಯುತ್ತಿದೆ. ಬೇಸಿಗೆ ಮುಗಿಯುವ ಮೊದಲೇ ಮಳೆ ಬೀಳುತ್ತಿದೆ. ಇದರ ಪರಿಣಾಮವಾಗಿ ಅಸ್ಸಾಮಿನಲ್ಲಿ ಮಿತಿ ಮೀರಿದ ಪ್ರವಾಹದಿಂದಾಗಿ ಮೂವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.ಕರ್ನಾಟಕದಲ್ಲೂ ಅವಧಿ ಪೂರ್ವ ಮಳೆ ನಾನಾ ಅವಾಂತರಗಳನ್ನು ಸೃಷ್ಟಿಸಿದೆ.

ಅದೇನೇ ಇರಲಿ, ಮಳೆಗಾಲ ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಚುರುಕಾಗುತ್ತವೆ. ಇದನ್ನು ಎದುರಿಸಲು ಸರಕಾರ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.ಮಳೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ಒಳ ಬರುವುದು, ರಸ್ತೆಗಳ ತುಂಬಾ ನೀರು ನಿಂತು ಜನಸಂಚಾರಕ್ಕೆ ವ್ಯತ್ಯಯವಾಗುವುದು, ರಾಜಕಾಲುವೆಗಳು ಒತ್ತುವರಿಯಾಗಿ ಜನರಿಗೆ ತೊಂದರೆಯಾಗುವುದು ಹೊಸದಲ್ಲ. ಹಾಗಾಗಿ ಸರಕಾರ ಈ ವರ್ಷವಾದರೂ ಹೆಚ್ಚಿನ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಇನ್ನೊಂದೆಡೆ ಈ ಸಲ ಮುಂಗಾರು ಉತ್ತಮವಾಗಿದೆ ಎಂಬ ನಿರೀಕ್ಷೆಯೊಂದಿಗೆ ರೈತರ ಕೃಷಿ ಚಟುವಟಿಕೆಗಳು ಚುರುಕಾಗಲಿವೆ. ರಾಜ್ಯದ ಜಲಾಶಯ, ಕೆರೆ, ಕಟ್ಟೆಗಳಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ ಸಾಕಷ್ಟು ನೀರು ಭರ್ತಿಯಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರಿಗೆ ಬಿತ್ತನೆ ಬೀಜ, ರಸ ಗೊಬ್ಬರದ ಕೊರತೆಯಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ. ಈಗಲೇ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಬೇಕಾಗಿದೆ.ರೈತರು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆದರೆ ಮಾತ್ರ ದೇಶದ ಆರ್ಥಿಕತೆ ಚೇತರಿಸುತ್ತದೆ. ಹೀಗಾಗಿ ಸರಕಾರ ಈ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕಾಗಿದೆ

ಆದರೆ ಜನದ್ವೇಷಿ ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೆ ತರುವಲ್ಲಿ ವಿಶೇಷ ಆಸಕ್ತಿ ವಹಿಸಿರುವ ರಾಜ್ಯದ ಬಿಜೆಪಿ ಸರಕಾರ ಮಳೆಗಾಲದ ದುಷ್ಪರಿಣಾಮವನ್ನು ಎದುರಿಸಲು ಯಾವುದೇ ತಯಾರಿ ಮಾಡಿಕೊಂಡಂತೆ ಕಾಣುವುದಿಲ್ಲ. ಕಳೆದ ವರ್ಷದಲ್ಲಿ ಮಳೆಗಾಲಕ್ಕೆ ಮುನ್ನ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಿಸದ ಸರಕಾರ ನಾಲ್ವರ ಸಾವಿಗೆ ಕಾರಣವಾಯಿತು. ಈ ವರ್ಷವೂ ಬಿರುಸಾಗಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಆರು ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಸರಕಾರದ ನಿಧಾನಗತಿಯ ಕೆಲಸದಿಂದಾಗಿ ಬೆಂಗಳೂರಿನಂಥ ಮಹಾನಗರದಲ್ಲಿ ಜನಸಾಮಾನ್ಯರು ಸಂಚರಿಸಲಾಗದಷ್ಟು ರಸ್ತೆಗಳು ಹದಗೆಟ್ಟಿವೆ. ಸ್ಮಾರ್ಟ್ ಸಿಟಿ ಯೋಜನೆಯ ವ್ಯಾಪ್ತಿಯ ಕಾಮಗಾರಿ ನಡೆಯುತ್ತಿರುವ ಕಡೆ ಹಾಗೂ ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅನೇಕ ಕಡೆ ಬಾಯಿ ತೆರೆದು ನಿಂತ ಗುಂಡಿಗಳು ಇನ್ನೆಷ್ಟು ಜನರ ಸಾವಿಗೆ ಕಾರಣವಾಗುತ್ತವೆಯೋ ಯಾರಿಗೆ ಗೊತ್ತು. ಈಗಲಾದರೂ ಸರಕಾರ ಎಚ್ಚೆತ್ತು ಈ ಸಾವಿನ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಿ.

ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಕಡೆಗಳ ಪರಿಸ್ಥಿತಿಯೂ ಸಮಾಧಾನಕರವಾಗಿಲ್ಲ. ಮಂಗಳವಾರ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ನಗರಗಳ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನಗಳು ಮುಂದೆ ಚಲಿಸಲಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ವಾಡಿಕೆ ಪೂರ್ವ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದದ ಸಂಗತಿಯಾಗಿದೆ.

ವಿಪರೀತ ಮಳೆಯಾದಾಗ ಪರಿಹಾರ ಕ್ರಮಗಳ ಬಗ್ಗೆ ಮಾತಾಡುವ ಸರಕಾರ ನಂತರ ಎಲ್ಲವನ್ನೂ ಮರೆತು ತನ್ನ ಪಕ್ಷದ ಕೋಮುವಾದಿ ಅಜೆಂಡಾ ಜಾರಿಯ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತದೆ. ಕಳೆದ ವರ್ಷ ಮಳೆ ಮತ್ತು ಪ್ರವಾಹದಿಂದಾಗಿ ಬೆಂಗಳೂರಿನ ಜಕ್ಕೂರಿನಲ್ಲಿ ಇರುವ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮೂವತ್ತು ವರ್ಷಗಳಿಂದ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದ ಮಹತ್ವದ ವೈಜ್ಞಾನಿಕ ದಾಖಲೆಗಳು ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳು ನೀರು ಪಾಲಾದವು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ ಕಾಲುವೆಗಳ ಅಭಿವೃದ್ಧಿ ಗೆ ಅಗತ್ಯ ಅನುದಾನ ನೀಡುವ ಭರವಸೆಯನ್ನು ನೀಡಿದ್ದರು. ಈ ಕುರಿತು 1,560 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಕ್ರಿಯಾ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧಪಡಿಸಿತ್ತು. ಆದರೆ ಇದು ಕಾರ್ಯಗತವಾಗದೆ ಕಡತಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ.

ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರಕಾರದ ಬಳಿ ಸಂಪನ್ಮೂಲಗಳ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಮಂತ್ರಿಗಳು ಹೇಳುತ್ತಾರೆ. ಆದರೆ ಮಂಜೂರಾದ ಕಾಮಗಾರಿಗಳು ಕೂಡ ಕಾರ್ಯಗತಗೊಂಡಿಲ್ಲ. ಕೆಲಸಕ್ಕೆ ಬಾರದ ಯೋಜನೆಗಳಿಗಾಗಿ ನೀರಿನಂತೆ ಹಣ ಚೆಲ್ಲುವ ಸರಕಾರ ಪ್ರತಿವರ್ಷ ಸಮಸ್ಯೆ ಉಂಟು ಮಾಡುವ ಮಳೆಗಾಲದ ಅವಾಂತರ ತಪ್ಪಿಸುವಲ್ಲಿ ವಿಫಲಗೊಂಡಿದೆ ಅಂದರೆ ತಪ್ಪಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)