varthabharthi


ನಿಮ್ಮ ಅಂಕಣ

ಒಂದು ವರ್ಷದಿಂದ ಸಂಸ್ಥೆಗೆ ಮುಖ್ಯಸ್ಥರೇ ಇಲ್ಲ

ಮೋದಿ ಸರಕಾರದ ದನ ಕಲ್ಯಾಣ ಸಂಸ್ಥೆ ಬಹುತೇಕ ನಿಷ್ಕ್ರಿಯ

ವಾರ್ತಾ ಭಾರತಿ : 20 May, 2022
ನೀಲಂ ಪಾಂಡೆ

ಈ ಆಯೋಗವನ್ನು ನರೇಂದ್ರ ಮೋದಿ ಸರಕಾರವು ಸ್ಥಾಪಿಸಿತ್ತು. ಆದರೆ ಅದರ ಬಗ್ಗೆ ಸರಕಾರಕ್ಕೆ ಈಗ ಆಸಕ್ತಿಯಿಲ್ಲ ಎಂಬಂತೆ ಭಾಸವಾಗುತ್ತಿದೆ. ಆಯೋಗಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲು ಸರಕಾರ ಉತ್ಸುಕವಾಗಿಲ್ಲ ಎಂದು ಈ ವಿಷಯದ ಬಗ್ಗೆ ಮಾಹಿತಿ ಇರುವ ಮೂಲವೊಂದು ತಿಳಿಸಿದೆ.

ದನಗಳ ಕಲ್ಯಾಣಕ್ಕಾಗಿ ಸರಕಾರವು ಸ್ಥಾಪಿಸಿರುವ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರ ಹುದ್ದೆ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಖಾಲಿಯಾಗಿದೆ. ಅದೂ ಅಲ್ಲದೆ, ಈ ಆಯೋಗವೇ ಬಹುತೇಕ ನಿಷ್ಕ್ರಿಯವಾಗಿದೆ.

ಈ ಆಯೋಗವನ್ನು ನರೇಂದ್ರ ಮೋದಿ ಸರಕಾರವು ಸ್ಥಾಪಿಸಿತ್ತು. ಆದರೆ ಅದರ ಬಗ್ಗೆ ಸರಕಾರಕ್ಕೆ ಈಗ ಆಸಕ್ತಿಯಿಲ್ಲ ಎಂಬಂತೆ ಭಾಸವಾಗುತ್ತಿದೆ. ಆಯೋಗಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲು ಸರಕಾರ ಉತ್ಸುಕವಾಗಿಲ್ಲ ಎಂದು ಈ ವಿಷಯದ ಬಗ್ಗೆ ಮಾಹಿತಿ ಇರುವ ಮೂಲವೊಂದು ತಿಳಿಸಿದೆ.

‘‘ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಈ ಆಯೋಗಕ್ಕೆ ಮುಖ್ಯಸ್ಥರಿಲ್ಲ. ಹಾಗಾಗಿ, ಸಂಸ್ಥೆಯೀಗ ನಿಷ್ಕ್ರಿಯವಾಗಿದೆ. ಅದರ ಎಲ್ಲ ಯೋಜನೆಗಳು ಧೂಳು ತಿನ್ನುತ್ತಿವೆ’’ ಎಂದು ಮೂಲ ಹೇಳಿದೆ. ‘‘ಆರೆಸ್ಸೆಸ್‌ನ ಕಾರ್ಯಸೂಚಿಯಲ್ಲಿ ದನಗಳ ಕಲ್ಯಾಣಕ್ಕೆ ದೊಡ್ಡ ಸ್ಥಾನವಿದೆ. ಆದರೆ, ಈ ಆಯೋಗವು ಸರಕಾರಕ್ಕೆ ಈಗ ಆದ್ಯತೆಯಾಗಿ ಉಳಿದಿಲ್ಲ’’ ಎಂದು ಈ ಮೂಲ ಅಭಿಪ್ರಾಯಪಟ್ಟಿದೆ.

‘‘ದನಗಳು ಮತ್ತು ಅವುಗಳ ಸಂತತಿಯ ಸಂರಕ್ಷಣೆ’’ಗಾಗಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು 2019 ಫೆಬ್ರವರಿಯಲ್ಲಿ ಅಂಗೀಕಾರ ನೀಡಿತ್ತು.

ಕೇಂದ್ರ ಪಶು ಸಂಗೋಪನೆ ಸಚಿವಾಲಯದ ಅಡಿಯಲ್ಲಿ ಬರುವ ಆಯೋಗಕ್ಕೆ ದನಗಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿ ನಿರ್ದೇಶನ ನೀಡುವ ಹೊಣೆಯನ್ನು ವಹಿಸಲಾಗಿತ್ತು.

ಮಾಜಿ ಸಂಸದ ವಲ್ಲಭಭಾಯಿ ಕತೀರಿಯವರನ್ನು ಆಯೋಗದ ಮೊದಲ ಅಧ್ಯಕ್ಷರಾಗಿ ನೇಮಿಸಲಾಯಿತು. ಇಬ್ಬರು ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ನೇಮಿಸಲಾಯಿತು. ಅಧ್ಯಕ್ಷರ ಅಧಿಕಾರಾವಧಿಯು 2021 ಫೆಬ್ರವರಿಯಲ್ಲಿ ಮುಕ್ತಾಯಗೊಂಡಿತು.

‘‘ಆಯೋಗದ ಅಧ್ಯಕ್ಷರ ಅಧಿಕಾರಾವಧಿಯು ಕಳೆದ ವರ್ಷದ ಫೆಬ್ರವರಿಯಲ್ಲೇ ಮುಕ್ತಾಯಗೊಂಡಿದೆ. ಆಯೋಗವು ಸಲಹೆ ನೀಡುವ ಜವಾಬ್ದಾರಿಯನ್ನು ಹೊಂದಿದೆಯೇ ಹೊರತು ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ’’ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದರು. ‘‘ರಾಷ್ಟ್ರೀಯ ಗೋಕುಲ ಮಿಶನ್ ಮತ್ತು ಭಾರತೀಯ ಪಶು ಕಲ್ಯಾಣ ಮಂಡಳಿ (ಸ್ವಾಯತ್ತ ಸಂಸ್ಥೆ) ಅದಾಗಲೇ ಇದ್ದವು. ಹಾಗಾಗಿ, ಆಯೋಗವನ್ನು ಅವುಗಳೊಂದಿಗೆ ಜೋಡಿಸಲಾಗಿತ್ತು’’ ಎಂದರು.

ರಾಷ್ಟ್ರೀಯ ಕಾಮಧೇನು ಆಯೋಗವನ್ನು ಕೇಂದ್ರ ಪಶು ಸಂಗೋಪನಾ ಸಚಿವಾಲಯದಡಿ ಸ್ಥಾಪಿಸಲಾಗಿದೆ. ಹಾಗಾಗಿ, ThePrint ವಾಟ್ಸ್‌ಆ್ಯಪ್ ಸಂದೇಶಗಳು ಮತ್ತು ಇಮೇಲ್ ಮೂಲಕ ಸಚಿವಾಲಯವನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಈ ವರದಿ ಪ್ರಕಟಗೊಳ್ಳುವವರೆಗೆ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ.

‘‘ನಾವೀಗ ಆಯೋಗವನ್ನು ಪುನರ್ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ. ನಾವು ಅದಕ್ಕೆ ಕೆಲವೊಂದು ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ’’ ಎಂದು ಅನಾಮಧೇಯವಾಗಿ ಉಳಿಯಬಯಸಿದ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಿವಾದಗಳು

ಮೇಲೆ ಉಲ್ಲೇಖಿಸಿದ ಮೊದಲ ಮೂಲದ ಪ್ರಕಾರ, ಆಯೋಗವು ಹಲವು ಬಾರಿ ಅನಗತ್ಯ ಮುಜುಗರವನ್ನು ಸೃಷ್ಟಿಸಿದೆ ಎಂಬುದಾಗಿ ಸರಕಾರ ಭಾವಿಸಿದೆ. ಆಯೋಗದ ಅಧ್ಯಕ್ಷ ಕತೀರಿಯ ಹಲವು ಬಾರಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾರೆ ಎಂಬುದಾಗಿಯೂ ಆ ಮೂಲ ಹೇಳಿದೆ.

2021 ಜನವರಿಯಲ್ಲಿ, ರಾಷ್ಟ್ರೀಯ ‘ಕಾಮಧೇನು ಗೋ ವಿಜ್ಞಾನ ಪ್ರಚಾರ ಪ್ರಸಾರ ಪರೀಕ್ಷೆ’ಯೊಂದನ್ನು ನಡೆಸುವುದಾಗಿ ಕತೀರಿಯ ಘೋಷಿಸಿದ್ದರು. ಅದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆ ಪರೀಕ್ಷೆಯನ್ನು ನಡೆಸಲು ಆಯೋಗಕ್ಕೆ ಅಧಿಕಾರವಿಲ್ಲ ಎಂದು ಪಶು ಸಂಗೋಪನಾ ಇಲಾಖೆಯು ಹೇಳಿತ್ತು. ಬಳಿಕ ಆ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.

ಪರೀಕ್ಷೆಗಾಗಿ ಆಯೋಗದ ಅಧಿಕೃತ ವೆಬ್‌ಸೈಟ್ 54 ಪುಟಗಳ ‘ಅಧ್ಯಯನ ವಿಷಯ’ಗಳನ್ನು ಪ್ರಕಟಿಸಿತು. ಅದರಲ್ಲಿ, ಭಾವನೆಗಳನ್ನು ತೋರ್ಪಡಿಸುವುದರಲ್ಲಿ ಸೇರಿದಂತೆ ವಿದೇಶಿ ಹಸುಗಳಿಗಿಂತ ಭಾರತೀಯ ಹಸುಗಳ ‘ಶ್ರೇಷ್ಠತೆ’, ‘ಸೆಗಣಿಯ ಪ್ರಯೋಜನಗಳು’ ಮುಂತಾದ ವಿಷಯಗಳು ಒಳಗೊಂಡಿದ್ದವು. ಆಯೋಗದ ವೆಬ್‌ಸೈಟ್ ಈಗ ನಿಷ್ಕ್ರಿಯವಾಗಿದೆ.

‘‘ಮೊದಲು, ಆಯೋಗವು ‘ದೇಶಿ ಗೋ ವಿಜ್ಞಾನ’ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿತು. ಸಾಬೀತುಗೊಳ್ಳದ ಅಂಶಗಳಿಗೆ ಉತ್ತೇಜನ ನೀಡುತ್ತಿರುವುದಕ್ಕಾಗಿ ಆಯೋಗವು ಭಾರೀ ಟೀಕೆಯನ್ನು ಎದುರಿಸಿತು. ಬಳಿಕ, ಆ ಪರೀಕ್ಷೆಯನ್ನು ರದ್ದುಪಡಿಸುವಂತೆ ಪಶು ಸಂಗೋಪನಾ ಸಚಿವಾಲಯವು ಒತ್ತಡ ಹೇರಿತು. ಇಂತಹ ಪರೀಕ್ಷೆಯನ್ನು ನಡೆಸುವ ಅಧಿಕಾರ ಆಯೋಗಕ್ಕಿಲ್ಲ ಎಂಬುದಾಗಿಯೂ ಸಚಿವಾಲಯ ಹೇಳಿತು. ಇಂತಹ ವಿಷಯಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತವೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತನ್ನ ಅಧಿಕಾರಾವಧಿಯಲ್ಲಿ ಕತೀರಿಯ ಹಲವಾರು ವಿವಾದಾಸ್ಪದ ಹೇಳಿಕೆಗಳನ್ನು ನೀಡಿದರು. ‘‘ದನವು ಸಂಪೂರ್ಣ ವಿಜ್ಞಾನಮಯವಾಗಿದೆ. ನಾವು 5 ಟ್ರಿಲಿಯ ಡಾಲರ್ ಆರ್ಥಿಕತೆಯ ಬಗ್ಗೆ ಮಾತನಾಡುವುದಾದರೆ, ನಮ್ಮ ದೇಶದಲ್ಲಿ 19.42 ಕೋಟಿ ಗೋವಂಶವಿದೆ. ಅವುಗಳು ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ. ದನವು ಹಾಲು ಕೊಡದಿದ್ದರೂ ಅದರ ಮೂತ್ರ ಮತ್ತು ಸೆಗಣಿ ಅಮೂಲ್ಯವಾಗಿದೆ. ನಾವು ಅವುಗಳ ಮೂತ್ರ ಮತ್ತು ಸೆಗಣಿಯನ್ನು ಬಳಸಿದರೆ ದನಗಳ ರಕ್ಷಣೆಯಾಗುವುದು ಮಾತ್ರವಲ್ಲ, ಸಮಗ್ರ ಆರ್ಥಿಕತೆಯು ಹಳಿಗೆ ಮರಳುತ್ತದೆ’’ ಎಂಬುದಾಗಿ ಅವರು ಒಂದು ಸಂದರ್ಭದಲ್ಲಿ ಹೇಳಿದ್ದರು.

2020 ಅಕ್ಟೋಬರ್‌ನಲ್ಲಿ, ‘ಸೆಗಣಿ ಚಿಪ್’ ಅನಾವರಣಗೊಳಿಸುವ ಮೂಲಕ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರು ಇನ್ನೊಮ್ಮೆ ಸುದ್ದಿಯಾದರು. ಈ ಸೆಗಣಿ ಚಿಪ್, ಮೊಬೈಲ್ ಫೋನ್‌ಗಳು ಹೊರಸೂಸುವ ಹಾನಿಕರ ವಿಕಿರಣವನ್ನು ಗಮನಾರ್ಹ ಪ್ರಮಾಣದಲ್ಲಿ ತಗ್ಗಿಸುತ್ತದೆ ಎಂದು ಅವರು ಹೇಳಿಕೊಂಡರು.

ಆಯೋಗದ ಕೆಲಸವನ್ನು ರಾಷ್ಟ್ರೀಯ ಗೋಕುಲ ಮಿಶನ್ ಮಾಡುತ್ತಿದೆ ಎಂಬುದಾಗಿ ಪಶು ಸಂಗೋಪನಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘‘ಪಶು ಸಂಗೋಪನಾ ಸಚಿವಾಲಯದ ಅಡಿಯಲ್ಲಿ ನಾವು ಈಗಾಗಲೇ ಗೋಕುಲ್ ಮಿಶನ್ ಹೊಂದಿದ್ದೇವೆ. ಹಸುಗಳ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಂರಕ್ಷಿಸುವ ಹೊಣೆಯನ್ನು ಅದಕ್ಕೆ ನೀಡಲಾಗಿದೆ. ಹಸುಗಳ ವಂಶವಾಹಿ ರಚನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಕಾಮಧೇನು ಆಯೋಗವು ಅದೇ ಕೆಲಸವನ್ನು ಮಾಡಲು ಪ್ರಯತ್ನಿಸಿತ್ತು. ಅದರ ಅಗತ್ಯವಿಲ್ಲ. ಆಯೋಗದ ಕೆಲಸಗಳನ್ನು ಗೋಕುಲ್ ಮಿಶನ್ ಮತ್ತು ಭಾರತೀಯ ಪಶು ಸಂಗೋಪನಾ ಮಂಡಳಿಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ’’ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.

ಈ ವಿಷಯದ ಬಗ್ಗೆ ಮಾತನಾಡಲು ThePrint ಕತೀರಿಯರನ್ನು ಫೋನ್‌ನಲ್ಲಿ ಸಂಪರ್ಕಿಸಿತು. ಆದರೆ, ಅವರು ಮಾತನಾಡಲು ನಿರಾಕರಿಸಿದರು.

ಆದರೆ, ‘‘ಅಧಿಕಾರಿಗಳು ಆಯೋಗಕ್ಕೆ ಕಾರ್ಯನಿರ್ವಹಿಸಲು ಅವಕಾಶ ನೀಡಲಿಲ್ಲ. ಆಯೋಗದ ಎಲ್ಲ ಯೋಜನೆಗಳು ಮತ್ತು ಸಲಹೆಗಳನ್ನು ಸ್ಥಗಿತಗೊಳಿಸಲಾಗಿದೆ’’ ಎಂಬುದಾಗಿ ಕತೀರಿಯರಿಗೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)