ಜನರ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್
ಮಾಧವ್ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಹೊಂದಿದ್ದರು ಹಾಗೂ ಅಧಿಕಾರದಲ್ಲಿರುವವರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಅವರು ರೈತರು ಮತ್ತು ಕುರಿಗಾಹಿಗಳಿಂದ ಏನು ಕಲಿತರೋ ಅದರ ಪ್ರಯೋಜನವನ್ನು ಅವರ ವಿಜ್ಞಾನ ಅಗಾಧವಾಗಿ ಪಡೆದುಕೊಂಡಿತು. ಹಾಗಾಗಿ, ತನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ವಾಪಸ್ ನೀಡಲು ಅವರು ಬಯಸಿದರು. ಅದಕ್ಕಾಗಿ ಅವರು ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸುವುದಕ್ಕಾಗಿ ಸ್ಥಳೀಯ ಜನರೊಂದಿಗೆ ಕೆಲಸ ಮಾಡಿದರು ಹಾಗೂ ಅವರ ಬಗ್ಗೆ ಪತ್ರಿಕೆಗಳಲ್ಲಿ ಹೆಚ್ಚೆಚ್ಚು ಬರೆದರು.
ನಾನು ವಿಜ್ಞಾನಿಗಳ ಕುಟುಂಬದಿಂದ ಬಂದವನು. ಆದರೆ, ನಾನು ಮಾತ್ರ ವಿಜ್ಞಾನವನ್ನು ಕಲಿಯುವುದರಿಂದ ಹಿಂದೆ ಸರಿದೆ. ವಿಚಿತ್ರವೆಂದರೆ, ನನ್ನ ಬದುಕಿನ ಅತ್ಯಂತ ಮಹತ್ವದ ವೈಚಾರಿಕ ಸಹಯೋಗ ಏರ್ಪಟ್ಟಿದ್ದು ಓರ್ವ ವಿಜ್ಞಾನಿಯೊಂದಿಗೆ. ಅವರೇ ಮಾಧವ ಗಾಡ್ಗೀಳ್. ಈ ತಿಂಗಳ ಕೊನೆಯಲ್ಲಿ ಅವರು ತನ್ನ 80ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.
ಪುಣೆಯಲ್ಲಿ ಜನಿಸಿದ ಗಾಡ್ಗೀಳ್ ಬಾಂಬೆಯಲ್ಲಿ, ಬಳಿಕ ಹಾರ್ವರ್ಡ್ನಲ್ಲಿ ಕಲಿತರು. ಹಾರ್ವರ್ಡ್ನಲ್ಲಿ ಅವರು ಪರಿಸರ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯೇ ಅವರು ಶಿಕ್ಷಕರೂ ಆದರು. 1970ರ ದಶಕದ ಆರಂಭದಲ್ಲಿ, ಅವರು ಮತ್ತು ಅವರ ಪತ್ನಿ ಸುಲೋಚನಾ (ಸುಲೋಚನಾ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಗಣಿತದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ) ಅಮೆರಿಕದ ವಿಜ್ಞಾನ ಬದುಕಿನ ಪ್ರತಿಷ್ಠೆ ಮತ್ತು ಸುಖವನ್ನು ತ್ಯಜಿಸಿ ಭಾರತದಲ್ಲೇ ನೆಲೆಸಲು ನಿರ್ಧರಿಸಿದರು. ಅದೃಷ್ಟವಶಾತ್, ಅವರ ವಿದ್ವತ್ ಮತ್ತು ತುಡಿತವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನ ನಿರ್ದೇಶಕ ಸತೀಶ್ ಧವನ್ ಗುರುತಿಸಿದರು. ಅವರು ಗಂಡ-ಹೆಂಡತಿಯರಿಬ್ಬರಿಗೂ ಇನ್ಸ್ಟಿಟ್ಯೂಟ್ನ ಬೆಂಗಳೂರು ಕ್ಯಾಂಪಸ್ನಲ್ಲಿ ಹುದ್ದೆಗಳನ್ನು ನೀಡಿದರು. ಅಲ್ಲಿ ಸುಲೋಚನಾ, ಮುಂಗಾರು ಕುರಿತ ತನ್ನ ಮಹತ್ವದ ಸಂಶೋಧನೆಯನ್ನು ನಡೆಸುತ್ತಲೇ, ಸೆಂಟರ್ ಫಾರ್ ಅಟ್ಮೋಸ್ಫಿಯರಿಕ್ ಸಯನ್ಸಸ್ ಸ್ಥಾಪಿಸಲು ನೆರವಾದರು. ಮಾಧವ್ ಸೆಂಟರ್ ಫಾರ್ ಎಕಲಾಜಿಕಲ್ ಸಯನ್ಸಸ್ ಸಂಸ್ಥೆಯನ್ನು ಸ್ಥಾಪಿಸಿದರು ಹಾಗೂ ತನ್ನ ವೃತ್ತಿ ಬದುಕಿನ ಉದ್ದಕ್ಕೂ ಹಲವು ಪ್ರತಿಭಾವಂತ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡಿದರು.
ಮಾಧವ ಗಾಡ್ಗೀಳರ ವಿಜ್ಞಾನ ವೃತ್ತಿಜೀವನದ ಬಗ್ಗೆ ಹಿಂದೆ ನಾನು ವಿವರವಾಗಿ ಬರೆದಿದ್ದೇನೆ (‘ಹೌ ಮಚ್ ಶುಡ್ ಎ ಪರ್ಸನ್ ಕನ್ಸೂಮ್?’ ಎಂಬ ಪುಸ್ತಕದ ಒಂದು ಅಧ್ಯಾಯ ಅವರನ್ನು ಕುರಿತಾಗಿದೆ). ಈ ಅಂಕಣದಲ್ಲಿ, ಗಾಡ್ಗೀಳರ ಬಗ್ಗೆ ಹೆಚ್ಚು ವೈಯಕ್ತಿಕವಾಗಿ ಮತ್ತು ನನ್ನ ವೃತ್ತಿಯ ಮೇಲೆ ಅವರು ಬೀರಿದ ಪ್ರಭಾವದ ಬಗ್ಗ್ಗೆ ಬರೆಯಲು ಇಚ್ಛಿಸುತ್ತೇನೆ.
1982ರ ಬೇಸಿಗೆಯಲ್ಲಿ ನಾವು ಮೊದಲ ಬಾರಿ ಭೇಟಿಯಾದಾಗ, ಅವರು ಗಣಿತ ಆಧಾರಿತ ಪರಿಸರ ಶಾಸ್ತ್ರದಿಂದ ಕ್ಷೇತ್ರಾಧರಿತ ಪರಿಸರ ಅಧ್ಯಯನದತ್ತ ಕ್ಷಿಪ್ರವಾಗಿ ವಾಲುತ್ತಿದ್ದರು. ಅವರು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಆನೆಗಳ ವರ್ತನೆ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ತನ್ನ ಸಂಶೋಧನೆ ಬಗ್ಗೆ ಮಾತನಾಡುವುದಕ್ಕಾಗಿ ಅವರು ಡೆಹ್ರಾಡೂನ್ನಲ್ಲಿನ ಅರಣ್ಯ ಸಂಶೋಧನಾ ಸಂಸ್ಥೆ (ಎಫ್ಆರ್ಐ)ಗೆ ಬಂದಿದ್ದರು. ಆಗ ನನ್ನ ತಂದೆ ಎಫ್ಆರ್ಐನಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ನಾನು ಬೇಸಿಗೆ ರಜೆಯಲ್ಲಿ ಕಲ್ಕತ್ತ (ಅಲ್ಲಿ ನಾನು ಡಾಕ್ಟರೇಟ್ ಮಾಡುತ್ತಿದ್ದೆ)ದಿಂದ ಮನೆಗೆ ಬಂದಿದ್ದೆ. ಸಂದರ್ಶಕ ಪ್ರಾಧ್ಯಾಪಕ ಮಾಧವ ಗಾಡ್ಗೀಳರ ಭಾಷಣಕ್ಕೆ ನಾನು ಹಾಜರಾದೆ. ಬಳಿಕ ನನ್ನನ್ನು ಅವರಿಗೆ ಪರಿಚಯಿಸಲಾಯತು. ಚಿಪ್ಕೊ ಚಳವಳಿಯ ಬಗ್ಗೆ ಸಂಶೋಧನೆಯನ್ನು ಆರಂಭಿಸಿದ್ದೇನೆ ಎಂದು ನಾನು ಅವರಿಗೆ ಹೇಳಿದಾಗ, ಅವರು ನನ್ನನ್ನು ಅವರು ತಂಗಿದ್ದ ಎಫ್ಆರ್ಐ ಅತಿಥಿ ಗೃಹಕ್ಕೆ ಆಹ್ವಾನಿಸಿದರು. ಅಲ್ಲಿ ನಾವು ನಮ್ಮ ಮೊದಲ ಮಾತುಕತೆ ನಡೆಸಿದೆವು. ಆ ಬಳಿಕ, ಬೆಂಗಳೂರು, ದಿಲ್ಲಿ, ಕಲ್ಕತ್ತಾ, ಕೊಚ್ಚಿ, ಧಾರವಾಡ ಮತ್ತು ಪುಣೆಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳ ವಿವಿಧ ಹೊರಾಂಗಣ ಸ್ಥಳಗಳಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಭೇಟಿಯಾಗಿ ಮಾತುಕತೆಗಳನ್ನು ನಡೆಸಿದೆವು.
ಪ್ರಾಣಿ ಪರಿಸರದ ಬಗ್ಗೆ ಅಧ್ಯಯನ ಮಾಡುತ್ತಿದ್ದ ವೇಳೆ, ಮಾಧವ ಗಾಡ್ಗೀಳ್, ಬುಡಕಟ್ಟು ಜನರು ಮತ್ತು ರಾಷ್ಟ್ರೀಯ ಉದ್ಯಾನಗಳ ಸಮೀಪ ವಾಸಿಸುತ್ತಿದ್ದ ರೈತರ ನಡುವೆ ನಡೆಯುತ್ತಿದ್ದ ಸಂಘರ್ಷವನ್ನು ಸ್ವತಃ ವೀಕ್ಷಿಸಿದರು. ಈ ನಡುವೆ, ಅವರು ಅರಣ್ಯ ನಿರ್ವಹಣೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಆದರೆ ಈ ಕ್ಷೇತ್ರದಲ್ಲಿನ ಸರಕಾರಿ ನೀತಿಗಳು ವಾಣಿಜ್ಯ ಹಿತಾಸಕ್ತಿಗಳಿಗೆ ಅತಿ ಹೆಚ್ಚು ಪೂರಕವಾಗಿವೆ, ಆದರೆ ರೈತರು, ಕುರಿಗಾಹಿಗಳು ಮತ್ತು ಕುಶಲಕರ್ಮಿಗಳ ಅಗತ್ಯಗಳ ಬಗ್ಗೆ ನಿರ್ಲಕ್ಷ ಧೋರಣೆ ಹೊಂದಿವೆ ಎನ್ನುವುದನ್ನು ಅವರು ಕಂಡುಕೊಂಡರು.
ಮಾಧವ ಗಾಡ್ಗೀಳ್ ಪ್ರಬಲ ಸಾಮಾಜಿಕ ಪ್ರಜ್ಞೆ ಹೊಂದಿರುವ ವ್ಯಕ್ತಿ. ಇದನ್ನು ಅವರು ಕೌಟುಂಬಿಕ ಪರಂಪರೆಯಿಂದಲೇ ಪಡೆದುಕೊಂಡಿದ್ದಾರೆ (ಅವರ ತಂದೆ ಖ್ಯಾತ ಅರ್ಥಶಾಸ್ತ್ರಜ್ಞ ಡಿ.ಆರ್. ಗಾಡ್ಗೀಳ್ ಉದಾರವಾದಿಯಾಗಿದ್ದರು ಹಾಗೂ ಮಾನವಹಕ್ಕುಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಬಿ.ಆರ್. ಅಂಬೇಡ್ಕರ್ರ ಕೆಲಸಗಳ ಬಗ್ಗೆ ಮೆಚ್ಚುಗೆ ಹೊಂದಿದ್ದರು).
ಮಾಧವ ಗಾಡ್ಗೀಳ್ ಈಗ ಪರಿಸರ ಮಾದರಿಗಳ ಅಧ್ಯಯನವನ್ನು ನಿಲ್ಲಿಸಿ, ಪರಿಸರದೊಂದಿಗಿನ ಜನರ ನೈಜ ಬದುಕಿನ ಸಂವಹನವನ್ನು ಅಧ್ಯಯನ ಮಾಡುತ್ತಿದ್ದರು. ಆಗ ನಾನು ಡೆಹ್ರಾಡೂನ್ ಮತ್ತು ದಿಲ್ಲಿಯಲ್ಲಿ ವಸಾಹತು ಕಾಲದಲ್ಲಿ ಬೆಳೆಸಲಾದ ಅರಣ್ಯಗಳಿಗೆ ಸಮೃದ್ಧ ಪುರಾವೆಗಳನ್ನು ನೋಡಿದೆ. ಇದನ್ನು ಇತಿಹಾಸಕಾರರು ನಿರ್ಲಕ್ಷಿಸಿದ್ದಾರೆ. ದಾಖಲೆಗಳಲ್ಲಿ ನಾನು ಕಂಡುಕೊಂಡ ವಿಷಯವನ್ನು ಮಾಧವ್ಗೆ ಉದ್ವೇಗದಿಂದ ಹೇಳಿದಾಗ, ಅವರು ತನ್ನ ಕ್ಷೇತ್ರ ಸಂಶೋಧನೆಯ ಬಗ್ಗೆ ಅತ್ಯಂತ ಸಮಾಧಾನದಿಂದ ವಿವರಿಸಿದರು. ಆಗ, ನಮ್ಮ ಸಂಪನ್ಮೂಲಗಳು ಮತ್ತು ಆಸಕ್ತಿಗಳನ್ನು ಒಟ್ಟು ಸೇರಿಸಿದರೆ, ಜೊತೆಯಾಗಿ ಏನನ್ನಾದರೂ ಸಾಧಿಸಲು ಸಾಧ್ಯವಾಗಬಹುದು ಹಾಗೂ ಅದನ್ನು ನಾವು ಪ್ರತ್ಯೇಕವಾಗಿದ್ದುಕೊಂಡು ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡೆವು.
1992ರಲ್ಲಿ, ಮಾಧವ ಗಾಡ್ಗೀಳ್ ಮತ್ತು ನಾನು ‘ದಿಸ್ ಫಿಶರ್ಡ್ ಲ್ಯಾಂಡ್: ಆ್ಯನ್ ಎಕಲಾಜಿಕಲ್ ಹಿಸ್ಟರಿ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಪ್ರಕಟಿಸಿದೆವು. ಆ ಪುಸ್ತಕದಲ್ಲಿ, ಭಾರತದಲ್ಲಿನ ಅರಣ್ಯಗಳ ಬಳಕೆ ಮತ್ತು ದುರ್ಬಳಕೆಗಳ ಸುದೀರ್ಘ ಇತಿಹಾಸವನ್ನು ಕೊಡಲಾಗಿದೆ. ಕೆಲವು ವಿಮರ್ಶಕರು ಪುಸ್ತಕದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಇತರರು, ಪುಸ್ತಕದಲ್ಲಿ ನಿರಾಶಾದಾಯಕ ಮತ್ತು ವಿನಾಶವನ್ನು ಸಂಕೇತಿಸುವ ಧ್ವನಿಯಿದೆ ಎಂಬುದಾಗಿ ದೂರಿದರು. ಹಾಗಾಗಿ, ಹೆಚ್ಚು ರಚನಾತ್ಮಕವಾದ ಇನ್ನೊಂದು ಪುಸ್ತಕವನ್ನು ಹೊರತರಲು ನಿರ್ಧರಿಸಿದೆವು. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸ್ಥಿರತೆ ಎಂಬ ಎರಡು ಸಂಘರ್ಷಾತ್ಮಕ ಕಲ್ಪನೆಗಳನ್ನು ಭಾರತೀಯರು ಹೇಗೆ ಪರಿಣಾಮಕಾರಿಯಾಗಿ ಜೊತೆ-ಜೊತೆಗೆ ತರಬಹುದು ಎನ್ನುವುದನ್ನು ಆ ಪುಸ್ತಕವು ತೋರಿಸಬೇಕಾಗಿತ್ತು. ಅದರಂತೆಯೇ, ‘ದಿಸ್ ಫಿಶರ್ಡ್ ಲ್ಯಾಂಡ್’ ಪುಸ್ತಕದ ಮುಂದಿನ ಭಾಗವನ್ನು 1995ರಲ್ಲಿ ಪ್ರಕಟಿಸಿದೆವು. ಆ ಪುಸ್ತಕದ ಹೆಸರು: ‘ಎಕಾಲಜಿ ಆ್ಯಂಡ್ ಈಕ್ವಿಟಿ: ದ ಯೂಸ್ ಆ್ಯಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಾಂಟೆಂಪರರಿ ಇಂಡಿಯಾ’.
ಈ ಎರಡು ಪುಸ್ತಕಗಳು ಅವುಗಳು ಮೊದಲು ಪ್ರಕಟಗೊಂಡಂದಿ ನಿಂದ ನಿರಂತರವಾಗಿ ಮರುಮುದ್ರಣಗಳನ್ನು ಕಾಣುತ್ತಿವೆ. ಅವುಗಳು ಆಕ್ಸ್ಫರ್ಡ್ ಯನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಓಮ್ನಿಬಸ್ ಮುದ್ರಣದಲ್ಲೂ ಲಭ್ಯವಿವೆ. ಹಾಗಾಗಿ, ಆ ಪುಸ್ತಕಗಳ ಸಾರಾಂಶವನ್ನು (ಅಥವಾ ಆ ಪುಸ್ತಕಗಳಿಗೆ ಸಿಕ್ಕ ವಿವಿಧ ಪ್ರತಿಕ್ರಿಯೆಗಳನ್ನು) ನಾನು ಇಲ್ಲಿ ನೀಡುವುದಿಲ್ಲ. ಆದರೆ, ಪುಸ್ತಕದ ನಿರ್ಮಾಣದಲ್ಲಿ ನಮ್ಮ ಸಹಯೋಗ ಹೇಗಿತ್ತು ಎಂಬ ಬಗ್ಗೆ ನಾನು ಕೆಲವೊಂದು ಅಂಶಗಳನ್ನು ಹೇಳಬಯಸುತ್ತೇನೆ. ಹೆಸರುಗಳಿರುವ ಪುಟದಲ್ಲಿ ಮಾಧವ್ರ ಹೆಸರು ಮೊದಲು ಬಂದಿದೆ. ಅದಕ್ಕೆ ಅಕಾರದಲ್ಲಿ ರಾಮಚಂದ್ರಕ್ಕಿಂತ ಮಾಧವ್ ಹೆಸರು ಮೊದಲು ಬರುವುದೊಂದೇ ಕಾರಣವಲ್ಲ. ಎರಡೂ ಪುಸ್ತಕಗಳ ಮೂಲ ಚೌಕಟ್ಟು ಮುಖ್ಯವಾಗಿ ಅವರದೇ. ಹಾಗಾಗಿ ಅವರ ಹೆಸರು ಮೊದಲು ಬಂದಿದೆ. ಅದೇ ವೇಳೆ, ಪ್ರಾಯೋಗಿಕ ಸಂಶೋಧನೆಯ ಮೂಲಕ ನಾನು ನೀಡಬೇಕಾದ ನ್ಯಾಯೋಚಿತ ದೇಣಿಗೆಯನ್ನು ಪುಸ್ತಕಕ್ಕೆ ನೀಡಿದ್ದೇನೆ.
ಮಾಧವ್ರೊಂದಿಗೆ ಕೆಲಸ ಮಾಡುವಾಗಲೆಲ್ಲ ನಾವು ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಲೇ ಇರುತ್ತೇವೆ. ಅವರಿಂದ ಕಲಿಯುವುದು ವಿದ್ವಾಂಸರಿಗೆ ಸಂಬಂಧಿಸಿದ ಅಥವಾ ವೈಜ್ಞಾನಿಕ ಸಂಗತಿಗಳು ಮಾತ್ರವಲ್ಲ, ಸಾಂಸ್ಥಿಕ ಮತ್ತು ವೃತ್ತಿಪರತೆಗೆ ಸಂಬಂಧಿಸಿದ ವಿಷಯಗಳನ್ನೂ ಕಲಿಯುತ್ತೇವೆ. ಕಲ್ಕತ್ತದಲ್ಲಿ ಪಿಎಚ್ಡಿ ಮಾಡುತ್ತಿದ್ದ ನಾನು ಮನೆಗೆ ಮರಳಿದ್ದೆ. ಅಂದು ಕಲ್ಕತ್ತದಲ್ಲಿ ವೈಚಾರಿಕ ಪರಿಸ್ಥಿತಿ ಅತ್ಯಂತ ಫ್ಯೂಡಲ್ ಆಗಿತ್ತು. ಅವರೆಲ್ಲರ ಪೈಕಿ ಮಾರ್ಕ್ಸಿಸ್ಟ್ ಪ್ರೊಫೆಸರ್ಗಳು ಅತ್ಯಂತ ಫ್ಯೂಡಲ್ ಆಗಿದ್ದರು. ನಮಗಿಂತ ಒಂದೇ ತಿಂಗಳು ಹಿರಿಯರಾಗಿರುವ ವಿದ್ವಾಂಸನನ್ನೂ ‘ದಾದಾ’ ಎಂಬುದಾಗಿ ಕರೆಯಬೇಕಾಗಿತ್ತು. ಅಕಾಡಮಿಕ್ ಸೀನಿಯರ್ಗಳ ಮಾತುಗಳನ್ನು ಪ್ರಶ್ನಿಸಬಾರದು ಎಂಬುದಾಗಿ ಅಲ್ಲಿ ಎಲ್ಲರಿಗೂ ಕಲಿಸಲಾಗುತ್ತಿತ್ತು. ಆದರೆ, ನಾನು ಮಾಧವ್ರನ್ನು ಅವರ ಮೊದಲ ಹೆಸರಾದ ‘ಮಾಧವ್’ ಎಂಬುದಾಗಿಯೇ ಕರೆಯುತ್ತಿದ್ದೆ (ಅವರು ನನಗಿಂತ 16 ವರ್ಷ ದೊಡ್ಡವರು). ಎಲ್ಲಕ್ಕಿಂತಲೂ ಹೆಚ್ಚಾಗಿ, ಸಮಾನ ವಿಚಾರವಾದಿಗಳು ಎಂಬ ನೆಲೆಯಲ್ಲಿಯೇ ನಾವು ಕೆಲಸ ಮಾಡಿದ್ದೇವೆ ಮತ್ತು ಚರ್ಚೆ ಮಾಡಿದ್ದೇವೆ. ವಿಕಾಸವಾದದಿಂದ ಅತಿ ಹೆಚ್ಚು ಪ್ರಭಾವಿತಗೊಂಡಿದೆ ಎಂಬುದಾಗಿ ನಾನು ಭಾವಿಸಿದ ಅವರ ಕಲ್ಪನೆಗಳನ್ನು ನಾನು ಪ್ರಶ್ನಿಸುತ್ತಿದ್ದೆ ಹಾಗೂ ತೀರಾ ಮಾರ್ಕ್ಸ್ ವಾದಿ ಎಂಬುದಾಗಿ ಅವರು ಭಾವಿಸಿದ ನನ್ನ ಕಲ್ಪನೆಗಳನ್ನು ಅವರು ಖಂಡಿಸುತ್ತಿದ್ದರು.
ಮಾಧವ್ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಹೊಂದಿದ್ದರು ಹಾಗೂ ಅಧಿಕಾರದಲ್ಲಿರುವವರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಅವರು ರೈತರು ಮತ್ತು ಕುರಿಗಾಹಿಗಳಿಂದ ಏನು ಕಲಿತರೋ ಅದರ ಪ್ರಯೋಜನವನ್ನು ಅವರ ವಿಜ್ಞಾನ ಅಗಾಧವಾಗಿ ಪಡೆದುಕೊಂಡಿತು. ಹಾಗಾಗಿ, ತನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ವಾಪಸ್ ನೀಡಲು ಅವರು ಬಯಸಿದರು. ಅದಕ್ಕಾಗಿ ಅವರು ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸುವುದಕ್ಕಾಗಿ ಸ್ಥಳೀಯ ಜನರೊಂದಿಗೆ ಕೆಲಸ ಮಾಡಿದರು ಹಾಗೂ ಅವರ ಬಗ್ಗೆ ಪತ್ರಿಕೆಗಳಲ್ಲಿ ಹೆಚ್ಚೆಚ್ಚು ಬರೆದರು.
ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ಮೇಲೆ ವ್ಯಕ್ತಿಗಳು ಮತ್ತು ಸಮುದಾಯಗಳು ಹೊಂದಿರುವ ಹಕ್ಕುಗಳ ರಕ್ಷಣೆಗಾಗಿ ಅಥವಾ ಸರಕಾರಿ ಅಧಿಕಾರಿಗಳ ಅಜ್ಞಾನ ಮತ್ತು ಭಟ್ಟಂಗಿತನ ಮುಂತಾದ ತಾನು ನೋಡಿದ ಮತ್ತು ಅಧ್ಯಯನ ಮಾಡಿದ ಸಂಗತಿಗಳಿಗೆ ಸಂಬಂಧಿಸಿ ಧರಣಿಗಳನ್ನು ನಡೆಸುವ ಅಥವಾ ಗ್ರಾಮಸ್ಥರ ಹೆಸರಿನಲ್ಲಿ ಬರೆಯಲಾಗುವ ದೂರು ಅರ್ಜಿಗಳಿಗೆ ಸಹಿ ಮಾಡುವಂಥ ವ್ಯಕ್ತಿ ಅವರಾಗಿರಲಿಲ್ಲ. ಆದರೆ, ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆಯಿರಲಿಲ್ಲ.
ಮಾಧವ ಗಾಡ್ಗೀಳ್ ಈಗ ತನ್ನದೇ ವೈಜ್ಞಾನಿಕ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ. ಅದು ಮುಂದಿನ ವರ್ಷ ಪ್ರಕಟಗೊಳ್ಳಲಿದೆ. ತನ್ನ ಅಧ್ಯಕ್ಷತೆಯ ಪರಿಣತರ ಸಮಿತಿಯೊಂದು ಪಶ್ಚಿಮ ಘಟ್ಟಗಳ ಬಗ್ಗೆ ಬರೆದ ಸಮಗ್ರ ಹಾಗೂ ಮುನ್ನೋಟ ವರದಿ ಹಾಗೂ ಇತರ ವಿಷಯಗಳ ಬಗ್ಗೆ ಮಾಧವ ಗಾಡ್ಗೀಳ್ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಪಶ್ಚಿಮ ಘಟ್ಟಗಳ ದುರ್ಬಲ ಅರಣ್ಯಗಳು ಮತ್ತು ಕಡಿದಾದ ಪರ್ವತ ಇಳಿಜಾರುಗಳು ಹಾಗೂ ಅವುಗಳನ್ನು ಗಣಿಗಾರಿಕೆ ಮತ್ತು ಇತರ ವಿನಾಶಕಾರಿ ಚಟುವಟಿಕೆಗಳಿಂದ ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಆ ವರದಿಯಲ್ಲಿ ಉಲ್ಲೇಖಗಳಿವೆ. ಪಶ್ಚಿಮ ಘಟ್ಟಗಳ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪಂಚಾಯತ್ಗಳು ಮತ್ತು ಸ್ಥಳೀಯ ಜನ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದಾಗಿ ವರದಿಯು ಶಿಫಾರಸು ಮಾಡಿದೆ. (ಈ ವರದಿಯು ಆನ್ಲೈನ್ನಲ್ಲಿ ಲಭ್ಯವಿದೆ: https://www.cppr.in/wp-content/uploads/2013/03/Gadgil-report.pdf)
ಗಾಡ್ಗೀಳ್ ಸಮಿತಿ ವರದಿಯನ್ನು ಗುತ್ತಿಗೆದಾರ-ರಾಜಕಾರಣಿ- ಅಧಿಕಾರಿ ಕೂಟವು ತೀವ್ರವಾಗಿ ವಿರೋಧಿಸಿತು. ಆದರೆ, ಸಮಾಜದ ಎಲ್ಲ ವರ್ಗದ ಜನರು ಅದನ್ನು ಸ್ವಾಗತಿಸಿದರು. ಆ ವರದಿಯನ್ನು ಅನುಷ್ಠಾನಗೊಳಿಸಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಕೇರಳ, ಕರ್ನಾಟಕ ಮತ್ತು ಗೋವಾ ಮುಂತಾದ ರಾಜ್ಯಗಳಲ್ಲಿ ದಾಂಧಲೆಗೈದಿರುವ ವಿನಾಶಕಾರಿ ಪ್ರವಾಹಗಳನ್ನು ತಡೆಯಬಹುದಾಗಿತ್ತು ಅಥವಾ ಅವುಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದಾಗಿತ್ತು.
ನಾನು ಮಾಧವ ಗಾಡ್ಗೀಳ್ರನ್ನು 40 ವರ್ಷಗಳಿಂದ ಅಥವಾ ಅವರ ಅರ್ಧ ಜೀವನದಷ್ಟು ಬಲ್ಲೆ. ಅವರ ಅಥವಾ ನನ್ನ ಮನೆಯಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನ ಊಟದ ಕೋಣೆಯಲ್ಲಿ, ವಿವಿಧ ನಗರಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ನಾವು ಜೊತೆಯಾಗಿ ಕಳೆದಿದ್ದೇವೆ; ಬಸ್ಗಳು ಮತ್ತು ರೈಲುಗಳಲ್ಲಿ ನಾವು ಜೊತೆಯಾಗಿ ಪ್ರಯಾಣಿಸಿದ್ದೇವೆ. ಆ ಕ್ಷಣಗಳು ಸ್ಮರಣೀಯವಾಗಿವೆ.
ಅವರ ಕುರಿತ ಒಂದು ಅತ್ಯಂತ ಮಹತ್ವದ ನೆನಪಿನ ಬಗ್ಗೆ ಹೇಳುವುದಾದರೆ, ಅದು ಅವರ ಪ್ರೀತಿಯ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ್ದಾಗಿದೆ. ಮಾಧವ್ ಅತ್ಯಂತ ಹೆಚ್ಚು ಗೌರವಿಸುತ್ತಿದ್ದ ವ್ಯಕ್ತಿಗಳ ಪೈಕಿ ಜೆಸೂಟ್ ಪಾದ್ರಿ ದಿವಂಗತ ಫಾದರ್ ಸೆಸಿಲ್ ಜೆ. ಸಲ್ದಾನಾ ಒಬ್ಬರು. ತನ್ನ ತವರು ಕರ್ನಾಟಕದ ಸಸ್ಯ ಸಂಪತ್ತಿನ ಬಗ್ಗೆ ನಿಖರ ಗ್ರಂಥವೊಂದನ್ನು ಬರೆಯುವ ತನ್ನ ಪಂಥದ ವೈಜ್ಞಾನಿಕ ಪರಂಪರೆಯನ್ನು ಸಲ್ದಾನಾ ಮುಂದುವರಿಸಿಕೊಂಡು ಬಂದಿದ್ದರು. ಒಮ್ಮೆ ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ತನ್ನ ಫೋಟೊಗಳ ಪ್ರದರ್ಶನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕಾಗಿ ಫಾದರ್ ಸಲ್ದಾನಾ ಆ ಚಿತ್ರಗಳನ್ನು ಸೆಂಟರ್ ಫಾರ್ ಇಕಾಲಜಿಯ ಮೊಗಸಾಲೆಯಲ್ಲಿ ಬಿಡಿಸಿಟ್ಟಿದ್ದರು. ಆ ಹಂತದಲ್ಲಿ, ಚಿತ್ರಗಳು ಯಾವುದೇ ವಿವರಣೆಗಳನ್ನು ಹೊಂದಿರಲಿಲ್ಲ. ಆಗ ಪ್ರತಿಯೊಂದು ಚಿತ್ರವನ್ನು ತೆಗೆದ ಸ್ಥಳಗಳನ್ನು ಗುರುತಿಸುವಂತೆ ನಾನು ಮಾಧವರಿಗೆ ಹೇಳಿದೆ. ಅವರು ತಕ್ಷಣ ನಿರಾಯಾಸವಾಗಿ ಎಲ್ಲ ಸ್ಥಳಗಳ ಹೆಸರುಗಳನ್ನು ಹೇಳಿದರು. ಆ ನಿರ್ದಿಷ್ಟ ಅರಣ್ಯವು ಯಾವ ಹಕ್ಕಿ ಪ್ರಭೇದಕ್ಕೆ ಪ್ರಸಿದ್ಧಿಯಾಗಿದೆ, ಆ ನೀರಿನ ಆಕರದ ಹೆಸರೇನು, ಆ ನಿರ್ದಿಷ್ಟ ಭೂಭಾಗವನ್ನು ಹಾದು ಹೋಗಿರುವ ಆ ಬೃಹತ್ ವಿದ್ಯುತ್ ಕಂಬದ ಸಮೀಪ ಯಾವ ಗ್ರಾಮವಿದೆ ಎಂಬ ವಿವರಗಳನ್ನೂ ಅವರು ನೀಡಿದರು. ಅವರು ನೀಡಿದ ವಿವರಣೆಗಳನ್ನು ಕೇಳಿ ಸ್ವತಃ ಕ್ಷೇತ್ರ ಕೆಲಸಗಾರನಾದ ನಾನೇ ದಂಗಾಗಿ ಹೋದೆ. ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿತು.