varthabharthi


ಸಿನಿಮಾ

ಕೆ.ಜಿ.ಎಫ್. ಎಂಬ ಬೃಹತ್ ಆಲದ ಮರದ ಸುತ್ತ...

ವಾರ್ತಾ ಭಾರತಿ : 22 May, 2022
ರೊನಾಲ್ಡ್ ಲೋಬೊ

ಕೆ.ಜಿ.ಎಫ್. ಚಲನ ಚಿತ್ರದ ಎರಡು ಭಾಗಗಳನ್ನು ಬಹುತೇಕ ನಾವೆಲ್ಲರೂ ವೀಕ್ಷಿಸಿದ್ದೇವೆ. ಈ ಚಲನ ಚಿತ್ರ ದೇಶಾದ್ಯಂತ ಸಿನೆಮಾ ಪ್ರಿಯರಲ್ಲಿ ಮೂಡಿಸಿದ ಸಂಚಲನ ಬಾಲಿವುಡನ್ನೂ ಬೆಚ್ಚಿ ಬೀಳಿಸಿದೆ. ಇತ್ತೀಚೆಗೆ ದಕ್ಷಿಣ ಭಾರತದ ಕೆಲವು ಚಲನ ಚಿತ್ರಗಳು ಪ್ಯಾನ್ ಇಂಡಿಯಾ ಪ್ರದರ್ಶನ ಕಂಡು, ಗಲ್ಲಾ ಪೆಟ್ಟಿಗೆಯನ್ನು ಬಾಚಲು ತೊಡಗಿದಾಗ, ತಣ್ಣನೆ ವೀಕ್ಷಿಸಿ, ಮೌನವಾಗಿ ಕುಳಿತಿದ್ದ ಬಾಲಿವುಡ್‌ನ ದೊರೆಗಳು ಮಾತನಾಡಲು ಪ್ರಾರಂಭಿಸಿದ್ದಾರೆ. 'ರಂಗೀಲ'ವೆಂಬ ರಂಗು ರಂಗಿನ ಮನರಂಜನೀಯ ಚಲನ ಚಿತ್ರದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಒಂದು ಟ್ವೀಟ್‌ನಲ್ಲಿ ''ಕೆ.ಜಿ.ಎಫ್.-2 ಚಲನಚಿತ್ರ ತನ್ನ ನೆರಳಿನಲ್ಲಿ ಏನನ್ನೂ ಬೆಳೆಯಲು ಬಿಡದ ಹೆಮ್ಮರದಂತೆ'' ಎಂದು ಹೇಳಿದ್ದಾರೆ. ಆಲದ ಮರದ ಕೆಳಗೆ ಏನೂ ಬೆಳೆಯುವುದಿಲ್ಲ ಎಂಬ ನಾಣ್ಣುಡಿಯಿದೆ. ಈ ಮಾತು ಕೆ.ಜಿ.ಎಫ್. ಚಲನ ಚಿತ್ರಕ್ಕೆ ಎಷ್ಟು ಪ್ರಸ್ತುತ ಎಂಬುದು ಪ್ರಶ್ನೆ.

    ಸಿನೆಮಾವೆಂಬ ಭಾವನಾ ಲೋಕದಲ್ಲಿ ಹಿಂದಿರುಗಿ ನೋಡಿದಾಗ, ಎಪ್ಪತ್ತರ ದಶಕದ ಕೊನೆಯಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಚಲನ ಚಿತ್ರ 'ಶೋಲೆ' ಅದ್ಭುತ ಯಶಸ್ಸನ್ನು ಗಳಿಸಿ, ಭಾರತೀಯ ಸಿನೆಮಾ ಜಗತ್ತಿನಲ್ಲಿ ಅವರ್ಣೀಯ ಕಂಪನಗಳನ್ನು ಸೃಷ್ಟಿಸಿ, ಅದರ ಛಾಪನ್ನು ಇಂದಿಗೂ ವೀಕ್ಷಕರ ಮನದಲ್ಲಿ ಅಳಿಸಲಾಗದಂತೆ ಉಳಿಸಿಕೊಂಡಿದೆ. ಆಗ ಡಿಜಿಟಲ್ ಯುಗವಾಗಿರಲಿಲ್ಲ. ಚಲನ ಚಿತ್ರಗಳು ನಿಧಾನವಾಗಿ ದೇಶಾದ್ಯಂತ ಸಂಚರಿಸಿ ಕಾದು ಬೇಸತ್ತಿರುವ ವೀಕ್ಷಕರ ಹೃದಯಗಳನ್ನು ಗೆಲ್ಲಬೇಕಾಗಿತ್ತು. ಹಿಂದಿ ಭಾಷೆ ಅಷ್ಟೊಂದು ಪ್ರಚಲಿತವಿಲ್ಲದ ದಕ್ಷಿಣ ಭಾರತದಲ್ಲಿ ಬಾಲಿವುಡ್ ಚಿತ್ರಗಳು ಕೇವಲ ವರ್ಣ ರಂಜಿತ ಆನಂದಮಯ ದೃಶ್ಯಗಳ ಮೋಡಿಯಿಂದಲೇ ಗೆಲ್ಲುತ್ತಿದ್ದವು. ಆಗಿನ ನಿಯತ ಕಾಲಿಕೆಯೊಂದರಲ್ಲಿ ಶೋಲೆ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಲು ಅರ್ಹವೇ ಎಂದು ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಆ ನಿಯತ ಕಾಲಿಕೆ ಹೀಗೆಂದು ಉತ್ತರಿಸಿತ್ತು. ''ಶೋಲೆ ಚಿತ್ರ ಹಾಗೂ ಆಸ್ಕರ್ ಪ್ರಶಸ್ತಿಯ ನಡುವೆ ಒಂದು ಮಿಲಿಯನ್ ಕಿ.ಮೀ.ನಷ್ಟು ಅಗಾಧವಾದ ಅಂತರವಿದೆ.'' ಆಗಿನ ಕಾಲದಲ್ಲಿ ಪ್ರಗತಿ ಪರರಲ್ಲಿ ಕಮರ್ಶಿಯಲ್ ಚಿತ್ರಗಳ ಬಗ್ಗೆ ಇದ್ದಂತಹ ಕೀಳರಿಮೆಯನ್ನು ಈ ಉತ್ತರದಲ್ಲಿ ಕಾಣಬಹುದು. ವಿಪರ್ಯಾಸವೇನೆಂದರೆ, ಈ ಡಿಜಿಟಲ್ ಯುಗದಲ್ಲೂ ಶೋಲೆ ಚಿತ್ರದ ತುಣುಕುಗಳನ್ನು ಇಂದಿಗೂ ಮಿಲಿಯಾಂತರ ಜನರು ಯೂ ಟ್ಯೂಬಿನಲ್ಲಿ ವೀಕ್ಷಿಸುತ್ತಿದ್ದಾರೆ. ಹಾಗಾದರೆ, ಶೋಲೆ ಚಿತ್ರದ ಹಾಗೆಯೇ ಕೆ.ಜಿ.ಎಫ್. ಚಲನ ಚಿತ್ರ ಬಾಕ್ಸ್ ಆಫೀಸಿನಲ್ಲಿ ಪವಾಡವನ್ನು ಸೃಸ್ಟಿಸಲು ಕಾರಣಗಳೇನು? ಶೋಲೆ ಚಿತ್ರದ ಹಾಗೆ ಕೆ.ಜಿ.ಎಫ್. ಚಲನ ಚಿತ್ರ ಪ್ರೇಕ್ಷಕರ ಮನದಲ್ಲಿ ಅಮರವಾಗಿ ಉಳಿಯುತ್ತದೆಯೇ?

ಮೇಲಿನ ಪ್ರಶ್ನೆಗಳನ್ನು ಉತ್ತರಿಸಲು ತೊಡಗಿದಾಗ ಎರಡು ವಿಭಿನ್ನ ಕಾಲಘಟ್ಟಗಳು ನಮ್ಮ ಎದುರಿಗೆ ಬರುತ್ತವೆ. ಸ್ವಾತಂತ್ರ್ಯ ದಕ್ಕಿದ ನಂತರ ನಾವು ಬ್ರಿಟಿಷರಿಂದ ಬಳುವಳಿಯಾಗಿ ಪಡೆದದ್ದು ಅವರ ಆಡಳಿತ ವ್ಯವಸ್ಥೆ. ಈ ಆಡಳಿತ ವ್ಯವಸ್ಥೆ ಪ್ರಜಾತಂತ್ರದಲ್ಲಿ, ಕ್ರಮೇಣವಾಗಿ, ಕಾರಣಾಂತರಗಳಿಂದ ಕಲುಷಿತಗೊಂಡು, ಅದರ ಪರಿಣಾಮದಿಂದ ಉಂಟಾದ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಜನಪ್ರತಿನಿಧಿಗಳು ಪ್ರದರ್ಶಿಸಿದ ಸರ್ವಾಧಿಕಾರ ಇತ್ಯಾದಿಗಳಿಂದ ಜನಸಾಮಾನ್ಯರು ರೋಸಿ ಹೋಗಿ 'ವ್ಯವಸ್ಥೆ'ಯ ಬಗ್ಗೆ ಜಿಗುಪ್ಸೆಗಳು ಮೂಡತೊಡಗಿದವು. ಇದನ್ನು ಗಮನಿಸಿದ ಚಲನಚಿತ್ರ ಕಥೆಯ ಬರಗಾರರು ವ್ಯವಸ್ಥೆಯ ಮೇಲೆ ದಂಗೇಳುವ 'ಆ್ಯಂಗ್ರಿ ಯಂಗ್‌ಮೆನ್'ನ ಕವಚವನ್ನು ಹೀರೋಗಳಿಗೆ ತೊಡಿಸಿ ಚಲನ ಚಿತ್ರ ಕಥೆಗಳನ್ನು ಬರೆಯತೊಡಗಿದರು. ಶೋಲೆ ಇಂತಹ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಚಲನ ಚಿತ್ರ.

ನಂತರ, ತೊಂಬತ್ತರ ದಶಕದಲ್ಲಿ ಪ್ರಾರಂಭವಾದ ಡಿಜಿಟಲ್ ತಂತ್ರಜ್ಞಾನ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಇಂದು ಇಡೀ ಜಗತ್ತನ್ನು ಕ್ಷಣಾರ್ಧದಲ್ಲಿ ಅಂಗೈಯಲ್ಲಿ ಕೂರಿಸಿಬಿಡುತ್ತದೆ. ಎಲ್ಲವೂ ಅಂಗೈಯಲ್ಲಿಯೇ ಲಭ್ಯವಿರುವಾಗ, ನೋಡದೆ ಇರುವಂತಹದು ಏನೂ ಉಳಿದಿರದಿದ್ದಾಗ, ಪ್ರತಿಯೊಂದರಲ್ಲೂ ಹೊಸತನವನ್ನು ಬಯಸುವ ಪ್ರೇಕ್ಷಕ ವರ್ಗಕ್ಕೆ ಅವರು ಮೆಚ್ಚುವಂತಹದು ಏನು ಎಂಬುದನ್ನು ನಿರ್ಧರಿಸಲು ನಿರ್ದಿಷ್ಟವಾದ ಮಾನದಂಡಗಳು ಇಲ್ಲದಿರುವಾಗ ನಿರ್ಮಾಪಕರು ದಿಗಿಲು ಬೀಳುವುದು ಸಹಜ. ಈ ಕಾರಣದಿಂದ, ಕೈ ಸುಟ್ಟುಕೊಂಡ ಅನುಭವಿ ನಿರ್ಮಾಪಕರು ನಿರ್ಮಾಣದ ಜವಾಬ್ದಾರಿಯಿಂದ ಒಬ್ಬೊಬ್ಬರಾಗಿ ಹಿಂದೆ ಸರಿಯುತ್ತಿರಬೇಕಾದರೆ ಅವರು ಖಾಲಿ ಬಿಟ್ಟ ಜಾಗವನ್ನು ಆಕ್ರಮಿಸಲು ಅನೇಕರು, ಅದರಲ್ಲಿ ಹೆಚ್ಚಾಗಿ ಉತ್ಸಾಹಿ ಯುವಕ-ಯುವತಿಯರು ಸಜ್ಜಾಗಿ ನಿಂತಿರುತ್ತಾರೆ. ಇದರ ಫಲಿತಾಂಶ ಏನೆಂದರೆ, ಪ್ರದರ್ಶನಕ್ಕೆ ಬಿಡುಗಡೆಗೊಂಡ ಹೆಚ್ಚಿನ ಚಿತ್ರಗಳಲ್ಲಿ ಎದ್ದು ಕಾಣುವುದು ಬಜೆಟ್‌ನ ಕೊರತೆ, ಅದರ ಪರಿಣಾಮವಾಗಿ ಅನುಭವ ಹೊಂದಿರುವ ತಾಂತ್ರಿಕ ಪರಿಣಿತರ ಹಾಗೂ ನಟ-ನಟಿಯರ ಅನುಪಸ್ಥಿತಿಯಿಂದ ಕಳಪೆ ಗುಣಮಟ್ಟದ ಚಲನ ಚಿತ್ರಗಳು. ಇಂತಹ ಪರಿಸ್ಥಿತಿಯಲ್ಲಿ ಕೊರೋನವೆಂಬ ಮಹಾಮಾರಿ ಜಗತ್ತನ್ನೇ ಆಕ್ರಮಿಸಿ ಇಡೀ ಸಿನೆಮಾ ಜಗತ್ತನ್ನೇ ನಿಷ್ಕ್ರಿಯಗೊಳಿಸುತ್ತದೆ.

 ಕ್ಷಿಪ್ರವಾಗಿ ಬದಲಾಗುತ್ತಿರುವ ಜನರ ಅಪೇಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕದ ಹಾಲಿವುಡ್ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಾಪಾಡಲು ಅನೇಕ ಹೊಸ ಪ್ರಯೋಗಗಳನ್ನು ಆಗಲೇ ಮಾಡತೊಡಗಿತ್ತು. ಅವುಗಳಲ್ಲಿ ಒಂದು, ದೊಡ್ಡ ಬಜೆಟ್‌ನ ಚಿತ್ರಗಳ ನಿರ್ಮಾಣ. ಈ ದೊಡ್ಡ ಬಜೆಟ್‌ನ ಚಲನ ಚಿತ್ರಗಳ ನಿರ್ಮಾಣಕ್ಕೆ ಅನುಗುಣವಾಗಿ ಅಸಾಮಾನ್ಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿದ ಪ್ರೊಟಾಗೊನಿಷ್ಟನನ್ನು ಕಣಕ್ಕಿಳಿಸಿ, ಸಿಜಿಐ ತಂತ್ರ ಜ್ಞಾನವನ್ನು ಬಳಸಿ, ಕ್ಷಣ ಕ್ಷಣಕ್ಕೂ ಮೈ ನವಿರೇಳಿಸುವ ಸನ್ನಿವೇಶಗಳಿಂದ ಕೂಡಿದ ಹೊಸ ಲೋಕವನ್ನು ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸುವುದು ಅವರ ತಂತ್ರವಾಗಿತ್ತು. ಆದರೆ ಈ ಪ್ರೊಟಾಗೊನಿಷ್ಟ್‌ಗಳು ಮಾನವರಾದಲ್ಲಿ ಅವರಿಂದ ವೇಗವಾಗಿ ಚಲಿಸುತ್ತಿರುವ ಇಲೆಕ್ಟ್ರಿಕ್ ಟ್ರೈನನ್ನು ತಡೆದು ನಿಲ್ಲಿಸುವುದು ಅಥವಾ ಬಾಹ್ಯಾಕಾಶದಿಂದ ಭೂಮಿಗೆ ಬೀಳುತ್ತಿರುವ ಉಲ್ಕೆಯನ್ನು ಧ್ವಂಸಗೊಳಿಸುವುದು ತರ್ಕಕ್ಕೆ ನಿಲ್ಲುತ್ತದೆಯೇ? ಈ ದ್ವಂದ್ವವನ್ನು ಬಗೆಹರಿಸಲು ಹಾಲಿವುಡ್‌ನ ನಿರ್ಮಾಪಕರು ಮೊರೆ ಹೋಗಿದ್ದು, ಅಸಾಮಾನ್ಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿದ ಹರ್ಕ್ಯುಲೀಸ್‌ನಂತಹ ಪೌರಾಣಿಕ ಹೀರೋಗಳಿಗೆ ಅಥವಾ ಚಿತ್ರಕಾರರು ಕಾಮಿಕ್ಸ್ ಪುಸ್ತಕಗಳಲ್ಲಿ ಚಿತ್ರಿಸಿದ ಹರ್ಕ್ಯುಲೀಸ್‌ಗಿಂತಲೂ ಅಧಿಕ ಶಕ್ತಿ ಮತ್ತು ಯುಕ್ತಿಯುಳ್ಳ ಬ್ಯಾಟ್‌ಮ್ಯಾನ್, ಸ್ಪೈಡರ್ ಮ್ಯಾನ್ ನಂತಹ ಕಾಲ್ಪನಿಕ ವ್ಯಕ್ತಿಗಳಿಗೆ.

 ಚಕ ಚಕನೆ ದೃಶ್ಯಗಳು ಬದಲಾವಣೆಗೊಳ್ಳುತ್ತಾ, ರಭಸದಿಂದ ಮುನ್ನುಗ್ಗುವ ಈ ಹೊಸ ಪ್ರೊಟಾಗೊನಿಷ್ಟ್‌ಗಳ Sci-Fi-ಈ ಚಿತ್ರಗಳ ಜೊತೆಗೆ ಕಲಾತ್ಮಕವಾಗಿ ಸುಂದರವಾದ ಚಲನ ಚಿತ್ರಗಳನ್ನೂ ಹಾಲಿವುಡ್ ನೀಡತೊಡಗಿತು. ಉದಾರಹಣೆಗೆ: The Lord of the Rings, The Joker, Once Upon a Time in Hollywood. ಭಾರತದ ಮಟ್ಟಿಗೆ ಹೇಳುವುದಾದರೆ, ಏಳು ಬೀಳಿನೊಂದಿಗೆ ಸಾಗುತ್ತಿದ್ದ ಬಾಲಿವುಡ್, ಟಾಲಿವುಡ್‌ಗಳು ಎಚ್ಚೆತ್ತು ಹಾಲಿವುಡನ್ನು ಅನುಸರಿಸ ತೊಡಗಿ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕತೊಡಗಿದವು. ಇದರ ಫಲವಾಗಿ ನಮಗೆ ನೋಡಲು ಸಿಕ್ಕಿದ ಚಿತ್ರಗಳಲ್ಲಿ 'ಬಾಹುಬಲಿ' ಪ್ರಾಮುಖ್ಯ. ಬಾಹುಬಲಿ ಚಿತ್ರ ತನ್ನ ತಾಂತ್ರಿಕ ಕೌಶಲ್ಯತೆ ಹಾಗೂ ವಿಶಾಲವಾದ ಗಾತ್ರದಿಂದ ದೇಶದೆಲ್ಲೆಡೆ ವೀಕ್ಷಕರ ಗಮನ ಸೆಳೆದು ವಿದೇಶದಲ್ಲೂ ಯಶಸ್ಸನ್ನು ಕಂಡಿತು. ಆದರೆ ಗಾತ್ರ ಹಾಗೂ ಕೌಶಲ್ಯ ಈ ಎರಡರಲ್ಲೂ ಬಾಹುಬಲಿ ಚಲನ ಚಿತ್ರಕ್ಕೆ ಸೆಡ್ಡು ಹೊಡೆಯುವ ಚಿತ್ರವೊಂದನ್ನು ಕನ್ನಡದ ಸ್ಯಾಂಡಲ್ ವುಡ್ ನಿರ್ಮಿಸಲಿದೆ ಎಂಬುದನ್ನು ಯಾರೂ ಗ್ರಹಿಸಿರಲಿಲ್ಲ. ಕೆ.ಜಿ.ಎಫ್. ಚಿತ್ರ ಸೃಷ್ಟಿಸಿದ ಸಂಚಲನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಲ್ಲದೆ ಬಾಲಿವುಡ್‌ನಲ್ಲೂ ಕಂಪನವನ್ನು ಮೂಡಿಸಿತು.

ಎಲ್ಲರಿಗೂ ತಿಳಿದಿರುವಂತೆ, ಕೆ.ಜಿ.ಎಫ್. ಚಿತ್ರದ ಯಶಸ್ಸು ಪ್ರಾಮುಖ್ಯವಾಗಿ ನಿರ್ದೇಶಕ ನೀಲ್ ಹಾಗೆ ನಾಯಕ ನಟ ಯಶ್‌ಗೆ ಸಲ್ಲುತ್ತದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿಸಲು ನಟ ಯಶ್‌ರ ನಿರ್ಧಾರ ಹಾಗೂ ಆ ದಿಸೆಯಲ್ಲಿ ಅವರು ಮಾಡಿರುವ ಪ್ರಯತ್ನ ಮತ್ತು ಅದಕ್ಕೆ ಪೂರಕವಾಗಿ ನಿರ್ದೇಶಕ ನೀಲ್ ಅಳವಡಿಸಿದ ಅಂತರ್‌ರಾಷ್ಟ್ರೀಯ ಗುಣಮಟ್ಟದ ಅತ್ಯುತ್ತಮ ತಂತ್ರಜ್ಞಾನ ಇವೆಲ್ಲವೂ ಚಿತ್ರದ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಅದಕ್ಕಿಂತಲೂ ಮಿಗಿಲಾಗಿ, ಕೆ.ಜಿ.ಎಫ್.ಚಿತ್ರದ ಯಶಸ್ಸು ನಿರ್ದೇಶಕ ನೀಲ್ ಕಥೆಯನ್ನು ಹೇಳಿರುವ ರೀತಿಯಲ್ಲಿ ಅಡಗಿದೆ. ಇಡೀ ಚಲನ ಚಿತ್ರ ಬಿರುಸಿನ ಸಂಭಾಷಣೆ, ಮೈ ನವಿರೇಳಿಸುವ ಬಿಜಿಎಂನೊಡನೆ ಶರವೇಗದಲ್ಲಿ ಚಲಿಸುತ್ತಾ, ಒಂದು ಕ್ಷಣವೂ ನಿಧಾನ ಗತಿಗೆ ಅವಕಾಶ ನೀಡದೆ, ಕ್ಷಣ ಕ್ಷಣಕ್ಕೆ ಮೈ ನಿಬ್ಬೆರಗಾಗಿಸುವ ದೃಶ್ಯಗಳನ್ನು ತೋರಿಸುತ್ತಾ ವೀಕ್ಷಕರಿಗೆ ಏನನ್ನೂ ಯೋಚಿಸಲು ಕಾಲಾವಕಾಶ ನೀಡದೆ, ಕತ್ತಲುಮಯ ಜಗತ್ತಿನಲ್ಲಿ ಒಂದು ವಿಸ್ಮಯವಾದ ರೀತಿಯಲ್ಲಿ ಅಬ್ಬರದಿಂದ ಸಾಗುತ್ತಾ ಹೋಗುತ್ತದೆ. ಹಾಲಿವುಡ್‌ನ ನಿರ್ಮಾಪಕರು ಕಾಮಿಕ್ಸ್ ಪುಸ್ತಕಗಳಲ್ಲಿನ ಅಸಾಮಾನ್ಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿದ ಹರ್ಕ್ಯುಲೀಸ್, ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್‌ನಂತಹ ಕಾಲ್ಪನಿಕ ವ್ಯಕ್ತಿಗಳನ್ನು ಪ್ರೊಟಾಗೊನಿಷ್ಟ್ ಆಗಿ ಬಳಸಿದರೆ ನಿರ್ದೇಶಕ ನೀಲ್ ಇವರೆಲ್ಲರನ್ನು ನಾಚಿಸುವಂತೆ, ತುಸು ಕೂಡ ಅಂಜದೆ, ಹುಲು ಮಾನವನಾದ ಗ್ಯಾಂಗ್ ಸ್ಟಾರ್ ರಾಕಿಗೆ ಹರ್ಕ್ಯುಲೀಸ್, ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್‌ನಂತಹ ಕಾಲ್ಪನಿಕ ವ್ಯಕ್ತಿಗಳನ್ನು ಸಹ ಹುಬ್ಬೇರಿಸುವಂತೆ ಮಾಡುವ ಅಸಾಮಾನ್ಯ ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡುತ್ತಾರೆ. ಮುಂದುವರಿದು, ಕೆ.ಜಿ.ಎಫ್. ಚಿತ್ರದಲ್ಲಿ ತೋರಿಸಲಾದ ಘಟನೆಗಳೆಲ್ಲ ವಾಸ್ತವವಾಗಿದ್ದು ಆದರೆ, ಇತಿಹಾಸದಲ್ಲಿ ಅವುಗಳನ್ನು ಕಾರಣಾಂತರದಿಂದ ಮುಚ್ಚಿಡಲಾಗಿದೆ ಎನ್ನುವ ರೀತಿಯಲ್ಲಿ ಸಿನೆಮಾದ ಉದ್ದಕ್ಕೂ ಅರ್ಭಟಿಸುತ್ತ ಹೋಗುತ್ತಾರೆ. ನಿರ್ದೇಶಕ ನೀಲ್‌ರ ಮಾತಿನಲ್ಲಿ ಹೇಳುವುದಾದರೆ ಕೆ.ಜಿ.ಎಫ್., ಆರ್. ಆರ್.ಆರ್.ಗಳಂತಹ ಚಿತ್ರಗಳಲ್ಲಿನ ಹೀರೋಗಳಿಗೆ ಅಸಾಮಾನ್ಯ ಶಕ್ತಿ ಹಾಗೂ ಸಾಮರ್ಥ್ಯ ಬರುವುದೇ ಒಂದು ರೀತಿಯ ಹುಚ್ಚುತನದಿಂದ. ಈ ಹುಚ್ಚುತನವೇ ಅವರ ಅಗಾಧ ಶಕ್ತಿ ಹಾಗೂ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿರುವ ದೊಡ್ಡ ಫ್ಯಾನ್ ಬಳಗವನ್ನು ಸೃಷ್ಟಿಸುತ್ತದೆ. ಈ ಅಸಾಮಾನ್ಯ ಹೀರೊಗಳಿಗೆ ಪ್ರಕೃತಿಯ ಯಾವ ನಿಯಮಗಳೂ ಅನ್ವಯಿಸುವುದಿಲ್ಲ ನ್ಯೂಟನ್‌ನ ಗುರುತ್ವಾಕರ್ಷಣೆಯನ್ನು ಸಹ ಒಳಗೊಂಡು.

'ಶೋಲೆ' ಚಿತ್ರ ಆಲದ ಮರದಂತೆ ತನ್ನ ನೆರಳಲ್ಲಿ ಮತ್ತೇನನ್ನು ಬೆಳೆಯಲು ಬಿಡದ ಮರದಂತಾಗಲಿಲ್ಲ. ಬದಲಾಗಿ ತದನಂತರ, 'ಆ್ಯಂಗ್ರಿ ಯಂಗ್‌ಮೆನ್'ನ ಇಮೇಜಿನಲ್ಲಿ ಹಲವು ಅದ್ದೂರಿ ಚಿತ್ರಗಳು ಬಾಕ್ಸ್ ಆಫೀಸನ್ನು ಗೆಲ್ಲತೊಡಗಿದವು. ಉದಾ: 'ದೀವಾರ್'. ಆದರೆ ಇಂದು ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಈ ಯುಗದಲ್ಲಿ ನೋಡಲು, ಕಲಿಯಲು, ತಿಳಿಯಲು ಮತ್ತು ಹೇಳಲು ಏನೂ ಉಳಿದಿರುವುದಿಲ್ಲ. ನಗರವೊಂದರಲ್ಲಿ ನಿಂತು ತಿರುಗಿ ಸುತ್ತಲೂ ನೋಡಿದರೆ ಟೀ ಶರ್ಟು ಮತ್ತು ಜೀನ್ಸ್ ಧರಿಸಿ, ಬ್ಯಾಕ್ ಪ್ಯಾಕ್‌ನೊಂದಿಗೆ ಕೈಯಲ್ಲಿರುವ ಮೊಬೈಲನ್ನು ನೋಡುತ್ತ ಸಾಗುತ್ತಿರುವ ಯುವಕ ಯುವತಿಯರು, ಜೊತೆಗೆ ಕೆಲಸವಿಲ್ಲದೆ ಅಂಡಲೆಯುವ ಪಡ್ಡೆ ಹುಡುಗರು ನೋಡಲು ಸಿಗುತ್ತಾರೆ. ಇವತ್ತಿನ ಚಿತ್ರ ರಂಗ ಇವರನ್ನು ಅವಲಂಬಿಸಿದೆ. ಈ ಹಿಂದೆ, ಚಲನ ಚಿತ್ರಗಳಲ್ಲಿ, ದೃಶ್ಯಾವಳಿಗಳನ್ನು ನೈಜ ಸ್ವರೂಪದಲ್ಲಿ ಹಾಗೂ ಸಹಜ ಗತಿಯಲ್ಲಿ ತೋರಿಸುತ್ತಾ, ಹರ್ಷ, ವಿಸ್ಮಯ, ಭಯ, ದಿಗಿಲು, ದುಃಖ, ಆನಂದಗಳನ್ನುಂಟುಮಾಡುವ ಭಾವನೆಗಳನ್ನು ಸೃಷ್ಟಿಸಿ ನಿರ್ದೇಶಕರು ಜನರ ಮನ ಗೆಲ್ಲುತ್ತಿದ್ದರು. ಆದರೆ ಈ ಎಲ್ಲ ಮಾನದಂಡಗಳು ಈಗ ತಲೆಕೆಳಗಾಗಿವೆ. 'ತಬರನ ಕಥೆ' ಅಥವಾ 'ಚೋಮನ ದುಡಿ'ಯಂತೆ ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಹೆಸರು ಗಳಿಸಿದ ಪಿಂಕಿ ಎಲ್ಲಿ? 'ಬ್ರಿಡ್ಜ್'ಗಳಂತಹ ಚಿಕ್ಕ, ಚೊಕ್ಕ ಚಲನ ಚಿತ್ರಗಳು ಥಿಯೇಟರ್ ಗಳಲ್ಲಿ ಅಥವಾ ಒ.ಟಿ.ಟಿ.ಯಲ್ಲಿ ಇಂದು ನೋಡಲು ಸಿಗುವುದಿಲ್ಲ.

ಕೆ.ಜಿ.ಎಫ್. ಒಂದು ಶ್ರೇಷ್ಠ ಚಿತ್ರವೇ ಹಾಗೂ ಅದು ವೀಕ್ಷಕರ ಮನದಲ್ಲಿ ಅಮರವಾಗಿ ಉಳಿಯುತ್ತದೆಯೇ ಎಂಬುದು ಈಗ ಅಪ್ರಸ್ತುತ. ಬದಲಾಗಿರುವ ಈ ಪ್ರಪಂಚದಲ್ಲಿ, ಕೆ.ಜಿ.ಎಫ್, ಆರ್. ಆರ್. ಆರ್.ನಂತಹ ಚಿತ್ರಗಳು ಮಹಾನ್ ಸ್ಫೋಟದೊಂದಿಗೆ, ಉಲ್ಕೆಯಂತೆ ಭೂಮಿಗೆ ಧುಮುಕಿ, ಅಪ್ಪಳಿಸಿ ಕಾಲವೆಂಬ ಪ್ರಪಾತದಲ್ಲಿ ಕಣ್ಮರೆಯಾಗುವುದಂತೂ ಖಚಿತ. ಆದರೆ, ಕೆ.ಜಿ.ಎಫ್. ನಿರ್ದೇಶಕ ನೀಲ್ 'ಬುದ್ಧಿವಂತ' ಅಂತೂ ನಿಜ. ಇತ್ತೀಚೆಗೆ ಅಪಾರ ಯಶಸ್ಸನ್ನು ಕಂಡ 'ಗರುಡ ಗಮನ, ವೃಷಭ ವಾಹನ' ಎಲ್ಲಾ ದೃಷ್ಟಿಕೋನಗಳಿಂದಲೂ ನೋಡಿದಾಗ ಅತ್ತುತ್ತಮವಾಗಿ ಮಾಡಲ್ಪಟ್ಟ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಸಂತಸವೇನೆಂದರೆ, ಕನ್ನಡದ ಮಟ್ಟಿಗೆ ಹೇಳುವುದಾದರೆ, ವಿಭಿನ್ನವಾದ ಚಲನ ಚಿತ್ರಗಳು ಈಗ ಹೊರಬರುತ್ತಿವೆ. ಉದಾ: 'ಚಾರ್ಲೀ 777'. ಆದರೂ, ಮೌಲ್ಯಗಳು ನಶಿಸಿ ಹೋಗಿರುವ ಈ ಸಮಯದಲ್ಲಿ ವಾಣಿಜ್ಯ ರಂಗದಂತೆ ಚಲನ ಚಿತ್ರ ರಂಗವೂ ಕೆಲವೇ ಕೆಲವು ಉಳ್ಳವರ ಪಾಲಾಗುತ್ತದೆಯೇ ಎಂಬುದನ್ನು ಮಾತ್ರ ಬೇಗನೆ ತಿಳಿಯಲ್ಲಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)