varthabharthi


ವಿಶೇಷ-ವರದಿಗಳು

ಪಠ್ಯ ಪುಸ್ತಕ ಮರು ಪರಿಷ್ಕರಣೆ: ಒಂದು ಬಹಿರಂಗ ಪತ್ರ

ವಾರ್ತಾ ಭಾರತಿ : 22 May, 2022

ಶಿಕ್ಷಣ ಇಲಾಖೆಯು 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಸಮಾಜ ವಿಜ್ಞಾನ, ಭಾಷೆ ಮತ್ತು ಪರಿಸರ ವಿಜ್ಞಾನ ವಿಷಯಗಳ ರಾಜ್ಯ ಪಠ್ಯ ಪುಸ್ತಕಗಳಲ್ಲಿ ತಮಗೆ ಅನಿಸಿರುವ ಗೊಂದಲಕ್ಕೆ ಎಡೆ ಮಾಡಿಕೊಡುವಂತಹವು ಎಂದು ತಮಗೆ ತೋರಿದ ವಿಷಯಗಳನ್ನು ಪರಿಶೀಲಿಸಲು 15 ಸದಸ್ಯರ ಸಮಿತಿಯನ್ನು ನೇಮಕ ಮಾಡಿತ್ತು.

ಈ ಹಿಂದೆ ಡಾ.ಬರಗೂರು ರಾಮಚಂದ್ರಪ್ಪರವರ ನೇತೃತ್ವದ ಪರಿಷ್ಕರಣ ಸಮಿತಿಯು ಮಾಡಿದ ಶಿಫಾರಸುಗಳನ್ನು ಪರಿಷ್ಕರಿಸಲು ನೇಮಿಸಿದ ಈ ಸಮಿತಿಯ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥರವರನ್ನು ನೇಮಕ ಮಾಡಲಾಗಿದೆ. ಶಿಕ್ಷಣ ತಜ್ಞರಲ್ಲದ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬಗೆಯಲ್ಲಿ ಸಕ್ರಿಯವಾಗಿ ಸಂಶೋಧನೆ ಮಾಡಿಲ್ಲದ ಚಕ್ರತೀರ್ಥ ಅವರನ್ನು ಯಾವ ಮಾನದಂಡದಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ? ಈ ಮುಖ್ಯ ಪ್ರಶ್ನೆಗೆ ಸಂಬಂಧಪಟ್ಟವರಿಂದ ಉತ್ತರವಿಲ್ಲ.

ಇವರ ಅಧ್ಯಕ್ಷತೆಯ ಈ ಸಮಿತಿಯು ಆರಂಭದಲ್ಲಿಯೇ ಆರನೇ ತರಗತಿಯ ಸಮಾಜ ವಿಜ್ಞಾನದ ‘ಹೊಸ ಧರ್ಮಗಳ ಉದಯ’ ಎನ್ನುವ ಪಠ್ಯದಲ್ಲಿ ಜೈನ, ಬುದ್ಧದಮ್ಮಗಳ ಉದಯವಾದದ್ದು ಯಾಕೆ ಎಂದು ವಿವರಿಸುವ ಪಠ್ಯ ಭಾಗಗಳನ್ನು ತೆಗೆಯಬೇಕೆಂದು ಸೂಚನೆ ಮಾಡಿತ್ತು ಮತ್ತು ಈ ಹೊಸ ಪರಿಷ್ಕರಣ ಸಮಿತಿಯ ಜವಾಬ್ದಾರಿ ಇದರಾಚೆಗೆ ಎಲ್ಲ ಪಠ್ಯ ಪುಸ್ತಕಗಳನ್ನು ಪರಿಶೀಲಿಸುವುದು ಎಂದೂ ವರದಿಯಾಗಿದೆ. ಅದರ ಮುಂದುವರಿದ ಭಾಗವಾಗಿ ಯಾವ ಮುನ್ಸೂಚನೆಯೂ ಇಲ್ಲದೆ, ಶಿಕ್ಷಣದ ಭಾಗೀದಾರರೊಂದಿಗೆ, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ 10 ನೇ ತರಗತಿಯ ಪಠ್ಯಗಳಲ್ಲಿ ಅನೇಕ ಬದಲಾವಣೆ ಮಾಡಿದೆ. ಪಿ.ಲಂಕೇಶ್‌ರ ‘ಮೃಗ ಮತ್ತು ಸುಂದರಿ’, ಡಾ.ಜಿ.ರಾಮಕೃಷ್ಣರ ‘ಭಗತ್ ಸಿಂಗ್’, ಸಾರಾ ಅಬೂಬಕರ್‌ರವರ ‘ಯುದ್ಧ’, ಎ.ಎನ್. ಮೂರ್ತಿರಾಯರ ‘ವ್ಯಾಘ್ರ ಕಥೆ’, ಶಿವ ಕೋಟ್ಯಾಚಾರ್ಯರ ‘ಸುಕುಮಾರ ಸ್ವಾಮಿ ಕಥೆ’ ಈ ಪಠ್ಯಗಳನ್ನು ಕೈ ಬಿಡಲಾಗಿದೆ. ನಂತರ ಪತ್ರಿಕೆಗಳಲ್ಲಿ ಭಗತ್ ಸಿಂಗ್ ಪಠ್ಯವನ್ನು ಕೈಬಿಟ್ಟಿಲ್ಲವೆಂದು ಹೇಳಿಕೆಗಳನ್ನು ನೀಡಲಾಗಿದೆ. ಹಾಗೆಯೇ ನಾರಾಯಣ ಗುರು, ಪೆರಿಯಾರ್ ರವರ ಕುರಿತ ಪಠ್ಯವನ್ನೂ ಕೈ ಬಿಡಲಾಗಿದೆ, ಅಲ್ಲದೆ ಡಾ.ಅರವಿಂದ ಮಾಲಗತ್ತಿಯವರ ‘ಮರಳಿ ಮನೆಗೆ’ ಕೈಬಿಟ್ಟು ಎಸ್.ವಿ. ಪರಮೇಶ್ವರ ಭಟ್ಟರ ‘ಹೇಮಂತ’; ಎಲ್.ಬಸವರಾಜು ರವರ ‘ಊರುಭಂಗ’ ಕೈ ಬಿಟ್ಟು ಗಜಾನನ ಶರ್ಮಾರವರ ‘ಚನ್ನ ಭೈರಾದೇವಿ’; ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರ ‘ಕನ್ನಡ ಮೌಲ್ವಿ’ ಕೈ ಬಿಟ್ಟು ಎನ್.ರಂಗನಾಥ ಶರ್ಮಾರವರ ‘ರಾಮರಾಜ್ಯ’; ‘ಧರ್ಮ ಸಮದೃಷ್ಟಿ-ವಿಜಯ ನಗರ ಶಾಸನ’ ಪಾಠ ತೆಗೆದು ಎಸ್.ಎಲ್.ಬೈರಪ್ಪರವರ ‘ನಾನು ಕಂಡಂತೆ ಡಾ.ಬಿ.ಜಿ.ಎಲ್ ಸ್ವಾಮಿ’; ಕೆ.ನೀಲಾರವರ ಕೋಮು ಸಾಮರಸ್ಯದ ಪಠ್ಯ ‘ರಂಜಾನ್ ಸುರಕುಂಬ’ ತೆಗೆದು ಸುಶ್ರುತ ದೊಡ್ಡೇರಿಯವರ ‘ಹೊಳೆ ಬಾಗಿಲು’ ಸೇರಿಸಲಾಗಿದೆ. ಬಿ.ಟಿ. ಲಲಿತಾ ನಾಯಕ್ ರವರ ಪಠ್ಯಗಳನ್ನು ಕೈ ಬಿಡಲಾಗಿದೆ. ವಿವಾದ ಎದ್ದರೆ ತೋರಿಸಲೆಂಬಂತೆ ಕೆಲವು ಪ್ರಗತಿಪರರ ಪಠ್ಯಗಳನ್ನು ಇಟ್ಟುಕೊಂಡರೂ, ಕೈ ಬಿಟ್ಟ ಪಠ್ಯ ಮತ್ತು ಸೇರ್ಪಡೆ ಮಾಡಿದ ಪಠ್ಯಗಳನ್ನು ನೋಡಿದರೆ, ಸಮಾಜದ ಪುರೋಗಾಮಿ ಅಭಿವೃದ್ಧಿಗೆ ಪೂರಕವಲ್ಲದ, ಸನಾತನವಾದವನ್ನು ಎತ್ತಿ ಹಿಡಿಯುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಬದ್ಧವಾದ ಎಲ್ಲ ಅಂಶಗಳೂ ಸ್ಪಷ್ಟವಾಗಿ ಕಾಣುತ್ತಿವೆ. ಶಿಕ್ಷಣ ಸಚಿವರು ಇನ್ನೂ ಪಠ್ಯ ಪುಸ್ತಕಗಳ ಮುದ್ರಣವೇ ಆಗಿಲ್ಲ ಇವೆಲ್ಲ ವದಂತಿ ಎಂದು ನಿರಾಕರಿಸಿದ್ದಾರೆಂದೂ ವರದಿಗಳಿವೆ. ನಿಯಮದಂತೆ ಮೇ 25 ರೊಳಗೆ ಪಠ್ಯ ಪುಸ್ತಕ ಪೂರೈಕೆ ಆಗಬೇಕು, ಆದರೆ ಇನ್ನೂ ವಿವಾದವನ್ನೇ ಇಟ್ಟುಕೊಂಡಿರುವ ಸರಕಾರ ಪುಸ್ತಕ ಪೂರೈಸಬಹುದೇ ಎಂಬ ಪ್ರಶ್ನೆಯೂ ಇದೆ.

ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೊಬ್ಬರಾದ ಹೆಡಗೆವಾರ್‌ರವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’, ಬನ್ನಂಜೆ ಗೋವಿಂದಾಚಾರ್ಯರವರ ‘ಶುಕನಾಸನ ಉಪದೇಶ’, ಶತಾವಧಾನಿ ಗಣೇಶ್‌ರವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ಶಿವಾನಂದ ಕಳವೆಯವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’ ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ. ಹಾಗೆಯೇ ಹೆಡಗೆವಾರ್ ಅವರ ಭಾಷಣವನ್ನು ಸೇರಿಸುವುದರ ಕಾರಣ ಮಾತ್ರ ಹೇಳದೇ ಹೋದರೂ ಅರ್ಥವಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಕಂಡು ಬರುತ್ತಿಲ್ಲ.

ಪಠ್ಯ ಪುಸ್ತಕ ರಚನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಮೌಲ್ಯಗಳು, ನೀತಿಗಳು ಪ್ರಜಾತಾಂತ್ರಿಕತೆಗೆ ಪೂರಕವಾಗಿರಬೇಕು.

1. ಸರಕಾರಗಳು ಬದಲಾದಂತೆ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಬದಲಾಯಿಸುವ ಈ ಪರಿಪಾಠ ಸರಿಯಲ್ಲ.

2. ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯು ಸಂಪೂರ್ಣವಾಗಿ ಶಿಕ್ಷಣ ತಜ್ಞರ ಮೂಲಕ ಮಾತ್ರ ನಡೆಯಬೇಕು ಎನ್ನುವುದು ಇಲ್ಲಿನ ಪ್ರಜ್ಞಾವಂತರ ಆಶಯವಾಗಿದೆ. ಭಾರತದ ಚುನಾವಣಾ ಆಯೋಗದ ರೀತಿಯಲ್ಲಿ ಈ ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು ಮತ್ತು ಇದು ಸರಕಾರದ ನಿಯಂತ್ರಣದಲ್ಲಿ ಇರಬಾರದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.

3. ಯಾವುದೇ ಪೂರ್ವಾಲೋಚನೆ ಇಲ್ಲದೆ ಶಿಕ್ಷಣ ತಜ್ಞರು, ವಿಷಯ ತಜ್ಞರುಗಳ ಜೊತೆ, ಹಿಂದಿನ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ಜೊತೆ ಸಮಾಲೋಚಿಸದೆ, ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರ ಮೂಲಕ ಪಠ್ಯಪುಸ್ತಕಗಳ ಬದಲಾವಣೆಗೆ ಮುಂದಾಗಿರುವುದು ನಮ್ಮ ಆತಂಕಕ್ಕೆ ಕಾರಣ.

 4. ಪಠ್ಯ ಪುಸ್ತಕ ರಚನಾ ಸಮಿತಿ, ಪರಿಷ್ಕರಣಾ ಸಮಿತಿಗಳಿಗೆ ಅದರದೇ ಆದ ಮಾನದಂಡಗಳಿರುತ್ತವೆ. ಅದರ ಅಧ್ಯಕ್ಷರು ಮತ್ತು ಸದಸ್ಯರು ಶಿಕ್ಷಣ ತಜ್ಞರಾಗಿರಬೇಕು. ಸಮಿತಿಯ ರಚನೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕು. ಮುಖ್ಯವಾಗಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅದು ಕನ್ನಡದ ಅಸ್ಮಿತೆಗೆ ಪೂರಕವಾಗಿದ್ದು, ಇಲ್ಲಿನ ಬಹು ಸಂಸ್ಕೃತಿಯ ಆಶಯಗಳನ್ನು ಪ್ರತಿನಿಧಿಸುವಂತಿರಬೇಕು. ವೈಜ್ಞಾನಿಕ ಮನೋಧರ್ಮ, ವೈಚಾರಿಕತೆ, ಆಧುನಿಕ ಪ್ರಜ್ಞೆ, ಜಾತ್ಯತೀತ ತತ್ವಗಳಿಗೆ ಬದ್ಧವಾಗಿರಬೇಕು.ಸಾಮಾಜಿಕ ಸಾಮರಸ್ಯ, ನೈತಿಕತೆ, ವ್ಯಕ್ತಿತ್ವ ವಿಕಸನಕ್ಕೆ ಅನುವಾಗುವಂತೆ ಪಠ್ಯಪುಸ್ತಕಗಳನ್ನು ರೂಪಿಸಬೇಕು.

5. ಸಂವಿಧಾನದ ಆಶಯಗಳ ಅನುಸಾರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರೂಪಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಬೇಕು.

6. ಪಠ್ಯಗಳನ್ನು ಆಯ್ಕೆ ಮಾಡುವಾಗ ಲಿಂಗತ್ವ ಅಸಮಾನತೆ, ಪ್ರಾದೇಶಿಕ ಅಸಮಾನತೆಯನ್ನು ತಪ್ಪಿಸಬೇಕು. ಸಾಮಾಜಿಕ ನ್ಯಾಯದ ತತ್ವ ಪಾಲನೆಯಾಗಬೇಕು.

7. ತರಗತಿಗಳ ಮಕ್ಕಳ ವಯೋಮಾನವನ್ನು ಆಧರಿಸಿ ಪಠ್ಯಗಳನ್ನು ಆಯ್ಕೆ ಮಾಡಬೇಕು.

8. ಪಠ್ಯಕ್ರಮವು ಕನ್ನಡ ಭಾಷೆಯ ಎಲ್ಲಾ ಸಾಹಿತ್ಯ ಪರಂಪರೆಯನ್ನು ಪ್ರತಿನಿಧಿಸಬೇಕು.

9. ಮುಖ್ಯವಾಗಿ ಮಕ್ಕಳ ನಡುವೆ ದ್ವೇಷವನ್ನು ಬಿತ್ತುವಂತಹ, ದೇಶ, ಸಂವಿಧಾನ, ರಾಷ್ಟ್ರದ ಬಾವುಟಕ್ಕೆ ಅವಮಾನ ಮಾಡುವ ಪಠ್ಯಗಳನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು. ಜಾತೀಯತೆಯನ್ನು ಪೋಷಿಸುವಂತಹ ಪಠ್ಯಗಳನ್ನು ಆಯ್ಕೆ ಮಾಡಬಾರದು.

10. ಪಠ್ಯ ಪುಸ್ತಕಗಳ ಪರಿಷ್ಕರಣೆಯು ಪ್ರಜಾಸತ್ತಾತ್ಮಕವಾಗಿರಬೇಕು.

11. ಮಕ್ಕಳ ಮೇಲೆ ಯಾವುದೇ ರಾಜಕೀಯ, ಧಾರ್ಮಿಕ ಸಿದ್ಧಾಂತಗಳನ್ನು ಹೇರುವ ಪಠ್ಯಗಳನ್ನು ಆಯ್ಕೆ ಮಾಡಬಾರದು.

ಆದರೆ ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯ ಈ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಈ ಮೇಲಿನ ಯಾವುದೇ ಮೌಲ್ಯಗಳನ್ನು, ನೀತಿ ನಿಯಮಗಳನ್ನು ಪಾಲನೆ ಮಾಡಿಲ್ಲ.

ಹಲವು ಪಠ್ಯಗಳನ್ನು ಕೈ ಬಿಟ್ಟಿದ್ದೇಕೆ ಎಂದು ಕೇಳಿದಾಗ ಶಿಕ್ಷಣ ಸಚಿವರಿಂದ ಉತ್ತರವೇ ಇಲ್ಲ. ಹಾಗಾಗಿ ಅದು ಪೂರ್ವಗ್ರಹಪೀಡಿತವಾಗಿದೆ ಎಂದು ಹೇಳಬೇಕಿದೆ. ಆರೆಸ್ಸೆಸ್‌ನ ಹಿಂದುತ್ವ ಸಿದ್ಧಾಂತವನ್ನು ರೂಪಿಸಿದ ಹೆಡಗೆವಾರ್ ಅವರ ಭಾಷಣವನ್ನು ಸೇರಿಸುವ ಔಚಿತ್ಯವೇನು ಎಂಬುದಕ್ಕೆ ಯಾವುದೇ ಸ್ಪಷ್ಟೀಕರಣವಿಲ್ಲ. ಬದಲಿಗೆ ಹೆಡಗೆವಾರ್ ಭಾಷಣ ಸೇರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಈ ವಿಷಯದಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲದಿರುವುದು ಪ್ರಶ್ನಾರ್ಹವಾಗಿದೆ. ಇದೇ ಪದ್ಧತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಗೋಡ್ಸೆ ಕುರಿತಾದ ಆಧ್ಯಾಯವನ್ನು ಸೇರಿಸುವ ದಿನಗಳು ದೂರವಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿರುವ ವಿದ್ಯಮಾನ. ಈ ಬದಲಾವಣೆ ಕುರಿತು ಸ್ಪಷ್ಟೀಕರಣ ಕೇಳಿದಾಗ ಆರೆಸ್ಸೆಸ್ ಸಿದ್ಧಾಂತದಲ್ಲಿ ನಂಬಿಕೆ, ಗೌರವವಿದೆ ಎಂದು ಹೇಳಿಕೊಳ್ಳುತ್ತಿರುವ ರೋಹಿತ್ ಚಕ್ರತೀರ್ಥರವರು ಉಡಾಫೆಯಲ್ಲಿ ಮಾತನಾಡಿದ್ದಾರೆ. ಈ ರೀತಿಯ ಹೇಳಿಕೆಗಳು ಅನಪೇಕ್ಷಣೀಯ. ಯಾವುದೇ ಕಾರಣಕ್ಕೂ ಈ ಬದಲಾವಣೆಯನ್ನೂ ಜಾರಿಗೊಳಿಸಬಾರದು. ಶಿಕ್ಷಣ ತಜ್ಞರು ಹಾಗೂ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸುವ ಕ್ರಮ ಅಳವಡಿಕೆಯಾಗಬೇಕು.

ಕನ್ನಡದ ಅಸ್ಮಿತೆಯ, ಘನತೆ ಹಾಗೂ ಪ್ರಾದೇಶಿಕ ಆಶೋತ್ತರಗಳಿಗೆ ಕುಂದು ತರಬಾರದು ಎಂಬ ನಮ್ಮ ಆಗ್ರಹವನ್ನು ಸಾರ್ವಜನಿಕರ ಮುಂದಿಡುತ್ತಿದ್ದೇವೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರು, ತಜ್ಞರು ಇನ್ನಷ್ಟು ಹೆಚ್ಚು ಮಾತನಾಡುವ ಮೂಲಕ ಶಿಕ್ಷಣವೆಂಬುದು ಮಕ್ಕಳ ಮನೋವಿಕಾಸದ ದಾರಿಯಾಗುವಂತೆ ಗಮನ ಕೊಡಲಿ ಎಂದೂ ನಿರೀಕ್ಷಿಸುತ್ತೇವೆ. ಸರಕಾರದ ಈ ಪಕ್ಷಪಾತಪೂರಿತ ಬದಲಾವಣೆಗಳನ್ನು ವಿರೋಧಿಸಿ ಶಿಕ್ಷಣದ ಧ್ಯೇಯವನ್ನು ಜನಮುಖಿಗೊಳಿಸಬೇಕೆಂಬ ನಿಲುವಿಗೆ ನಾವು ದನಿಗೂಡಿಸುತ್ತಿದ್ದೇವೆ.

-ಡಾ. ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಡಾ. ರಾಜೇಂದ್ರ ಚೆನ್ನಿ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಗಣೇಶ್ ದೇವಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ಟಿ.ಆರ್. ಚಂದ್ರಶೇಖರ್, ರುದ್ರಪ್ಪಹನಗವಾಡಿ, ಡಾ. ಹಿ.ಶಿ. ರಾಮಚಂದ್ರೇಗೌಡ, ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಬಿ.ಟಿ. ಲಲಿತಾ ನಾಯಕ್, ಕುಂ. ವೀರಭದ್ರಪ್ಪ, ಡಾ.ರಹಮತ್ ತರೀಕೆರೆ, ಪಿಚ್ಚಳ್ಳಿ ಶ್ರೀನಿವಾಸ್, ವಸಂತ ಬನ್ನಾಡಿ, ರಂಜಾನ್ ದರ್ಗಾ, ಜನಾರ್ದನ್(ಜನ್ನಿ), ಅಚ್ಯುತ, ಕೆ. ನೀಲಾ, ಟಿ. ಸುರೇಂದ್ರ ರಾವ್, ಕೆ. ಷರೀಫಾ, ಪ್ರೊ. ಶಿವರಾಜ್, ಬಿ. ಶ್ರೀಪಾದ ಭಟ್, ವಿಮಲಾ ಕೆ.ಎಸ್., ವೀರ ಹನುಮಾನ್, ಡಾ.ವಸುಂಧರಾ ಭೂಪತಿ, ಡಾ.ಎಚ್.ಎಲ್. ಪುಷ್ಪ, ಡಾ. ಎನ್. ಗಾಯತ್ರಿ, ಬಿ. ಸುರೇಶ್, ದಿನೇಶ್ ಅಮಿನ್‌ಮಟ್ಟು, ಕೇಸರಿ ಹರವೂ, ಗುರುಶಾಂತ್ ಎಸ್.ವೈ., ಎಸ್.ದೇವೇಂದ್ರ ಗೌಡ, ಡಾ. ವಿ. ಲಕ್ಷ್ಮೀನಾರಾಯಣ, ಅಕ್ಷತಾ ಹುಂಚದಕಟ್ಟೆ, ಎಸ್. ಸತ್ಯಾ, ವೆಂಕಟೇಶ ಪ್ರಸಾದ, ಜೆ.ಸಿ. ಶಶಿಧರ್, ವಾಸುದೇವ ಉಚ್ಚಿಲ್, ಸುಷ್ಮಾ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಎಲ್.ಎನ್.ಮುಕುಂದರಾಜ್, ಪುರುಷೋತ್ತಮ ಬಿಳಿಮಲೆ, ಚಂದ್ರಶೇಖರ ತಾಳ್ಯ, ರಘುನಂದನ, ಪ್ರತಿಭಾ ನಂದಕುಮಾರ್, ಕೆ.ಎಸ್. ಪಾರ್ಥಸಾರಥಿ, ಎಚ್.ಎಸ್. ರಾಘವೇಂದ್ರ ರಾವ್, ದು.ಸರಸ್ವತಿ, ಪೀರಬಾಷ, ಅನಂತ ನಾಯಕ್, ಪ್ರಕಾಶ ಕಮ್ಮರಡಿ, ಸಿ.ಬಸವಲಿಂಗಯ್ಯ, ಬಿ.ಎಮ್.ಹನೀಫ್, ಶಿವಸುಂದರ್, ಡಿ.ಎಚ್. ಕಂಬ್ಳಿ, ಶಶಿಕಲಾ ವಸ್ತ್ರದ, ಮಲ್ಲಿಕಾರ್ಜುನ ಕಡಕೋಳ, ಪ್ರೊ. ಜಿ.ಎನ್. ಮಲ್ಲಿಕಾರ್ಜುನಯ್ಯ, ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ, ರಾಜಶೇಖರ ಕಿಗ್ಗ, ಡಾ. ಎಚ್.ಎಸ್. ಅನುಪಮ, ಜಿ.ವಿ. ಆನಂದ ಮೂರ್ತಿ, ಸಿದ್ದಗಂಗಯ್ಯ ಹೊಲತಾಳು, ಡಾ. ವಿನಯಾ, ಲಕ್ಷ್ಮೀಚಂದ್ರಶೇಖರ್, ಡಾ.ಪ್ರಭು ಖಾನಾಪುರೆ, ಪ್ರೊ. ಆರ್.ಕೆ. ಹುಡ್ಗಿ, ಡಾ. ಆರ್. ಪೂರ್ಣಿಮಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)