ಐಪಿಎಲ್: ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ
ನಥಾನ್ ಎಲ್ಲಿಸ್, Photo:twitter
ಮುಂಬೈ, ಮೇ 22: ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್ಸ್ಟೋನ್ ಸಾಹಸದಿಂದ(ಔಟಾಗದೆ 49 ರನ್, 22 ಎಸೆತ, 2 ಬೌಂಡರಿ, 5 ಸಿಕ್ಸರ್) ಪಂಜಾಬ್ ಕಿಂಗ್ಸ್ ತಂಡ ಸನ್ರೈಸಸ್ ಹೈದರಾಬಾದ್ ತಂಡವನ್ನು 5 ವಿಕೆಟ್ಗಳ ಅಂತರದಿಂದ ಮಣಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ 70ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲಲು 158 ರನ್ ಗುರಿ ಬೆನ್ನಟ್ಟಿದ ಪಂಜಾಬ್ 15.1ನೇ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.
ಪಂಜಾಬ್ ಪರ ಶಿಖರ್ ಧವನ್(39 ರನ್, 32 ಎಸೆತ), ಜಾನಿ ಬೈರ್ಸ್ಟೋವ್(23 ರ,15 ಎಸೆತ),ಶಾರೂಕ್ ಖಾನ್(19)ಹಾಗೂ ಜಿತೇಶ್ ಶರ್ಮಾ(19)ಎರಡಂಕೆಯ ಸ್ಕೋರ್ ಗಳಿಸಿದರು. ಹೈದರಾಬಾದ್ ಪರ ಫಾರೂಕಿ(2-32) ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹೋರಾಟದ (43 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೈದರಾಬಾದ್ ಪ್ರಿಯಂ ಗರ್ಗ್(4) ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ(20 ರನ್, 18 ಎಸೆತ) ಎರಡನೇ ವಿಕೆಟ್ಗೆ 47 ರನ್ ಸೇರಿಸಿ ತಂಡವನ್ನು ಆಧರಿಸಿದರು. ಹೈದರಾಬಾದ್ ಒಂದು ಹಂತದಲ್ಲಿ 96 ರನ್ಗೆ ಆರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆರನೇ ವಿಕೆಟ್ಗೆ 58 ರನ್ ಜೊತೆಯಾಟದಲ್ಲಿ ಭಾಗಿಯಾದ ಶೆಫರ್ಡ್(ಔಟಾಗದೆ 26 ರನ್) ಹಾಗೂ ವಾಷಿಂಗ್ಟನ್ ಸುಂದರ್(25 ರನ್, 19 ಎಸೆತ) ತಂಡದ ಮೊತ್ತವನ್ನು 157ಕ್ಕೆ ತಲುಪಲು ನೆರವಾದರು.
ನಿಕೊಲಸ್ ಪೂರನ್ ಅವರು ಇಂದು 5 ರನ್ ಗಳಿಸಿ ಔಟಾದರು. ಪಂಜಾಬ್ ಪರವಾಗಿ ಹರ್ಪ್ರೀತ್ ಬ್ರಾರ್(3-26) ಹಾಗೂ ನಥಾನ್ ಎಲ್ಲಿಸ್(3-40)ತಲಾ ಮೂರು ವಿಕೆಟ್ಗಳನ್ನು ಪಡೆದರು.
ಉಭಯ ತಂಡಗಳು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದವು. ಇದು ಪ್ಲೇ ಆಫ್ ಹಂತಕ್ಕೇರಲು ದೊಡ್ಡ ತಡೆಯಾಯಿತು. ಪಂಜಾಬ್ 14 ಪಂದ್ಯಗಳಲ್ಲಿ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.