varthabharthi


ರಾಷ್ಟ್ರೀಯ

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಿಂದ ಜಂಟಿ ಅಭ್ಯರ್ಥಿ ?

ವಾರ್ತಾ ಭಾರತಿ : 22 May, 2022

ಸಿದ್ಧಾರ್ಥನಗರ (ಉತ್ತರಪ್ರದೇಶ), ಮೇ 22: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು 2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಸಮಾನ ಮನಸ್ಕ ಪಕ್ಷಗಳು ಹಾಗೂ ನಾಯಕರನ್ನು ಭೇಟಿ ಮಾಡಲು ರಾಷ್ಟ್ರೀಯ ರಾಜಕೀಯ ಪ್ರವಾಸದಲ್ಲಿ ಇದ್ದರೂ ಅವರ ತಕ್ಷಣದ ದೃಷ್ಟಿ ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿದೆ. ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಅವರು ಬಯಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಕೆಸಿಆರ್ ಎಂದು ಜನಪ್ರಿಯರಾಗಿರುವ ಕೆ. ಚಂದ್ರಶೇಖರ್ ರಾವ್ ಅವರು ಈಗಾಗಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಅವರೊಂದಿಗೆ ರಾಷ್ಟ್ರಪತಿ ಚುನಾವಣೆಗೆ ತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ನೊಂದಿಗೆ ಈ ಬಗ್ಗೆ ಯಾವುದೇ ಮಾತುಕತೆ ನಡೆಸಿದ ಬಗ್ಗೆ ಕಂಡು ಬಂದಿಲ್ಲ. ಬಿಜೆಪಿ ಅಭ್ಯರ್ಥಿಗೆ ಬಲವಾದ ಸವಾಲೊಡ್ಡಲು ಇತರ ಪಕ್ಷಗಳು ಒಪ್ಪಿಕೊಂಡ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಟಿಆರ್ಎಸ್ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 

ಮಾಜಿ ಪ್ರಧಾನಿ ದೇವೇ ಗೌಡ ಹಾಗೂ ಜನತಾ ದಳ (ಜಾತ್ಯತೀತ)ದ ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಕೆಸಿಆರ್ ಬೆಂಗಳೂರಿನಲ್ಲಿ ಮೇ 26ರಂದು ಭೇಟಿಯಾಗಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಅವರು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸಿ ಅಲ್ಲಿನ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ. ಅವರು ಬಿಹಾರಕ್ಕೆ ಭೇಟಿ ನೀಡಲು ಕೂಡ ಚಿಂತಿಸುತ್ತಿದ್ದಾರೆ. ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಕೂಡ ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. 

ನಿರ್ಣಾಯಕ ಬೆಂಬಲವಾಗಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಲು ಕೂಡ ಅವರು ಬಯಸಿದ್ದಾರೆ. ಕೆಸಿಆರ್ ಅವರು ಕಳೆದ ತಿಂಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೆಸಿಆರ್ ಅವರನ್ನು ಹೈದರಾಬಾದ್ನಲ್ಲಿ ಭೇಟಿಯಾಗಿದ್ದರು. ‌ಆದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರನ್ನು ಭೇಟಿಯಾಗುತ್ತಿರುವ ಬಗ್ಗೆ ಯಾವುದೇ ರೀತಿಯ ಸೂಚನೆ ಕಂಡು ಬಂದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)