varthabharthi


ಸಂಪಾದಕೀಯ

​ದುರಸ್ತಿ ಕಾಣದ ಸರಕಾರಿ ಶಾಲೆಗಳು

ವಾರ್ತಾ ಭಾರತಿ : 23 May, 2022

ಕೋವಿಡ್ ಪರಿಣಾಮವಾಗಿ ಕಳೆದ ಎರಡು ವರ್ಷ ಮನೆಯಲ್ಲೇ ಕಳೆದ ಮಕ್ಕಳು ಇದೀಗ ಸಂಭ್ರಮದಿಂದ ಶಾಲೆಗೆ ಬರಲಾರಂಭಿಸಿದ್ದಾರೆ.ಅನೇಕ ಕಡೆ ಶಾಲೆಯ ಆವರಣದಲ್ಲಿ ರಂಗೋಲಿಯನ್ನು ಬಿಡಿಸಿ, ಸಿಹಿ ತಿಂಡಿ ಮತ್ತು ಗುಲಾಬಿ ಹೂವು ನೀಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ. ಆದರೆ ಆಡಳಿತ ಪಕ್ಷ ತನ್ನ ಸಿದ್ಧಾಂತಗಳನ್ನು ಪಠ್ಯ ಪುಸ್ತಕಗಳಲ್ಲಿ ತುರುಕಲು ಹೋಗಿ ಬೇಡದ ಅವಾಂತರ ಸೃಷ್ಟಿಸಿದ ಪರಿಣಾಮವಾಗಿ ಮಕ್ಕಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕ ಒದಗಿಸುವಲ್ಲಿ ವಿಳಂಬವಾಗಿದೆ. ಶೇ.54ರಷ್ಟು ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ. ಬಾಕಿ ಉಳಿದುದನ್ನು ಪೂರೈಸಲು ಇನ್ನೂ ಒಂದು ತಿಂಗಳಾದರೂ ಕಾಲಾವಕಾಶ ಬೇಕು.

ಪಠ್ಯ ಪುಸ್ತಕಗಳ ಅವಾಂತರ ಇದಾದರೆ ಇನ್ನು ಈ ಶಾಲೆಗಳ ಕಟ್ಟಡಗಳ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದ ಬಹುತೇಕ ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕೋವಿಡ್‌ನಿಂದಾಗಿ ಸರಕಾರಿ ಶಾಲೆಗಳು ಎರಡು ವರ್ಷ ಬಾಗಿಲು ಮುಚ್ಚಿದ್ದವು. ಈ ನಡುವೆ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಬಹುತೇಕ ಕಡೆ ಶಾಲೆಗಳು ಕುಸಿದಿವೆ.ಇನ್ನು ಉಳಿದ ಕಡೆ ಕುಸಿಯುವ ಹಂತದಲ್ಲಿವೆ. ಇಂಥ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಮಕ್ಕಳು ಉತ್ಸಾಹದಿಂದ ಬಂದಿದ್ದಾರೆ. ರಾಜ್ಯದ ಬಹುತೇಕ ಮಕ್ಕಳು ಓದುವುದು ಸರಕಾರಿ ಶಾಲೆಗಳಲ್ಲಿ. ಆದರೆ ದೇಶದಲ್ಲಿ ಖಾಸಗೀಕರಣದ ಯುಗ ಆರಂಭವಾದ ನಂತರ ಅದರ ಕರಿನೆರಳು ಶೈಕ್ಷಣಿಕ ರಂಗದ ಮೇಲೂ ಬಿತ್ತು. ಹೀಗಾಗಿ ಸರಕಾರಿ ಶಾಲೆಗಳು ಕಡೆಗಣಿಸಲ್ಪಟ್ಟವು. ಮೂಲ ಸೌಕರ್ಯಗಳ ಕೊರತೆ ಈ ಶಾಲೆಗಳನ್ನು ಬೆಂಬಿಡದೇ ಕಾಡುತ್ತಿದೆ. ಇವುಗಳನ್ನು ಸರಿ ಪಡಿಸುವ ಸರಕಾರದ ಯತ್ನ ಯಶಸ್ವಿಯಾಗಿಲ್ಲ.

ರಾಜ್ಯದಲ್ಲಿ ಒಟ್ಟು 48,486 ಸರಕಾರಿ ಶಾಲೆಗಳಿವೆ. ಈ ಪೈಕಿ 44,687 ಶಾಲೆಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. 3,799 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಟ್ಟು ಹತ್ತು ಸಾವಿರ ಶಾಲೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಂಥ ಶಾಲೆಗಳ ದುರಸ್ತಿ ಹಾಗೂ ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲವೆಂದಲ್ಲ.ಆದರೆ ಅನುದಾನ ಬಂದರೂ ದುರಸ್ತಿ ಕಾರ್ಯ ಸಕಾಲದಲ್ಲಿ ಪೂರ್ಣಗೊಂಡಿಲ್ಲ. ಹೀಗಾಗಿ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಹಾಗೆಂದು ಸರಕಾರಿ ಶಾಲೆಗಳ ಮಕ್ಕಳೇನೂ ಕಳಪೆಯಲ್ಲ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುವವರು ನಿತ್ಯ ದುಡಿದುಂಡು ಜೀವಿಸುವ ಕಡು ಬಡವರ ಮಕ್ಕಳು. ಇವರಿಗೆ ಸರಿಯಾದ ಅನುಕೂಲ ಇಲ್ಲದಿದ್ದರೂ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಉತ್ತಮ ಸಾಧನೆ ಮಾಡಿದ್ದಾರೆ.ಅನೇಕರು ಮೊದಲ ಸ್ಥಾನ ಪಡೆದಿದ್ದಾರೆ.ಇಂಥ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಸಾಧನೆಯ ಶಿಖರವನ್ನೇ ಏರುತ್ತಾರೆ.

ರಾಜ್ಯದ ಅನೇಕ ಸರಕಾರಿ ಶಾಲೆಗಳ ಕಟ್ಟಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಈ ಶಾಲೆಗಳು ಸೋರುತ್ತವೆ. ಇದಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಅನೇಕ ಶಾಲೆಗಳಲ್ಲಿ ಇಲ್ಲ. ಬಹುತೇಕ ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಅನೇಕ ಶಾಲೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಜೊತೆಗೆ ನಿರ್ವಹಣೆ ಯ ಕೊರತೆಯಿಂದ ಬಹುತೇಕ ಶಾಲೆಗಳು ಅಪಾಯದ ಸ್ಥಿತಿಯಲ್ಲಿವೆ. 2021_-22 ವರ್ಷದಲ್ಲಿ ಸುರಿದ ಮಳೆಗೆ ಎರಡು ಸಾವಿರಕ್ಕೂ ಅಧಿಕ ಶಾಲೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜೊತೆಗೆ ಉತ್ತರ ಕರ್ನಾಟಕದ 3,386 ಶಾಲೆಗಳು ನೆರೆ ಹಾವಳಿಯಿಂದ ಹಾಳಾಗಿ ಹೋಗಿವೆ.

ಸರಕಾರಿ ಶಾಲೆಗಳು ಹೇಗಿರಬೇಕು ಎಂಬುದಕ್ಕೆ ದೇಶದ ರಾಜಧಾನಿ ದಿಲ್ಲಿ ಉತ್ತಮ ಉದಾಹರಣೆಯಾಗಿದೆ. ಅರವಿಂದ ಕೇಜ್ರಿವಾಲರ ರಾಜಕೀಯ ನಿಲುವುಗಳೇನೇ ಇರಲಿ ಸರಕಾರಿ ಶಾಲೆಗಳ ಸುಧಾರಣೆಗೆ ಅವರ ಸರಕಾರ ಕೈಗೊಂಡ ಕ್ರಮಗಳು ಜನ ಮೆಚ್ಚುಗೆ ಗಳಿಸಿವೆ.ಎಲ್ಲಾ ಸರಕಾರಿ ಶಾಲೆಗಳಿಗೆ ಸುಭದ್ರ ಕಟ್ಟಡಗಳನ್ನು ದಿಲ್ಲಿ ಸರಕಾರ ಒದಗಿಸಿದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಕರ್ನಾಟಕದಲ್ಲೂ ಇದು ಸಾಧ್ಯವಾಗುತ್ತದೆ. ಆದರೆ ನಾನಾ ಹಗರಣಗಳ ಜೊತೆಗೆ ಪಠ್ಯ ಪುಸ್ತಕಗಳನ್ನು ತಿರುಚುವ ಕೆಲಸದಲ್ಲಿ ವಿಶೇಷ ಆಸಕ್ತಿ ವಹಿಸಿದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ನಮ್ಮ ಸರಕಾರಿ ಶಾಲೆಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ. ಕೇಂದ್ರ ಸರಕಾರದ ಅನುದಾನದಿಂದ ನಡೆಯುತ್ತಿದ್ದ ಸರ್ವ ಶಿಕ್ಷಾ ಅಭಿಯಾನ 2017ಕ್ಕೆ ಕೊನೆಗೊಂಡಿದೆ. ಹೀಗಾಗಿ ಅನುದಾನ ಹೊಂದಿಸಲು ರಾಜ್ಯ ಸರಕಾರ ಪರದಾಡುತ್ತಿದೆ. ಅದೇನೇ ಇರಲಿ ಸರಕಾರ ಹೊಸ ಶಾಲೆಗಳನ್ನು ಆರಂಭಿಸುವುದು ಬೇಡ. ಈಗ ಇರುವ ಶಾಲೆಗಳ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ಮಕ್ಕಳು ನಿರಾತಂಕವಾಗಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)