ವರ್ತೂರಿನಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ: ಸಹಿ ಸಂಗ್ರಹ ಚಳವಳಿ
ಬೆಂಗಳೂರು, ಮೇ 23: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ವರ್ತೂರು ಮುಖ್ಯರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್ಡಿಸಿಎಲ್)ದ ವತಿಯಿಂದ ವರ್ತೂರಿನ ಕೆರೆ ಕೋಡಿಯಿಂದ ವಿಶಾಲ್ ಮಾರ್ಟ್ ವರೆಗೆ 482ಕೋಟಿ ರೂ.ವೆಚ್ಚದಲ್ಲಿ ಸುಮಾರು 1.9 ಕಿ.ಮೀ ಉದ್ದದ ಮೇಲ್ಸೆತುವೆ ನಿರ್ಮಾಣಕ್ಕೆ ವರ್ತೂರು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದಾರೆ.
ವೈಟ್‍ಫೀಲ್ಡ್ ಬಳಿ ಇಂಟರ್ ನ್ಯಾಷನಲ್ ಟೆಕ್ ಪಾರ್ಕ್ ಲಿಮಿಟೆಡ್(ಐಟಿಪಿಎಲ್) ಸ್ಥಾಪನೆಯಾದ ಬಳಿಕ ನೂರಾರು ಐಟಿ ಕಂಪೆನಿಗಳು ತಲೆ ಎತ್ತಿವೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ವರ್ತೂರು ಮುಖ್ಯರಸ್ತೆಯು ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ಮಾರ್ಪಟ್ಟಿತ್ತು. 40 ಅಡಿ ಅಗಲವಿರುವ ವರ್ತೂರು ಮುಖ್ಯರಸ್ತೆಯನ್ನು ಅಗಲೀಕರಣ ಮಾಡಬೇಕು ಎಂಬ ಬೇಡಿಕೆಯೂ ಈ ಹಿಂದೆ ಎ.ಕೃಷ್ಣಪ್ಪ ಶಾಸಕರಾಗಿದ್ದ ಸಂದರ್ಭದಿಂದಲೂ ಕೇಳಿ ಬರುತ್ತಿದೆ.
ಇದೀಗ ವರ್ತೂರಿನಿಂದ ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಯಲ್ಲಿ ಪ್ರತಿಷ್ಠಿತ ಗೃಹ ನಿರ್ಮಾಣ ಸಂಸ್ಥೆಗಳು ಐಷಾರಾಮಿ ವಿಲ್ಲಾಗಳು, ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸುತ್ತಿದ್ದು, ಮಾಲ್‍ಗಳು ತಲೆ ಎತ್ತಲಿವೆ. ಈ ಉದ್ದೇಶಿತ ಮೇಲ್ಸೆತುವೆಯೂ ವರ್ತೂರು ಗ್ರಾಮಸ್ಥರ ಬದಲಾಗಿ ವಿಲ್ಲಾ, ಅಪಾರ್ಟ್‍ಮೆಂಟ್ ಹಾಗೂ ಮಾಲ್‍ಗಳಲ್ಲಿರುವ ಜನರಿಗಷ್ಟೇ ಅನುಕೂಲವಾಗಲಿದೆ ಎಂಬುದು ಗ್ರಾಮಸ್ಥರ ಆಕ್ಷೇಪವಾಗಿದೆ.
ಶಾಸಕ ಅರವಿಂದ ಲಿಂಬಾವಳಿ ಆಸಕ್ತಿ ವಹಿಸಿ ನಿರ್ಮಾಣ ಮಾಡಲು ಹೊರಟಿರುವ ಮೇಲ್ಸೆತುವೆ ಅವಶ್ಯಕತೆ ಇಲ್ಲ. ಅದರ ಬದಲು ವರ್ತೂರು ಮುಖ್ಯ ರಸ್ತೆಯಲ್ಲಿರುವ ಕಟ್ಟಡ ಮಾಲಕರ ಮನವೊಲಿಸಿ ರಸ್ತೆ ಅಗಲೀಕರಣ ಮಾಡಲಿ ಅಥವಾ ವರ್ತೂರು ಹೈಸ್ಕೂಲ್ ಮುಂಭಾಗದಲ್ಲಿರುವ ಕೂಡು ರಸ್ತೆ, ಪೊಲೀಸ್ ಠಾಣೆ ಹಾಗೂ ಬಳಗೆರೆ ರಸ್ತೆ ಸಂಪರ್ಕಿಸುವ ಭಾಗದಲ್ಲಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ವರ್ತೂರಿನಲ್ಲಿ ಮೇಲ್ಸೆತುವೆ ನಿರ್ಮಾಣದಿಂದ ಭವಿಷ್ಯದಲ್ಲಿ ಮೆಟ್ರೋ ರೈಲು ಸಂಪರ್ಕ ಸೇವೆಯು ಮರಿಚಿಕೆಯಾಗಲಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ. ವರ್ತೂರಿನಲ್ಲಿ ಪ್ರತಿ ವರ್ಷ ನಡೆಯಲಿರುವ ಇತಿಹಾಸ ಪ್ರಸಿದ್ಧ ಚನ್ನರಾಯಸ್ವಾಮಿ ದೇವಾಲಯದ ಜಾತ್ರೆ, ರಥೋತ್ಸವ ಹಾಗೂ ಕರಗ ಮಹೋತ್ಸವಕ್ಕೂ ಅಡ್ಡಿಯಾಗಲಿದೆ. ಮೇಲ್ಸೆತುವೆ ನಿರ್ಮಾಣದಿಂದ ಊರಿನ ಜಾತ್ರೆಯನ್ನೆ ನಿಲ್ಲಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಕೆಆರ್‍ಡಿಸಿಎಲ್ ವತಿಯಿಂದ ವರ್ತೂರು ಮುಖ್ಯರಸ್ತೆಯಲ್ಲಿ 187 ಕೋಟಿ ರೂ.ವೆಚ್ಚದಲ್ಲಿ 1.3 ಕಿ.ಮೀ ಉದ್ದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆನಂತರ, ಯೋಜನೆಯಲ್ಲಿ ಬದಲಾವಣೆ ಮಾಡಿ 482 ಕೋಟಿ ರೂ.ವೆಚ್ಚದಲ್ಲಿ 1.92 ಕಿ.ಮೀ.ಉದ್ದದ ಮೇಲ್ಸೆತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಇತ್ತೀಚೆಗೆ ಅನುಮೋದನೆ ನೀಡಿದೆ.
---------------------------------------------------
‘ಹತ್ತು ದಿನಗಳಿಂದ ಮನೆ ಮನೆಗೆ ತೆರಳಿ ಮೇಲ್ಸೆತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರ ಅಭಿಪ್ರಾಯದೊಂದಿಗೆ ಸಹಿ ಸಂಗ್ರಹ ಮಾಡುತ್ತಿದ್ದೇವೆ. ಒಂದು ತಿಂಗಳುಗಳ ಕಾಲ ಈ ಚಳವಳಿ ನಡೆಯಲಿದ್ದು, ಈಗಾಗಲೆ ಸುಮಾರು 3,500 ಮಂದಿ ಸಹಿ ಮಾಡಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬರುವ ಶಾಸಕ ಅರವಿಂದ ಲಿಂಬಾವಳಿ, ಮೇಲ್ಸೆತುವೆ ಕುರಿತು ವರ್ತೂರಿನ ನಾಗರಿಕರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ವರ್ತೂರು, ಮಧುರಾನಗರ, ತೋರಹುಣಸೆ, ವಾಲೆಪುರ, ಬಳಗೆರೆ, ಈ ಗ್ರಾಮಗಳಲ್ಲಿ ಒಟ್ಟು 35 ಸಾವಿರ ಮತದಾರರಿದ್ದಾರೆ. ಈ ಉದ್ದೇಶಿತ ಮೇಲ್ಸೆತುವೆಯನ್ನು ಈ ಪೈಕಿ ಯಾರೊಬ್ಬರೂ ಬಳಸುವುದಿಲ್ಲ. ಹಾಗಾದರೆ, ಯಾರ ಹಿತಕ್ಕಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ವಿಶಾಲ್ ಮಾರ್ಟ್, ಅಪಾರ್ಟ್‍ಮೆಂಟ್‍ಗಳಿಗೆ ಅನುಕೂಲ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆಯೇ?. ಅವರಿಗೂ ಅಗತ್ಯ ಸೌಲಭ್ಯ ಕಲ್ಪಿಸಿಕೊಡಿ. ನಮ್ಮ ತಕರಾರಿಲ್ಲ. ಆದರೆ, ಎಲ್ಲರಿಗೂ ಅನುಕೂಲವಾಗುವಂತೆ ಮೇಲ್ಸೆತುವೆ ಬದಲಾಗಿ ರಸ್ತೆ ಅಗಲೀಕರಣ ಮಾಡಲೇಬೇಕು'
-ಮಧುಸೂದನ್, ವರ್ತೂರು ಗ್ರಾಮಸ್ಥ
--------------------------------------------------------
‘ವರ್ತೂರಿನ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಬೇಕು ಎಂಬುದು ಆರಂಭದಿಂದಲೂ ಗ್ರಾಮಸ್ಥರ ಬೇಡಿಕೆಯಾಗಿದೆ. ಆದರೆ, ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮೇಲ್ಸೆತುವೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧವಿದೆ. ಒಂದು ವೇಳೆ ಮೇಲ್ಸೆತುವೆ ನಿರ್ಮಾಣವಾದರೆ ವರ್ತೂರು ಗ್ರಾಮದಲ್ಲಿ ಭೂಮಿಯ ಬೆಲೆ ನಗಣ್ಯವಾಗಲಿದೆ. ಅಂಗಡಿ, ಮುಂಗಟ್ಟುಗಳ ವ್ಯಾಪಾರ, ವಹಿವಾಟ ಬಹುತೇಕ ಸ್ಥಗಿತಗೊಳ್ಳಲಿದೆ. ಸಾವಿರಾರು ಜನರ ದಿನನಿತ್ಯದ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಮೇಲ್ಸೆತುವೆ ನಿರ್ಮಾಣದಿಂದ ವರ್ತೂರಿನ ನಾಗರಿಕರಿಗೆ ಯಾವುದೆ ಪ್ರಯೋಜನವಾಗುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಬದುಕು ಕಸಿಯುವುದು ಬೇಡ'
-ಮುಹಮ್ಮದ್ ಸರ್ದಾರ್, ವರ್ತೂರಿನ ಬಟ್ಟೆ ವ್ಯಾಪಾರಿ