ಕುಂದಾಪುರ: ಮಲಗಿದ್ದಲ್ಲಿಯೇ ಓದಿ ಎಸೆಸೆಲ್ಸಿಯಲ್ಲಿ 580 ಅಂಕ ಪಡೆದ ಶ್ರಾವ್ಯಾ!
ಕರುಳಿನ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿ
ಕುಂದಾಪುರ, ಮೇ 23: ಅನಾರೋಗ್ಯ ಪೀಡಿತ ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮ ಬಗ್ವಾಡಿ ರಾಜು ಪೂಜಾರಿ ಮತ್ತು ಸುಜಾತಾ ಪೂಜಾರಿ ದಂಪತಿ ಪುತ್ರಿ ಶ್ರಾವ್ಯಾ ಆರ್. ಶಾಲಾ ಮೆಟ್ಟಿಲು ಹತ್ತಲಾರದೆ ಮಲಗಿಕೊಂಡೇ ಓದಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 580 ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಐಬಿಡಿ ಕ್ರೋಮ್ಸ್ ಎಂಬ ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶ್ರಾವ್ಯಾ ಕಳೆದ ಜುಲೈಯಿಂದ ಮೂರು ತಿಂಗಳು, ಮತ್ತೆ ಅಕ್ಟೋಬರ್ ಮೂರು ತಿಂಗಳು ಆಸ್ಪತ್ರೆ ಮಂಚದಲ್ಲಿ ಕಳೆದು, ಶಾಲೆ ಮೆಟ್ಟಿಲು ಹತ್ತಲಾರದೆ ನೋಟ್ಸ್ ಝೆರಾಕ್ಸ್ ಪ್ರತಿಯನ್ನು ಮಲಗಿಕೊಂಡೇ ಓದಿ ಪರೀಕ್ಷೆ ಬರೆದಿದ್ದಾರೆ.ಅನಾರೋಗ್ಯದಿಂದ ದೇಹದ ತೂಕ ಕಳೆದುಕೊಂಡಿದ್ದ ಶ್ರಾವ್ಯ ಅವರ ತೂಕ ಕೇವಲ 12 ಕೆಜಿ ಮಾತ್ರ. ತಂದೆ ರಾಜು ಪೂಜಾರಿ ಹಿಂದೆ ಬಾಗಲಕೋಟೆಯಲ್ಲಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು ಸದ್ಯ ಶ್ರಾವ್ಯಾ ಅವರ ತಂದೆ ತಾಯಿ ಹೆಮ್ಮಾಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದಾರೆ.
ಶ್ರಾವ್ಯಾ ಒಂದನೇ ತರಗತಿ ಬಾಗಲಕೋಟೆಯಲ್ಲಿ ಮುಗಿಸಿ ಬಳಿಕ ಅತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸೆಸೆಲ್ಸಿ ಪೂರೈಸಿದ್ದಾರೆ. ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ, ಶ್ರಾವ್ಯ ದೈಹಿಕ ಅಸಮಾನತೆ ನಡೆಯೂ ಓದಿನ ತುಡಿತ ಕಂಡು ಶಾಲಾ ನೋಟ್ಸ್ ಹಾಗೂ ಅನ್‌ಲೈನ್ ಪಾಠದ ಝೆರಾಕ್ಸ್ ಪ್ರತಿ ನೀಡುವ ಮೂಲಕ ಪರೀಕ್ಷೆ ಬರೆಯಲು ಸಹಕರಿಸಿದ್ದಾರೆ. ಸದ್ಯ ಶ್ರಾವ್ಯ ಶಿರಸಿ ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ವಲ್ಪಸುಧಾರಣೆ ಕಂಡುಕೊಂಡಿದ್ದಾರೆ.