ಕುವೈತ್: ದಟ್ಟ ಧೂಳಿನ ಮೋಡ; ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ
PHOTO:AFP
ಕುವೈತ್ ಸಿಟಿ, ಮೇ 23: ಧೂಳು ಬಿರುಗಾಳಿಯಿಂದಾಗಿ ಕುವೈತ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕುವೈತ್ನ ಮಹಾ ನಾಗರಿಕ ವಾಯುಯಾನ ನಿರ್ದೇಶನಾಲಯ ಸೋಮವಾರ ಪ್ರಕಟಿಸಿದೆ.
ದಟ್ಟ ಧೂಳಿನ ಮೋಡವು ಸೋಮವಾರ ಕುವೈತನ್ನು ಆವರಿಸಿತು, ಅದರ ಪರಿಣಾಮವಾಗಿ ದೇಶದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರ ಹೋಗುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸಂಭವಿಸಿದೆ ಎಂದು ನಿರ್ದೇಶನಾಲಯ ಹೇಳಿದೆ.ಧೂಳಿನ ಬೃಹತ್ ಮೋಡವು ಕುವೈತ್ನ ಆಕಾಶದಲ್ಲಿ ಜಮಾಯಿಸಿತು ಹಾಗೂ ಅದರಿಂದಾಗಿ ದೇಶಾದ್ಯಂತ ದೃಗ್ಗೋಚರತೆ ಬಹುತೇಕ ಶೂನ್ಯಕ್ಕೆ ಇಳಿಯಿತು.
ಹಾಗಾಗಿ, ವಾಣಿಜ್ಯ ವಿಮಾನಗಳ ವೇಳಾಪಟ್ಟಿಯನ್ನು ಪುನರ್ರಚಿಸಲಾಗುವುದು. ವಾಯು ಸಂಚಾರ ನಿಯಂತ್ರಣವು ಧೂಳಿನ ಮೋಡ ಕರಗಿದ ಬಳಿಕವಷ್ಟೇ ತನ್ನ ಕೆಲಸವನ್ನು ಮುಂದುವರಿಸುವುದು ಎಂದು ನಿರ್ದೇಶನಾಶಲಯದ ಉಪ ಮಹಾನಿರ್ದೇಶಕ ಇಮಾದ್ ಅಲ್-ಜುಲುವಿ ತಿಳಿಸಿದರು.