ಮನುವಾದಿಗಳ ದೇಶದ್ರೋಹದ ನಡವಳಿಕೆಗೆ ಪ್ರೇರಣೆ ಮತ್ತು ವರ್ತಮಾನ
ಕೋಮುವಾದಿಗಳ ವಾತಾವರಣವು ಬಲವಾದಂತೆ ಇತಿಹಾಸದ ವಿವರಗಳು ನಶಿಸಿ ಹೋಗುತ್ತಾ ಮನುವಾದದ ಇತಿಹಾಸವು ನಿಧಾನಕ್ಕೆ ವ್ಯಾಪಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ಯುಗದಲ್ಲಿ ಐತಿಹಾಸಿಕ ಮಾಹಿತಿಯು ಹೇರಳವಾಗಿ ಲಭ್ಯವಿದ್ದಾಗಲೂ ನಮ್ಮ ಯುವ ಪೀಳಿಗೆಯು ಓದು ಮತ್ತು ಆಲೋಚನಾ ಕ್ರಮದಿಂದ ದೂರ ಸರಿದಿದ್ದು ಕೇವಲ ವಾಟ್ಸ್ ಆ್ಯಪ್ ಯೂನಿವರ್ಸಿಟಿಗಳನ್ನು ಅವಲಂಬಿಸಿದಂತೆಯೇ ಕಾಣುತ್ತಿದೆ.
ಸರಕಾರ ಕೊರೋನ ಹೆಸರಲ್ಲಿ ಜನ ಸಾಮಾನ್ಯರನ್ನು ದಂಡಿಸಿ, ಅವರ ಸಾವಿರಾರು ದೇಹಗಳಿಗೆ ಘನತೆಯೇ ಇಲ್ಲದ ಅಂತ್ಯ ಸಂಸ್ಕಾರ ಭಾಗ್ಯವನ್ನು ಕರುಣಿಸಿ, ಈಗ ಪೆಟ್ರೋಲ್, ಡೀಸೆಲ್ ಬೆಲೆಯ ಆದಿಯಾಗಿ ಆಹಾರ ಧಾನ್ಯಗಳ ಬೆಲೆಯನ್ನು ಗಗನಕ್ಕೆ ಏರಿಸಿಟ್ಟು, ಬಡ ಜನರ ಬದುಕನ್ನು ಬೀದಿಗೆ ತಳ್ಳಿದೆ. ಸರಕಾರಿ ಹುದ್ದೆಗಳನ್ನು ಅಕ್ಷರಶಃ ಮಾರಿಕೊಂಡ ಪರಿಣಾಮ ಕಷ್ಟಪಟ್ಟು ಓದುವ ಎಷ್ಟೋ ಯುವಜನತೆ ನಿರಾಶರಾಗಿ, ತಾವು ಓದುತ್ತಿರುವುದು ಕಾಟಾಚಾರಕ್ಕೆ ಎಂದು ಭಾವಿಸಿ ಓದನ್ನೇ ನಿಲ್ಲಿಸಿ ವಾಪಸ್ ಮನೆಗೆ ತೆರಳುವ ತ್ರಿಶಂಕು ಸ್ಥಿತಿಗೆ ಸರಕಾರ ಅವರನ್ನು ದೂಡಿದೆ. ಇಂತಹ ಅಸಮರ್ಥ ಆಡಳಿತವು ಬೀದಿಯ ಚರ್ಚಾ ವಿಷಯವಾಗಿದ್ದು ಅದನ್ನು ಮರೆಮಾಚಲು ಈ ದಿನ ಎಲ್ಲೋ ಲಿಂಗ ಸಿಕ್ಕಿದೆ, ಇನ್ನೆಲ್ಲೋ ಇನ್ನೊಂದು ಸಿಕ್ಕಿದೆ ಎನ್ನುತ್ತಾ ವಾಸ್ತವ ಸಮಸ್ಯೆಗಳನ್ನು ಮರೆ ಮಾಚುತ್ತಿರುವ ಬಿಜೆಪಿ ಸರಕಾರ ಇದೀಗ ಪಠ್ಯಕ್ರಮದೊಳಗೆ ಆರೆಸ್ಸೆಸ್ನ ದೇಶದ್ರೋಹಿಗಳನ್ನು ತುರುಕುವ ಮೂಲಕ ತಮ್ಮ ಅಯೋಗ್ಯತೆಯನ್ನು ಪ್ರದರ್ಶನ ಮಾಡುತ್ತಿದೆ.
ಸರಕಾರ ಈ ಅಜ್ಞಾನವನ್ನು ಸಮರ್ಥಿಸಿಕೊಳ್ಳಲು ಬರಹದ ಉದ್ದೇಶ ತಿಳಿಯದ ಮತ್ತು ಸಾರ್ವಜನಿಕ ಬದುಕಿನ ಗಂಭೀರತೆಯನ್ನೂ ಅರಿಯದ, ಸಂವಿಧಾನ ವಿರೋಧಿ ವ್ಯಕ್ತಿಗಳನ್ನು ಮಾತನಾಡಲು ಮುಂದೆ ಬಿಟ್ಟಿದೆ. ಈ ಪೈಕಿ ಮೈಸೂರಿನ ಸಂಸದರಾದ ಪ್ರತಾಪ ಸಿಂಹ ಅಂತಹವರು ಚರ್ಚೆಯ ದಿಕ್ಕು ತಪ್ಪಿಸಲು ಮತ್ತೆ ಟಿಪ್ಪುಸುಲ್ತಾನರ ಮೊರೆ ಹೋಗಿದ್ದು ಮುಸಲ್ಮಾನರ ಮೇಲಿನ ತಮ್ಮ ದ್ವೇಷವನ್ನು ಕಾರಿಕೊಳ್ಳಲು ಯತ್ನಿಸಿದ್ದಾರೆ. ಇನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ. ರವಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚುನಾವಣಾ ಸಂದರ್ಭದ ತಮ್ಮ ಕೋಮು ರಾಜಕೀಯವನ್ನು ಮತ್ತೆ ಮುನ್ನೆಲೆಗೆ ತಂದಿರುವುದು ಸ್ಪಷ್ಟವಾಗಿದೆ.
ಅಷ್ಟಕ್ಕೂ ಇವರಿಗೆ ದೇಶದ ಬಗ್ಗೆಯಾಗಲೀ ಜನ ಸಾಮಾನ್ಯರ ಬಗ್ಗೆಯಾಗಲೀ ಯಾವುದೇ ಕಾಳಜಿ ಇಲ್ಲ ಎಂಬುದು ಅವರ ಈ ಕೆಟ್ಟ ದುರಾಡಳಿತದಿಂದಲೇ ನಾವು ಅರ್ಥ ಮಾಡಿಕೊಳ್ಳಬಹುದು. ಜೊತೆಗೆ ನಾವು ‘‘ಸಂವಿಧಾನ ಬದಲಿಸುತ್ತೇವೆ, ರಾಷ್ಟ್ರಧ್ವಜವನ್ನು ಬದಲಿಸುತ್ತೇವೆ’’ ಎನ್ನುವ ಇವರ ಮಾತಿನಲ್ಲಿ ಯಾವ ದೇಶಪ್ರೇಮ ಅಡಗಿದೆ ಎಂದು ಇಲ್ಲಿಯವರೆಗೂ ನನಗೆ ಅನಿಸಿಲ್ಲ.್ಲ.
ಇದೇ ಪ್ರತಾಪ ಸಿಂಹ ಹಿಂದೆ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮರ ಬಗ್ಗೆ ಕೆಟ್ಟದಾದ ಮಾತುಗಳನ್ನು ಆಡಿದ್ದು ಇಂತಹವರ ಒಳಗೆ ಎಂತಹ ದೇಶಭಕ್ತಿ ಇದೆ ಎಂಬುದನ್ನು ನಾವು ಸುಲಭವಾಗಿ ಅರಿಯಬಹುದು.
ಹಿಂದೆ ಪೇಶ್ವೆಗಳು ಹೇಗೆ ಸಮಾಜವನ್ನು ಪರಿಭಾವಿಸುತ್ತಿದ್ದರೋ ಅದೇ ರೀತಿಯಾಗಿ ಈ ದಿನ ಬಿಜೆಪಿ ಸರಕಾರ ವರ್ತಿಸುತ್ತಿದ್ದು ಮನುವಿನ ಮತ್ತು ಪೇಶ್ವೆಗಳ ಆಶಯಕ್ಕೆ ಅನುಗುಣವಾಗಿ ಸಮಾಜ ಮತ್ತು ಶೈಕ್ಷಣಿಕ ಪಠ್ಯವನ್ನು ಬದಲಿಸಲು ಹೊರಟಿದೆ.
ಗಾಂಧೀಜಿಯನ್ನು ವಿರೋಧಿಸಿ, ಪೇಶ್ವೆಗಳ ವಂಶಸ್ಥ ಗೋಡ್ಸೆಯನ್ನು ಪೂಜಿಸುವ ಮನುವಾದಿಗಳು ಬಾಬಾ ಸಾಹೇಬರನ್ನು ಮೀಸಲಾತಿ ನೀಡಿದರು ಎಂಬ ಕಾರಣಕ್ಕೆ ಈಗಲೂ ಕೆಟ್ಟದಾಗಿ ಪರಿಭಾವಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಹೇಳುತ್ತಾರೆ. ದಲಿತರ ಏಕತೆ ಮತ್ತು ಬಾಬಾ ಸಾಹೇಬರ ಮೇಲೆ ಮುಸಲ್ಮಾನರು ಹೊಂದಿರುವ ಐತಿಹಾಸಿಕ ಗೌರವದ ಕಾರಣಕ್ಕೇ ಈ ದಿನ ಬಿಜೆಪಿ ಮತ್ತು ಆರೆಸ್ಸೆಸ್ನ ಮನುವಾದಿಗಳು ಅನಿವಾರ್ಯವಾಗಿ ಬಾಬಾ ಸಾಹೇಬರ ತಂಟೆಗೆ ಬರುತ್ತಿಲ್ಲ. ಇವರು ಇತ್ತೀಚೆಗೆ ‘‘ನಮಗೆ ರಾಮನೂ ಬೇಕು, ಭೀಮನೂ ಬೇಕು’’ ಎಂಬ ಹೊಸ ವರಸೆ ತೆಗೆದಿರುವುದೂ ಕೂಡಾ ಇದೇ ಕಾರಣಕ್ಕೆ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಭೀಮನೂ ಬೇಕು ಎಂಬುದು ಬಾಬಾ ಸಾಹೇಬರ ಜ್ಞಾನ ಮತ್ತು ಅವರ ಮೇಲಿನ ಪ್ರೀತಿಯಿಂದ ಅಲ್ಲ, ದಲಿತರು ಬಾಬಾ ಸಾಹೇಬರನ್ನು ಅತೀವವಾಗಿ ಪ್ರೀತಿಸುವ ಕಾರಣಕ್ಕೆ ಅವರ ವೋಟಿಗಾಗಿ ಮಾತ್ರ.
ಬಾಬಾ ಸಾಹೇಬರ ವಿಷಯದಲ್ಲಿ ಹೇಳಿದ ಈ ಸಂಗತಿಗಳನ್ನು ನಾವು ‘ಛತ್ರಪತಿ’ ಎಂದೇ ಹೆಸರಾದ ಶಿವಾಜಿ ಮಹಾರಾಜರ ವಿಷಯದಲ್ಲೂ ಅರ್ಥ ಮಾಡಿಕೊಳ್ಳಬೇಕು. ಶಿವಾಜಿಯು ಅಫ್ಝಲ್ ಖಾನ್ನನ್ನು ಭೇಟಿಯಾದ ಸಂದರ್ಭದಲ್ಲಿ ಆತನ ಜೊತೆಗೆ ಅವನ ಅಂಗರಕ್ಷಕರಾಗಿ ಇಬ್ರಾಹೀಂ ಖಾನ್ ಮತ್ತು ಜೀವಾ ಮಹಾರ್ ಎಂಬ ಇಬ್ಬರು ಸೇನಾನಿಗಳು ತೆರಳಿದ್ದರು. ಅತ್ತ ಆಫ್ಝಲ್ ಖಾನ್ನ ಜೊತೆಗೆ ಕಷ್ಣಜೀ ಭಾಸ್ಕರ್ ಕುಲಕರ್ಣಿ ಎಂಬ ವ್ಯಕ್ತಿಯು ರಕ್ಷಕನಾಗಿ ಬಂದಿದ್ದನು. ಶಿವಾಜಿಯ ಮೇಲೆ ದಾಳಿ ನಡೆದಾಗ ಕಷ್ಣಜೀ ಭಾಸ್ಕರ್ ಕುಲಕರ್ಣಿಯು ಹಿಂದುಗಡೆಯಿಂದ ಶಿವಾಜಿಯ ಮೇಲೆ ಎರಗಲು ಹೋಗುತ್ತಾನೆ. ಆಗ ಅಲ್ಲೇ ಇದ್ದ ಜೀವಾ ಮಹಾರ್ ಆತನನ್ನು ಕೊನೆಗೊಳಿಸಿ ಶಿವಾಜಿಯನ್ನು ರಕ್ಷಣೆ ಮಾಡುತ್ತಾನೆ. ಸಂತ ತುಕಾರಾಮರು ಹೇಳಿದಂತೆ ‘‘ಜೀವಾಜಿ ಇದ್ದದ್ದಕ್ಕೆ ಶಿವಾಜಿ ಬದುಕಿದ’’ ಎಂಬ ಮಾತನ್ನು ನಾವಿಲ್ಲಿ ಗಮನಿಸಬಹುದು.
ಇಷ್ಟೇ ಅಲ್ಲದೇ ಶಿವಾಜಿಯ ದಂಡ ನಾಯಕರಾಗಿ ಇದ್ದವರು ಇಬ್ರಾಹೀಂ ಖಾನ್, ದೌಲತ್ ಖಾನ್, ಸಿದ್ದಿ ವಾಹ್ ವಾಹ್, ದಾರ್ಯ ಸಾರಂಗ್ ಆಗಿದ್ದರು. ಅತ್ತ ಮೊಗಲರ ಪರವಾಗಿ ಯುದ್ಧ ಮಾಡಿದ ರಾಜಾ ಜಯಸಿಂಗನಿಗೆ ರಾಜಾ ರಾಯ ಸಿಂಗ್, ಸುಜನ್ ಸಿಂಗ್, ಹರಿಬಾನ್ ಸಿಂಗ್, ಉದಯಬಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜೀರಾವ್ ಚಂದ್ರರಾವ್ ಅವರು ಶಿವಾಜಿಯ ವಿರುದ್ಧವೇ ಹೋರಾಟ ಮಾಡಿದ್ದರು.
ಕೆಳಜಾತಿಯವನು ಎಂಬ ಕಾರಣಕ್ಕೆ ಶಿವಾಜಿಯು ರಾಜನಾಗಿಯೂ ಅನೇಕ ಅವಮಾನಗಳನ್ನು ಎದುರಿಸಿದ. ಜಾತಿಯ ಕಾರಣಕ್ಕೆ ಆತನಿಗೆ ಪಟ್ಟಾಭಿಷೇಕವನ್ನೂ ಮಾಡಲು ಹಿಂಜರಿಯಲಾಯಿತು.
ಕೊನೆಗೆ ಶಿವಾಜಿಯು ಕಾಶಿಯಿಂದ ಗಾಗಾಭಟ್ಟ ಎಂಬವರನ್ನು ಕರೆಸಿಕೊಂಡು ಅವರಿಂದ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿಸಿ ಅವರಿಗೆ ಅಪಾರ ಪ್ರಮಾಣದ ಕಾಣಿಕೆಯನ್ನು ನೀಡಿ ಕಳುಹಿಸಿರುವ ಬಗ್ಗೆ ಐತಿಹಾಸಿಕ ಉಲ್ಲೇಖವೇ ಇದೆ.
ಮೊಗಲರು ಶಿವಾಜಿಯ ಮೇಲೆ ಯುದ್ಧ ಸಾರಿದಾಗ ಶಿವಾಜಿಯು ಸೋಲಲೆಂದು ರಾಜಾ ಜಯಸಿಂಗ್ನಿಂದ ಹಣ ಪಡೆದು ವೈದಿಕರು ಕೋಟಿ ಚಂಡಿ ಹವನವನ್ನು ಮಾಡಿದರು ಎಂದರೆ ಜಾತಿ ಪದ್ಧತಿಯ ವಿಷ ಎಷ್ಟಿರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಮುಂದೆ ಶಿವಾಜಿಯ ಉತ್ತರಾಧಿಕಾರಿಗಳು ಎಂದು ಬಿಂಬಿಸಿಕೊಂಡಿರುವ ಚಿತ್ಪಾವನಾ ವಂಶಸ್ಥರಾದ ಪೇಶ್ವೆಗಳು, ಶಿವಾಜಿಯ ಮಗ ಸಂಭಾಜಿಯನ್ನು ಮೊಗಲರಿಗೆ ಹಿಡಿದುಕೊಡಲು ಸಹಕರಿಸಿದರು. ಮೊಗಲರು ಸಂಭಾಜಿಯನ್ನು ಕೊಂದಾಗ ಇದೇ ಪೇಶ್ವೆಗಳು ಅವನ ಅಂತ್ಯ ಸಂಸ್ಕಾರವನ್ನೂ ಮಾಡಲಿಲ್ಲ. ಇದೆಲ್ಲವೂ ಒಂದು ಜಾತಿ ಕಾರಣಕ್ಕೆ ನಡೆದ ವಿದ್ಯಮಾನ ಎಂಬುದನ್ನು ಈಗಿನ ಪೀಳಿಗೆಗೆ ಅರ್ಥವಾಗಬೇಕಾದ ಅನಿವಾರ್ಯತೆ ಇದೆ.
ಶಿವಾಜಿ ಅಪ್ಪಟ ತಳ ಸಮುದಾಯದ ಮತ್ತು ರೈತರ ಪರವಾದ ಅರಸನಾಗಿದ್ದ. ಹೀಗಾಗಿಯೇ ಆತ ಕಾಲವಾದ 300 ವರ್ಷಗಳ ಬಳಿಕ ಅವನ ಸಮಾಧಿಯನ್ನು ಗುರುತಿಸಿದ ಮಹಾತ್ಮಾ ಜ್ಯೋತಿ ಬಾ ಫುಲೆ ಅವರು ಮೊದಲ ಬಾರಿಗೆ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಿ ಆತನ ಸಾಮಾಜಿಕ ನ್ಯಾಯದ ಕಲ್ಪನೆಗೆ ತಲೆಬಾಗಿ ಗೌರವ ಸಲ್ಲಿಸಿದರು. ಇದು ಇಂದೂ ಕೂಡಾ ಇತಿಹಾಸದಲ್ಲಿ ದಾಖಲಾಗಿದೆ.
ಇನ್ನು ಇಂದಿನ ಬಿಜೆಪಿಗರು ಹೆಸರು ಕೇಳಿದ ಕೂಡಲೇ ಉರಿದುಕೊಳ್ಳುವ ಟಿಪ್ಪುಸುಲ್ತಾನ್ ಕೂಡಾ ಶಿವಾಜಿಯಂತೆಯೇ ಜನಪರ ಅರಸನಾಗಿದ್ದ. ಫ್ರೆಂಚ್ ಕ್ರಾಂತಿಯ ‘‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ’’ ಧ್ಯೇಯಗಳಿಂದ ಪ್ರಭಾವಿತನಾಗಿದ್ದ ಈತ ನಮ್ಮ ನಾಡಿಗೆ ಬಂದೆರಗಿದ್ದ ಬ್ರಿಟಿಷರ ವಿರುದ್ಧ ನಿರಂತವಾಗಿ ಹೋರಾಟ ನಡೆಸಿದನು. ಯುದ್ಧದಲ್ಲಿ ಕ್ಷಿಪಣಿಗಳನ್ನು ಬಳಸುವ ಮೂಲಕ ನೂತನ ತಂತ್ರಜ್ಞಾನಕ್ಕೆ ಚಾಲನೆ ಕೊಟ್ಟಿದ್ದ ಟಿಪ್ಪು ಸುಲ್ತಾನ್ ಮಂಗಳೂರಿನಲ್ಲಿ ನೌಕಾ ತರಬೇತಿ ಕೇಂದ್ರವನ್ನೂ ಸ್ಥಾಪಿಸಿದ್ದ. ಜಮೀನ್ದಾರಿ ಫ್ಯೂಡಲ್ಗಳ ಹೆಡೆಮುರಿ ಕಟ್ಟಿದ್ದ ಟಿಪ್ಪು, ಮತಾಂಧನಾಗಿರಲಿಲ್ಲ ಎಂಬುದಕ್ಕೆ ಆತ ಶೃಂಗೇರಿಯ ಮಠವನ್ನು ಇದೇ ಪೇಶ್ವೆಗಳಿಂದ ರಕ್ಷಿಸಿ ಅದನ್ನು ಅಭಿವೃದ್ಧಿ ಪಡಿಸಿದ್ದೇ ಸಾಕ್ಷಿ ಎನ್ನಬಹುದು. ಈಗಲೂ ಟಿಪ್ಪುವಿಗೆ ಅಲ್ಲಿ ಆರತಿ ಎತ್ತುತ್ತಾರೆ ಎಂದರೆ ಆತನ ಧರ್ಮ ನಿರಪೇಕ್ಷತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಇನ್ನು ಇತಿಹಾಸವನ್ನು ಓದಿದರೆ ಹೇಗೆ ಪೇಶ್ವಾ ಬಾಜೀರಾಯನು ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡು ಅವರಿಂದ ವಾರ್ಷಿಕವಾಗಿ ಇಂತಿಷ್ಟು ಹಣವನ್ನು ದೇಣಿಗೆಯಾಗಿ ಪಡೆದ ಎಂಬುದನ್ನು ನಾವು ಕಾಣಬಹುದು ಆದರೆ ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತನಾಗಿದ್ದ ಟಿಪ್ಪುಸಹಾಯಕ ಸೈನ್ಯ ಪದ್ಧತಿಯನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದನು. ಬ್ರಿಟಿಷರನ್ನು ಸೋಲಿಸಲು ಆತ ಮುಂದೆ ಪ್ರಜಾಪ್ರಭುತ್ವದ ಕಡೆಗೆ ಸಾಗಿದ್ದ ಫ್ರೆಂಚರ ದೊರೆ ನೆಪೋಲಿಯನ್ನ ಸಹಾಯವನ್ನೂ ಕೇಳಿದ್ದನು. ಟಿಪ್ಪುವಿನಂತೆಯೇ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರು, ಬ್ರಿಟಿಷರ ನೀತಿಗಳಿಗೆ ಬಗ್ಗದೇ ಅವರ ಕುತಂತ್ರದಿಂದ ಕೊನೆಯಾಗಿದ್ದನ್ನು ನಾವು ಗಮನಿಸಬಹುದು. ಇವರೆಲ್ಲರಲ್ಲೂ ರಾಜ ಪ್ರಭುತ್ವದ ನಡವಳಿಕೆಗೆ ಬದಲಾಗಿ ಬ್ರಿಟಿಷರ ವಿರುದ್ಧ ನಮ್ಮ ನಾಡನ್ನು ಕಾಪಾಡಬೇಕೆಂಬ ನಡವಳಿಕೆಯೇ ಪ್ರಮುಖವಾಗಿ ವ್ಯಕ್ತವಾಗಿದ್ದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಅಲ್ಲದೆ ಪೇಶ್ವೆಗಳ ದುರಾಡಳಿತ ಮತ್ತು ಜಾತಿ ಶ್ರೇಷ್ಠತೆಯ ಪ್ರಜ್ಞೆಯ ವಿರುದ್ಧ ನಡೆದ ಕೋರೆಗಾವ್ ಹೋರಾಟವನ್ನೂ (ಮಹಾರ್ ಹೋರಾಟ) ನಾನು ಈ ವೇಳೆ ನೆನಪಿಸಲು ಬಯಸುತ್ತೇನೆ.
ಹೀಗೆ ಇಂದಿನ ಕೆಳ ದರ್ಜೆಯ ಮತ್ತು ಸಂವಿಧಾನ ವಿರೋಧಿ ವರ್ತನೆಗಳಿಗೆ ಮತ್ತು ಸ್ವಾತಂತ್ರ್ಯದ ಕಿಡಿಗಳ ವಿರುದ್ಧದ ಮನುವಾದಿಗಳ ಈ ಚುನಾವಣಾ ಅಸಹನೆಗೆ ಹಲವಾರು ಐತಿಹಾಸಿಕ ಪುರಾವೆಗಳು ಇದ್ದು ನಮ್ಮ ಯುವ ಪೀಳಿಗೆಯು ಅದನ್ನು ನಿರಂತರ ಓದು ಮತ್ತು ಅಧ್ಯಯನದ ಮೂಲಕ ಅರ್ಥ ಮಾಡಿಕೊಳ್ಳಬೇಕು ಮತ್ತು ಅಂತಹ ಕೆಟ್ಟ ಶಕ್ತಿಗಳಿಂದ ಪ್ರಜಾಪ್ರಭುತ್ವವನ್ನು ಉಳಿಸಿ, ಎಲ್ಲರಿಗೂ ಅದೇ ಮಹಾನ್ ಪ್ರಜಾಪ್ರಭುತ್ವದ ಅಡಿಯಲ್ಲಿ ಸಮಾನ ರಕ್ಷಣೆ ದೊರೆಯುವಂತಾಗಬೇಕು.