ಸ್ಕಿರೆಪ್ರಿನಿಯಾ ಎಂಬ ಚಿತ್ತವೈಕಲ್ಯ
ಇಂದು ವಿಶ್ವ ಸ್ಕಿರೆಪ್ರಿನಿಯಾ ಜಾಗೃತಿ ದಿನ
ವಿಶ್ವಸಂಸ್ಥೆಯ ವರದಿ ಪ್ರಕಾರ ವಿಶ್ವದೆಲ್ಲೆಡೆ ವಾರ್ಷಿಕವಾಗಿ ಸುಮಾರು 21 ಮಿಲಿಯನ್ ಮಂದಿ ಸ್ಕಿರೆಪ್ರಿನಿಯಾ (ಚಿತ್ತವಿಕಲತೆ) ರೋಗಕ್ಕೆ ತುತ್ತಾಗುತ್ತಾರೆ. ಈ ರೋಗದ ಬಗ್ಗೆ ಇರುವ ಬಹುದೊಡ್ಡ ಮಿಥ್ಯವೆಂದರೆ ಇತಂಹ ರೋಗಿಗಳು ಎರಡು ಧ್ವಂದ್ವ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದಾಗಿದೆ. ಆದರೆ ವಾಸ್ತವಿಕವಾಗಿ ಮೆದುಳಿನಲ್ಲಿ ಕೆಲವೊಂದು ಭಾಗದಲ್ಲಿ ಸ್ರವಿಸಲ್ಪಡುವ ರಾಸಾಯನಿಕಗಳ ಅಸಮತೋಲನದಿಂದಾಗಿ ಅಂತಹ ವ್ಯಕ್ತಿಗಳ ಆಲೋಚನೆಗಳು, ಕೃತ್ಯಗಳು ಮತ್ತು ಭಾವನೆಗಳು ಒಂದಕ್ಕೊಂದು ತಾಳೆಯಾಗದೆ ವ್ಯಕ್ತಿಯ ವರ್ತನೆ ಇತರರಿಗಿಂತ ಭಿನ್ನವಾಗಿರುತ್ತದೆ. ಡಾ. ಫಿಲಿಪ್ಪೆಫಿನೆಲ್(1745ರಿಂದ 1826) ಎಂಬ ಫ್ರಾನ್ಸ್ ದೇಶದ ಖ್ಯಾತ ಮನೋರೋಗ ತಜ್ಞ ಇಂತಹ ಚಿತ್ತ ವಿಕಲತೆಯ ರೋಗಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ಔದಾರ್ಯ ಹೊಂದಿದ್ದರು. 1793ರಲ್ಲಿ ಅವರು ಪ್ಯಾರಿಸ್‌ನಲ್ಲಿನ ಮಾನಸಿಕ ಆಸ್ಪತ್ರೆಯ ಮುಖ್ಯಸ್ಥರಾಗಿ ನೇಮಕವಾದಾಗ ಅಲ್ಲಿರುವ ಇಂತಹ ಚಿತ್ತವಿಕಲತೆಯ ರೋಗಿಗಳನ್ನು ನಡೆಸಿಕೊಳ್ಳುವ ರೀತಿಯಿಂದ ಮನನೊಂದು, ಅವರನ್ನು ಕೈದಿಗಳಂತೆ ಸಂಕೋಲೆಗಳಿಂದ ಬಂಧಿಸುವುದರಿಂದ ಮುಕ್ತಿಗೊಳಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಮುಂದೆ ಆ ಎಲ್ಲಾ ರೋಗಿಗಳು ಡಾ. ಫಿನೆಲ್ ಇವರ ಮಾನವೀಯ ನೈತಿಕ ಚಿಕಿತ್ಸೆ ಹಾಗೂ ಔದಾರ್ಯದ ಕಾರಣದಿಂದ ರೋಗಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿಕೊಂಡು ಬದುಕು ಕಟ್ಟಿಕೊಂಡರು. ಈ ಒಂದು ವಿಶೇಷ ದಿನದ ನೆನಪಿಗಾಗಿ ವಿಶ್ವ ಮನೋವೈದ್ಯಕೀಯ ಸಮುದಾಯ ಪ್ರತಿವರ್ಷ ಮೇ 24ರಂದು ಸ್ಕಿರೆಪ್ರಿನಿಯಾ ಜಾಗೃತಿ ದಿನವೆಂದು ಆಚರಿಸಿ ಮನೋರೋಗಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಏನಿದು ಸ್ಕಿರೆಪ್ರಿನಿಯಾ?
ಇದು ಮನಸ್ಸಿಗೆ ಸಂಬಂಧಿಸಿದ ರೋಗವಾಗಿದ್ದು, ವ್ಯಕ್ತಿಯು ಭ್ರಮಾಲೋಕದಲ್ಲಿ ವಿಹರಿಸುತ್ತಾ ತನ್ನೊಳಗೆ ಮಾತನಾಡುತ್ತಾ ಯಾವುದೋ ಲೋಕದಲ್ಲಿ ಇದ್ದಂತೆ ಭಾಸವಾಗುತ್ತದೆ. ಆದರೆ ಇತರ ಮಾನಸಿಕ ರೋಗಿಗಳಂತೆ ಈ ರೋಗ ಅಪಾಯಕಾರಿಯಲ್ಲ, ಈ ರೋಗದಿಂದ ಬಳಲುವವರು ಯಾವತ್ತೂ ಆಕ್ರಮಣಶೀಲತೆಯನ್ನು ತೋರ್ಪಡಿಸುವುದಿಲ್ಲ. ಯಾವುದೇ ವಯಸ್ಸಿನಲ್ಲಿ ಈ ರೋಗ ಬರುವ ಸಾಧ್ಯತೆ ಇದ್ದರೂ, ಸಾಮಾನ್ಯವಾಗಿ ಹದಿವಯಸ್ಕರಿಂದ ಮೂವತ್ತರ ಹರೆಯದಲ್ಲಿ ಹೆಚ್ಚು ಕಾಣಸಿಗುತ್ತದೆ. ಮಕ್ಕಳಲ್ಲಿ ಮತ್ತು ಇಳಿವಯಸ್ಸಿನಲ್ಲಿ ಈ ರೋಗ ಬರುವ ಸಾಧ್ಯತೆ ಬಹಳ ಕಡಿಮೆ. ಸುಮಾರು 100ರಲ್ಲಿ ಒಬ್ಬರಿಗೆ ಈ ರೋಗದ ಸಾಧ್ಯತೆ ಇದ್ದು, ಮಹಿಳೆ ಮತ್ತು ಪುರುಷರಲ್ಲಿ ಸಮಾನವಾಗಿ ಕಾಣಸಿಗುತ್ತದೆ, ಆದರೆ ಪುರುಷರಲ್ಲಿ ಮಹಿಳೆಯರಿಗಿಂತ ಮೊದಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ರೋಗ ಆರಂಭವಾಗಿ ಒಂದೆರಡು ವರ್ಷಗಳು ಕಳೆದ ಬಳಿಕವೇ ಹೆಚ್ಚಾಗಿ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುವ ಈ ರೋಗ, ಚಿಕಿತ್ಸೆಗೆ ಒಳಗಾದವರು ನಿಜವಾಗಿಯೂ ಇತರ ಸಾಮಾನ್ಯ ಮನಷ್ಯರಂತೆ ಸುಖ ಮತ್ತು ನೆಮ್ಮದಿಯ ಜೀವನ ನಡೆಸಬಲ್ಲರು. ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಚಿತ್ತವಿಕಲತೆ ರೋಗದಿಂದ ಬಳಲುತ್ತಿರುವ ಶೇ. 10 ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅದೇ ರೀತಿ ಈ ರೋಗದಿಂದ ಬಳಲುತ್ತಿರುವ ರೋಗಿಗಳು ಮಾದಕ ದ್ರವ್ಯ, ಧೂಮಪಾನ ಮುಂತಾದ ಚಟಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹವರು ಮಾದಕದ್ರವ್ಯಗಳಿಗೆ ದಾಸರಾದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಟ್ಟಿನಲ್ಲಿ ಚಿತ್ತವಿಕಲತೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ಗೆಳೆಯರ, ಕುಟುಂಬದ ಸ್ನೇಹ ಸಂಬಂಧದ ಅನಿವಾರ್ಯ ಇದೆ.
ರೋಗ ಲಕ್ಷಣಗಳು
1. ತನ್ನ ಪಾಡಿಗೆ ತಾನೇ ಮಾತನಾಡುವುದು, ಒಬ್ಬನೇ ನಗುವುದು ಈ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
2. ವಿನಾಕಾರಣ ಭಯ, ನಿದ್ರಾಹೀನತೆ, ನಿರಾಸಕ್ತಿ ಮತ್ತು ಬಾಹ್ಯಜಗತ್ತಿನ ಪರಿವೆ ಇಲ್ಲದಂತೆ ವರ್ತಿಸುವುದು. 3. ವಿನಾಕಾರಣ ಇತರರ ಮೇಲೆ ಅನುಮಾನ ಪಡುವುದು, ಬೇರೆಯವರು ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದಾರೆ, ಸಂಚು ಹೂಡುತ್ತಿದ್ದಾರೆ, ಹಿಂಬಾಲಿಸುತ್ತಿದ್ದಾರೆ ಮತ್ತು ವಿಷಯಾಂತರ ಮಾಡುತ್ತಿದ್ದಾರೆ ಎಂದೆಲ್ಲಾ ಕಲ್ಪಿಸಿಕೊಳ್ಳುವುದು. 4. ಯಾರು ಇಲ್ಲದಿದ್ದರೂ, ಯಾರದ್ದೋ ಮಾತು ಕೇಳಿಸುತ್ತಿದೆ ಎಂದುಕೊಳ್ಳುವುದು.
5. ತನಗೇನೂ ಆಗಿಲ್ಲ, ಇತರರಲ್ಲಿಯೇ ದೋಷವಿದೆ ಎಂದು ವಾದಿಸಿ ಯಾವುದೇ ಚಿಕಿತ್ಸೆಗೆ ಒಪ್ಪದಿರುವುದು.
6. ದೈನಂದಿನ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ, ಉದ್ಯೋಗಗಳಲ್ಲಿ ಯಾವುದೇ ಆಸಕ್ತಿ ಇಲ್ಲದೆ, ಕೆಲಸದ ಕ್ಷಮತೆ ಕ್ಷೀಣಿಸುವುದು.
7. ರೋಗಿಗೆ ತನ್ನಲ್ಲಿರುವ ಮಾನಸಿಕ ತುಮುಲಗಳು, ಭ್ರಮೆಗಳು, ಕೇಳಿಸುವ ಧ್ವನಿಗಳು ಎಲ್ಲವನ್ನೂ ಗ್ರಹಿಸಲು ಸಾಧ್ಯವಾಗದೆ, ತನ್ನ ಸುತ್ತಲಿನ ಪರಿಸರದಲ್ಲಿ ಎಲ್ಲವೂ ತನ್ನ ವಿರುದ್ಧ ನಡೆಯುತ್ತದೆ ಎಂದು ಭಾವಿಸಿಕೊಂಡು ಚಿಂತಿತನಾಗುವುದು.
ಚಿಕಿತ್ಸೆ ಹೇಗೆ?
ಸ್ಕಿರೆಪ್ರಿನಿಯಾ ಎನ್ನುವ ಚಿತ್ತವಿಕಲತೆಯ ರೋಗದ ಚಿಕಿತ್ಸೆ ಸಂಕೀರ್ಣ ಅಲ್ಲದಿದ್ದರೂ, ರೋಗವನ್ನು ಗುರುತಿಸುವುದು ಅಷ್ಟು ಸುಲಭದ ಮಾತಲ್ಲ. ನುರಿತ ಮನೋವೈದ್ಯರು ಸುಲಭವಾಗಿ ರೋಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ರೋಗವನ್ನು ಗುರುತಿಸಿದ ಬಳಿಕ ರೋಗಕ್ಕೆ ಚಿಕಿತ್ಸೆಯ ಅವಶ್ಯಕತೆಯನ್ನು ರೋಗಿಗೆ ಮನದಟ್ಟು ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ಕಿರೆಪ್ರಿನಿಯಾ ಎಂಬ ರೋಗವನ್ನು ವಿಭಿನ್ನ ವ್ಯಕ್ತಿತ್ವದ ಹೊರತಾದ ವಿಚಿತ್ರ ಭಾವನೆ, ಕುತೂಹಲ, ಅನುಮಾನ ಎಲ್ಲವನ್ನೂ ಹೊಂದಿದ, ಮೆದುಳಿಗೆ ಸಂಬಂಧಿಸಿದ ರೋಗ ಎಂದು ಸಂಶೋಧನೆಗಳು ಸಾಬೀತುಪಡಿಸಿದೆ. ಸಾಮಾನ್ಯ ಮನುಷ್ಯನೊಬ್ಬ ದಿನವೊಂದಕ್ಕೆ ಸರಾಸರಿ 16 ಸಾವಿರ ಶಬ್ದವನ್ನು ಮಾತನಾಡಿದರೆ, ಈ ಚಿತ್ತವಿಕಲತೆಯ ರೋಗಿಗಳು 25 ಸಾವಿರಕ್ಕೂ ಹೆಚ್ಚು ಶಬ್ದ ಉಲಿಯುತ್ತಾರೆ ಎಂದು ತಿಳಿದು ಬಂದಿದೆ. ಈ ರೀತಿಯ ಭ್ರಮೆಗಳು, ಕೇಳುವ ಧ್ವನಿಗಳು ಮೆದುಳಿನಲ್ಲಿ ಉತ್ಪತ್ತಿಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿದೆ. ಅದೇ ರೀತಿ ಮೆದುಳಿನಲ್ಲಿ ರಚನಾತ್ಮಾಕವಾಗಿ ವ್ಯತ್ಯಾಸ, ನರವಾಹಕ ರಾಸಾಯನಿಕಗಳ ವೈಪರೀತ್ಯ ಮತ್ತು ಮೆದುಳಿನ ಮಾಹಿತಿ ಸಂಸ್ಕರಣೆಯಲ್ಲಿ ದೋಷಗಳು ಈ ಚಿತ್ತವಿಕಲತೆ ರೋಗಿಗಳಲ್ಲಿ ಕಂಡು ಬಂದಿದ್ದು ಸಂಶೋಧನೆಗಳಿಂದ ಸಾಬೀತಾಗಿದೆ. ಒಮ್ಮೆ ಮಾನಸಿಕ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದಲ್ಲಿ ಮುಂದೆ ಯಾವತ್ತೂ ಹುಚ್ಚ ಅಥವಾ ಮಾನಸಿಕ ರೋಗಿ ಎಂಬುದಾಗಿ ಹಣೆಪಟ್ಟಿ ಹಾಕಿಸಿಕೊಳ್ಳಲು ತಯಾರಿಲ್ಲದ ಕಾರಣ ಚಿತ್ತ ವಿಕಲತೆಯಿಂದ ಬಳಲುತ್ತಿರುವ ರೋಗಿಯ ಕುಟುಂಬಿಕರು ಮತ್ತು ರೋಗಿಯೂ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮನಸ್ಸು ಮಾಡುವುದಿಲ್ಲ. ರೋಗಿಗೆ ತನ್ನಲ್ಲಿರುವ ಭ್ರಮೆಗಳು, ಅನುಮಾನಗಳು ಮತ್ತು ಕೇಳಿಸುವ ಧ್ವನಿಗಳು ಮತ್ತು ಮಾನಸಿಕ ತುಮುಲಗಳು ತನ್ನ ಮನಸ್ಸಿನೊಳಗಿನ ಚಿಕಿತ್ಸೆಗೆ ಸ್ಪಂದಿಸುವ ರೋಗದ ಲಕ್ಷಣಗಳು ಎಂಬುದರ ಅರಿವು ಆಗುವುದೇ ಇಲ್ಲ. ತನ್ನ ಸುತ್ತಮುತ್ತಲಿನ ಪರಿಸರದಲ್ಲಿನ ಮತ್ತು ವ್ಯಕ್ತಿಗಳಲ್ಲಿ ಈ ರೀತಿ ನಡೆಯುತ್ತಿದೆ ಎಂದು ಆತ ಭಾವಿಸುತ್ತಾನೆ ಮತ್ತು ತಾನು ಸರಿಯಾಗಿರುವುದು, ತನಗೇಕೆ ಚಿಕಿತ್ಸೆ ಎಂದು ರೋಗಿ ವಾದಿಸುತ್ತಾನೆ ಮತ್ತು ಚಿಕಿತ್ಸೆಗೆ ಮುಂದಾಗುವುದಿಲ್ಲ ಮತ್ತೂ ವಿರೋಧಿಸುತ್ತಲೇ ಇರುತ್ತಾನೆ. ಒಟ್ಟಿನಲ್ಲಿ ರೋಗಿಯನ್ನು ಚಿಕಿತ್ಸೆಗೆ ಒಳಗಾಗುವಂತೆ ಮತ್ತು ರೋಗಿಯ ಕುಟುಂಬಸ್ಥರರನ್ನು ರೋಗಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಪರಿವರ್ತನೆ ಮಾಡುವ ಗುರುತರ ಜವಾಬ್ದಾರಿ ಮನೋವೈದ್ಯರಿಗೆ ಇದೆ. ಅದೇ ರೀತಿ ರೋಗಿಯ ಚಿಕಿತ್ಸೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ಗುರುತರವಾದ ಹೊಣೆಗಾರಿಕೆ, ಕುಟುಂಬಸ್ಥರಿಗೆ ಮತ್ತು ಸಮಾಜಕ್ಕೆ ಇದೆ.