ಹೆಬ್ರಿ-ಮಲ್ಪೆ ರಾ.ಹೆದ್ದಾರಿ ಚತುಷ್ಪಥ ಕಾಮಗಾರಿಯ ಟೆಂಡರ್ ರದ್ದು
ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ರಘುಪತಿ ಭಟ್
ಉಡುಪಿ : ಹೆಬ್ರಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ ೧೬೯ ಎರ ಚತುಷ್ಪಥ ರಸ್ತೆ ಕಾಮಗಾರಿಯ ಟೆಂಡರ್‌ನಲ್ಲಿ ಸ್ಪರ್ಧಿ ಗಳು ಭಾಗವಹಿಸಿಲ್ಲ ಎಂಬ ಸಣ್ಣ ಕಾರಣ ಇಟ್ಟುಕೊಂಡು ಅಧಿಕಾರಿಗಳು ಟೆಂಡರ್‌ನ್ನು ರದ್ದುಗೊಳಿಸಿದ್ದಾರೆ. ಈ ಸಂಬಂಧ ದೆಹಲಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮರು ಟೆಂಡರ್‌ಗೆ ಪ್ರಯತ್ನಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಎರಡು ಜನ ಸ್ಪರ್ಧಿಗಳು ಇದ್ದರೂ ತಾಂತ್ರಿಕ ಕಾರಣದಿಂದ ಬೆಂಗಳೂರಿನ ಅಧಿಕಾರಿ ಟೆಂಡರ್‌ನ್ನು ರದ್ದುಗೊಳಿಸಿದ್ದಾರೆ. ದೆಹಲಿಗೆ ಮನವಿ ಮಾಡಿದರೂ ಇಲ್ಲಿಂದ ವರದಿ ಹೋಗಿರುವುದರಿಂದ ಮರು ಟೆಂಡರ್ ಆದೇಶ ಮಾಡಲಾಗಿದೆ ಎಂದರು.
ಈ ಕಾಮಗಾರಿಗೆ ಸಂಬಂಧಿಸಿ ಸಚಿವ ಪ್ರಹ್ಲಾದ್ ಜೋಶಿ ೪೫ ದಿನಗಳ ಒಳಗೆ ವರ್ಕ್ ಆರ್ಡರ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಾಂತ್ರಿಕ ವಾಗಿ ತಪ್ಪು ಇಲ್ಲದೆ ಇರುತ್ತಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಅದಕ್ಕಾಗಿ ಈ ಬಾರಿ ಆದಿಉಡುಪಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಕುಂದಾಪುರ ಎಸಿ ಅವರನ್ನು ಭೂಸ್ವಾಧೀನ ಅಧಿಕಾರಿಯನ್ನಾಗಿ ನೇಮಕ ಮಾಡ ಲಾಗಿದೆ ಎಂದು ಅವರು ಹೇಳಿದರು.
ಇಂದಿರಾ ಕ್ಯಾಂಟಿನ್ ಸ್ಥಳಾಂತರ
ಹಳೆ ತಾಲೂಕು ಕಚೇರಿ ಜಾಗದಲ್ಲಿ ನೂತನ ನಗರಸಭೆ ಕಚೇರಿ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಈ ಆವರಣ ದಲ್ಲಿರುವ ಇಂದಿರಾ ಕ್ಯಾಂಟಿನ್ ಸ್ಥಳಾಂತರಕ್ಕೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದರು.
30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ನಗರಸಭೆ ಕಟ್ಟಡವು ೬೦-೭೦ಸಾವಿರ ಚದರ ವಿಸ್ತ್ರೀರ್ಣ ಹೊಂದಿದ್ದು, ಇದರಲ್ಲಿ ೨೦ಸಾವಿರ ಚದರ ವಿಸ್ತ್ರೀರ್ಣದ ವಾಣಿಜ್ಯ ಸಂಕೀರ್ಣ ಕೂಡ ಇರಲಿದೆ ಎಂದು ಶಾಸಕ ರಘುಪತಿ ಭಟ್ ಮಾಹಿತಿ ನೀಡಿದರು.
ನಗರದಲ್ಲಿ ೩೨೮ ಕೋಟಿ ರೂ. ಅನುದಾನದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಣಗೊಳಿಸಿ ಹೊಳೆಯ ಮೂಲಕ ಸಮುದ್ರಕ್ಕೆ ಬಿಡುವ ಬದಲು ಪೈಪ್ ಮೂಲಕ ಬಿಡಬೇಕು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಬೇಕು ಎಂದು ಸದಸ್ಯ ಸುಂದರ್ ಕಲ್ಮಾಡಿ ಒತ್ತಾಯಿಸಿದರು.
ನಗರದ ಸಿಟಿ ಬಸ್ ನಿಲ್ದಾಣದ ಐರೋಡಿಕಾರ್ಸ್ ಎದುರಿನ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳ ಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸಹಾಯಕ ಕಾರ್ಯ ಪಾಲ ಅಭಿಯಂತರ ಯಶವಂತ್ ಪ್ರಭು ಹಾಜರಿದ್ದರು.
5-6ತಿಂಗಳು ಬ್ಲಿಚಿಂಗ್ ಪೌಡರೇ ಬಳಸಿಲ್ಲ!
ಕಳೆದ ಐದಾರು ತಿಂಗಳುಗಳಿಂದ ಬ್ಲಿಚಿಂಗ್ ಪೌಡರ್ ಹಾಕದೆಯೇ ನಗರದ ಶುದ್ಧೀಕರಣ ಘಟಕದ ನೀರನ್ನು ಹೊರಬಿಡುತ್ತಿರುವುದಾಗಿ ನಗರಸಭೆ ಪರಿಸರ ಇಂಜಿನಿಯರ್ ಸ್ನೇಹಾ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.
ಸದಸ್ಯ ವಿಜಯ ಕೊಡವೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ಬಾರಿ ಟೆಂಡರ್ ಕರೆದರೂ ಯಾರು ಕೂಡ ಭಾಗವಹಿಸಿರಲಿಲ್ಲ. ಹಾಗಾಗಿ ಹೀಗೆ ಮಾಡಬೇಕಾಗಿತ್ತು. ಆದರೆ ಈಗ ಸ್ಥಳೀಯವಾಗಿ ಬ್ಲಿಚಿಂಗ್ ಪೌಡರ್ ಖರೀದಿಸಿ ಬಳಸಲಾಗುತ್ತಿದೆ ಎಂದು ತಿಳಿಸಿದರು. ಇಲ್ಲಿನ ಲೋಪಗಳನ್ನು ಸರಿಪಡಿಸಲು ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸರಕಾರ ಮಟ್ಟದಲ್ಲಿ ಆ ಕಾರ್ಯ ಮಾಡಬೇಕಾಗಿದೆ ಎಂದರು.
ತೋಡು ಹೂಳೆತ್ತಲು ಕ್ರಮ
ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯ ತೋಡುಗಳನ್ನು ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಪ್ರತಿ ವಾರ್ಡ್‌ಗೆ ವಾರದಲ್ಲಿ ಒಂದು ದಿನದ ಬದಲು ಎರಡು ಬಾರಿ ತಂಡವನ್ನು ಕಳುಹಿಸಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದರು.
ವಾರಾಹಿ ಕುಡಿಯುವ ನೀರಿನ ಕಾಮಗಾರಿಯ ಅವ್ಯವಸ್ಥೆಗೆ ಸಂಬಂಧಿಸಿ ಯೋಜನೆಯ ಇಂಜಿನಿಯರ್ ರಾಜಶೇಖರ್ ಅವರನ್ನು ಸದಸ್ಯರು ಈ ಬಾರಿಯ ಸಭೆಯಲ್ಲೂ ತೀವ್ರ ತರಾಟೆಗೆ ತೆಗೆದುಕೊಂಡರು. ಕಾಮಗಾರಿಯ ಅವ್ಯವಸ್ಥೆ ಸರಿಪಡಿಸಲು ಮೂರು ತಂಡಗಳನ್ನು ಮಾಡಿದ್ದು, ಕಾರ್ಯ ವೇಗಗತಿಯಲ್ಲಿ ನಡೆಯಲು ತಂಡವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ರಾಜಶೇಖರ್ ಸಭೆಗೆ ಭರವಸೆ ನೀಡಿದರು.