ಅಬುಧಾಬಿ: ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟ; 2 ಮಂದಿ ಮೃತ್ಯು, 120 ಮಂದಿಗೆ ಗಾಯ
ಅಬುಧಾಬಿ, ಮೇ 24: ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸಿಲಿಂಡರ್ ಸ್ಫೋಟದಿಂದ 2 ಮಂದಿ ಮೃತಪಟ್ಟಿದ್ದು ಇತರ 120 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಹೋಟೆಲ್ನಲ್ಲಿ ಮಧ್ಯಾಹ್ನ ಊಟದ ಸಂದರ್ಭ 2 ಸ್ಫೋಟ ಸಂಭವಿಸಿದ್ದು ಹೋಟೆಲ್ನ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದೆ. ಸ್ಫೋಟದಿಂದ ಹುಟ್ಟಿಕೊಂಡ ಬೆಂಕಿಯಿಂದ ಹೋಟೆಲ್ ಇದ್ದ ಸಮುಚ್ಚಯದಲ್ಲಿರುವ ಇತರ 6 ಕಟ್ಟಡಗಳಿಗೆ ಹಾಗೂ ಹಲವು ಅಂಗಡಿಗಳಿಗೆ ತೀವ್ರ ಹಾನಿಯಾಗಿದೆ. ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಫೋಟದಿಂದ 2 ಮಂದಿ ಮೃತಪಟ್ಟಿದ್ದು 64 ಮಂದಿಗೆ ಅಲ್ಪಸ್ವಲ್ಪ ಗಾಯವಾಗಿದೆ. 56 ಮಂದಿಗೆ ಹೆಚ್ಚಿನ ಗಾಯವಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. ಜನವರಿ 17ರಂದು ಅಬುಧಾಬಿಯ ಮೇಲೆ ಹೌದಿ ಬಂಡುಗೋರರು ಡ್ರೋನ್ ದಾಳಿ ನಡೆಸಿದಂದಿನಿಂದ ಯುಎಇಯಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.
Next Story