varthabharthi


ನಿಮ್ಮ ಅಂಕಣ

ಪಠ್ಯ ರಚನೆಯಲ್ಲಿ ನೈತಿಕ ಬದ್ಧತೆ ಬಹಳ ಮುಖ್ಯ

ವಾರ್ತಾ ಭಾರತಿ : 25 May, 2022
ರಾಜೇಂದ್ರ ಚೆನ್ನಿ

ಪಠ್ಯಗಳ ಉದ್ದೇಶವೆಂದರೆ ವಿದ್ಯಾರ್ಥಿಗಳ ಆಸಕ್ತಿ, ಬುದ್ಧಿ ಭಾವನೆಗಳ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ವಿಷಯಗಳಲ್ಲಿ ಪಡೆಯಬೇಕಾದ ಜ್ಞಾನವನ್ನು ನೀಡಲು ಬೇಕಾದ ಸಾಧನಗಳಾಗುವುದು. ಇಲ್ಲಿ ಮುನ್ನೆಲೆಗೆ ಬರಬೇಕಾಗಿರುವುದು ವಿದ್ಯಾರ್ಥಿ, ಜ್ಞಾನ, ವಿದ್ಯಾರ್ಥಿಯ ಬೆಳೆವಣಿಗೆಗಳು ಮಾತ್ರ. ನಮ್ಮ ಗಮನವಿರಬೇಕಾದದ್ದು ಕಲಿಕೆಯ ಬಗ್ಗೆ. ವಿದ್ಯಾರ್ಥಿಗಳಲ್ಲಿ ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತಗಳನ್ನು ತುರುಕುವುದರಲ್ಲಿ ಅಲ್ಲ.

ಅಂಬೇಡ್ಕರ್ ಅವರು ತಮ್ಮ ಚಿಂತನೆ ಹಾಗೂ ಬರಹಗಳಲ್ಲಿ ಮತ್ತೆಮತ್ತೆ ಪ್ರಸ್ತಾಪಿಸಿದ ವಿಷಯವೆಂದರೆ ಕಾನ್ಸ್ ಟ್ಯೂಷನಲ್ ಮೊರಾಲಿಟಿ-ಸಂವಿಧಾನಾತ್ಮಕ ನೈತಿಕತೆ. ಅವರು ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಡಿದ ಅನೇಕ ಭಾಷಣಗಳಲ್ಲಿ ಈ ವಿಷಯದ ಪ್ರಸ್ತಾಪವಿದೆ. ಜೊತೆಗೆ ಪ್ರಜಾಪ್ರಭುತ್ವವಾದಿ ಸಂಸ್ಕೃತಿಯ ಬಗ್ಗೆ ಈ ಎರಡೂ ಪರಿಕಲ್ಪನೆಗಳ ಹಿಂದಿರುವ ಕಾಳಜಿಯೆಂದರೆ ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳನ್ನು ನಡೆಸುವ ಸಂಸ್ಥೆಯಾಗಬಾರದು ಮತ್ತು ಸಂವಿಧಾನವು ಕಲಮು, ಕಾನೂನುಗಳ ದಸ್ತವೇಜು ಆಗಬಾರದು. ಮುಖ್ಯವೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿನಡೆದುಕೊಳ್ಳುವ ಸಮಾಜವು ನಿರ್ಮಾಣವಾಗಬೇಕು. ಹೀಗಾಗಿ ಸಂವಿಧಾನಾತ್ಮಕ ನೈತಿಕತೆ ಎಂದರೆ ಸಂವಿಧಾನವೆನ್ನುವ ಪುಸ್ತಕಕ್ಕೆ ಸಲ್ಲಿಸುವ ಗೌರವವಲ್ಲ. ಅದು ನಮಗೆ ನೀಡುವ ಜವಾಬ್ದಾರಿಯನ್ನು ಪಾಲಿಸುವುದು.

ಇದು ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗುವ ಸೂತ್ರವಾಗಿದೆ. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಿಕ್ಷಣವನ್ನು ನಡೆಸುವ ಸರಕಾರಗಳಿಗೆ ಒಂದು ನೈತಿಕ ಜವಾಬ್ದಾರಿ ಇರುತ್ತದೆ. ಶಿಕ್ಷಣವೆಂದರೆ ಜ್ಞಾನ ಮತ್ತು ಜ್ಞಾನವು ಜ್ಞಾನವಾಗಿಯೇ ಅಮೂಲ್ಯವಾದುದು ಎನ್ನುವ ನಂಬಿಕೆ ಇರಬೇಕು. ಆಧುನಿಕ ಕಾಲದಲ್ಲಿ, ವಿಶೇಷವಾಗಿ ಜಾಗತೀಕರಣದ ನಂತರ ಜ್ಞಾನದ ಪ್ರಯೋಜನವೇನು? ಅದರಿಂದ ಏನು ಉತ್ಪಾದನೆಯಾಗುತ್ತದೆ ಎನ್ನುವ ಧೋರಣೆಯನ್ನು ತತ್ತ್ವಜ್ಞಾನವೆಂದುಕೊಳ್ಳಲಾಗಿದೆ. ಭಾರತದಂತಹ ದೇಶಗಳಲ್ಲಿ ಈ ಪ್ರಯೋಜನ ಕೇಂದ್ರಿತ ಚಿಂತನೆ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಸೂತ್ರವಾಗಿ ಬಿಟ್ಟಿದೆ. ಅಲ್ಲದೆ ಅನೇಕ ಪ್ರತಿಭಾವಂತ ಭಾರತೀಯರನ್ನು ಜಾಗತೀಕರಣದ ಕೂಲಿಗಳನ್ನಾಗಿ ಮಾಡುವ ಪ್ರಯತ್ನಗಳು ಭರದಿಂದ ನಡೆದಿವೆ. ಆದರೆ ಜ್ಞಾನವೆನ್ನುವುದು ತನ್ನಲ್ಲಿಯೇ ಮುಖ್ಯ. ಅದು ಪವಿತ್ರವು ಕೂಡ. ಆದ್ದರಿಂದ ಶಿಕ್ಷಣಕ್ಕಾಗಿ ಪಠ್ಯಪುಸ್ತಕಗಳನ್ನು ರಚಿಸುವ ಕೆಲಸದಲ್ಲಿ ನೈತಿಕ ಬದ್ಧತೆಯು ಮುಖ್ಯವಾಗಿದೆ. ಜೊತೆಗೆ ಶಿಕ್ಷಣದ ಬಗೆಗಿನ ಪರಿಣತಿ ಕೂಡ. ಅನೇಕ ಲಕ್ಷ ವಿದ್ಯಾರ್ಥಿಗಳು ಓದುವ ಪಠ್ಯಗಳು ಕಲಿಕೆಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಅದರಲ್ಲೂ ನಮ್ಮ ಶಿಕ್ಷಣ ಪದ್ಧತಿಯು ಈಗಲೂ ವಿದ್ಯಾರ್ಥಿ ಕೇಂದ್ರಿತವಾಗುವ ಬದಲು ಪಠ್ಯ ಕೇಂದ್ರಿತವಾಗಿದೆ. ಅಲ್ಲದೆ, ಬಹುಪಾಲು ವಿದ್ಯಾರ್ಥಿಗಳು ಪಠ್ಯದ ಆಚೆಗೆ ಬೇರೆ ಪುಸ್ತಕಗಳನ್ನು ಓದುವುದಿಲ್ಲ. ಸಾಹಿತ್ಯ, ಸಮಾಜ ವಿಜ್ಞಾನ ಪಠ್ಯಗಳಲ್ಲಿ ಅವರು ಸಮಾಜದ ಬಗ್ಗೆ, ದೇಶದ ಬಗ್ಗೆ, ಮಾನವೀಯ ಮೌಲ್ಯಗಳ ಬಗ್ಗೆ ಕಲಿಯುತ್ತಾರೆ. ಅವರು ಏನನ್ನು ಆ ವಿಷಯಗಳಲ್ಲಿ ಕಲಿಯಬೇಕೆನ್ನುವುದನ್ನು ವಿಷಯದ ಪರಿಣಿತರು ನಿರ್ಧರಿಸಬೇಕು. ಪಠ್ಯವೆಂದರೆ ರಾಷ್ಟ್ರದ ಭದ್ರತೆಗೆ ಸಂಬಂಧಪಟ್ಟ ದಾಖಲೆ ಅಲ್ಲ. ಎಲ್ಲ ಹಂತದಲ್ಲಿಯೂ ಪಾರದರ್ಶಕವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕು. ಪಠ್ಯಗಳನ್ನು ರಾಜಕೀಯದ ಮಾಧ್ಯಮಗಳನ್ನಾಗಿ ನೋಡಬಾರದು. ಅನುಭವಿ ಶಿಕ್ಷಕರಿಗೆ ಮುಕ್ತವಾಗಿ ಚರ್ಚೆ ಮೂಲಕ ಪಠ್ಯ ಪುಸ್ತಕವನ್ನು ಆಯ್ಕೆ ಮಾಡಲು ಬಿಡಬೇಕು. ದುರಂತವೆಂದರೆ ಈ ನೈತಿಕ ಸಂಹಿತೆ ಯನ್ನು ಭಾರತದ ಯಾವ ಸರಕಾರಗಳೂ ಪಾಲಿಸಿಲ್ಲ. ಪ್ರಾಯಶಃ ಭಾರತದಲ್ಲಿ ಮಾತ್ರ ಪಠ್ಯ ಪುಸ್ತಕಗಳು ಜ್ಞಾನದ ಹೊರತಾಗಿ ಇನ್ನೆಲ್ಲ ರಾಜಕೀಯಗಳಿಗೆ ವೇದಿಕೆಯಾಗಿವೆ. ಹೀಗಾಗಿ ಯಾವುದೋ ಪಠ್ಯವನ್ನು ತೆಗೆದುಹಾಕಿ ಎನ್ನುವ ವಿದ್ಯಮಾನಗಳು ನಡೆಯುತ್ತಾ ಇರುತ್ತದೆ. ಇತ್ತೀಚೆಗೆ ವಿಶೇಷವಾಗಿ ಯಾವುದೇ ಜಾತಿ ಅಥವಾ ಧರ್ಮಕ್ಕೆ ‘ನೋವಾಗುತ್ತದೆ’ ಎನ್ನುವ ಕಾರಣಕ್ಕಾಗಿ ಇವು ನಡೆಯುತ್ತವೆ. (ಉದಾಹರಣೆಗೆ ಕೆಲ ವರ್ಷಗಳ ಹಿಂದೆ ‘ಗಾಂಧಿ ಬಂದ’ ಬಗ್ಗೆ ವಿವಾದ ಹುಟ್ಟಿಕೊಂಡಿತ್ತು. ‘ಸಂಸ್ಕಾರ’ ಕಾದಂಬರಿ ಬಗ್ಗೆ ಕೂಡ)

ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿಯೂ ಅದು ಪಠ್ಯಪುಸ್ತಕಗಳ ಮೇಲೆ ದಾಳಿ ಮಾಡುತ್ತದೆ. ತಾನು ಒಪ್ಪುವ ಚರಿತ್ರೆ, ಧರ್ಮ, ಭಾಷೆ, ಸಂಸ್ಕಾರಗಳು ಮಾತ್ರ ಈ ಪಠ್ಯಗಳಲ್ಲಿ ಇರಬೇಕೆನ್ನುವ ಜಿಹಾದಿ ಸ್ವಭಾವದ ಸಿದ್ಧಾಂತದಿಂದಾಗಿ ಹೀಗೆ ಆಗುತ್ತದೆ. ಇದು ಆರೆಸ್ಸೆಸ್‌ನ ಸಂಪ್ರದಾಯವೇ ಆಗಿದೆ. ಅದು ಪಠ್ಯಗಳನ್ನು ಸೈದ್ಧಾಂತಿಕ ಆಸ್ತಿಗಳೆಂದೂ, ಪ್ರತೀ ಶಾಲೆಯೂ ಆರೆಸ್ಸೆಸ್‌ನ ಒಂದು ಶಾಖೆಯೆಂತಲೂ ಪರಿಗಣಿಸುತ್ತದೆ. ಅದರ ಪ್ರಕಾರ ರಾಜಕೀಯವೆಂದರೆ ‘ಮಿದುಳ ಮಾರ್ಜನ’ ಅಥವಾ ಬ್ರೈನ್‌ವಾಶಿಂಗ್. ಅವೈಜ್ಞಾನಿಕವಾದ ನಂಬಿಕೆಗಳನ್ನು, ಮನುಷ್ಯವಿರೋಧಿ ಮೌಲ್ಯಗಳನ್ನು ಪಠ್ಯಗಳ ಮೂಲಕ ಬೋಧಿಸಿ ಮಕ್ಕಳನ್ನು ಸೈದ್ಧಾಂತಿಕವಾಗಿ ಅಂಧಭಕ್ತರನ್ನಾಗಿ ಮಾಡುವುದು ಅದರ ಉದ್ದೇಶವಾಗಿದೆ. ಹೀಗಾಗಿ ಪಠ್ಯಪುಸ್ತಕಗಳು ಪ್ರಚಾರ ಸಾಮಗ್ರಿಗಳಾಗಬೇಕೆಂದು ಅದು ಅಪೇಕ್ಷಿಸುತ್ತದೆ. ಸಚಿವರೊಬ್ಬರು ವಿವೇಕಶೂನ್ಯರಾಗಿ ಇದನ್ನು ಕಾರ್ಯರೂಪಕ್ಕೆ ತರಲು ಹೊರಟಾಗ ಆಗುವ ಅನವಶ್ಯಕ ಕ್ಷೋಭೆಗಳಿಗೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ.

sactssactsಪಠ್ಯಗಳ ಉದ್ದೇಶವೆಂದರೆ ವಿದ್ಯಾರ್ಥಿಗಳ ಆಸಕ್ತಿ, ಬುದ್ಧಿ ಭಾವನೆಗಳ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ವಿಷಯಗಳಲ್ಲಿ ಪಡೆಯಬೇಕಾದ ಜ್ಞಾನವನ್ನು ನೀಡಲು ಬೇಕಾದ ಸಾಧನಗಳಾಗುವುದು. ಇಲ್ಲಿ ಮುನ್ನೆಲೆಗೆ ಬರಬೇಕಾಗಿರುವುದು ವಿದ್ಯಾರ್ಥಿ, ಜ್ಞಾನ, ವಿದ್ಯಾರ್ಥಿಯ ಬೆಳೆವಣಿಗೆಗಳು ಮಾತ್ರ. ನಮ್ಮ ಗಮನವಿರಬೇಕಾದದ್ದು ಕಲಿಕೆಯ ಬಗ್ಗೆ. ವಿದ್ಯಾರ್ಥಿಗಳಲ್ಲಿ ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತಗಳನ್ನು ತುರುಕುವುದರಲ್ಲಿ ಅಲ್ಲ. ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್‌ನ ‘ಹಾರ್ಡ್ ಟೈಮ್ಸ್’ ಕಾದಂಬರಿಯಲ್ಲಿ ಗ್ರಾಡ್‌ಗ್ರೈಂಡ್ ಎಂಬ ಪಾತ್ರವಿದೆ. (ಗ್ರೈಂಡ್ ಎಂದರೆ ರುಬ್ಬುವುದು.) ಅವನ ಶಿಕ್ಷಣ ನೀತಿ ಎಂದರೆ ವಿದ್ಯಾರ್ಥಿಗಳ ತಲೆಯಲ್ಲಿ ಗಳನ್ನು ತುರುಕುವುದು. ಅವರಿಗೆ ಭಾವನೆಗಳು ಇರಕೂಡದು. ಮನುಷ್ಯ ಸಂವೇದನೆ ಇರಕೂಡದು. ಅವನಿಗೆ ಕೂಡ ವಿದ್ಯಾರ್ಥಿಗಳೆಂದರೆ ಖಾಲಿಡಬ್ಬಗಳು. ಅದರಲ್ಲಿ ಗಳನ್ನು ತುರುಕಬೇಕು. ಇದು ನಮ್ಮ ಸರಕಾರದ ನಂಬಿಕೆಯೂ ಆಗಿದೆ. ಹೆಡಗೆವಾರ್ ಅವರ ಬರಹವನ್ನು ಪಠ್ಯದಲ್ಲಿ ತುರುಕಿದರೆ ಅದು ವಿದ್ಯಾರ್ಥಿಗಳ ಮಿದುಳಿನಲ್ಲಿ ಪ್ರವೇಶಮಾಡಿ ಅವರು ಸಂಘವನ್ನು ಸೇರುತ್ತಾರೆ ಎನ್ನುವ ನಂಬಿಕೆ. ಹಾಗೆಯೇ ‘ಭಾರತೀಯ’ ಸಂಪ್ರದಾಯ, ಧರ್ಮಗಳ ಬಗೆಗಿನ ಪಾಠಗಳು. ಅವುಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುರುಕಬೇಕು ಅಷ್ಟೆ. ಬನ್ನಂಜೆ ಮತ್ತು ಶತಾವಧಾನಿ ಗಣೇಶರ ಬರಹಗಳನ್ನು ಪಠ್ಯಗಳಲ್ಲಿ ಸೇರಿಸಲಾಗಿದೆ. ಪ್ರಾಥಮಿಕ ಪ್ರಶ್ನೆಯೆಂದರೆ ಗಣೇಶರ ಬರಹವು ಯಾವ ಕನ್ನಡದಲ್ಲಿದೆ? ಅದು ಯಾರಿಗೆ ಅರ್ಥವಾಗುತ್ತದೆ? ಶಾಲೆಯ ಮಕ್ಕಳಿಗೆ ಈ ಕನ್ನಡ ಬೇಕೇ? ಅದನ್ನು ಸರಳ ಕನ್ನಡದಲ್ಲಿ ಅನುವಾದ ಮಾಡಬೇಕಲ್ಲವೇ? ಬನ್ನಂಜೆಯವರು ದುಡ್ಡಿನ ವ್ಯಾಮೋಹದ ಬಗ್ಗೆ ಬರೆದದ್ದನ್ನು ನಮ್ಮ ಮಂತ್ರಿಗಳು, ಶಾಸಕರು ಓದಿದರೆ ಸಾಕಲ್ಲವೇ? ಸರಕಾರಿ ಶಾಲೆಗಳಲ್ಲಿ ಓದುವ ಬಹುಸಂಖ್ಯಾತ ಮಕ್ಕಳಿಗೆ, ಅವರ ತಂದೆ-ತಾಯಿಗಳಿಗೆ ದುಡ್ಡಿನ ವ್ಯಾಮೋಹ ಇಲ್ಲ. ಅದನ್ನು ಅವರು ಕಾಣುವುದೇ ಅಪರೂಪ. ಹೀಗಾಗಿ ಶೇ. 40ರಿಂದ ವಿಶ್ವದಾಖಲೆಯ ಭ್ರಷ್ಟಾಚಾರ ಮಾಡಿರುವ ಮಂತ್ರಿಗಳು, ಶಾಸಕರು ಈ ಪಾಠವನ್ನು ಓದಲಿ. ಬಡಮಕ್ಕಳು ದಲಿತ ಮಕ್ಕಳು ಅಲ್ಲ.

ಇಂತಹ ಅಸಂಗತ ವಿದ್ಯಮಾನಗಳಿಗೆ ಕಾರಣವೆಂದರೆ ಶಿಕ್ಷಣ ಹಾಗೂ ಜ್ಞಾನಗಳು ರಾಜಕೀಯ ಅಧಿಕಾರದ ಅಡಿಯಾಳಾಗಿರಬೇಕೆನ್ನುವ ಧೋರಣೆ. ಯಾವುದೇ ಪಕ್ಷವಾಗಲಿ, ಪಠ್ಯರಚನೆಯನ್ನು ಪರಿಣಿತರಿಗೆ ಬಿಡಿ. ಶಿಕ್ಷಕರಿಗೆ ಬಿಡಿ. ಶಿಕ್ಷಣವೆನ್ನುವುದು ಈಗ ಅಗಾಧವಾಗಿ ಬೆಳೆದಿರುವ ಜ್ಞಾನಶಿಸ್ತು ಆಗಿದೆ. ಜಗತ್ತಿನ ಶ್ರೇಷ್ಠ ಚಿಂತಕರು ಈ ಶಿಸ್ತಿಗೆ ಕೊಡುಗೆ ನೀಡಿದ್ದಾರೆ. ಆ ಶಿಸ್ತಿಗೆ ಸ್ವಾಯತ್ತತೆ ಇರಲಿ. ಪರಿಣಿತರು, ಅನುಭವಿ ಶಿಕ್ಷಕರು ಪಠ್ಯರಚನೆಯಲ್ಲಿ ಪಾರದರ್ಶಕವಾಗಿ ತೊಡಗಿಕೊಳ್ಳಲಿ. ಐಐಟಿ ಪ್ರಾಧ್ಯಾಪಕರಿಗೆ ಪಠ್ಯ ಪರಿಷ್ಕರಣೆಯ ಸಣ್ಣ ಜವಾಬ್ದಾರಿಯನ್ನು ಕೊಡಬೇಡಿ.

ಹಾಗಾದರೆ ಸಿದ್ಧಾಂತ ಮುಕ್ತವಾದ ಜ್ಞಾನವೆನ್ನುವುದು ಇದೆಯೇ? ಶಿಕ್ಷಣವೆನ್ನುವುದು ಇದೆಯೇ? ವಿದ್ವಾಂಸರು ಇಲ್ಲ ಎನ್ನುತ್ತಾರೆ. ಆದ್ದರಿಂದಲೇ ಮಾಡಬೇಕಾದ ಕೆಲಸ ಸರಳವಿದೆ. ಸಂವಿಧಾನದ ಮೂಲಗಳು ಖಚಿತವಾಗಿವೆ. ಪ್ರಜಾಪ್ರಭುತ್ವವಾದಿ ಸಂಸ್ಕೃತಿಯ ಮೂಲಗಳು ಕೂಡ ಸ್ಪಷ್ಟವಾಗಿವೆ. ಇವುಗಳನ್ನು ಮಾತ್ರ ಪಠ್ಯಗಳು ಹೊಂದಿರಲಿ. ಅದು ಕೂಡ ಕಲಿಯುತ್ತಿರುವ ಜ್ಞಾನದ ಅವಿನಾ ಭಾಗವಾಗಿ ಮಾತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)