varthabharthi


ನಿಮ್ಮ ಅಂಕಣ

ಪಠ್ಯಪರಿಷ್ಕರಣೆ: ಹಿಂದುತ್ವ ಪ್ರತಿಗಾಮಿಗಳ ಬಹುತ್ವ ವಿರೋಧಿ ಕ್ರಿಯಾಯೋಜನೆ

ವಾರ್ತಾ ಭಾರತಿ : 25 May, 2022
ಡಾ.ಬಿ.ಪಿ.ಮಹೇಶ ಚಂದ್ರ ಗುರು

ಇತ್ತೀಚೆಗೆ ಕರ್ನಾಟಕದಲ್ಲಿ ಮೋದಿ ಪ್ರಭುತ್ವದಡಿಯಲ್ಲಿ ಜರುಗುತ್ತಿರುವ ಪಠ್ಯಪರಿಷ್ಕರಣೆ ಬಹುತ್ವ ವಿರೋಧಿ ಹಿಂದುತ್ವಕ್ಕೆ ನವಪೀಳಿಗೆಯ ಗುಲಾಮರನ್ನು ಸೃಷ್ಟಿಸುವ ಗೌಪ್ಯ ಕಾರ್ಯಸೂಚಿಯನ್ನು ಹೊಂದಿದೆ. ಶಿಕ್ಷಣ ತಜ್ಞರೂ ಅಲ್ಲದ, ಸಮಾನತೆಯ ಕಡುವೈರಿಯೂ ಆದ ಸಂಘ ಪರಿವಾರಿ ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸಲು ಹೊರಟಿರುವ ಕರ್ನಾಟಕ ಸರಕಾರದ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭಗತ್‌ಸಿಂಗ್ ಭಾರತಾಂಬೆಯ ಸುಪುತ್ರ, ಸ್ವಾತಂತ್ರ್ಯ ಸೇನಾನಿ ಮತ್ತು ರಾಷ್ಟ್ರೀಯತೆಗಾಗಿ ತನ್ನ ಬದುಕನ್ನೇ ಸಮರ್ಪಿಸಿದ ಹುತಾತ್ಮ. ವೈದಿಕಶಾಹಿಯ ಹುನ್ನಾರಗಳನ್ನು ಪ್ರಬಲವಾಗಿ ವಿರೋಧಿಸಿ ಪುಟಗಟ್ಟಲೆ ಜೈಲ್ ಡೈರಿ ಬರೆದು ಯುವಜನರನ್ನು ಎಚ್ಚರಿಸಿದ ಭಗತ್‌ಸಿಂಗ್ ಶ್ರೇಷ್ಠ ಅನುಕರಣೀಯ ವ್ಯಕ್ತಿ ಮತ್ತು ಶಕ್ತಿ. ಧರ್ಮಕ್ಕಿಂತ ದೇಶ ದೊಡ್ಡದು, ಗುಲಾಮಗಿರಿಗಿಂತ ಸ್ವರಾಜ್ಯ ದೊಡ್ಡದು ಮತ್ತು ಹಿಂದುತ್ವಕ್ಕಿಂತ ಸಮಾನತೆಯನ್ನು ಆಧರಿಸಿದ ಬಂಧುತ್ವ ದೊಡ್ಡದು ಎಂದು ಬೋಧಿಸಿದ ಭಗತ್‌ಸಿಂಗ್ ವಿಚಾರಧಾರೆ ಸಾರ್ವಕಾಲಿಕ ಶ್ರೇಷ್ಠತೆ ಹೊಂದಿದೆ. ಇವರನ್ನು ಕುರಿತ ಪಠ್ಯ ಕೈಬಿಟ್ಟು ನುಡಿದಂತೆ ನಡೆಯದ ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸುವುದು ಸತ್ಯಕ್ಕೆ ಬಗೆದ ಅಪಚಾರವಾಗಿದೆ. ಕೇರಳದಲ್ಲಿ ಸಾಮಾಜಿಕ ಆಂದೋಲನ ನಡೆಸಿ ವೈದಿಕರ ಹುನ್ನಾರಗಳನ್ನು ನಿಷ್ಕ್ರಿಯಗೊಳಿಸಿ ಸಮಸಮಾಜ ನಿರ್ಮಾಣಕ್ಕೆ ಅಹರ್ನಿಶಿ ದುಡಿದ ನಾರಾಯಣ ಗುರು ಕುರಿತ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ’ ಎಂಬ ಪಠ್ಯವನ್ನು ಕೈಬಿಟ್ಟಿರುವುದು ಅವಿವೇಕದ ನಡೆಯಾಗಿದೆ. ‘‘ಮನುಷ್ಯರೆಲ್ಲರೂ ಒಂದೇ, ಮನುಷ್ಯ ಧರ್ಮವೊಂದೇ, ಕೂಡಿ ಬಾಳಿ ಪ್ರಗತಿ ಸಾಧಿಸಿ’’ ಎಂದು ನುಡಿದ ನಾರಾಯಣ ಗುರುವಿಗಿಂತ ಮಿಗಿಲಾದ ಗುರು ಮತ್ತೊಬ್ಬರಿಲ್ಲವೆಂದು ಕೇರಳದ ಜನ ಬಲವಾಗಿ ನಂಬಿ ಹಿಂದುತ್ವವಾದಿಗಳಿಗೆ ರಾಜ್ಯಾಧಿಕಾರದ ಬಾಗಿಲು ಬಂದ್ ಮಾಡಿರುವುದು ನಿಜಕ್ಕೂ ಒಂದು ಯಶೋಗಾಥೆ. ಕೇರಳವನ್ನು ಭಾರತದಲ್ಲಿ ಒಂದು ಮಾದರಿ ರಾಜ್ಯವನ್ನಾಗಿ ರೂಪಿಸುವಲ್ಲಿ ನಾರಾಯಣ ಗುರುಗಳ ಶಿಷ್ಯಕೋಟಿ ವಹಿಸಿರುವ ಪಾತ್ರ ಅನನ್ಯವಾದುದು. ಇಂತಹ ಮಹಾಪುರುಷರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಯುವಪೀಳಿಗೆಗೆ ಬೋಧಿಸುವುದು ಔಚಿತ್ಯಪೂರ್ಣವಾಗಿದೆ.

ಭಾರತದ ಮಹಾನ್ ವಿಚಾರವಾದಿಗಳಲ್ಲೊಬ್ಬರಾದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಕುರಿತ ಪಠ್ಯವನ್ನು ಕೈಬಿಡುವ ನಡೆ ಅನಪೇಕ್ಷಣೀಯವಾದುದು. ತಮಿಳುನಾಡಿನಲ್ಲಿ ವೈದಿಕಶಾಹಿಯ ವಿರುದ್ಧ ಬಹುಸಂಖ್ಯಾತ ಹಿಂದುಳಿದವರನ್ನು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಸಂಘಟಿಸಿ ದ್ರಾವಿಡ ಚಳವಳಿಯನ್ನು ಮುನ್ನಡೆಸಿದ ಪೆರಿಯಾರ್ ಮಹಾನ್ ಕ್ರಾಂತಿಕಾರಿ. ಕೇರಳದ ವೈಕಂನಲ್ಲಿ ಅಸ್ಪಶ್ಯರಿಗೆ ಸಾರ್ವಜನಿಕ ರಸ್ತೆಯ ಬಳಕೆ ಮತ್ತು ದೇವಾಲಯ ಪ್ರವೇಶ ಹಕ್ಕಿನ ಹೋರಾಟವನ್ನು ಮುನ್ನಡೆಸಿದ ಧೀಮಂತ ಪೆರಿಯಾರ್. ಅವರ ಅವಿಶ್ರಾಂತ ಹೋರಾಟದ ಫಲವಾಗಿ ತಮಿಳುನಾಡಿನಲ್ಲಿ ಅಬ್ರಾಹ್ಮಣರಿಗೆ ರಾಜ್ಯಾಧಿಕಾರ ಪ್ರಾಪ್ತವಾಯಿತು. ಕರುಣಾನಿಧಿಯವರ ಡಿಎಂಕೆ ಮತ್ತು ಅಣ್ಣಾದೊರೈ ಅವರ ಎಐಎಡಿಎಂಕೆ ಸರಕಾರಗಳು ತಮಿಳುನಾಡಿನಲ್ಲಿ ವೈದಿಕಶಾಹಿಯನ್ನು ಪ್ರಜಾಸತ್ತಾತ್ಮಕವಾಗಿ ಮಣಿಸಲು ಪೆರಿಯಾರ್ ಬಹುಮುಖ್ಯ ಕಾರಣ. ಇಂದಿಗೂ ತಿಪ್ಪರಲಾಗ ಹಾಕಿದರೂ ಹಿಂದುತ್ವವಾದಿಗಳಿಗೆ ತಮಿಳುನಾಡಿನಲ್ಲಿ ರಾಜ್ಯಾಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಮಹಾನ್ ಸಾಧಕರ ಪಠ್ಯವನ್ನು ಕೈಬಿಡುವ ಪ್ರಯತ್ನ ಸಲ್ಲದು.

18ನೇ ಶತಮಾನದಲ್ಲಿ ಭರತಖಂಡದ ಹೆಬ್ಬುಲಿಯಾಗಿ ಬ್ರಿಟಿಷರ ವಸಾಹತುವಾದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದ ಮಹಾನ್ ರಾಷ್ಟ್ರೀಯವಾದಿ ಹಾಗೂ ಹುತಾತ್ಮ ಟಿಪ್ಪುಸುಲ್ತಾನ್. ಇವರ ವಿದ್ವತ್ತು, ದೂರದರ್ಶಿತ್ವ, ಒಳಗೊಳ್ಳುವ ಮನೋಧರ್ಮ ಮತ್ತು ಹೃದಯವಂತಿಕೆಗಳಿಂದ ಮೈಸೂರು ರಾಜ್ಯ ದಕ್ಷಿಣ ಭಾರತದಲ್ಲಿ ಒಂದು ಮಾದರಿ ರಾಜ್ಯವಾಗಿ ರೂಪುಗೊಂಡಿತು. ಟಿಪ್ಪು ತಮ್ಮ ಮೌಲ್ಯಾಧಾರಿತ ಹೋರಾಟ, ರಾಜ್ಯಧರ್ಮ, ಸಾಧನೆ ಮತ್ತು ತ್ಯಾಗಗಳಿಂದ ಭಾರತದ ಸಾರ್ವಜನಿಕ ಆಡಳಿತ ಮತ್ತು ಅಭಿವೃದ್ಧಿಗಳಿಗೆ ಚಾರಿತ್ರಿಕ ಆಯಾಮ ನೀಡಿದ್ದಾರೆ. ಭಾರತದ ಸಾರ್ವಭೌಮತ್ವಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪುವಿಗೆ ಸರಿಸಮಾನರಾದ ದೊರೆ ಮತ್ತೊಬ್ಬರಿಲ್ಲ. ಇವರನ್ನು ಕುರಿತ ‘ಮೈಸೂರು ಹುಲಿ’ ಪಾಠವನ್ನು ಪಠ್ಯದಿಂದ ಕೈಬಿಟ್ಟಿರುವುದು ನೈಜ ಇತಿಹಾಸಕ್ಕೆ ಬಗೆದ ಅಪಚಾರವಾಗಿದೆ.

ಪರಿಷ್ಕೃತ ಪಠ್ಯದಲ್ಲಿ ಬ್ರಿಟಿಷರ ಮುಂದೆ ಮಂಡಿಯೂರಿ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಒತ್ತೆಯಿಟ್ಟ ಹೆಡಗೆವಾರ್ ಎಂಬ ಸಂಘ ಪರಿವಾರಿಗಳ ಪಿತಾಮಹರ ಭಾಷಣವನ್ನು ಸೇರ್ಪಡೆಗೊಳಿಸಿರುವುದು ಪ್ರಶ್ನಾರ್ಹ ನಡೆಯಾಗಿದೆ. ಗಾಂಧಿ, ನೆಹರೂ, ಪಟೇಲ್ ಮೊದಲಾದ ರಾಷ್ಟ್ರ ನಾಯಕರು ಎಲ್ಲ ಧರ್ಮೀಯರು ಮತ್ತು ಜನಾಂಗಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಒಗ್ಗೂಡಿಸಿ ತಮ್ಮ ಬದುಕನ್ನೇ ಪಣವಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ಹೆಡಗೆವಾರ್, ಗೋಳ್ವಾಲ್ಕರ್ ಮತ್ತು ಸಾವರ್ಕರ್ ಎಂಬ ಹುಟ್ಟು ಮನುವಾದಿಗಳು ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ವಿಶೇಷ ಭತ್ತೆ ಸ್ವೀಕರಿಸಿ ಸೆರೆವಾಸವನ್ನು ತಪ್ಪಿಸಿಕೊಂಡರೆಂಬುದಕ್ಕೆ ಐತಿಹಾಸಿಕ ಸಂದರ್ಭಗಳು ಮತ್ತು ದಾಖಲೆಗಳಿವೆ. ಇವರ ತಪ್ಪೊಪ್ಪಿಗೆ ಪತ್ರಗಳೇ ಇವರ ರಾಷ್ಟ್ರ ವಿರೋಧಿ ನಿಲುವು ಮತ್ತು ಚಟುವಟಿಕೆಗಳಿಗೆ ಪುರಾವೆಯಾಗಿವೆ. ಈ ಆಧುನಿಕ ತ್ರಿಮೂರ್ತಿಗಳು ರಾಷ್ಟ್ರಕ್ಕಿಂತ ಧರ್ಮ ಮುಖ್ಯವೆಂದು ಪ್ರತಿಪಾದಿಸಿದ ಅಪ್ಪಟ ಪ್ರತಿಗಾಮಿಗಳು. ಹೆಡಗೆವಾರ್ ಭಾಷಣವನ್ನು ಪರಿಷ್ಕೃತ ಪಠ್ಯದಲ್ಲಿ ಸೇರಿಸಿ ಯುವಪೀಳಿಗೆಯನ್ನು ಹಿಂದುತ್ವದ ಗುಲಾಮರನ್ನಾಗಿಸುವುದು ತರವಲ್ಲ. ಹಿಂದೂ ಧರ್ಮದ ಹೆಸರಿನಲ್ಲಿ ಬಹುಸಂಖ್ಯಾತ ಶೋಷಿತ ಸಮುದಾಯಗಳಿಗೆ ಮಂಕುಬೂದಿ ಎರಚುತ್ತಿರುವ ಸಂಘ ಪರಿವಾರಿ ಪ್ರಾಯೋಜಿತ ಸರಕಾರದ ನಡೆ ಒಪ್ಪುವಂತಹದ್ದಲ್ಲ.

ಸ್ವಾಮಿ ವಿವೇಕಾನಂದರು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಪ್ರವರ್ತಕ, ವೈಚಾರಿಕ - ವೈಜ್ಞಾನಿಕ ಬೌದ್ಧ ಧರ್ಮ ಸಂಸ್ಥಾಪಕ ಬುದ್ಧನನ್ನು ತಮ್ಮ ಆದರ್ಶವನ್ನಾಗಿ ಸ್ವೀಕರಿಸಿದರು. ಬುದ್ಧ ನನ್ನ ಇಷ್ಟ ದೇವತೆ ಎಂದು ಘೋಷಿಸಿ ಧರ್ಮ ಸಹಿಷ್ಣುತೆ, ಧರ್ಮ ನಿರಪೇಕ್ಷತೆ ಮತ್ತು ಮಾನವೀಯತೆಗಳನ್ನು ಸ್ವಾಮಿ ವಿವೇಕಾನಂದರು ಬದುಕಿನುದ್ದಕ್ಕೂ ಅತ್ಯಂತ ನಿಷ್ಠೆಯಿಂದ ಪ್ರತಿಪಾದಿಸಿದರು. ಪ್ರಬುದ್ಧ ಭಾರತದ ಸಂಕೇತವಾಗಿ ಸ್ವಾಮಿ ವಿವೇಕಾನಂದರು ಏಕತ್ವ - ಹಿಂದುತ್ವಗಳ ಶೋಷಣಾ ಪ್ರವೃತ್ತಿಗಳು ಮತ್ತು ಅನಿಷ್ಟಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದರು. ಇಂತಹ ಮಹತ್ವದ ಅಂಶಗಳನ್ನು ದುರುದ್ದೇಶಪೂರ್ವಕವಾಗಿ ಕೈಬಿಟ್ಟು ವಿವೇಕಾನಂದರು ದೇಶದ ಸಂಸ್ಕೃತಿ ಮತ್ತು ವೇದಾಂತಗಳ ಉತ್ತೇಜಕರೆಂಬುದಾಗಿ ಬಣ್ಣಿಸಿ ಯುವಜನರ ಸತ್ಯದರ್ಶನ ಹಕ್ಕನ್ನು ಕಸಿಯಲು ಸರಕಾರ ಮುಂದಾಗಿರುವುದು ಒಳ್ಳೆಯದಲ್ಲ. ಸ್ವರಾಜ್ಯದ ರೂವಾರಿ ಮಹಾತ್ಮಾಗಾಂಧಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಪ್ರಖರ ನಾಸ್ತಿಕವಾದಿ ಎ.ಎನ್.ಮೂರ್ತಿರಾವ್, ಆಧುನಿಕ ಅಲ್ಲಮ ಎಲ್.ಬಸವರಾಜು ಮೊದಲಾದವರ ವಿಚಾರಧಾರೆಗಳಿಗೆ ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಎಳ್ಳು ನೀರು ಬಿಟ್ಟಿದೆ. ಪ್ರಗತಿಶೀಲ ಸಾಹಿತಿಗಳಾದ ಬಿ.ಟಿ.ಲಲಿತಾನಾಯಕ್, ಸಾರಾ ಅಬೂಬಕರ್, ಅರವಿಂದ ಮಾಲಗತ್ತಿ, ಕೆ.ನೀಲಾ ಇನ್ನೂ ಮುಂತಾದವರ ಕೋಮು ಸಹಿಷ್ಣುತೆ ಮತ್ತು ವೈಚಾರಿಕ ಚಿಂತನೆಗಳಿಗೆ ಕೊಕ್ ನೀಡಿ ಯುವಜನರ ಸಮಗ್ರ ಕಲಿಕೆಯ ಹಕ್ಕನ್ನು ನಯವಾಗಿ ನಿರಾಕರಿಸಲಾಗಿದೆ. ಇಂತಹ ಸಾಹಿತಿಗಳ ಮೂಲನಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪಾತ್ರಗಳಿಗೆ ಸಂಬಂಧಿಸಿದ ಮಹತ್ವದ ವಿವರಗಳನ್ನು ಪಠ್ಯದಿಂದ ದುರುದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.

ಅಂತೆಯೇ ಕಟ್ಟರ್ ಹಿಂದುತ್ವವಾದಿಗಳ ಪಠ್ಯಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿ ಯಥಾಸ್ಥಿತಿವಾದದ ಸಮರ್ಥಕರಿಗೆ ಮಣೆ ಹಾಕಿ ಮಕ್ಕಳ ಮುಗ್ಧ ಮನಸ್ಸುಗಳನ್ನು ಮಲಿನಗೊಳಿಸಲು ಸರಕಾರ ಹೊರಟಿರುವುದು ಖಂಡನೀಯ. ನಿಜವಾದ ಆದರ್ಶಪುರುಷರನ್ನು ಬದಿಗೊತ್ತಿ ನಕಲಿ ಆದರ್ಶ ಪುರುಷರನ್ನು ವೈಭವೀಕರಿಸುವ ಸಂಘ ಪರಿವಾರಿಗಳ ನಡೆ ಸಾಧುವಲ್ಲ. ಶಿಕ್ಷಣ ತಜ್ಞರೇ ಅಲ್ಲದ ರೋಹಿತ್ ಚಕ್ರತೀರ್ಥರನ್ನು ಮುಂದಿಟ್ಟುಕೊಂಡು ಪಠ್ಯ ಪರಿಷ್ಕರಣೆ ಮಾಡಲು ಹೊರಟಿರುವುದು ಕೇವಲ ಕೇಸರೀಕರಣ ಗೌಪ್ಯ ಕಾರ್ಯಸೂಚಿಯಲ್ಲ. ಇದೊಂದು ಹಿಂದುತ್ವದ ಅಜೆಂಡಾವನ್ನು ಸಾಂಸ್ಥೀಕರಣಗೊಳಿಸಿ ಬಹುಜನರ ಮೂಲಭೂತ ಹಕ್ಕುಗಳನ್ನು ದಮನಗೊಳಿಸುವ ಅಮಾನವೀಯ ಕ್ರಿಯಾಯೋಜನೆಯಾಗಿದೆ. ಪ್ರಜ್ಞಾವಂತ ನಾಗರಿಕರು ಬೀದಿಗಿಳಿದು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ದೇಶದ ಸಂಸ್ಕೃತಿ, ಇತಿಹಾಸ, ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ರಕ್ಷಿಸುವುದು ಇಂದು ಅನಿವಾರ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)