ಜಮ್ಮು ಕಾಶ್ಮೀರ: ಎನ್ಕೌಂಟರ್ ನಲ್ಲಿ ಮೂವರು ಶಂಕಿತ ಉಗ್ರರ ಹತ್ಯೆ
ಶ್ರೀನಗರ, ಮೇ 25: ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆ ಬುಧವಾರ ನಡೆಸಿದ ಎನ್ಕೌಂಟರ್ ನಲ್ಲಿ ಜೈಶೆ ಮುಹಮ್ಮದ್ (ಜೆಇಎಂ)ನ ಮೂವರು ಶಂಕಿತ ಪಾಕಿಸ್ತಾನಿ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಕ್ರೀರಿ ಪ್ರದೇಶದ ನಜಿಭತ್ ಕ್ರಾಸಿಂಗ್ನಲ್ಲಿ ನಡೆದ ಈ ಎನ್ಕೌಂಟರ್ನಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡ ಮೃತಪಟ್ಟಿದ್ದಾರೆ. ಕಣಿವೆಯಾದ್ಯಂತ ಭದ್ರತಾ ಪಡೆ ರೂಪಿಸಿದ್ದ ತಪಾಸಣಾ ಠಾಣೆಗಳಲ್ಲಿ ಒಂದರಲ್ಲಿ ಈ ಎನ್ಕೌಂಟರ್ ನಡೆದಿದೆ ಎಂದು ಇನ್ಸ್ಪೆಕ್ಟರ್ ವಿಜಯ ಕುಮಾರ್ ಅವರು ಹೇಳಿದ್ದಾರೆ. ‘‘ಕಾಶ್ಮೀರದಾದ್ಯಂತ ಬುಧವಾರ ತಪಾಸಣಾ ಠಾಣೆ ರೂಪಿಸಲಾಗಿತ್ತು. ಇದರಲ್ಲಿ ಒಂದು ತಪಾಸಣಾ ಠಾಣೆ ಕ್ರೀರಿ ಪ್ರದೇಶದ ನಜಿಭತ್ ಕ್ರಾಸಿಂಗ್ನಲ್ಲಿ ಇದೆ. ಅಲ್ಲಿ ಎನ್ಕೌಂಟರ್ ನಡೆದಿದೆ. ಈ ಎನ್ಕೌಂಟರ್ನಲ್ಲಿ ಜೈಶೆ ಮುಹಮ್ಮದ್ನ ಶಂಕಿತ ಪಾಕಿಸ್ತಾನಿ ಉಗ್ರರು ಸಾವನ್ನಪ್ಪಿದ್ದಾರೆ’’ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ. ಎನ್ಕೌಂಟರ್ನಲ್ಲಿ ಓರ್ವ ಪೊಲೀಸ್ ಕೂಡ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.