varthabharthi


ಈ ಹೊತ್ತಿನ ಹೊತ್ತಿಗೆ

ಅನನ್ಯತೆಯ ಹುಡುಕಾಟದಲ್ಲಿ

ವಾರ್ತಾ ಭಾರತಿ : 29 May, 2022
ರಾಧಾಕೃಷ್ಣ ಬೆಳ್ಳೂರು

ತುಳು ಕಾದಂಬರಿಗಳ ಬೆಳೆ ತೆನೆಬಿರಿವ ವೇಗ ಇತ್ತೀಚೆಗೆ ಹೆಚ್ಚಾಗುತ್ತಿದೆ. ನಾಟಕ, ಕವಿತೆ, ಸಣ್ಣಕತೆ ಇತ್ಯಾದಿ ಪ್ರಕಾರಗಳಿಗಿಂತ ಕಾದಂಬರಿಯೇ ತುಳು ಲೇಖಕರಿಗೆ ಹೆಚ್ಚು ಹತ್ತಿರವಾಗುತ್ತಿದೆ. ತುಳುವಿನ ಪ್ರಾದೇಶಿಕ ಉಪಭಾಷೆಗಳ ಶಬ್ದ ಸಂಪತ್ತು ಬರವಣಿಗೆಯ ಮುನ್ನೆಲೆಯಲ್ಲಿ ಚಲಾವಣೆಗೆ ಬಂದು ಭಾಷೆಯ ಬಳಕೆಯ ವ್ಯಾಪ್ತಿ ಹೆಚ್ಚುತ್ತಿದೆ. ಸಾಹಿತ್ಯ ರಚನೆಗೆ ಬೇಕಾದ ಹೊಸ ಪರಿಭಾಷೆ ವೇಗವಾಗಿ ರೂಪುಗೊಳ್ಳುತ್ತಿದೆ. ಕೃಷಿ ಸಂಬಂಧಿತ ವ್ಯವಹಾರಕ್ಕಷ್ಟೇ ಸೀಮಿತವಾಗಿದ್ದ ತುಳುವಿಗೆ ಸಾಹಿತ್ಯ ಮತ್ತು ಶಿಕ್ಷಣದ ಮಾಧ್ಯಮವಾಗುವ ಶಕ್ತಿ ಕೈಗೂಡುತ್ತಲೇ ಇದೆ.

ಇತರ ಪ್ರಮುಖ ದ್ರಾವಿಡ ಭಾಷೆಗಳೊಂದಿಗೆ ಹೋಲಿಸಿದರೆ ಹಲವು ‘ಇಲ್ಲ’ಗಳ ಕೊರತೆಯ ಕೀಳರಿಮೆಯಿಂದ ಕಂಗೆಟ್ಟಿದ್ದ ತುಳುವಿಗೆ ಈಗ ಸಣ್ಣ ಪ್ರಮಾಣದಲ್ಲಾದರೂ ಬದುಕಿನ ಹಲವು ನೆಲೆಗಳಿಗೆ ಪ್ರವೇಶಿಸುವ ಅವಕಾಶ ಸಿಕ್ಕಿದ್ದನ್ನು ನೆನಪಿಸಲೇ ಬೇಕು. ಬೆರಳೆಣಿಕೆಯಷ್ಟಾದರೂ ಪ್ರಾಚೀನ ಲಿಖಿತ ಕಾವ್ಯಗಳು ಸಿಕ್ಕಿದ್ದು, ಆಧುನಿಕ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತುಳುವರು ಬರೆಯ ಹೊರಟದ್ದು, ದ್ವಿತೀಯ ಭಾಷೆಯಾಗಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ತುಳುವು ಕಲಿಕೆಯ ವಿಷಯವಾದದ್ದು, ತುಳು ಮಾಧ್ಯಮದಲ್ಲಿ ತುಳು ಸಂಶೋಧನಾ ಮಹಾಪ್ರಬಂಧಗಳನ್ನು ಬರೆಯುವ ಅವಕಾಶ ದೊರೆತದ್ದು, ತುಳು ಭಾಷೆಯಲ್ಲಿ ಶಾಸನಗಳು ಸಿಕ್ಕಿದ್ದು -ಹೀಗೆ ಹಲವು ಧನಾತ್ಮಕ ಅಂಶಗಳು ಕೈಗೂಡುತ್ತ ಬಂದಾಗ ಬರೆಯುವವರ, ಮಾತನಾಡುವವರ ಉತ್ಸಾಹ ತಾನಾಗಿ ಹೆಚ್ಚುತ್ತದೆ; ಬಲಿತ ಬೇರುಗಳಿವೆ ಎಂಬ ನಂಬಿಕೆ ಬಂದಾಗ ಚಿಗುರುವ ವೇಗವೂ ಹೆಚ್ಚುತ್ತದೆ.

ಲಿಪಿಯಲ್ಲ, ಭಾಷೆ ಮುಖ್ಯ. ಲಿಪಿ ಯಾವುದಾದರೂ ಸರಿ, ಉಚ್ಚಾರಕ್ಕೆ ಹೊಂದಿಕೊಳ್ಳುವ ಲಿಪಿಸಂಕೇತಗಳಿದ್ದರೆ ಸಾಕು, ಸದ್ಯ ಕನ್ನಡ ಲಿಪಿ ತುಳುವಿಗೆ ಹೊಂದಿಕೊಂಡಿದೆ. ಹಿಂದೆ ತುಳುನಾಡಿನಲ್ಲಿ ಸಂಸ್ಕೃತದ ಬರವಣಿಗೆಗಾಗಿ ಬಳಕೆಯಾಗುತ್ತಿದ್ದ ಪಲ್ಲವ ಮೂಲದ ಲಿಪಿ ತುಳು ಮಹಾಕಾವ್ಯಗಳ ಮತ್ತು ಶಾಸನಗಳ ಬರವಣಿಗೆಗೆ ಬಳಕೆಯಾಗಿತ್ತು. ಗ್ರಂಥ ಲಿಪಿ, ತಿಗಳಾರಿ ಲಿಪಿ, ತುಳುಲಿಪಿ, ಆರ್ಯ ಎಂದು ಮುಂತಾಗಿ ಗುರುತಿಸಿಕೊಂಡಿದ್ದ ಆ ಲಿಪಿಸಂಪ್ರದಾಯ ಈಗ ಮಲಯಾಳಕ್ಕೆ ಬಳಕೆಯಾಗುತ್ತಿದೆ. ಲಿಪಿ ಗ್ರಾಂಥಿಕತೆಯ ಸಂಕೇತವಾದ್ದರಿಂದ ಇತಿಹಾಸದಿಂದ ಅಂತಹ ಧನಾತ್ಮಕ ಸಂಗತಿಯೊಂದನ್ನು ತನ್ನದಾಗಿಸುವ ಅವಕಾಶವೂ ತುಳುವಿನ ಮುಂದಿದೆ. ಲಿಪಿ ಮತ್ತು ಭಾಷೆಯ ಸಂಬಂಧಕ್ಕಿಂತ ಭಾಷೆ ಮತ್ತು ಸಂಸ್ಕೃತಿಯ ಸಂಬಂಧ ಹೆಚ್ಚು ಬಿಗುವಾದದ್ದು ಎನ್ನುವುದನ್ನು ಗಮನಿಸದೆ ಬಿಡುವಂತಿಲ್ಲ. ತುಳುನಾಡಿನಿಂದ ಬಂದ ಕನ್ನಡ ಕಥನಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಟ್ಟಿಕೊಟ್ಟದ್ದು ತುಳು ಸಂಸ್ಕೃತಿಯನ್ನೇ ಹೊರತು ಕನ್ನಡದ್ದನ್ನಲ್ಲ. ‘ಚೋಮನ ದುಡಿ’ ಕನ್ನಡ ಭಾಷೆಯ ಕಾದಂಬರಿಯೇ ಹೊರತು ಕನ್ನಡ ಕಾದಂಬರಿ ಅಲ್ಲ ಎಂದು ವಾದ ಮಂಡಿಸಲು ಅವಕಾಶ ದೊರೆಯುವುದು ಇದೇ ಕಾರಣಕ್ಕೆ. ತುಳುವನಾದ ಚೋಮ, ತುಳುನಾಡಿನಲ್ಲಿ ನಡೆಯುವ ಕಥೆ, ತುಳು ಸಂಸ್ಕೃತಿಯ ಸಾಂದ್ರವಾದ ವಿವರಗಳೊಂದಿಗೆ ಕನ್ನಡ ಭಾಷೆಯಲ್ಲಿ ರೂಪುಗೊಂಡಿದೆ ಅಷ್ಟೆ.

ತುಳು ಶ್ರೀಮಂತವಾದ ಜಾನಪದ ಹಿನ್ನೆಲೆಯುಳ್ಳ ಭಾಷೆ, ಭತ್ತದ ಕೃಷಿ, ಭೂತಾರಾಧನೆ ಮತ್ತು ನಾಗಾರಾಧನೆಗಳೊಂದಿಗೆ ಅನನ್ಯತೆಯನ್ನು ಗುರುತಿಸಿಕೊಂಡ ಭಾಷೆ, ಭತ್ತದ ಕೃಷಿ ಮತ್ತು ಗುತ್ತಿನ ಆಡಳಿತದ ಶಿಥಿಲೀಕರಣದೊಂದಿಗೆ, ಹತ್ತೈವತ್ತು ವರ್ಷಗಳಿಂದ ಈಚೆಗೆ ಈ ಅನನ್ಯತೆ ತೌಳವ ಬದುಕಿನಿಂದ ಕಳಚಿಕೊಳ್ಳುತ್ತ ಬಂತು. ಹಾಗೆ ಕಳಚಿಕೊಂಡ ಅನನ್ಯತೆಯನ್ನು ಕಥಾ ವಸ್ತುವಿನ ರೂಪದಲ್ಲಿ ದಾಖಲಿಸುವ ಪ್ರಯತ್ನಗಳು ಹೆಚ್ಚಿನ ತುಳು ಕಾದಂಬರಿಗಳಲ್ಲೂ ನಿಚ್ಚಳವಾಗಿ ಕಾಣಿಸಿಕೊಳ್ಳುತ್ತವೆ. ಭತ್ತದ ಕೃಷಿ, ಅದಕ್ಕೆ ಸಂಬಂಧಿಸಿದ ನಂಬಿಕೆಗಳು, ಭೂತಾರಾಧನೆ, ಗುತ್ತಿನ ಮನೆ ಮುಂತಾಗಿ ಕಳೆದುಕೊಳ್ಳುತ್ತಲೇ ಇರುವ ಸಾಂಸ್ಕೃತಿಕ ಅನನ್ಯತೆಗಳನ್ನು ಪ್ರಾದೇಶಿಕ ಕಥಾನಕದ ಮೂಲಕ ಕಟ್ಟಿಕೊಡುವ ತುಳು ಲೇಖಕರ ಆಸಕ್ತಿಗೆ ಇತರ ಭಾಷೆಗಳ ಮುಂದೆ ತುಳುವನ್ನು ಸ್ಥಾಪಿಸುವ ಉದ್ದೇಶವೂ ಇಲ್ಲದಿಲ್ಲ. ತನ್ನನ್ನು ಜಗತ್ತಿನ ಮುಂದೆ ತೆರೆದಿಡುವುದರೊಂದಿಗೆ ತನ್ನೊಳಗೆ ತಾನು ಹುದುಗುವ ಮಿತಿಯೂ ಈ ರೀತಿಯ ಬರವಣಿಗೆಗಳಿಗೆ ಇರುವುದು ಸುಳ್ಳಲ್ಲ.

ಯಾಕೆ ತುಳು ಕಾದಂಬರಿಗಳು ತುಳುವಿನ ಸಾಂಸ್ಕೃತಿಕ ಅನನ್ಯತೆಗಳನ್ನು ಮೆಲುಕು ಹಾಕುವ ನೆಲೆಯಿಂದ ಆಚೆಗಿನ ವಸ್ತುವನ್ನು ಆಯ್ದುಕೊಂಡು ಬೆಳೆಯುವುದಿಲ್ಲ ಎನ್ನುವ ಪ್ರಶ್ನೆಯನ್ನೆತ್ತಲು ಈಗ ಸರಿಯಾದ ಕಾಲ ಎಂದು ನಾನು ಭಾವಿಸುತ್ತೇನೆ. ತುಳುನಾಡನ್ನು ಹೊರ ಜಗತ್ತಿನೊಂದಿಗೆ, ಸಮಕಾಲೀನ ತಲ್ಲಣಗಳೊಂದಿಗೆ, ಸಾಂಸ್ಕೃತಿಕ ಅನನ್ಯತೆಯ ಸ್ಥಾಪನೆಗಿಂತ ಅಲ್ಲಿನ ಸಮಸ್ಯೆಗಳ ಸೂಕ್ಷ್ಮ್ಮಗಳೊಂದಿಗೆ ಜೋಡಿಸಲು ನಡೆಸುವ ಕೆಲವು ಪ್ರಯತ್ನಗಳು ಸಾಂದರ್ಭಿಕವಾಗಿ ನಡೆದಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ತುಳುನಾಡಿನ ಸಮಕಾಲೀನ ತಲ್ಲಣಗಳನ್ನು ಹಿಡಿದಿಡಲು ಕಾದಂಬರಿ ಒಂದು ಪ್ರಮುಖ ಮಾಧ್ಯಮವಾಗದ ಹೊರತು ತುಳು ಕಾದಂಬರಿ ಪ್ರಪಂಚ ಇತರ ಭಾಷೆಗಳ ಜತೆ ಪೈಪೋಟಿ ನಡೆಸುವುದು ಸಾಧ್ಯವಿಲ್ಲ.

ಪ್ರಸ್ತುತ ಕಾದಂಬರಿ ಒಂದು ಭಿನ್ನ ಪ್ರಯೋಗದಂತೆ ಭಾಸವಾಗುತ್ತದೆ. ಮೇಲುನೋಟಕ್ಕೆ ಜನಪ್ರಿಯ ಓದಿನ ಕಥಾನಕ ಕಂಡುಬಂದರೂ ಆಳದಲ್ಲಿ ಕೆಲವು ಸೂಕ್ಷ್ಮಗಳನ್ನು ಕಟ್ಟಿಕೊಂಡಿದೆ. ಮೆರೆಯುವ ಗುತ್ತುಗಳ ವೈಭವದ ಚಿತ್ರಕ್ಕಿಂತ ಆಚೆಗೆ, ಗುತ್ತಿನ ಕೊನೆಗಾಲದ ಏದುಸಿರನ್ನು ಪ್ರತಿನಿಧಿಸುವ ಚಿತ್ರವನ್ನು ಇದು ತುಳುನಾಡಿನ ಕ್ಯಾನ್‌ವಾಸಲ್ಲಿ ಕಟ್ಟಿಕೊಡುತ್ತದೆ. ಒಂದು ಸಂಸ್ಕೃತಿಯ ಧನಾತ್ಮಕ ವೈದೃಷ್ಯವನ್ನು ವಿವರಿಸುವ ಬದಲು ಕೊರತೆಗಳನ್ನು ವಿಶ್ಲೇಷಿಸುತ್ತದೆ. ತಲೆಮಾರಿನ ಅಂತರದಲ್ಲಿ ಮುಂಬೈಗೆ ಹೋಗಿ, ಅಲ್ಲಿ ಬದುಕನ್ನು ಕಟ್ಟಿಕೊಂಡು, ನಂತರದ ತಲೆಮಾರು ವಿದೇಶಕ್ಕೆ ಹೋಗಿ, ಊರ ಸಂಪರ್ಕವನ್ನು ಕಳೆದುಕೊಂಡು, ಮೂರನೇ ತಲೆಮಾರಿನ ಹೊತ್ತಿಗೆ ಗುತ್ತಿಗೆ ಮರಳುವ ಒಂದು ಘಟನೆ ಇಡೀ ಕಾದಂಬರಿಯ ಕಥಾ ವಸ್ತುವನ್ನು ನಿರ್ವಚಿಸಿದೆ. ಗುತ್ತಿನ ಕೊನೆಯ ಕುಡಿಯಂತೆ ಉತ್ತರಾಧಿಕಾರಿಗಾಗಿ ಕಾಯುವ ಮೊದಲ ತಲೆಮಾರು ಒಂದೆಡೆ, ಪಾಶ್ಚಾತ್ಯ ಸಂಸ್ಕೃತಿಯ ನೆರಳಲ್ಲಿ ಬೆಳೆದ ಮೂರನೆಯ ತಲೆಮಾರು ಒಂದೆಡೆ, ಈ ಎರಡರ ಭೇಟಿಯ ಮೂಲಕ ತೆರೆದುಕೊಳ್ಳುವ ಕಥಾವಸ್ತು ಕಾಲ ಮತ್ತು ದೇಶದ ಅಂತರದಲ್ಲಿ ರೂಪುಗೊಂಡ ಭಿನ್ನ ಸಂಸ್ಕೃತಿಗಳ ಮುಖಾಮುಖಿಯ ಸೂಕ್ಷ್ಮಗಳನ್ನು ಬಿಡಿಸಿಡುತ್ತದೆ. ಅಪರಿಚಿತ ಗುತ್ತಿನ ಮನೆಗೆ ಸಂಶೋಧನೆಯ ನೆಪದಲ್ಲಿ ಬಂದು ಸೇರಿಕೊಳ್ಳುವ ಅದೇ ಕುಟುಂಬದ ಆಧುನಿಕ ತರುಣಿ ಮಾನಸಿಕ ಖಿನ್ನತೆಯಿಂದ ಬಳಲುವ ಮತ್ತು ಕೊನೆಗೂ ಖಿನ್ನತೆಯಿಂದ ಹೊರಬರುವ ಕತೆ ಇಡೀ ಕಾದಂಬರಿಯನ್ನು ರೂಪಿಸಿದೆ. ಗೆದ್ದಲು ಹಿಡಿದು ಮಸುಕಾದ ಫೋಟೊಗಳು, ಅಂಥದ್ದೇ ನೆನಪುಗಳು, ಅದೇ ಮಾದರಿಯ ಸಂಬಂಧಗಳು, ಮಂದ ಬೆಳಕಿನ ವಿದ್ಯುತ್ ದೀಪಗಳು -ಹೀಗೆ ಅರಿತೋ ಅರಿವಿಲ್ಲದೆಯೋ ಲೇಖಕರು ಒಡ್ಡುವ ಒಂದೊಂದು ಚಿತ್ರವೂ ಗುತ್ತಿನ ಇತಿಹಾಸಕ್ಕಿಂತ ಹೆಚ್ಚು ಸಮಕಾಲೀನ ವಾಸ್ತವವನ್ನು ಸಂಕೇತಿಸುತ್ತದೆ. ಫೋಟೊಗಳು ಮತ್ತು ನೆನಪುಗಳು ಮಾತಿನಲ್ಲೂ ಸಂಬಂಧಗಳು ವ್ಯವಹಾರದಲ್ಲೂ ಮಂದ ಬೆಳಕಿನ ದೀಪಗಳು ಪ್ರಖರ ಬೆಳಕಿನ ಹೊಸ ಬಲ್ಬುಗಳಲ್ಲೂ ಹೊಸ ವಿನ್ಯಾಸವನ್ನು ಪಡೆಯುತ್ತವೆ. ಅಪರಿಚಿತ ಸಂಸ್ಕೃತಿಯ ಒಳಹೊಕ್ಕಾಗ ಬರುವ ಮಾನಸಿಕ ಖಿನ್ನತೆಯನ್ನೂ ಸಾಂಕೇತಿಕವಾಗಿ ಬೆಳೆಸಿ ಭೂತಗನ್ನಡಿಯಲ್ಲಿ ನೋಡುವ ಪ್ರಯತ್ನ ಇಲ್ಲಿನದು. ಪಾತ್ರಗಳ ಬೆಳವಣಿಗೆ, ಆಲೋಚನೆಗಳ ಸಂಕೀರ್ಣತೆ, ಕಥಾವಸ್ತು ಬೆಳೆದು ಕೈಮ್ಯಾಕ್ಸಿಗೆ ಮುಟ್ಟುವ ವಿಕಾಸ ಇತ್ಯಾದಿಗಳ ಅಭಾವದಲ್ಲಿ ಒಂದು ನಿಶ್ಚಲ ಚಿತ್ರವನ್ನು ಕಟ್ಟಿದ ಕಾದಂಬರಿಕಾರರು ತುಳುನಾಡಿನಿಂದ ಹೊರ ಹೋಗಿ ಬೆಳೆದ ಆಧುನಿಕ ತಲೆಮಾರು ತನ್ನ ಪರಂಪರೆಗೆ ಮುಖಾಮುಖಿಯಾಗುವ ಮಾನಸಿಕ ತಲ್ಲಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಈ ನಡುವೆ ಬಂದು ಹೋಗುವ ಸಣ್ಣ ಪುಟ್ಟ ಮನಸ್ತಾಪಗಳ ಪ್ರಸ್ತಾಪ, ಅನೈತಿಕ ಸಂಬಂಧದ ವಿವರ, ಮುಂಬೈ, ಅಮೆರಿಕಗಳ ಆಕರ್ಷಣೆ ಮುಂತಾದವು ಗುತ್ತನ್ನು ಹೊಸ ನೋಟದಿಂದ ನೋಡುವ ಅಗತ್ಯವನ್ನು ಎತ್ತಿಹಿಡಿಯುತ್ತವೆ.

ತುಳು ಭಾಷೆಯಲ್ಲಿ ನಿರ್ಮಾಣವಾದ ಕಾದಂಬರಿಗಳ ಪರಂಪರೆಗೆ ಇದು ಹೊಸ ಸೇರ್ಪಡೆ. ಇಂತಹ ಒಂದೊಂದು ಕಾದಂಬರಿಯೂ ಪರಂಪರೆಯ ವಿನ್ಯಾಸವನ್ನು ಬದಲಿಸುತ್ತಲೇ ಹೋಗುತ್ತದೆ. ತುಳುವರಿಗಲ್ಲ, ತುಳುವೇತರರಿಗೆ ಈ ಪರಂಪರೆಯ ಪರಿಚಯವಾಗಬೇಕು. ತುಳುವಿನಲ್ಲಿ ಬಂದ ಕೃತಿಗಳೆಲ್ಲ ಕನ್ನಡಕ್ಕೆ ಅನುವಾದವಾಗಬೇಕು, ತುಳುವಿಗೆ ಸಂಬಂಧಿಸಿ ಕನ್ನಡದಲ್ಲಿ ಬಂದವನ್ನು ಇಂಗ್ಲಿಷಿಗೆ ಅನುವಾದಿಸಬೇಕು. ತುಳು ಭಾಷೆಯಲ್ಲಿರುವ ಕಾದಂಬರಿಯೊಂದಕ್ಕೆ ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಮುನ್ನುಡಿ ಬರೆಯುವುದು ಅಥವಾ ಕಾದಂಬರಿಯನ್ನು ಕನ್ನಡಕ್ಕೋ ಇಂಗ್ಲಿಷಿಗೋ ಅನುವಾದಿಸಿ ಪ್ರಕಟಿಸುವುದು ಈವತ್ತಿನ ಅಗತ್ಯಗಳಲ್ಲಿ ಒಂದು. ಕಾರಣ ತುಳು ಭಾಷೆ ತನ್ನ ಅಸ್ತಿತ್ವವನ್ನು ಸ್ಥಾಪಿಸಬೇಕಾಗಿರುವುದು ತನ್ನ ಮುಂದಲ್ಲ, ಇತರ ಭಾಷೆಗಳ ಮುಂದೆ. ಅದು ಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ. ಇತರ ಭಾಷೆಗಳ ಮುಂದೆ ನಿಲ್ಲಬೇಕಾಗಿದೆ, ತುಳುವಿನ ಬರವಣಿಗೆಯ ಪರಿಚಯ ತುಳುವೇತರರಿಗೂ ಮುಟ್ಟಬೇಕಾಗಿದೆ.

ಹೊಗಳುವುದೋ ಓದಬೇಕಾಗಿರುವ ಕಾದಂಬರಿಯ ವಿವರಗಳನ್ನು ಮೊದಲೇ ಅರೆಬರೆಯಾಗಿ ಬಿಚ್ಚಿಡುವುದೋ ಅಲ್ಲ, ಓದಿಗೆ ಅಡಿಪಾಯವಾಗಬಲ್ಲ ಪ್ರಸ್ತಾಪಗಳನ್ನು ಮುಂದಿಡುವುದು ಮುನ್ನುಡಿಯ ಕೆಲಸ, ಸದ್ಯ ತುಳು ಕಾದಂಬರಿಗಳ ಗಟ್ಟಿತನವನ್ನು ಕನ್ನಡ ಕಾದಂಬರಿಗಳ ಓದಿನ ಅನುಭವದ ಹಿನ್ನೆಲೆಯಲ್ಲಿ ನಿರ್ಧರಿಸುವುದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ, ತುಳು ಕಾದಂಬರಿ ಪ್ರಪಂಚ ಒಂದು ನೆಲೆಗೆ ಬಂದು ನಿಲ್ಲುವವರೆಗೆ ಅಲ್ಲಿ ನಡೆಯುವುದೆಲ್ಲ ಪ್ರಯೋಗವೇ, ಈವರೆಗೆ ಆದದ್ದೂ ಅದೇ. ಆದರೆ ಇನ್ನು ತುಳುನಾಡಿನ ತಲ್ಲಣಗಳೂ ತುಳು ಬದುಕಿನ ಸಂಕೀರ್ಣತೆಗಳೂ ಕಾದಂಬರಿಗಳ ಒಳಗೆ ದಟ್ಟವಾಗಿ ಕಾವುಕೂರದೆ ಹೋದರೆ ಹೊರಕ್ಕೆ ತೆರೆದುಕೊಳ್ಳುವುದು ಸಾಧ್ಯವಿಲ್ಲ. ಹಳೆಯ ಬದುಕನ್ನು ಮೆಲುಕುವ ಜತೆಗೆ ಹೊಸದನ್ನು ಮುಟ್ಟುವ, ಇರುವುದನ್ನು ಕಟ್ಟುವ, ಕಂಡ, ಕೇಳಿದ, ಅನುಭವಿಸಿದ ಮತ್ತು ಕಲ್ಪಿಸಿದ ಎಲ್ಲವನ್ನೂ ಬಿಗುವಾದ ಬಂಧದಲ್ಲಿ ಸಾಂದ್ರವಾಗಿ ಹಿಡಿದಿಡುವ ಪನ್ನತಿಕೆ ತುಳು ಬರವಣಿಗೆಗೆ ದಕ್ಕಬೇಕು. ಅದು ಜಗತ್ತಿಗೆ ತೆರೆಯಬೇಕು. ಅಂತಹ ಹೊರತೆರೆಯುವಿಕೆಗೆ ಈ ಕಾದಂಬರಿಯೂ ಸಾಕ್ಷಿಯಾಗಿ ನಿಲ್ಲಬೇಕೆಂಬ ಹಕ್ಕೊತ್ತಾಯಕ್ಕೆ ಓದುಗರ ಪ್ರತಿಕ್ರಿಯೆ ಏನೆನ್ನುವುದನ್ನು ಕಾದುನೋಡದೆ ಬೇರೆ ನಿರ್ವಾಹವೇ ಇಲ್ಲ.

(ಮುನ್ನುಡಿಯಿಂದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)