ಗ್ರಾಮಗಳಲ್ಲಿ ತುಳು ಸಾಹಿತ್ಯ ಉತ್ತೇಜಿಸುವ ಯೋಜನೆ: ಕತ್ತಲ್ ಸಾರ್
ಉಡುಪಿ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಉಡುಪಿ : ಬಾಂಧವ್ಯ ಬೆಸೆಯುವ ಹೃದಯ ಸಿರಿವಂತಿಕೆ ತುಳು ಭಾಷೆಯಲ್ಲಿ ಕಾಣಬಹುದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುಭಾಷೆಗಳ ನಡುವೆ ತುಳು ಸ್ನೇಹದ ಸೇತುವೆಯಾಗಿ ನಿಂತಿದೆ. ಅಕಾಡೆಮಿ ವತಿಯಿಂದ ತಾಲೂಕು ಹಾಗೂ ಗ್ರಾಮದಲ್ಲಿ ಸಾಹಿತ್ಯ ಉತ್ತೇಜಿಸುವ ಮಹತ್ತರ ಯೋಜನೆ ರೂಪಿಸಲಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ರವಿವಾರ ಅಂಬಲಪಾಡಿ ದೇವಸ್ಥಾನ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮ್ಮೇಳನವನ್ನು ಉದ್ಘಾಟಿಸಿ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದರಿಂದ ಮಾತ್ರ ಭಾಷೆ ಉಳಿಯಲು ಸಾಧ್ಯ. ಚುಟುಕು ಸಾಹಿತ್ಯ ಸಮಾಜದ ಅಂಕು ಡೊಂಕು ಗಳತ್ತ ಬೆಳಕು ಚೆಲ್ಲುವ ಮಹತ್ಕಾರ್ಯ ಮಾಡುತ್ತಿದೆ. ಇದಕ್ಕೆ ಜಾನಪದ ಹಾಗೂ ವಚನ ಸಾಹಿತ್ಯ ಪ್ರೇರಣೆ ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಬಹುಭಾಷಾ ಕವಿ ಅಂಶುಮಾಲಿ ವಹಿಸಿ ದ್ದರು. ತುಳು ಅಕಾಡೆಮಿ ಸದಸ್ಯ ರವೀಂದ್ರ ಶೆಟ್ಟಿ ಬಳಂಜ, ಚುಟುಕು ಸಾಹಿತ್ಯ ಪರಿಷತ್ತು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಜಿ.ಯು.ನಾಯಕ ಸ್ವಾಗತಿಸಿದರು. ರಾಜು ಎನ್. ಆಚಾರ್ಯ ಪರಿಚಯ ಭಾಷಣ ಮಾಡಿದರು. ಕಾರ್ಯದರ್ಶಿ ಸೋಮಶೇಖರ ಶೆಟ್ಟರ ನಿರೂಪಿಸಿ, ವಂದಿಸಿದರು.
ನಂತರ ಅಂಶುಮಾಲಿ ಅಧ್ಯಕ್ಷತೆಯಲ್ಲಿ ತುಳು-ಕನ್ನಡ ಸಾಮರಸ್ಯದ ವಿಚಾರ ಗೋಷ್ಠಿಯಲ್ಲಿ ಅಕಾಡೆಮಿ ಯ. ಸದಸ್ಯರಾದ ರವೀಂದ್ರ ಶೆಟ್ಟಿ ಬಳಂಜ, ತಾರಾ ಉಮೇಶ್ ಆಚಾರ್ಯ ಉಪನ್ಯಾಸ ನೀಡಿದರು.