ಉಡುಪಿ ಧರ್ಮಪ್ರಾಂತ್ಯ ಪಿಆರ್ಓ ವಂ.ಚೇತನ್ ಲೋಬೊಗೆ ಬಿಳ್ಕೋಡುಗೆ
ಉಡುಪಿ : ಧರ್ಮಪ್ರಾಂತ್ಯದಲ್ಲಿ ಒಂಭತ್ತು ವರ್ಷಗಳ ಕಾಲ ಉಜ್ವಾಡ್ ಪತ್ರಿಕೆಯ ಸಂಪಾದಕರಾಗಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರಿನ ಅಸ್ಸಿಸಿ ಪ್ರೆಸ್ ಹಾಗೂ ಅಸ್ಸಿಸಿ ಸ್ಟುಡಿಯೋದ ನಿರ್ದೇಶಕ ಹಾಗೂ ‘ಸೆವಕ್ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನಿಯುಕ್ತಿ ಗೊಂಡ ವಂ.ಚೇತನ್ ಲೋಬೊ ಅವರಿಗೆ ಬಿಳ್ಕೋಡುಗೆ ಸಮಾರಂಭ ಇಂದು ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ವಂ|ಚೇತನ್ ಲೋಬೊ ಕಪುಚಿನ್ ಧಾರ್ಮಿಕ ಸಭೆಯ ಧರ್ಮಗುರುವಾಗಿದ್ದರೂ ಕೂಡ ತಮ್ಮ ಹೆಚ್ಚಿನ ಅವಧಿಯನ್ನು ಶಿವಮೊಗ್ಗ, ಉಡುಪಿ ಧರ್ಮಪ್ರಾಂತ್ಯಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯುನ್ನತ ಸೇವೆ ನೀಡಿದ್ದರು. ಮುಂದೆ ಧರ್ಮಪ್ರಾಂತ್ಯ ಅವರ ಸೇವೆಯನ್ನು ಯುವಜನರ ಮತ್ತು ಮಕ್ಕಳಿಗೆ ಮಾಧ್ಯಮದ ತರಬೇತಿ ವಿಚಾರದಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಂ.ಚೇತನ್ ಲೋಬೊ, ಪತ್ರಕರ್ತನಾಗಿರವವನು ಯಾವುದೇ ವ್ಯಕ್ತಿಯ ಅಡಿಯಾಳಾಗಿರದೆ ಸಮಾಜದ ಅಂಕು ಡೊಂಕುಗಳನ್ನು ನೇರವಾಗಿ ಪ್ರಶ್ನಿಸುವಂತರಿಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತು ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಮಾತ್ರ ಆತ ಒರ್ವ ನೈಜ ಪತ್ರಕರ್ತ ನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ.ವಲೇರಿಯನ್ ಮೆಂಡೊನ್ಸಾ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಧರ್ಮಪ್ರಾಂತ್ಯದ ಮಾಧ್ಯಮ ಸಮನ್ವಯಕಾರ ಮೈಕಲ್ ರೊಡ್ರಿಗಸ್, ಬಿಗ್ ಜೆ ವಾಹಿನಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ, ಹಿರಿಯ ಧರ್ಮಗುರು ವಂ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. ಪತ್ರಕರ್ತ ಸ್ಟೀವನ್ ಕುಲಾಸೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.