ಮನಮೋಹನ್ ಸಿಂಗ್ VS ನರೇಂದ್ರ ಮೋದಿ: ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಿದ್ದು ಯಾರು?
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಅಧಿಕಾರಾವಧಿಯ ಎಂಟು ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ ಸರಕಾರದ ಆರ್ಥಿಕ ಸಾಧನೆಯ ಕುರಿತು ಚರ್ಚೆಗಳು ಮತ್ತು 2004-14 ರ ನಡುವಿನ ಅವಧಿಯ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರಗಳೊಂದಿಗೆ ಹೋಲಿಕೆಗಳು ನಡೆಯುತ್ತಿವೆ.
ಕೆಲವರು-ಈ ಲೇಖಕನಂತೆ-ನಿರೂಪಣೆ ನಿಯಂತ್ರಣದ ರಾಜಕೀಯವನ್ನು ಅನುಸರಿಸುತ್ತಿರುವುದು ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರಕಾರದ ಚುನಾವಣಾ ಭವಿಷ್ಯವನ್ನು ಉತ್ತಮಗೊಳಿಸಿದ್ದರೂ ಭಾರತದ ಸ್ಥೂಲ ಆರ್ಥಿಕತೆಯು ಹದಗೆಡುತ್ತಲೇ ಸಾಗಿದೆ ಎಂದು ವಾದಿಸುತ್ತಾರೆ.
ಸಿಂಗ್ ಮತ್ತು ಮೋದಿ ಅಧಿಕಾರಾವಧಿಗಳಲ್ಲಿನ ಆರ್ಥಿಕ ಸಾಧನೆಗಳನ್ನು ಹೋಲಿಸಬಹುದೇ? ಮೇ 27ರಂದು ಟಿವಿ ಚರ್ಚೆಯೊಂದರಲ್ಲಿ ಅರ್ಥಶಾಸ್ತ್ರಜ್ಞರಾದ ಕೌಶಿಕ ಬಸು ಮತ್ತು ಅರವಿಂದ ಪನಗಾರಿಯಾ ಅವರು ಈ ಪ್ರಶ್ನೆಯನ್ನು ಎತ್ತಿಕೊಂಡಿದ್ದರು.
2016ರ ನಂತರ ಆರ್ಥಿಕ ಬೆಳವಣಿಗೆಯು ಹಿನ್ನಡೆಯನ್ನು ಕಂಡಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಹಾಗೂ ಯುವಜನರಲ್ಲಿ ನಿರುದ್ಯೋಗ ಹೆಚ್ಚಿದೆ. ಇದೇ ವೇಳೆ ಭಾರತದ ಸಾಮಾಜಿಕ ಸ್ವರೂಪವು ಬಿಚ್ಚಿಕೊಳ್ಳುತ್ತಿದೆ ಮತ್ತು ಆರ್ಥಿಕ ಭವಿಷ್ಯವನ್ನು ಇನ್ನಷ್ಟು ಅನಿರ್ದಿಷ್ಟಗೊಳಿಸುತ್ತಿದೆ ಎಂದು ಬಸು ವಾದಿಸಿದ್ದರು.
ಇದನ್ನು ವಿರೋಧಿಸಿದ್ದ ಪನಗಾರಿಯಾ, ದಿವಾಳಿತನ ಸಂಹಿತೆ ಮತ್ತು ಜಿಎಸ್‌ಟಿಯಂತಹ ದಿಟ್ಟ ಸುಧಾರಣೆಗಳನ್ನು ಅಂಗೀಕರಿಸುವಾಗ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸುವಲ್ಲಿ ಕಳೆದ ಎಂಟು ವರ್ಷಗಳಲ್ಲಿ ಸರಕಾರದ ಯಶಸ್ಸು ಸ್ಪಷ್ಟವಾಗಿದೆ ಎಂದು ಪ್ರತಿಪಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಳವಣಿಗೆ ಮತ್ತು ಒಟ್ಟು ಸ್ಥೂಲ ಆರ್ಥಿಕತೆಯ ದತ್ತಾಂಶಗಳು ಸಿಂಗ್ ಆಡಳಿತದಡಿ 2004ರಿಂದ 14 ವರೆಗೆ ಮತ್ತು ಮೋದಿ ಆಡಳಿತದಡಿ 2014 ರಿಂದ 2022 ರವರೆಗಿನ ಅವಧಿಗಳಲ್ಲಿ ಆರ್ಥಿಕತೆಯ ಕುರಿತು ಏನನ್ನು ಪ್ರತಿಫಲಿಸುತ್ತವೆ ಎನ್ನುವುದನ್ನು ನೋಡುವುದು ಮುಖ್ಯವಾಗಿದೆ.
ಇಲ್ಲಿ ಕೆಲವು ತೊಡಕುಗಳಿವೆ. ಯುಪಿಎ ಸರಕಾರದ ಮೊದಲ ಅವಧಿ (2004-09) ಯಲ್ಲಿನ ಸಾಧನೆಯು ಅದರ ಎರಡನೇ ಅವಧಿ (2009-14) ಗಿಂತ ಉತ್ತಮವಾಗಿತ್ತು. ಎರಡನೇ ಅವಧಿಯು ಕಳಪೆ ಬೆಳವಣಿಗೆ,ಎರಡಂಕಿಗಳ ಹಣದುಬ್ಬರದ ದುಷ್ಪರಿಣಾಮಗಳು ಮತ್ತು ದೀರ್ಘಕಾಲಿಕ ನೀತಿ ನಿಷ್ಕ್ರಿಯತೆಗೆ ಸಾಕ್ಷಿಯಾಗಿತ್ತು ಮತ್ತು ಗಮನಾರ್ಹ ಸುಧಾರಣೆಗಳನ್ನು ತರುವುದು ಕಷ್ಟಕರವಾಗಿತ್ತು. ಅಲ್ಲದೆ, 2004 ರಿಂದ 2022 ರ ಅವಧಿಯ ಸ್ಥೂಲ ಆರ್ಥಿಕತೆಯ ಹೋಲಿಕೆಯು ಯಾವುದೇ ರಾಜಕೀಯ ಪಕ್ಷದ ಪರವಾಗಿರಬಾರದು.
ಆರ್ಥಿಕ ಬೆಳವಣಿಗೆ
ವಿಶ್ವಬ್ಯಾಂಕಿನ ದತ್ತಾಂಶ ಕೋಶದಿಂದ 2004ರಿಂದ 2021ರವರೆಗಿನ ಅವಧಿಗಾಗಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತವುಂಟಾಗಿದ್ದ 2007-08 ನ್ನು ಹೊರತುಪಡಿಸಿ 2004-14ರ ನಡುವಿನ ಅವಧಿಯಲ್ಲಿ ವಾರ್ಷಿಕವಾಗಿ ಅಂದಾಜು ಶೇ.7.5-ಶೇ.8 ರ ಸರಾಸರಿ ಬೆಳವಣಿಗೆ ದರವನ್ನು ಸಾಧಿಸಲಾಗಿತ್ತು. ಶೇ.6 ಕ್ಕೂ ಹೆಚ್ಚಿನ ಬೆಳವಣಿಗೆಯ ಪ್ರವೃತ್ತಿ 2016ವರೆಗೆ ಮುಂದುವರಿದಿತ್ತು, ನಂತರ ಅದು ಕ್ಷೀಣಿಸತೊಡಗಿತ್ತು.
ಮೋದಿಯವರು ಅಧಿಕಾರ ವಹಿಸಿಕೊಂಡ ಎರಡು ವರ್ಷಗಳ ಬಳಿಕ ನೋಟು ನಿಷೇಧದ ಆಘಾತಕಾರಿ ಪರಿಣಾಮವು ಬೆಳವಣಿಗೆ ಚಕ್ರಕ್ಕೆ ಹಾನಿಯನ್ನುಂಟು ಮಾಡಿತ್ತು. 2016 ರ ಮೊದಲಿನ ಮಟ್ಟಕ್ಕೆ ಚೇತರಿಸಿಕೊಳ್ಳುವಲ್ಲಿ ಅದು ವಿಫಲಗೊಂಡಿತ್ತು. 2020 ರಲ್ಲಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತದ ಬೆಳವಣಿಗೆ ದರವು 2020-21 ರಲ್ಲಿ ಶೇ.7.3 ರಷ್ಟು ಸಂಕುಚಿತಗೊಂಡಿತ್ತು.
2021ರಲ್ಲಿ ಕಂಡು ಬಂದಿದ್ದ ಸುಮಾರು ಶೇ.8.9 ರಷ್ಟು ಗಣಿತೀಯ ಧನಾತ್ಮಕ ಗಳಿಕೆಯ ಹೊರತಾಗಿಯೂ ವಿತರಣಾ ಗಳಿಕೆಗಳು ಸಾಕಾರಗೊಳ್ಳಲು ಆರ್ಥಿಕತೆಯು ಶೇ.8 ರ ಗರಿಷ್ಠ ವಾರ್ಷಿಕ ದರದಲ್ಲಿ ಬೆಳವಣಿಗೆಯಾಗಲು ಇನ್ನೂ ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಒಟ್ಟು ಸ್ಥಿರ ಬಂಡವಾಳ ರಚನೆ
2004-12ರ ನಡುವಿನ ಅವಧಿಯಲ್ಲಿ ಖಾಸಗಿ ಕ್ಷೇತ್ರದಿಂದ ಸ್ಥಿರ ಬಂಡವಾಳ ರಚನೆ ಅಥವಾ ಹೂಡಿಕೆಯಲ್ಲಿ ಏರಿಳಿತಗಳಿದ್ದರೂ ಸರಾಸರಿಯಾಗಿ ಜಿಡಿಪಿಯ ಶೇ.24ರಷ್ಟು ಅಧಿಕ ಮಟ್ಟದಲ್ಲಿಯೇ ಇತ್ತು. 2012 ರಿಂದ 2015 ರವರೆಗೆ ಒಟ್ಟು ಸ್ಥಿರ ಬಂಡವಾಳ ರಚನೆಯಲ್ಲಿ ಕುಸಿತ ಸ್ಥಿರವಾಗಿದ್ದು, ಶೇ.26.5 ರಿಂದ ಶೇ.21ಕ್ಕೆ ಇಳಿದಿತ್ತು. ನಂತರ ಅದೇ ಮಟ್ಟದಲ್ಲಿದ್ದ ಅದು 2018 ರಲ್ಲಿ ಕೊಂಚ ಏರಿಕೆಯೊಂದಿಗೆ ಶೇ.22 ನ್ನು ತಲುಪಿತ್ತು. ಆರ್ಥಿಕತೆಯ ಬೆಳವಣಿಗೆಯ ಹಂತ ಯಾವುದೇ ಇದ್ದರೂ ಹೂಡಿಕೆಯಲ್ಲಿ ಸುಸ್ಥಿರ ಏರಿಕೆಯು ಹಣಕಾಸು ಬೆಳವಣಿಗೆಯಲ್ಲಿ ನಿರ್ಣಾಯಕವಾಗಿದೆ.
ಜಿಡಿಪಿಗೆ ಖಾಸಗಿ ಕ್ಷೇತ್ರಕ್ಕೆ ಕಡಿಮೆ ಒಟ್ಟು ಸ್ಥಿರ ಬಂಡವಾಳ ರಚನೆಯ ಶೇಕಡಾವಾರು ಪ್ರಮಾಣವು ಖಾಸಗಿ ಸಂಸ್ಥೆಗಳ ಉತ್ಪಾದನಾ ಹೆಚ್ಚಳದ ಗುರಿ ಸಾಧನೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಇದು ಯುವಜನರಲ್ಲಿ ನಿರುದ್ಯೋಗ ಹೆಚ್ಚಲೂ ಕಾರಣವಾಗಿದೆ. ಇದು ಮೋದಿ ಸರಕಾರಕ್ಕೆ ಪ್ರಮುಖ ಕಳವಳವಾಗಿ ಮುಂದುವರಿದಿದೆ. ಎಂಟು ವರ್ಷಗಳಲ್ಲಿ ಸರಕಾರವು ಹೂಡಿಕೆ ಮತ್ತು ಜಿಡಿಪಿ ಅನುಪಾತವನ್ನು ತಿದ್ದುಪಡಿಗೊಳಿಸುವಲ್ಲಿ ವಿಫಲವಾಗಿದೆ. ಉದ್ಯೋಗ ಅಂಕಿಅಂಶಗಳು 2004-22 ರ ಅವಧಿಯಲ್ಲಿ ಭಾರತದಲ್ಲಿ ಉದ್ಯೋಗ ಚಿತ್ರಣವನ್ನು ತಿಳಿದುಕೊಳ್ಳಲು ಎರಡು ಪ್ರಮುಖ ಸೂಚಕಗಳಿವೆ. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಅಳೆಯಲಾಗುವ ನಿರುದ್ಯೋಗ ದರವು ಒಂದಾಗಿದ್ದರೆ, ಜನಸಂಖ್ಯೆಗೆ ಉದ್ಯೋಗ ಅನುಪಾತವು ಇನ್ನೊಂದು ಸೂಚಕವಾಗಿದೆ.
ಜನವರಿ-ಮಾರ್ಚ್ 2021ರ ಸಮೀಕ್ಷೆಯ ದತ್ತಾಂಶಗಳಂತೆ ಸದ್ರಿ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು 2020ರ ಕೋವಿಡ್ ಮೊದಲಿನ ಮಟ್ಟದ ಸನಿಹದಲ್ಲಿತ್ತು. 2021 ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಶೇ.7.9 ರಷ್ಟಿತ್ತು. ಉಳಿದ ಎಲ್ಲ ಶೇ.92.1 ರಷ್ಟು ಜನರು ಉದ್ಯೋಗದಲ್ಲಿದ್ದರು ಅಥವಾ ದುಡಿಯುವ ವಯೋಮಾನದ ಶೇ.92.1 ರಷ್ಟು ಜನರು ಉದ್ಯೋಗದಲ್ಲಿದ್ದರು ಎನ್ನುವುದು ಇದರ ಅರ್ಥವಲ್ಲ.
ಭಾರತದಲ್ಲಿ ಸಾಂಕ್ರಾಮಿಕಕ್ಕೆ ಮೊದಲು ಉದ್ಯೋಗ-ಜನಸಂಖ್ಯೆ ಅನುಪಾತವು ಶೇ.43 ರಷ್ಟಿದ್ದು,ಇದು ಜಾಗತಿಕ ದರವಾದ ಶೇ.55 ಕ್ಕಿಂತ ಕಡಿಮೆಯಾಗಿತ್ತು. ಉದ್ಯೋಗ ದರವು ಬಾಂಗ್ಲಾದೇಶದಲ್ಲಿ ಶೇ.53 ಮತ್ತು ಚೀನಾದಲ್ಲಿ ಸುಮಾರು ಶೇ.63 ರಷ್ಟಿದೆ.
ಸಿಂಗ್ ಸರಕಾರದಡಿ ಎರಡೂ ಅವಧಿಗಳಲ್ಲಿ ಕಾರ್ಮಿಕರಿಗೆ ಉದ್ಯೋಗ ಆಧಾರಿತ ಸಾಮಾಜಿಕ ಭದ್ರತೆಯನ್ನೊದಗಿಸಲು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವ್ಯಾಪಕ ವೆಚ್ಚವನ್ನು ಮಾಡಲಾಗಿತ್ತು. ಯುಪಿಎ ಸರಕಾರಕ್ಕೆ ಹೋಲಿಸಿದರೆ ನಂತರದ ವರ್ಷಗಳಲ್ಲಿ ಮೋದಿ ಸರಕಾರವು ಈ ಯೋಜನೆಗಾಗಿ ಕಡಿಮೆ ಮುಂಗಡಪತ್ರ ಹಂಚಿಕೆಯನ್ನು ಮಾಡುತ್ತಿದೆ ಮತ್ತು ರಾಜ್ಯಗಳಿಗೆ ಹಣಕಾಸು ಪೂರೈಕೆಯೂ ವಿಳಂಬವಾಗುತ್ತಿದೆ. ಗ್ರಾಮೀಣ ಜನರು ನಿರುದ್ಯೋಗದಿಂದ ತೀವ್ರ ಬಾಧಿತರಾಗಿದ್ದಾರೆ ಮತ್ತು ಮೋದಿ ಸರಕಾರವು ನಿರುದ್ಯೋಗ ಬಿಕ್ಕಟ್ಟು ಇದೆ ಎಂದು ಒಪ್ಪಿಕೊಳ್ಳಲೂ ವಿಫಲವಾಗಿದೆ.
ಹಣದುಬ್ಬರ
ಗ್ರಾಹಕ ಬೆಲೆ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಮೋದಿ ಸರಕಾರವು ಆರಂಭದ ಕೆಲವು ವರ್ಷಗಳಲ್ಲಿ ಹಣದುಬ್ಬರ ದರವು ಎರಡಂಕಿಗಳಿಗೆ ತಲುಪಿದ್ದ ಯುಪಿಎ ಸರಕಾರದ ಎರಡನೇ ಅವಧಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಮೋದಿ ಸರಕಾರದ ಮೊದಲ ಮತ್ತು ಎರಡನೇ ಅವಧಿಗಳ ಹೆಚ್ಚು ಸಮಯ ಜಾಗತಿಕ ಕಚ್ಚಾತೈಲ ಬೆಲೆಗಳು ಸಾಕಷ್ಟು ಕೆಳಮಟ್ಟದಲ್ಲಿ ಇದ್ದಿದ್ದು ಇದಕ್ಕೆ ಪೂರಕವಾಗಿತ್ತು.
ಈಗ ಉಕ್ರೇನ್ ಮೇಲೆ ರಶ್ಯದ ಆಕ್ರಮಣದಿಂದಾಗಿ ತೈಲಬೆಲೆಗಳಲ್ಲಿ ಏರಿಕೆಯಾಗಿದ್ದು,ಅದರ ಪರಿಣಾಮಗಳು ಸಗಟು ಬೆಲೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ಮೇಲೆ ಸ್ಪಷ್ಟವಾಗಿ ಕಾಣುತ್ತಿವೆ.
ಜಿಡಿಪಿಗೆ ಭಾರತದ ಚಾಲ್ತಿ ಖಾತೆ ಮಟ್ಟವು 2004-12ರ ನಡುವೆ ಹೆಚ್ಚಿನ ಅವಧಿಗೆ ಋಣಾತ್ಮಕವಾಗಿಯೇ ಇತ್ತು . 2012ರಿಂದ 2016ರವರೆಗೆ ಸುಧಾರಣೆ ಕಂಡು ಬಂದಿತ್ತಾದರೂ ಬಳಿಕ ಮತ್ತೆ ಕುಸಿದಿತ್ತು. ವ್ಯಾಪಾರ ಕುರಿತಂತೆ ಸಾಂಕ್ರಾಮಿಕದ ಸಂದರ್ಭ ಸೇರಿದಂತೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮೋದಿ ಸರಕಾರವು ಹೆಚ್ಚಿನ ರಫ್ತು ಮತ್ತು ಆಮದುಗಳನ್ನು ಖಚಿತಪಡಿಸಿದೆ.
ಆದಾಗ್ಯೂ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲು ಹೆಚ್ಚಿನ ಸುಂಕಗಳನ್ನು ಹೇರುವುದರೊಂದಿಗೆ ವ್ಯಾಪಾರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುವರಿ ಕ್ರಮವಾಗಿ ಮೇ 13ರಂದು ಗೋದಿ ರಫ್ತನ್ನು ನಿಷೇಧಿಸಲಾಗಿದೆ. ಇಂತಹ ಕ್ರಮಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ದೇಶದ ದೃಷ್ಟಿ ಮತ್ತು ವಿಶ್ವಾಸಾರ್ಹತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ.
ನಾವು ಕಲಿಯುವುದು ಏನನ್ನು?
2002-11ರ ನಡುವಿನ ಅವಧಿಯು ದೇಶದ ಅತ್ಯುತ್ತಮ ಸ್ಥೂಲ ಆರ್ಥಿಕತೆ ಬೆಳವಣಿಗೆ ಸಾಧನೆಗೆ ಸಾಕ್ಷಿಯಾಗಿತ್ತು. ಇದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದ ಕೊನೆಯ ಎರಡು ವರ್ಷಗಳು ಮತ್ತು ಯುಪಿಎ ಸರಕಾರದ ಮೊದಲ ಏಳು ವರ್ಷಗಳು ಸೇರಿವೆ.
2012ರಿಂದ ಯುಪಿಎ ಸರಕಾರದ ಎರಡನೇ ಅಧಿಕಾರಾವಧಿಯಲ್ಲಿ ಆರ್ಥಿಕ ನೀತಿ ನಿರ್ವಹಣೆಯು ಅಧಿಕ ಹಣದುಬ್ಬರದೊಂದಿಗೆ ವ್ಯವಸ್ಥಿತ ಅಡೆತಡೆಗಳ ಅವಧಿಯನ್ನು ಕಂಡಿತ್ತು ಮತ್ತು ನೀತಿ ನಿಷ್ಕ್ರಿಯತೆಯಿಂದಾಗಿ ಕ್ರಮೇಣ ಸುಧಾರಣೆಗಳನ್ನು ತರುವುದು ಕಷ್ಟಕರವಾಗಿತ್ತು.
ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಬಲ್ಲ ಮತ್ತು ಕಠಿಣ ಸುಧಾರಣೆಗಳನ್ನು ತರಬಲ್ಲ ವ್ಯಕ್ತಿಯಾಗಿ ಬಿಂಬಿಸಲ್ಪಡುವುದರೊಂದಿಗೆ ಮೋದಿ ಪ್ರಮುಖವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಕ್ಕೇರಿದ್ದರು. ಭಾರತದ ಹೆಚ್ಚಿನ ಶ್ರೀಮಂತರು, ಮೇಲ್ಮಧ್ಯಮ ವರ್ಗದ ಉದಾರವಾದಿಗಳು ಮತ್ತು ಮಧ್ಯಮ ವರ್ಗಗಳು ಸೇರಿದಂತೆ ಉದ್ಯಮ ಪರ ವರ್ಗಗಳು ಯುಪಿಎ ಎರಡನೇ ಅಧಿಕಾರಾವಧಿಯಲ್ಲಿ ನಿಷ್ಕ್ರಿಯವಾಗಿದ್ದ ಆರ್ಥಿಕತೆಗೆ ಮೋದಿ ಸರಕಾರವು ಚೇತರಿಕೆಯನ್ನು ನೀಡಲಿದೆ ಎಂಬ ಆಶಯದೊಡನೆ ಅವರನ್ನು ಬೆಂಬಲಿಸಿದ್ದವು. ಆದರೆ ನಡೆದಿದ್ದು ತದಿರುದ್ಧವಾಗಿದೆ.
ನೋಟು ನಿಷೇಧವು ಆರ್ಥಿಕತೆಯ ಬೆನ್ನೆಲಬುನ್ನೇ ಮುರಿದಿದೆ. ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಧ್ರುವೀಕರಣ ಮತ್ತು ಅಲ್ಪಸಂಖ್ಯಾತರ ವಿರುದ್ಧ ಕೋಮುದ್ವೇಷವನ್ನು ಹೆಚ್ಚಿಸುವ ಆಡಳಿತ ಪಕ್ಷದ ರಾಜಕೀಯವು ಸಾಮಾಜಿಕ ನಂಬಿಕೆಯನ್ನು ಛಿದ್ರಗೊಳಿಸಿದೆ.
ಹೆಚ್ಚಿನ ಬೆಳವಣಿಗೆಯ ಮಾರ್ಗವನ್ನು ಖಚಿತಪಡಿಸಿಕೊಳ್ಳುವ ಮತ್ತು ಸಮುದಾಯವನ್ನು ಒಂದಾಗಿಸುವ ಹೊಣೆಗಾರಿಕೆಯೊಂದಿಗೆ ಮೋದಿ ಸರಕಾರವು ಮೂರು ಮಹತ್ವದ ಮಧ್ಯಮದಿಂದ ದೀರ್ಘಾವಧಿಯ ಸವಾಲುಗಳನ್ನೂ ಎದುರಿಸುತ್ತಿದೆ:ಆದಾಯ ಅಸಮಾನತೆಗಳು, ಛಿದ್ರಗೊಂಡ ಕಾರ್ಮಿಕ ಮಾರುಕಟ್ಟೆಗಳು ಮತ್ತು ನಿರುದ್ಯೋಗ.
ಇವೆಲ್ಲವೂ ನಿರುದ್ಯೋಗ,ಕಳಪೆ ಕೆಲಸದ ಕರಾರುಗಳು ಮತ್ತು ವಿದ್ಯಾವಂತ ಯುವಜನರಲ್ಲಿ ಅತ್ಯಂತ ಹೆಚ್ಚಿನ ನಿರುದ್ಯೋಗ ಮಟ್ಟದ ಭಾರತದ ಬಿಕ್ಕಟ್ಟಿನೊಂದಿಗೆ ತಳುಕು ಹಾಕಿಕೊಂಡಿವೆ. ಇವೆಲ್ಲವೂ ಇತರ ಉದಯೋನ್ಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದೆ ಎನ್ನುವುದನ್ನು ಸೂಚಿಸುತ್ತಿವೆ.
ಕೃಪೆ: Scroll.in