varthabharthi


ಅನುಗಾಲ

ವಿಕೃತ ಕರ್ನಾಟಕ

ವಾರ್ತಾ ಭಾರತಿ : 2 Jun, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಕ್ಷಣಕ್ಕೆ ಚಕ್ರತೀರ್ಥ-ವಕ್ರತೀರ್ಥರೆಲ್ಲ ಆನಂದತೀರ್ಥರು. ಆದರೆ ಅರಿವಿಲ್ಲದೆ ತಮ್ಮ ಮಕ್ಕಳಿಗೂ ಇದೇ ವಿಷವನ್ನು ಬಡಿಸುವ ಮತ್ತು ಉಣಿಸುವ ಸನ್ನಾಹದಲ್ಲಿದ್ದಾರೆ. ಅಡುಗೆ ನಡೆಯುತ್ತಿದೆ. ಮಕ್ಕಳಿಗೆ ಇದಕ್ಕಿಂತ ಬಿಸಿಯೂಟ ಬೇರಿರದು. ಅವರ ಉದ್ದೇಶ ಸರಿ. ಅಮಾತ್ಯರಾಕ್ಷಸನು ಸೃಷ್ಟಿಸಿದ ವಿಷಕನ್ಯೆಯೂ ಇಂತಹದ್ದೇ ಪ್ರತಿಮೆ. ಶಕುನಿ ಕೌರವಪಾಳಯ ಸೇರಿದ್ದೇ ಅವರನ್ನು ನಾಶಪಡಿಸಲು ಎಂಬ ಐತಿಹ್ಯವಿದೆ. ಇತಿಹಾಸ ಮಾತ್ರವಲ್ಲ, ಪುರಾಣವೂ ಪುನರಾವರ್ತನೆಯಾಗುತ್ತಿದೆಯೇ?


ಕುವೆಂಪು ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಬರೆದಾಗ ತನ್ನ ಈ ಕಾವ್ಯ ಸಾಲುಗಳು ವ್ಯಂಗ್ಯದಲ್ಲಿ ಹೊಸ ಅರ್ಥವನ್ನು ಕಂಡುಕೊಳ್ಳಬಹುದೆಂದು ತಿಳಿದಿರಲಾರರು. ನೂಲಿನಂತೆ ಸೀರೆ. ತಾಯಿ ಭಾರತಿ ಹೇಗೋ ಹಾಗೆಯೇ ಕರ್ನಾಟಕವೆಂಬ ಆಕೆಯ ಮಗಳು. ಮೊದಲ ಎರಡು ಸಾಲುಗಳಲ್ಲಿ ಕರ್ನಾಟಕವನ್ನು ವರ್ಣಿಸುತ್ತಲೇ ಭಾರತದ ಚಿತ್ರ ಮೂಡುತ್ತದೆ. ಮಗಳು ತಾಯಿಯಂತಿದ್ದಾಳೆ ಎಂದರೆ ಇಬ್ಬರಿಗೂ ಶೋಭಾಯಮಾನ. ಅಲ್ಲಿನ ವೈವಿಧ್ಯದ ಭಾವ ಇಲ್ಲೂ ಎಂಬ ಅರ್ಥವನ್ನು ಕುವೆಂಪು ಹೇಳಿದರು. ಆದ್ದರಿಂದಲೇ ಇದು ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂಬ ಅವರ ಅಶಯ. ಈ ನಾಡಗೀತೆಯಲ್ಲಿ ಹತ್ತಾರು ಶ್ರೇಷ್ಠರ, ಶ್ರೇಷ್ಠತೆಯ ಸಂಕೇತಗಳ ದಟ್ಟ ಚಿತ್ರವಿದೆ. ಇಂತಹ ಪದ್ಯಗಳು ಬೇರೆ ಇದ್ದಂತೆ ಕಾಣುವುದಿಲ್ಲ. ಪ್ರಾಯಃ ನಿಸಾರ್‌ರ ‘ನಿತ್ಯೋತ್ಸವ’ವನ್ನು ಓದಿದವರಿಗೆ ಕುವೆಂಪು ನೀಡಿದ ವಿಸ್ತಾರದ ಅನುಭವವಾದೀತು.

ಜಯ ಭಾರತ ಜನನಿ ಇಂದು ಮತಾಂಧತೆಯ ರಕ್ತದಲ್ಲಿ ಬಳಲಿದ್ದಾಳೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳು ವಿವೇಕಿಗಳಿಗೆ ತಳಮಳವನ್ನು ಹುಟ್ಟಿಸುತ್ತವೆ. ಒಂದಷ್ಟು ಮಂದಿ ಅವಿವೇಕಿಗಳು ಈಗ ಇರುವ ಸ್ಥಿತಿಯೇ ಸರಿಯೆಂದು ಸಾರುತ್ತಿದ್ದಾರೆ. ಡ್ರಾಕುಲಾನಿಗೂ ಭಕ್ತರಿರುವುದನ್ನು ಬ್ರಾಮ್ ಸ್ಟೋಕರ್ ಬರೆದಿದ್ದಾನೆ. ಭಾರತೀಯ ಪುರಾಣಗಳಲ್ಲಿ ಪಾತಾಳವೆಂಬೊಂದು ಜಗತ್ತನ್ನು ನಿರ್ಮಿಸಿ ಅಲ್ಲಿನ ಪಟ್ಟವನ್ನು ರಕ್ಕಸರಿಗೆ ಕೊಟ್ಟು ಅವರಿಗೂ ಅಸಂಖ್ಯ ಬೆಂಬಲಿಗರನ್ನು ಸೃಷ್ಟಿಸಿದ್ದರ ಹಿಂದೆ ಯಾವ ಸೂಚನೆಯಿತ್ತು? ಅವರು ಆಗಾಗ ದೇವಲೋಕಕ್ಕೆ ದಾಳಿಯಿಟ್ಟು ಇಂದ್ರಪಟ್ಟವನ್ನು ಆಕ್ರಮಿಸಿ ಮತ್ತೆ ಅದ್ಯಾವುದೋ ದೇವರು ಬಂದು ಅವರನ್ನು ಮತ್ತೆ ಪಾತಾಳಕ್ಕೆ ತಳ್ಳಿ ದೇವಲೋಕದಲ್ಲಿ ಪೂರ್ವಸ್ಥಿತಿಯನ್ನು ಮತ್ತೆ ತರಬೇಕಾಗಿತ್ತು. ಭಗವಂತನ ಕೈಯಲ್ಲಿ ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಅಭ್ಯುತ್ಥಾನಮ ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ’ ಮತ್ತು ‘ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಃ ಧರ್ಮ ಸಂಸ್ಥಾಪನಾರ್ಥಾಯಾ ಸಂಭವಾಮಿ ಯುಗೇ ಯುಗೇಃ’ ಎಂದು ಹೇಳಿಸಿದವರಿಗೆ ಕಾಲಚಕ್ರ ಗಡಿಯಾರದ ಮುಳ್ಳುಗಳಂತೆ ಉರುಳುವ ಗತಿ ಮತ್ತು ಅದರೊಂದಿಗೇ ಯಾವುದು ಶಾಶ್ವತವಲ್ಲ, ಧರ್ಮವೂ- ಎಂದು ಗೊತ್ತಿದ್ದಿರಬೇಕು. ಈಗ ನಡೆಯುತ್ತಿರುವುದು ಇದೇ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯವು ಈಗ ಜಗತ್ತಿನ ಕೊನೆಯ ಘಟ್ಟವೆಂದು ದೃಢವಾಗಿ ನಂಬುತ್ತದೆ.

ಈ ನಂಬಿಕೆಗೆ ವೈಜ್ಞಾನಿಕ ಆಧಾರಗಳಿರಲಾರದು. ಆದರೆ ಪ್ರಕೃತ ಭಾರತದ ಮತ್ತು ಒಟ್ಟಾರೆ ಜಗತ್ತಿನ ಸನ್ನಿವೇಶವನ್ನು ಗಮನಿಸಿದರೆ ಇದು ನಿಜವೇನೋ ಅನ್ನಿಸದಿರದು. ಇಲ್ಲಿ ಕಟ್ಟುವುದಕ್ಕಿಂತ ಕುಟ್ಟುವವರ ಸಂಖ್ಯೆ ಹೆಚ್ಚೆಂಬುದು ಮನವರಿಕೆಯಾದೀತು. ದಾಖಲೆಗಳಲ್ಲಿ 1947ರಲ್ಲಿ ಭಾರತವೆಂಬ ಈ ದೇಶವನ್ನು ಸೃಷ್ಟಿಸಿಕೊಂಡಿದ್ದೇವೆ ಮತ್ತು ಅದಾದ ನಂತರ ನಮಗೆ ನಾವೇ ನಮ್ಮ ಸಂವಿಧಾನವನ್ನು ನೀಡಿಕೊಂಡು ಅದರಂತೆ ಎಲ್ಲರೂ ತೃಪ್ತರಾಗುವ ರೀತಿಯಲ್ಲಿ ಬದುಕಲು ನಿರ್ಧರಿಸಿದ್ದೇವೆಂದು ಹೇಳಿಕೊಂಡರೂ ಈಗ ನಾಡನ್ನು, ದೇಶವನ್ನು ನಿರ್ಮಾಣಮಾಡುವ ಬದಲು ನಿರ್ನಾಮ ಮಾಡತೊಡಗಿದ್ದೇವೆ. ಗಾಂಧಿ, ನೆಹರೂಗಳ ಯುಗವನ್ನು ಕೊನೆಗಾಣಿಸಲು ಅಥವಾ ಪಲ್ಲಟಗೊಳಿಸಲು ಸರ್ವಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಮರುಭೂಮಿಯಂತಹ ನಿರ್ಜನ ಪ್ರದೇಶಗಳು ಉಂಟಾಗುತ್ತಿವೆ. ಇದನ್ನು ನೋಡಿ ಆನಂದಿಸಲು ಎಂಥ ಕಣ್ಣುಗಳು ಬೇಕು? ಕುವೆಂಪು ಹೇಳಿದ್ದನ್ನು ನೆನಪಿಸಿಕೊಂಡರೆ ದೇಶಕ್ಕೆ ಬಂದದ್ದು ನಾಡಿಗೆ ಬಾರದಿದ್ದೀತೇ? ಕರ್ನಾಟಕವನ್ನು ಈಗ ಈ ಎಲ್ಲ ಅನಿಷ್ಟಗಳ ಆಖಾಡವಾಗಿಸಲು ಎಲ್ಲ ಸಿದ್ಧತೆಗಳು ನಡೆದಿವೆ.

ಮೆಕಾಲೆ ಯಾವುದನ್ನು ಭಾರತೀಯ ಮನಸ್ಸುಗಳ ವಿರುದ್ಧ ಪ್ರಯೋಗಿಸಲು ನಿರ್ಧರಿಸಿ ಸ್ವಲ್ಪ ಮಟ್ಟಿಗಾದರೂ ಯಶಸ್ವಿಯಾದನೋ ಅದೇ ತಂತ್ರವನ್ನು ಕರ್ನಾಟಕದ ಈಗಿನ ಸರಕಾರವು ಸಂಘಪರಿವಾರದೊಡಗೂಡಿ ನಡೆಸುತ್ತಿದೆ. ಕಳೆದ ಕೆಲವು ದಿನಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಭಾರತೀಯ ಮೆಕಾಲೆಗಳು ಆಕ್ರಮಣ ಮಾಡಿದ ರೀತಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದಕ್ಕೆ ತರ್ಕ, ನ್ಯಾಯಗಳ ಹಾದಿಯಿಲ್ಲ. ಈ ಪ್ರಯೋಗದಲ್ಲಿ ಹಿರಿಯರ, ಶ್ರೇಷ್ಠರ, ಮಾನಖಂಡನವಾಗುತ್ತಿದೆಯದರೂ ಆ ಬಗ್ಗೆ ಕೆಲವರ ಹೊರತಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರಂತ, ಕುವೆಂಪು, ಬೇಂದ್ರೆ, ಡಿವಿಜಿಯಂಥವರು ಈಗ ಬದುಕಿದ್ದರೆ ಏಕವಚನದ ಬೈಗುಳವನ್ನೆದುರಿಸಬೇಕಾಗಿತ್ತೇನೋ? ನಮ್ಮ ರಾಜಕಾರಣಿಗಳು ಅಸಹನೆಯನ್ನು ಮತ್ತು ಅಜ್ಞಾನವನ್ನು ಬಿತ್ತುವ, ಹಬ್ಬುವ ವೈಖರಿಯನ್ನು ಗಮನಿಸಿದರೆ ಇದರಿಂದ ಬೇಗ ಮುಕ್ತಿ ಸಿಗುವ ಲಕ್ಷಣಗಳಿಲ್ಲ. ಅರಳುವ ಮನಸ್ಸುಗಳಿಗೆ ವಿನಾಕಾರಣ ಕೆರಳುವ ಗುಣವಿಲ್ಲ. ಆದರೆ ಈ ಬೆಳೆಯುವ ಮನಸ್ಸುಗಳನ್ನು ಕೊಳೆಯುವಂತೆ ಮಾಡುವ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸರಕಾರ ಮತ್ತು ಅದರ ಅಂಗಸಂಸ್ಥೆಗಳು ಏನು ಮಾಡುತ್ತವೆ ಎನ್ನುವುದಕ್ಕಿಂತ ಸರಕಾರದ ಹಿಂದೆ ನಿಂತಿರುವ (ಅ)ದೃಶ್ಯ ಶಕ್ತಿಗಳು ಹೇಗೆ ಇದನ್ನು ರೂಪಿಸುತ್ತಿವೆಯೆಂಬುದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು.

ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಸಪ್ತಸಾಲವೃಕ್ಷಗಳ ಪ್ರಸಂಗ ಬರುತ್ತದೆ. ಎಷ್ಟೇ ಕಡಿದರೂ ಅವು ಚಿಗುರುತ್ತಿದ್ದುವು. ಕೊನೆಗೆ ಅವುಗಳ ಬೇರು ಪಾತಾಳದಲ್ಲಿದ್ದು ಅವು ರಾಕ್ಷಸೀಯವಾಗಿರುವುದು ಗೊತ್ತಾದ ಬಳಿಕ ರಾಮಬಾಣ ಅವನ್ನು ತರಿದ ಬಳಿಕವಷ್ಟೇ ಈ ಸಾಲವೃಕ್ಷಗಳ ಅಳಿವಾಗುತ್ತದೆ. ಆದ್ದರಿಂದ ಅವುಗಳ ತಳಮಟ್ಟದ ಧೂರ್ತತೆಯನ್ನು ಶೋಧಿಸಿ ಎದುರಿಸದ ಹೊರತು ಮತಾಂಧತೆಯ ಸಾಲವೃಕ್ಷಗಳು ಅಳಿಯವು. ಯುಗಪ್ರವರ್ತಕರು ತಮ್ಮ ಸಮಕಾಲೀನ ತಲೆಮಾರನ್ನು ಅಥವಾ ತಮ್ಮ ಚರಿತ್ರೆಯನ್ನು ಭವಿಷ್ಯ ಬರೆದೀತೆಂದು ನಂಬಿ ಅಥವಾ ಆಶಿಸಿ ಬದುಕಿದವರಲ್ಲ. ಇತಿಹಾಸವೆಂಬುದು ಜನಪದರ ಬಾಯಲ್ಲಿ ಮೊಳೆತು ಮಹಾವೃಕ್ಷವಾಗಿ ಬೆಳೆದೀತು, ಉಳಿದೀತು ಎಂಬುದರ ತಾತ್ಪರ್ಯ. ಬೇರು ನೀರುಂಡ ಮೇಲೆ ತಣಿಯವೇ ಬೂರುಹದ ಶಾಖೋಪಶಾಖೆಗಳು? ಆದ್ದರಿಂದ ಮಹಾಮಹಿಮರ ಬದುಕು ಭವಿಷ್ಯದ ಕೈಯ ಆಟದ ಗೊಂಬೆಗಳಲ್ಲ. ಅವು ಕಾಲಯಾನದ ಕುರುಹುಗಳು. ಉಳಿಯುತ್ತವೆ; ಉಳಿದೇ ಉಳಿಯುತ್ತವೆ.

ಆಡಳಿತವಿರುವುದು ಸೇಡಿಗೂ ಅಲ್ಲ; ದಬ್ಬಾಳಿಕೆಗೂ ಅಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಈಡೇರಿಸುವುದಕ್ಕೂ ಅಲ್ಲ. ಆದರೆ ಈಗ ಪಠ್ಯದ ಹೆಸರಿನಲ್ಲಿ ಜಳ್ಳನ್ನೇ ಬಿತ್ತಿದರೆ ಮುಂದೆ ಬೆಳೆಯ ಬದಲು ಕಳೆ ಮತ್ತು ಕೊಳೆಯೇ ಮಣ್ಣಿನ ಸಾರಸರ್ವಸ್ವವಾದೀತೆಂಬುದು ಈ ಕೆಟ್ಟ, ಧೂರ್ತ ಮನಸ್ಸುಗಳಿಗೆ ಗೊತ್ತಾಗುವುದಿಲ್ಲ. ಗಾಂಧಿಯನ್ನು ಕೊಂದದ್ದು ಸರಿಯೆಂಬ ಗೋಡ್ಸೆಯ ಮಕ್ಕಳಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದು ಹೇಗೆ ಗೊತ್ತಾಗಬೇಕು? ಅಥವಾ ಕೆಟ್ಟದ್ದು ಯಾವುದೆಂಬುದನ್ನು ಅರಿತೇ ಆರಿಸಿಕೊಳ್ಳುತ್ತಿದ್ದಾರೆಂದು ನಂಬಿಕೊಳ್ಳಬಹುದು. ಪಠ್ಯಕ್ರಮದಲ್ಲಿ ವಿಕಾರಗಳ ಸೇರ್ಪಡೆ ಎಲ್ಲ ಹೆತ್ತವರಿಗೂ ಚಿಂತೆಯ ವಿಚಾರವಾಗಬೇಕಿತ್ತು. ಆದರೆ ಈ ಪೈಕಿ ಸಾಕಷ್ಟು ವಿದ್ಯಾವಂತರು ತಮ್ಮ ಪ್ರಜ್ಞೆಯನ್ನು ಧರ್ಮ-ದೇವರುಗಳ ಹೆಸರಿನಲ್ಲಿ, ದೇಶವನ್ನು ‘ಹಿಂದೂರಾಷ್ಟ್ರ ನಿರ್ಮಾಣ’ವೆಂಬ ವಿನಾಶಕಾರಿ ಕನಸಿನಲ್ಲಿ ಅಡವಿಟ್ಟಿರುವುದರಿಂದ ಪರಿಸ್ಥಿತಿ ಸುಧಾರಣೆಯಾದೀತೆಂಬ ಸುಳ್ಳು ನಿರೀಕ್ಷೆ ಯಾರಿಗೂ ಬೇಡ.

ಇಲ್ಲಿಗೇ ವಿಷಯವು ಕೈಬಿಡುವುದಿಲ್ಲ. ಯಾವಾಗ ಆಡಳಿತವು ಇದು ತನ್ನ ಅಸ್ತಿತ್ವಕ್ಕೆ ಸವಾಲೆಂದು ತಿಳಿಯುತ್ತದೆಯೋ ಆಗ ಅದು ವೈಚಾರಿಕ, ತಾರ್ಕಿಕ ಪರಿಧಿಯನ್ನು ದಾಟುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬ ರಾಜಬೀದಿಯನ್ನು ತ್ಯಜಿಸಿ ಯಾರು ಸರಿ, ಯಾರು ತಪ್ಪು ಎಂಬ ಕೊಳಚೆ ಓಣಿಯಲ್ಲಿ ಸಾಗುತ್ತದೆ. ಈಗ ಕರ್ನಾಟಕದಲ್ಲಿ ಆಗಿರುವುದೂ ಅದೇ. ವಿಕೃತ ಮನಸ್ಥಿತಿಯ ಒಂದಷ್ಟು ಮಂದಿ ಒಟ್ಟಾಗಿ ಆಳುವವರ ಜೋಳವಾಳಿಗೆಯ ಋಣ ತೀರಿಸುತ್ತಾ ಪೀಕದಾನಿಯನ್ನು ಹಿಡಿದು ಸಾಗುತ್ತಿದ್ದಾರೆ. ಸಮಾಜದ ಬಹುಭಾಗವು ಸಮ್ಮೋಹನಾಸ್ತ್ರದ ಗ್ರಹಣದಡಿ ಮಲಗಿರುತ್ತದೆ. ಈ ಹಿಂದಿನ ಸಮಿತಿ ಯಾವುದನ್ನು ಮಾಡಿದೆಯೋ ಅವನ್ನೆಲ್ಲ ಇಲ್ಲವಾಗಿಸಿ (ಅವೆಲ್ಲವೂ ಸರಿಯೆಂದು ಅರ್ಥವಲ್ಲ. ಅಲ್ಲೂ ಪಟ್ಟಭದ್ರ ಹಿತಾಸಕ್ತಿಗಳು ಕೆಲಸಮಾಡಿದ್ದವು!) ಹೊಸದನ್ನು ಅದು ಹೇಗೇ ಇರಲಿ (ಇನ್ನು ಹೇಗೆ? ಇನ್ನಷ್ಟು ಲಯಕಾರಕವಾಗಿ!) ಬರಮಾಡಿಕೊಂಡು ಅಂತೂ ವಿದ್ಯಾರ್ಥಿಗಳೆಂಬ ಭವಿಷ್ಯದ ಪೀಳಿಗೆಯನ್ನು ಈಗಲೇ ಮಂದವಾಗಿಸಲು, ಹೊಸಕಿಹಾಕಲು ಯತ್ನಿಸುತ್ತದೆ. ಇಂತಹ ಪೀಡಾಬುದ್ಧಿಗಳಿಗೆ ತಾವು ಅವಮಾನಿಸುತ್ತಿರುವುದು ಬುದ್ಧಿಯನ್ನೋ ಪ್ರಜ್ಞೆಯನ್ನೋ ಎಂಬುದು ಗೊತ್ತಿರುವುದಿಲ್ಲ. ಇದರಿಂದಾಗಿ ಕುವೆಂಪುರವರನ್ನು ಅವಮಾನಿಸುವುದೂ ಇಂತಹ ಕತ್ತರಿಯನ್ನು ಸಾಣೆಗೊಳಿಸುವ ಒಂದು ಕಾಯಕವಾಗುತ್ತದೆ. ಬರೆದದ್ದು ಏನನ್ನು ಎಂಬುದಕ್ಕಿಂತ, ಎಷ್ಟು ಎಂಬುದು ಮುಖ್ಯವಾಗುತ್ತದೆ. ಯಾವ ಮತ್ತು ಯಾರ ವಿಷಾದವೂ ಈ ಗೊಡ್ಡು ಮನಸ್ಸುಗಳಿಗೆ ಪಥ್ಯವಾಗುವುದಿಲ್ಲ. ಆದ್ದರಿಂದ ಹಳಿತಪ್ಪಿ ಹಳಿಯುವವರಿಗೆ ಕುವೆಂಪು ಆದರೇನು? ದೇವನೂರು ಆದರೇನು?

ವಿಚಿತ್ರವೆಂದರೆ ಈ ಮಂದಿಯ ಪೈಕಿ ಕೆಲವರಾದರೂ ಅಂತರಂಗದಲ್ಲಿ ಎಂತಹ ದುರ್ಬುದ್ಧಿಯನ್ನು ಹೊಂದಿರಲಿ, ಒಂದು ಕಾಲದಲ್ಲಿ ಆರೋಗ್ಯಕಾರಿ ವಾತಾವರಣದಲ್ಲಿ ಓದುಬರಹವನ್ನು ಕೈಗೊಂಡವರೇ. ತಾನು ಹಿಂದೂವಾದರೆ ಸಾಲದು, ಬ್ರಾಹ್ಮಣನಾಗಿ ಉಳಿಯಬೇಕು ಎಂಬ ವಿಕೃತ ಮನಸ್ಸು ಈಗ ಕಾರ್ಯಮಗ್ನವಾಗಿದೆ. ಚಕ್ರವರ್ತಿ ಸೂಲಿಬೆಲೆ, ಶತಾವಧಾನಿ ಗಣೇಶ್ ಮುಂತಾದವರು ಭವಿಷ್ಯವನ್ನು ರೂಪಿಸುವ ಯಂತ್ರ/ತಂತ್ರವಸ್ತುಗಳಾಗಿವೆ. ಅವರೇ ಬೇಕೆಂದಲ್ಲ, ಅವಮಾನಿಸುವಾಗ ಬೆತ್ತಲೆ ನಿಲ್ಲುವುದರ ಸುಖ ಅವರ ಸೂತ್ರಧಾರರಿಗಿದೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಸರಿತಪ್ಪುಗಳ ಮಿಶ್ರಣದ ಬರಹಗಾರರಾಗಿದ್ದು ಒಮ್ಮೆಗೇ ಹಿಂದೂ ರಾಜಕಾರಣಿಯಾದವರ ಸ್ಥಿತಿ ಹೀಗಿದ್ದರೆ, ಇನ್ನು ಅನೇಕರು ಬೇಲಿಯ ಮೇಲೆ ಕಾದು ಕುಳಿತಿದ್ದಾರೆ. ಇವರು ಮಾಂಸದ ತುಂಡಿಗಾಗಿ ಕಾಯುವ ಹದ್ದುಗಳೋ ಅಥವಾ ತಮ್ಮ ಬಳಗವನ್ನು ಕರೆಯುವ ಕಾಗೆಗಳೋ ಎಂಬುದು ಸದ್ಯದಲ್ಲೇ ಗೊತ್ತಾಗಬಹುದು. ಮಹಾಭಾರತದ ವಿರಾಟ ಪರ್ವದಲ್ಲಿ ಬೃಹನ್ನಳೆಯ ಸಮ್ಮೋಹನಾಸ್ತ್ರಕ್ಕೆ ಕೌರವಸೇನೆ ಮೈಮರೆತು ಮಲಗಿತ್ತು. ಆಚಾರ್ಯ ಭೀಷ್ಮರಿಗೆ ಸಮ್ಮೋಹನಾಸ್ತ್ರ ತಾಗದು. ಆದರೂ ಅವರು ಅರ್ಜುನನನ್ನು ಗೌರವಿಸುವ ರೀತಿಯಲ್ಲಿ ತಾನೂ ಮೈಮರೆತವರಂತೆ ನಟಿಸಿ ಮಲಗಿದ್ದರು. ಮಲಗಿದವರ ವಸ್ತ್ರಾಭರಣಗಳನ್ನು ಉತ್ತರಕುಮಾರನು ಲೂಟಿ ಮಾಡುತ್ತಿದ್ದಾಗ ಬೃಹನ್ನಳೆಯು ಆತನಿಗೆ ಭೀಷ್ಮರ ಬಳಿ ಹೋಗಬಾರದೆಂದು ಎಚ್ಚರಿಸಿದ. ಸರಿಯೇ, ಆದರೆ ಮಲಗಿದ ಭೀಷ್ಮರ ಪ್ರಜ್ಞೆಯಾದರೂ ಏನು? ಅದರ ಸಮಥರ್ನೆಯೇನು?

ಭಾಷೆ ಮತ್ತು ಸಾಹಿತ್ಯದ ಮೂಲ ಸ್ರೋತಗಳಾದ ಶಿಕ್ಷಣದಲ್ಲಿ ಅಪಾಯಕಾರಿ ಸೋಂಕು ಹರಡುತ್ತಿದ್ದಾಗ ಸುಮ್ಮನಿರುವುದು ದೇಶದ್ರೋಹ. ಅನೇಕ ನಿವೃತ್ತರು ತಮಗೆ ಪಿಂಚಣಿ ಬರುತ್ತಿರುವುದು ತಾವು ಬದುಕುತ್ತಿರುವುದಕ್ಕಲ್ಲ, ಇನ್ನೂ ಸಾಯದಿರುವುದಕ್ಕೆ ಎಂದು ನಂಬಿದಂತಿದೆ. ಮಹಾಭಾರತದಲ್ಲಿ ಕರ್ಣಾರ್ಜುನ ಅಥವಾ ಅಂತಹ ಮಹತ್ವದ ಯುದ್ಧ ನಡೆಯುತ್ತಿದ್ದಾಗ ದೇವತೆಗಳು (ಮೈಸೂರು ದಸರಾ ಮೆರವಣಿಗೆಯನ್ನು ತಮ್ಮ ಮನೆಗಳ ಮಹಡಿಯಿಂದಲೋ, ಕಿಟಿಕಿಯಿಂದಲೋ ನೋಡುವಂತೆ) ಅಂಬರದಿಂದ ನೋಡುತ್ತಿದ್ದರಂತೆ. ಅವರಿಗೆ ಯಾರು ಗೆದ್ದರೂ ಸೋತರೂ ಏನೂ ಅಲ್ಲ; ಏಕೆಂದರೆ ಅವರು ಅಮರರು. ಕಾಲಚಕ್ರದ ಧರ್ಮವನ್ನು ಮೀರಿದವರು. ಇಂದಿನ ಅನೇಕ ಸರಸ್ವತೀಪುತ್ರರು ನಿಜಕ್ಕೂ ಇಂತಹ ದೇವತೆಗಳು. ಈಗ ನಮ್ಮ ಅನೇಕ ಹೆಸರಾಂತ ಸಾಹಿತಿಗಳು, ಚಿಂತಕರು ತಮ್ಮ ಹೆಸರಿಗೊಂದು ಅಂತ್ಯ ಹಾಡಬೇಕೆಂದಿದ್ದಾರೆ. ಬಹುತೇಕ ಕವಿಗಳು, ಕಥೆ-ಕಾದಂಬರಿಕಾರರು, ವಿಮರ್ಶಕರು, ನಾಟಕಕರ್ತೃಗಳು ಬಾಯಿಗೂ ಕೈಗೂ ಬೀಗ ಜಡಿದುಕೊಂಡು ಮುಖಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಮಕ್ಕಳು, ಮೊಮ್ಮಕ್ಕಳು ಇದ್ದಾರೆಂದು ನಂಬುವುದು ಕಷ್ಟ. ಅವರನ್ನು ಸಾರ್ವಜನಿಕವಾಗಿ ಕಾಣುವುದು ಅವರಿಗೆ ಯಾವುದಾದರೂ ಪ್ರಶಸ್ತಿ ಬಂದಾಗ ಮಾತ್ರ! ಮಹಾಭಾರತದಲ್ಲಿಲ್ಲದ ಆತ್ಮಹತ್ಯಾ ಪರ್ವ ಈಗ ನಮ್ಮೆದುರಿಗಿದೆ.

ಇದನ್ನು ಆಕ್ಷೇಪಿಸುವ ಕೆಲವಾದರೂ ಪ್ರಗತಿಪಥವೀರರನ್ನು ಮೆಚ್ಚಬೇಕಾಗಿಲ್ಲ. ಅವರು ತಾವು ಬಿತ್ತಿದ್ದನ್ನೇ ಉಣ್ಣುತ್ತಿದ್ದಾರೆ. ಹಿಂದೆ ಕಾಂಗ್ರೆಸ್‌ಪಕ್ಷ ಆಡಳಿತದಲ್ಲಿದ್ದಾಗ ಪ್ರತಿಷ್ಠಿತ, ಆಯಕಟ್ಟಿನ ಸ್ಥಾನವನ್ನು ಆಕ್ರಮಿಸಿಕೊಂಡಿದ್ದವರಿಗೆ, ಪ್ರಾಧಿಕಾರದಿಂದ ಪ್ರಾಧಿಕಾರಕ್ಕೆ, ಅಕಾಡಮಿಯಿಂದ ಅಕಾಡಮಿಗೆ, ವಿಶ್ವವಿದ್ಯಾನಿಲಯದಿಂದ ವಿಶ್ವವಿದ್ಯಾನಿಲಯಕ್ಕೆ ಗಗನಮಾರ್ಗದಲ್ಲಿ ಹಾರುತ್ತಿದ್ದವರಿಗೆ (ಇವರೇ ನಿಜವಾದ ಹಾರವರು!) ಈಗ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಈಗ ಮೈಪರಚಿಕೊಳ್ಳುವಂತಾಗಿದೆ. ಹಿಂದೂ ಸಮಾಜದಲ್ಲಿ ಯಾವ ಕಾಲಕ್ಕೂ ಅಭಿವೃದ್ಧಿಯನ್ನು ಕಾಣದೆ, ನ್ಯಾಯವನ್ನು ಪಡೆಯದೆ ಬಲಿಪಶುಗಳಾಗಿ ಬಳಲುತ್ತಿದ್ದಾರೋ ಅಂತಹವರು ಮತ್ತು ಅಂತಹವರ ಪರವಾಗಿ ಬದುಕನ್ನು, ಸಮಾಜವನ್ನು, ನಾಡನ್ನು-ದೇಶವನ್ನು-ಜಗತ್ತನ್ನು ನೋಡುವವರು ಮಾತ್ರ ಸದ್ಯಕ್ಕೆ ಪ್ರಾಮಾಣಿಕವಾಗಿ ಆತಂಕವನ್ನೆದುರಿಸುವವರು; ಅವರ ಪಾಲಿಗಷ್ಟೇ ಈಗ ನಡೆಯುತ್ತಿರುವುದು ಅಕ್ರಮ, ಅನ್ಯಾಯ. ಉಳಿದ ಅವಕಾಶವಾದಿಗಳಿಗೆ ತಮ್ಮ ಕೈಗಳಿಂದ ಅಧಿಕಾರವನ್ನು ಕಿತ್ತುಕೊಂಡ ಅನುಭವ. ಸೌಹಾರ್ದ ಕರ್ನಾಟಕವೆಂದರೆ ತಾವು ಪಲ್ಲಕಿಯೇರುವುದಷ್ಟೇ ಎಂಬ ನಹುಷ ತಲ್ಲಣ. ತಕ್ಷಣಕ್ಕೆ ಚಕ್ರತೀರ್ಥ-ವಕ್ರತೀರ್ಥರೆಲ್ಲ ಆನಂದತೀರ್ಥರು. ಆದರೆ ಅರಿವಿಲ್ಲದೆ ತಮ್ಮ ಮಕ್ಕಳಿಗೂ ಇದೇ ವಿಷವನ್ನು ಬಡಿಸುವ ಮತ್ತು ಉಣಿಸುವ ಸನ್ನಾಹದಲ್ಲಿದ್ದಾರೆ. ಅಡುಗೆ ನಡೆಯುತ್ತಿದೆ. ಮಕ್ಕಳಿಗೆ ಇದಕ್ಕಿಂತ ಬಿಸಿಯೂಟ ಬೇರಿರದು. ಅವರ ಉದ್ದೇಶ ಸರಿ. ಅಮಾತ್ಯರಾಕ್ಷಸನು ಸೃಷ್ಟಿಸಿದ ವಿಷಕನ್ಯೆಯೂ ಇಂತಹದ್ದೇ ಪ್ರತಿಮೆ. ಶಕುನಿ ಕೌರವಪಾಳಯ ಸೇರಿದ್ದೇ ಅವರನ್ನು ನಾಶಪಡಿಸಲು ಎಂಬ ಐತಿಹ್ಯವಿದೆ. ಇತಿಹಾಸ ಮಾತ್ರವಲ್ಲ, ಪುರಾಣವೂ ಪುನರಾವರ್ತನೆಯಾಗುತ್ತಿದೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)