ಮಾಹೆಗೆ ರಾ.ಮಾನ್ಯತಾ ಮಂಡಳಿಯಿಂದ ಎ++ ಮಾನ್ಯತೆ
ಮಣಿಪಾಲ, ಜೂ.2: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿ (ನ್ಯಾಕ್), ಮಣಿಪಾಲ ಅಕಾಡೆಮಿ ಆ್ ಹೈಯರ್ ಎಜ್ಯುಕೇಷನ್ (ಮಾಹೆ)ಗೆ ಗರಿಷ್ಠ ಎ++ ಮಾನ್ಯತೆ ನೀಡಿದೆ.
ನ್ಯಾಕ್ ಎಂಬುದು ವಿವಿ ಗ್ರಾಂಟ್ ಕಮಿಷನ್‌ನ (ಯುಜಿಸಿ) ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳ ವೌಲ್ಯಮಾಪನ ನಡೆಸಿ ಮಾನ್ಯತೆಯನ್ನು ನಿರ್ಧರಿಸುತ್ತದೆ. ಸಂಸ್ಥೆಗಳಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ, ವಿವಿಧ ಮಾನದಂಡಗಳ ಆಧಾರದಲ್ಲಿ ಮೌಲ್ಯಮಾಪನ ನಡೆಸಿ ವಿವಿಧ ಗ್ರೇಡ್‌ಗಳನ್ನು ನೀಡುತ್ತದೆ. ಇವುಗಳಲ್ಲಿ ಎ++ ಮಾನ್ಯತೆ ಉತ್ಕೃಷ್ಠ ಶ್ರೇಣಿಯಾಗಿದೆ.
ನ್ಯಾಕ್ ಗ್ರೇಡ್ ನೀಡುವ ಮುನ್ನ ವಿವಿಧ ಮಾನದಂಡಗಳ ಆಧಾರದಲ್ಲಿ, ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯ ಸಾಧನೆ, ವಿದ್ಯಾರ್ಥಿಗಳ ಕಲಿಕೆಯ ಮಟ್ಟ, ಬೋಧನಾ ಸಾಮರ್ಥ್ಯ, ಸಂಸ್ಥೆಯ ಮೂಲಭೂತ ಸೌಕರ್ಯಗಳ ಗುಣಮಟ್ಟ, ಸಂಶೋಧನೆಯ ಗುಣಮಟ್ಟ, ನಾಯಕತ್ವ, ಆಡಳಿತ ವ್ಯವಸ್ಥೆ, ಸಂಸ್ಥೆಯ ಪ್ರಗತಿಗಳನ್ನು ಪರಿಶೀಲಿಸುತ್ತದೆ. ಇವುಗಳ ಆಧಾರದಲ್ಲಿ ಸಂಸ್ಥೆಯ ನ್ಯಾಕ್ ಮಾನ್ಯತೆಯನ್ನು ನೀಡುತ್ತದೆ.
ಮಾಹೆ ವಿವಿಗೆ ನ್ಯಾಕ್‌ನಿಂದ ದೊರಕಿರುವ ಎ++ ಮಾನ್ಯತೆ ಕುರಿತಂತೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್ ಡಾ.ಪಿ.ಎಲ್. ಎನ್.ಜಿ. ರಾವ್ ಹಾಗೂ ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ಅತ್ಯಂತ ಹರ್ಷ ವ್ಯಕ್ತಪಡಿಸಿದ್ದು, ಇದು ಸಂಸ್ಥೆಯ ಅತ್ಯುತ್ಕೃಷ್ಟ ನಿರ್ವಹಣೆಯನ್ನು ತೋರಿಸುತ್ತದೆ ಎಂದಿದ್ದಾರೆ.