ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕೇಂದ್ರ ಸರಕಾರ ಸಂಚು ಹೂಡುತ್ತಿದೆ: ಕೆಸಿಆರ್ ಆರೋಪ
ಹೈದರಾಬಾದ್, ಜೂ.2: ಕೇಂದ್ರ ಸರಕಾರವು ತನ್ನ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಹಾಗೂ ರಾಜ್ಯ ಸರಕಾರಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಸಂಚು ಹೂಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗುರುವಾರ ಆಪಾದಿಸಿದ್ದಾರೆ.
ಹೈದರಾಬಾದ್ನಲ್ಲಿ ಬುಧವಾರ ನಡೆದ ತೆಲಂಗಾಣ ರಾಜ್ಯ ಸ್ಥಾಪನೆ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಕೇಂದ್ರ ಸರಕಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಹಾಗೂ ರಾಜ್ಯಗಳ ಸ್ವಾಯತ್ತತೆ ಸವೆದುಹೋಗುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘‘ ಪ್ರಸಕ್ತ ಕೇಂದ್ರದಲ್ಲಿ ಅಧಿಕಾರದಲ್ಲಿ ಸರಕಾರವು ಪ್ರಬಲವಾದ ಕೇಂದ್ರ- ದುರ್ಬಲ ರಾಜ್ಯಗಳು ಎಂಬ ಕ್ಷುಲ್ಲಕ ಸಿದ್ಧಾಂತವನ್ನು ಆಧರಿಸಿದೆ’’ ಎಂದವರು ಆರೋಪಿಸಿದರು.
ಕೇಂದ್ರ ಸರಕಾರವು ರಾಜ್ಯಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಹೇಳಿದ ಅವರು ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುವುದನ್ನು ನಿಲ್ಲಿಸುವಂತೆ ಅವರು ಆಗ್ರಹಿಸಿದರು.
ಆರ್ಥಿಕ ಶಿಸ್ತು ಹಾಗೂ ವಿವೇಕಶೀಲತೆ ಮತ್ತು ಆರ್ಥಿಕ ಹೊಣೆಗಾರಿಕೆ, ಬಜೆಚ್ ನಿರ್ವಹಣೆಯ ಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರವು ಬೃಹತ್ ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದರು.
ಕೇಂದ್ರ ಸರಕಾರದ ರೈತ ವಿರೋಧಿ ವಿದ್ಯುತ್ ಸುಧಾರಣಾ ನೀತಿಯನ್ನು ಜಾರಿಗೊಳಿಸಲು ತೆಲಂಗಾಣ ನಿರಾಕರಿಸುತ್ತಿರುವುದರಿಂದ ಪ್ರತಿ ವರ್ಷವೂ ರಾಜ್ಯವು 5 ಸಾವಿರ ಕೋಟಿ ರೂ. ಕಳೆದುಕೊಳ್ಳುತ್ತಿದೆಯೆಂದು ರಾವ್ ಹೇಳಿದರು.
ರಾಜ್ಯಗಳು ತೆರಿಗೆಗಳಲ್ಲಿ ತಮ್ಮ ಪಾಲನ್ನು ಪಡೆಯದಂತೆ ಮಾಡಲು ಕೇಂದ್ರ ಸರಕಾರವು ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಜಾರಿಗೊಳಿಸುತ್ತಾ ಬಂದಿದೆ ಎಂದವರು ಹೇಳಿದರು. ಕೇಂದ್ರ ಸರಕಾರವು ರಾಜ್ಯಗಳಿಗೆ ಸಲ್ಲಬೇಕಾದಂತಹ ಕೋಟ್ಯಂತರ ರೂಪಾಯಿಗಳನ್ನು ದುಂದುವೆಚ್ಚ ಮಾಡುತ್ತಿದ್ದು, ಅದರ ಈ ವರ್ತನೆಯು ತೆಲಂಗಾಣದಂತಹ ರಾಜ್ಯಗಳಿಗೆ ಅಡಚಣೆಯಾಗಿ ಪರಿಣಮಿಸಿದೆ ಎಂದರು.