ಭಾರತದಲ್ಲಿ ಶಿಕ್ಷಣ-ಹತ್ಯೆ
ಕಲಿಕಾ ಗುಣಮಟ್ಟವು ಖಂಡಿತವಾಗಿಯೂ ಇಂದಿನ ಶಿಕ್ಷಣ ನೀತಿಯ ಪ್ರಮುಖ ಸಮಸ್ಯೆಯಾಗಿದೆ. ಆಯಾಯ ವಯೋಗುಂಪಿನ ಬಹುತೇಕ ಪ್ರತಿಯೊಂದು ಮಗು ಶಾಲೆಗೆ ಹೋಗುತ್ತದೆ. ಶಿಕ್ಷಕರ ಸಂಖ್ಯೆ ಮಾತ್ರ ಈಗಲೂ ಗಂಭೀರ ಸಮಸ್ಯೆಯಾಗಿದ್ದರೂ, ಅಗತ್ಯ ಶಾಲೆಗಳ ಸಂಖ್ಯೆ ಈಗ ಸಮಸ್ಯೆಯಲ್ಲ. ಹಾಗಾಗಿ, ನಿಜವಾದ ಸಮಸ್ಯೆ, ಮಕ್ಕಳಿಗೆ ಹೋಗಲು ಶಾಲೆಯಿದೆಯೇ ಅಥವಾ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತಿದೆಯೇ ಎನ್ನುವುದಲ್ಲ. ಬದಲಿಗೆ, ಶಾಲೆಯಲ್ಲಿ ಅವರು ಏನನ್ನಾದರೂ ಕಲಿಯುತ್ತಾರೆಯೇ ಮತ್ತು ಶಾಲೆಯಿಂದ ಹೊರಹೋಗುವ (ಶಾಲೆ ಬಿಡುವ)ಬಲವಂತಕ್ಕೆ ಅವರು ಒಳಗಾಗುತ್ತಿಲ್ಲವೇ ಎನ್ನುವುದು ನಿಜವಾದ ವಿಷಯವಾಗಿದೆ.
ಕಳೆದ ವಾರ ಬಿಡುಗಡೆಯಾದ ರಾಷ್ಟ್ರೀಯ ಸಾಧನಾ ಸಮೀಕ್ಷೆ (ಎನ್‌ಎಎಸ್)ಯ ವರದಿಯನ್ನು ನೋಡುತ್ತಿದ್ದಾಗ, 10 ವರ್ಷಗಳಿಗೂ ಹಿಂದೆ ನಡೆದ ಸಭೆಯೊಂದು ನೆನಪಾಯಿತು. 2011ರ ಸಾಲಿಗೆ ಎನ್‌ಎಎಸ್ ರೂಪಿಸುವುದಕ್ಕಾಗಿ ಕರೆಯಲಾದ ಸಭೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು ನನ್ನನ್ನು ಆಹ್ವಾನಿಸಿತ್ತು. ಆ ಸಭೆಯಲ್ಲಿ ನನ್ನ ಸಹೋದ್ಯೋಗಿಗಳಿಗೆ ನಾನು ಹೀಗೆ ಹೇಳಿದ ನೆನಪು: ‘‘ಭಾರತೀಯ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಬಗ್ಗೆ ನೀವು ಮಾಡಿರುವ ಸಮೀಕ್ಷೆಯು ಅತ್ಯುತ್ತಮವೂ ಹೌದು, ಅತ್ಯಂತ ಕೆಟ್ಟದೂ ಹೌದು. ಅತ್ಯುತ್ತಮ ಯಾಕೆಂದರೆ, ನಿಮ್ಮ ಮಾದರಿ ಮತ್ತು ಪ್ರಶ್ನೆ ವಿನ್ಯಾಸ ಪರಿಪೂರ್ಣವಾಗಿದೆ. ಕೆಟ್ಟದು ಯಾಕೆಂದರೆ, ನಿಮ್ಮ ವರದಿಗಳನ್ನು ಓದಿ ಯಾರೂ ಅರ್ಥ ಮಾಡಿಕೊಳ್ಳಲಾರರು. ಅದು ನೀತಿ ನಿರೂಪಣೆಗೆ ಯಾವುದೇ ಅರ್ಥಪೂರ್ಣ ದೇಣಿಗೆಗಳನ್ನು ನೀಡುವುದಿಲ್ಲ.’’
ಇತ್ತೀಚಿನ ದಿನಗಳಲ್ಲಿ ನಾವು ‘ಶಿಕ್ಷಣ-ಹತ್ಯೆ’ಯ ಅತ್ಯಂತ ಕೆಟ್ಟ ಉದಾಹರಣೆಗಳನ್ನು ನೋಡುತ್ತಿದ್ದೇವೆ.
ಕಲಿಕಾ ಗುಣಮಟ್ಟವು ಖಂಡಿತವಾಗಿಯೂ ಇಂದಿನ ಶಿಕ್ಷಣ ನೀತಿಯ ಪ್ರಮುಖ ಸಮಸ್ಯೆಯಾಗಿದೆ. ಆಯಾಯ ವಯೋಗುಂಪಿನ ಬಹುತೇಕ ಪ್ರತಿಯೊಂದು ಮಗು ಶಾಲೆಗೆ ಹೋಗುತ್ತದೆ. ಶಿಕ್ಷಕರ ಸಂಖ್ಯೆ ಮಾತ್ರ ಈಗಲೂ ಗಂಭೀರ ಸಮಸ್ಯೆಯಾಗಿದ್ದರೂ, ಅಗತ್ಯ ಶಾಲೆಗಳ ಸಂಖ್ಯೆ ಈಗ ಸಮಸ್ಯೆಯಲ್ಲ. ಹಾಗಾಗಿ, ನಿಜವಾದ ಸಮಸ್ಯೆ, ಮಕ್ಕಳಿಗೆ ಹೋಗಲು ಶಾಲೆಯಿದೆಯೇ ಅಥವಾ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತಿದೆಯೇ ಎನ್ನುವುದಲ್ಲ. ಬದಲಿಗೆ, ಶಾಲೆಯಲ್ಲಿ ಅವರು ಏನನ್ನಾದರೂ ಕಲಿಯುತ್ತಾರೆಯೇ ಮತ್ತು ಶಾಲೆಯಿಂದ ಹೊರಹೋಗುವ (ಶಾಲೆ ಬಿಡುವ)ಬಲವಂತಕ್ಕೆ ಅವರು ಒಳಗಾಗುತ್ತಿಲ್ಲವೇ ಎನ್ನುವುದು ನಿಜವಾದ ವಿಷಯವಾಗಿದೆ.
ಕಲಿಕೆಯನ್ನು ಅಳೆಯುವುದು ಕಠಿಣ ಕೆಲಸ
ಹಾಗಾಗಿ, ಈಗ ಎದ್ದಿರುವ ಪ್ರಶ್ನೆ- ಕಲಿಕೆಯನ್ನು ಅಳೆಯುವುದು ಹೇಗೆ? ಶಿಕ್ಷಣದ ವಿಷಯದಲ್ಲಿ ನಾನು ಅತಿಯಾಗಿ ಗೌರವಿಸುವ ಪ್ರೊಫೆಸರ್ ಕೃಷ್ಣ ಕುಮಾರ್ ಸೇರಿದಂತೆ ಕೆಲವು ಶಿಕ್ಷಣ ತಜ್ಞರು, ಇಂತಹ ಅಳತೆಯ ಕಲ್ಪನೆಯನ್ನೇ ವಿರೋಧಿಸುತ್ತಾರೆ. ಯಾಕೆಂದರೆ, ಇಂತಹ ಯಾವುದೇ ಪರೀಕ್ಷೆಗಳು ಬಹು ಆಯಾಮಗಳ ಕಲಿಕಾ ಪ್ರಕ್ರಿಯೆಗೆ ನ್ಯಾಯ ನೀಡಲು ವಿಫಲವಾಗುತ್ತವೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಅದು ಸತ್ಯವೂ ಹೌದು. ಆದರೆ ಹೆತ್ತವರು ಹಾಗೂ ನೀತಿ ನಿರೂಪಕರಿಗೆ ಶಿಕ್ಷಣದ ಗುಣಮಟ್ಟವನ್ನು ಅಳೆಯಲು ಸರಳ ವಿಧಾನವೊಂದರ ಅಗತ್ಯವಿದೆ. ಈ ಅಂತರವನ್ನು ಎನ್‌ಎಎಸ್ ತುಂಬ ಬೇಕಾಗಿತ್ತು. ಆದರೆ ಅದು ಹಾಗೆ ಮಾಡಿಲ್ಲ.
ಕಳೆದ 16 ವರ್ಷಗಳಲ್ಲಿ, ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಎಎಸ್‌ಇಆರ್)ಯು ಈ ಅಂತರವನ್ನು ತುಂಬಿದೆ. ಸರಕಾರೇತರ ಸಂಘಟನೆ ‘ಪ್ರಥಮ್’ನ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯ ಗ್ರಾಮೀಣ ಮನೆಗಳಿಗೆ ಹೋಗಿ, ಭಾಷೆ ಮತ್ತು ಗಣಿತದ ಸಾಮರ್ಥ್ಯವನ್ನು ಅಳೆಯುವ ಕೆಲವು ಪ್ರಾಥಮಿಕ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳುತ್ತಾರೆ. ಈ ಬೃಹತ್ ವಾರ್ಷಿಕ ಸಮೀಕ್ಷೆಯು, ಗ್ರಾಮೀಣ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಎಷ್ಟು ಕಳಪೆಯಾಗಿತ್ತು ಎಂಬ ಬಗ್ಗೆ ಸರಳ ಹಾಗೂ ಸ್ಪಷ್ಟ ಚಿತ್ರಣವೊಂದನ್ನು ನಮಗೆ ನೀಡಿದೆ. ಆ ವರದಿಯನ್ನು ನೋಡಿ ದೇಶ ಆಘಾತಗೊಂಡಿದೆ. ಅದರ ಬಹುತೇಕ ಎಲ್ಲ ವರದಿಗಳು ಒಂದೇ ರೀತಿಯಿದ್ದವು. ಐದನೇ ತರಗತಿಯಲ್ಲಿ ಕಲಿಯುತ್ತಿರುವ ಅರ್ಧಕ್ಕಿಂತಲೂ ಹೆಚ್ಚಿನ ಮಕ್ಕಳಿಗೆ ತಮ್ಮದೇ ಭಾಷೆಯಲ್ಲಿರುವ ಎರಡನೇ ತರಗತಿಯ ಪಠ್ಯಪುಸ್ತಕದ ಒಂದು ಸರಳ ಪ್ಯಾರಾಗ್ರಾಫನ್ನು ಕೂಡ ಓದಲು ಸಾಧ್ಯವಾಗಿಲ್ಲ. ಆದರೆ, ಹೋಲಿಕೆಗಾಗಿ ಇಂತಹ ಸಿದ್ಧ ಮಾದರಿಯನ್ನು ದೀರ್ಘಾವಧಿಯಲ್ಲಿ ವಿಶ್ವಾಸಾರ್ಹ ವಿಧಾನವಾಗಿ ಬಳಸುವುದು ಸಾಧ್ಯವಿಲ್ಲ. ಯಾಕೆಂದರೆ ಅದು ಸಂಶೋಧನಾ ಸಮೀಕ್ಷೆಯ ಉನ್ನತ ಮಾನದಂಡಗಳನ್ನು ಈಡೇರಿಸುವುದಿಲ್ಲ.
ಎನ್‌ಎಎಸ್ ಇದಕ್ಕೆ ಪರ್ಯಾಯವೊಂದನ್ನು ಒದಗಿಸುತ್ತದೆ. ಅದರ ಪರೀಕ್ಷೆಯ ಆಳ ಮತ್ತು ವ್ಯಾಪ್ತಿಯು ಪ್ರಭಾವಶಾಲಿಯಾಗಿದೆ. ಅದು ಮೂರು, ಐದು, ಎಂಟು ಮತ್ತು ಹತ್ತನೇ ತರಗತಿಗಳ ವಿದ್ಯಾರ್ಥಿಗಳನ್ನು ಎಲ್ಲ ಪ್ರಾಥಮಿಕ ವಿಷಯಗಳಲ್ಲಿ ಪರೀಕ್ಷೆಗೊಳಪಡಿಸುತ್ತದೆ. ಪರೀಕ್ಷೆಗಳನ್ನು ನಾಜೂಕಾಗಿ ಸಿದ್ಧಪಡಿಸಲಾಗಿದೆ. ಅದರ ಮಾದರಿಯು ಅತ್ಯಂತ ಆಕರ್ಷಕವಾಗಿದೆ. 2021ರ ನವೆಂಬರ್‌ನಲ್ಲಿ ನಡೆಸಲಾದ ಇತ್ತೀಚಿನ ಎನ್‌ಎಎಸ್ 1.18 ಲಕ್ಷ ಶಾಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಈ ಪೈಕಿ ಮೂರನೇ ಎರಡು ಶಾಲೆಗಳು ಗ್ರಾಮೀಣ ಶಾಲೆಗಳು. ಇದರಲ್ಲಿ ಸರಕಾರಿ ಶಾಲೆಗಳಲ್ಲದೆ, ಖಾಸಗಿ ಮತ್ತು ಅನುದಾನಿತ ಶಾಲೆಗಳೂ ಸೇರಿವೆ. ವಿವಿಧ ತರಗತಿಗಳ 34 ಲಕ್ಷ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿ ನಾವು ರಾಜ್ಯ ಮತ್ತು ಜಿಲ್ಲಾ ಮಟ್ಟಗಳ ಅಂಕಿ-ಸಂಖ್ಯೆಗಳನ್ನು ಪ್ರತ್ಯೇಕವಾಗಿ ಪಡೆಯಬಹುದಾಗಿದೆ. ಇದು ಕಲಿಕೆಯ ಗುಣಮಟ್ಟದ ಬಗ್ಗೆ ನಡೆದ ಜಗತ್ತಿನಲ್ಲೇ ಅತ್ಯಂತ ವಿಸ್ತೃತ ಸಮೀಕ್ಷೆಗಳ ಪೈಕಿ ಒಂದಾಗಿದೆ ಹಾಗೂ ಇದಕ್ಕಾಗಿ ಎನ್‌ಸಿಇಆರ್‌ಟಿ ಮತ್ತು ಶಿಕ್ಷಣ ಆಡಳಿತಗಾರರನ್ನು ಪ್ರಶಂಸಿಸಬೇಕಾಗಿದೆ. ಎನ್‌ಎಎಸ್‌ನ ವರದಿ ಮತ್ತು ವಿಷಯ ಮಂಡನೆಯಲ್ಲೂ ಸುಧಾರಣೆಯಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ.
ಆದರೂ, ಇಲ್ಲೊಂದು ಗಂಭೀರ ಸಮಸ್ಯೆಯಿದೆ. ಎಎಸ್‌ಇಆರ್‌ನಂತಲ್ಲದೆ, ಎನ್‌ಎಎಸ್ ಪರೀಕ್ಷೆಯನ್ನು ಶಾಲಾ ಆವರಣ ಗಳಲ್ಲಿ ಮಾಡಲಾಗುತ್ತದೆ. ಹಾಗಾಗಿ, ತಮ್ಮ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ನೀಡುವಂತೆ ನೋಡಿಕೊಳ್ಳುವುದಕ್ಕಾಗಿ ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳು ಅವರಿಗೆ ಸಹಾಯ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ, ವಿದ್ಯಾರ್ಥಿಗಳ ಸಾಧನೆಯ ರಾಜ್ಯವಾರು ತುಲನೆಯನ್ನು ನಿವಾರಿಸಬಹುದಾಗಿದೆ.
ಭಾರತದ ಶಾಲಾ ಶಿಕ್ಷಣದ ಬಗ್ಗೆ ಎನ್‌ಎಎಸ್ ಏನು ಹೇಳುತ್ತದೆ?
ಇತ್ತೀಚಿನ ಎನ್‌ಎಎಸ್‌ನಿಂದ ನಾವು ನಾಲ್ಕು ಸಂದೇಶಗಳನ್ನು ಓದಬಹುದಾಗಿದೆ. ಅವುಗಳ ಪೈಕಿ ಮೂರು ಸಂದೇಶಗಳು ಸುಲಭವಾಗಿ ಲಭ್ಯವಿವೆ; ನಾಲ್ಕನೆಯದು ಎಚ್ಚರಿಕೆಯಿಂದ ಅಡಗಿಕೊಂಡಿದೆ.
ಮೊದಲನೆಯದು, ಶಾಲಾ ಶಿಕ್ಷಣದ ಗುಣಮಟ್ಟ ಕಳಪೆಯಾಗಿದೆ. ಎಲ್ಲ ತರಗತಿಗಳನ್ನು ಜೊತೆಯಾಗಿ ತೆಗೆದುಕೊಂಡರೆ, ವಿದ್ಯಾರ್ಥಿಗಳು ಗಳಿಸಿರುವ ಸರಾಸರಿ ಅಂಕವು ಪ್ರತಿಯೊಂದು ವಿಷಯದಲ್ಲಿ ಶೇ.60ಕ್ಕಿಂತ ಕಡಿಮೆಯಾಗಿದೆ (ಪರಿಸರ ಅಧ್ಯಯನದಲ್ಲಿ 59, ಇಂಗ್ಲಿಷ್‌ನಲ್ಲಿ 55, ಗಣಿತದಲ್ಲಿ 53, ಸಮಾಜ ವಿಜ್ಞಾನದಲ್ಲಿ 49 ಮತ್ತು ವಿಜ್ಞಾನದಲ್ಲಿ 46). ಇದು ಎಎಸ್‌ಇಆರ್‌ನ ಸಮೀಕ್ಷೆಗಳ ಫಲಿತಾಂಶಕ್ಕಿಂತ ಸ್ವಲ್ಪ ಉತ್ತಮವಾಗಿದೆ. ಆದರೆ, ಎನ್‌ಎಎಸ್ ವ್ಯಾಪ್ತಿಯಲ್ಲಿ ನಗರ ಮತ್ತು ಖಾಸಗಿ ಶಾಲೆಗಳೂ ಬರುತ್ತವೆ ಎನ್ನುವುದನ್ನು ನಾವು ಗಮನದಲ್ಲಿಡಬೇಕು. ಅದೂ ಅಲ್ಲದೆ ಈ ಸರಳ ಪರೀಕ್ಷೆಗಳನ್ನು ವಿವಿಧ ಸ್ಥಿತಿಗತಿಗಳಲ್ಲಿ ಅವರದೇ ಶಾಲೆಗಳಲ್ಲಿ ನಡೆಸಲಾಗಿದೆ ಎನ್ನುವುದನ್ನೂ ಮರೆಯಬಾರದು.
ಎರಡು, ಮೇಲಿನ ತರಗತಿಗಳಿಗೆ ಹೋದಂತೆ ಸಾಧನೆಯ ಮಟ್ಟ ಕುಸಿಯುತ್ತದೆ. ಉದಾಹರಣೆಗೆ; ಮೂರನೇ ತರಗತಿಯಲ್ಲಿ ಭಾಷೆಯಲ್ಲಿ ಸರಾಸರಿ ಅಂಕ ಶೇ. 65. ಐದನೇ ತರಗತಿಯಲ್ಲಿ ಅದು ಶೇ. 62ಕ್ಕೆ ಇಳಿಯುತ್ತದೆ. ಎಂಟನೇ ತರಗತಿಯಲ್ಲಿ ಭಾಷಾ ಅಂಕವು ಶೇ. 60ಕ್ಕೆ ಕುಸಿದರೆ, 10ನೇ ತರಗತಿಯಲ್ಲಿ ಅದು ಕೇವಲ ಶೇ. 52.
ಗಣಿತ ಮತ್ತು ಇತರ ವಿಷಯಗಳಲ್ಲೂ ಇದೇ ಪರಿಸ್ಥಿತಿ. ಇದರಿಂದ ನಾವು ಯಾವ ನಿರ್ಧಾರಕ್ಕೆ ಬರಬಹುದು? ಹೆಚ್ಚು ವರ್ಷ ಶಾಲೆಗೆ ಹೋದಂತೆ ನಮ್ಮ ವಿದ್ಯಾರ್ಥಿಗಳ ನಿರ್ವಹಣೆ ಕುಸಿಯುತ್ತದೆ!
ಮೂರನೆಯ ನಿರ್ಧಾರ ಮತ್ತಷ್ಟು ಕೆಟ್ಟದಾಗಿದೆ. ಹೆಚ್ಚೆಚ್ಚು ವರ್ಷ ಶಾಲೆಗೆ ಹೋದಂತೆ, ಕಲಿಕೆಯಲ್ಲಿನ ಸಾಮಾಜಿಕ ಅಂತರ ಹೆಚ್ಚುತ್ತದೆ. ಮೂರನೇ ತರಗತಿಯಲ್ಲಿ, ಸರಕಾರಿ ಮತ್ತು ಖಾಸಗಿ ಶಾಲಾ ಮಕ್ಕಳ ನಿರ್ವಹಣೆಯಲ್ಲಿ ಅಂತರವಿಲ್ಲ. ಐದನೇ ತರಗತಿಯಲ್ಲಿ ಖಾಸಗಿ ಶಾಲೆಗಳು ಮುನ್ನಡೆ ಸಾಧಿಸುತ್ತವೆ. ಹಾಗೂ 10ನೇ ತರಗತಿ ತಲುಪುವಾಗ ಈ ಮುನ್ನಡೆಯು ಗಣನೀಯ ಪ್ರಮಾಣದಲ್ಲಿ ವಿಸ್ತಾರಗೊಳ್ಳುತ್ತದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಾಗೂ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಹಿನ್ನೆಲೆಯ ವಿದ್ಯಾರ್ಥಿಗಳ ನಿರ್ವಹಣೆಯಲ್ಲಿನ ಅಂತರದಲ್ಲೂ ಇದೇ ಮಾದರಿಯನ್ನು ನೋಡಬಹುದಾಗಿದೆ. ಮೂರನೇ ತರಗತಿಯಲ್ಲಿನ ಆರಂಭಿಕ ಅಂತರವು ನಗಣ್ಯವಾಗಿದೆ. ಆದರೆ, ವಿದ್ಯಾರ್ಥಿಗಳು 10ನೇ ತರಗತಿ ತಲುಪುವಾಗ ಈ ಅಂತರ ಹೆಚ್ಚುತ್ತದೆ. ಅಸಮಾನ ಸಮಾಜವೊಂದರಲ್ಲಿ ಶಿಕ್ಷಣದ ಕೆಲಸವು ವಂಶಪಾರಂಪರ್ಯವಾಗಿ ಬಂದ ಅನಾನುಕೂಲತೆಗಳನ್ನು ಕಡಿಮೆ ಮಾಡುವುದಾಗಿದೆ. ಆದರೆ, ನಮ್ಮ ಶಾಲಾ ಶಿಕ್ಷಣವು ಸರಿಯಾಗಿ ಇದರ ವಿರುದ್ಧವಾದುದನ್ನು ಮಾಡುತ್ತಿರುವಂತೆ ಕಾಣುತ್ತದೆ. ವಂಶಪಾರಂಪರ್ಯವಾಗಿ ಬಂದಿರುವ ಅನುಕೂಲತೆಗಳನ್ನು ಬಲಪಡಿಸಲು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಶಿಕ್ಷಣ ಎನ್ನುವುದು ಈಗ ಪರಿಣಾಮಕಾರಿ ವ್ಯವಸ್ಥೆಯಾಗಿದೆ.
ಸಾಂಕ್ರಾಮಿಕ ಕಾಲದ ಶಿಕ್ಷಣದ ಕುರಿತ ಮೊದಲ ಅಂಕಿ-ಅಂಶಗಳು
ಎನ್‌ಎಎಸ್ ವರದಿಯ ನಾಲ್ಕನೇ ಹಾಗೂ ಅತ್ಯಂತ ಪ್ರಮುಖ ಅಂಶವು ವರದಿಯಲ್ಲಿ ಎಚ್ಚರಿಕೆಯಿಂದ ಅಡಗಿಕೊಂಡಿದೆ. ಲಾಕ್‌ಡೌನ್ ಮತ್ತು ಮುಂದುವರಿದ ಶಾಲಾ ಮುಚ್ಚುಗಡೆಯ ಬಳಿಕ, ಶಿಕ್ಷಣದ ಗುಣಮಟ್ಟದ ಬಗ್ಗೆ ನಡೆದ ಮೊದಲ ರಾಷ್ಟ್ರವ್ಯಾಪಿ ಸಮೀಕ್ಷೆ ಇದಾಗಿದೆ. ಹಾಗಾಗಿ, ಪ್ರತಿಯೊಬ್ಬರೂ ಕೇಳಬೇಕಾದ ಪ್ರಶ್ನೆ ಇದಾಗಿರಬೇಕು- ಶಾಲಾ ಮುಚ್ಚುಗಡೆಯು ಕಲಿಕೆಯ ಗುಣಮಟ್ಟದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಿದೆ? ಎನ್‌ಎಎಸ್ ವರದಿಯು ಇದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ನೀಡುವುದಿಲ್ಲ. ಹೀಗೆ ಮಾಡದಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಈ ವಿಷಯದಲ್ಲಿ ‘ದ ಹಿಂದೂ’ ಪತ್ರಿಕೆಯ ಡಾಟಾ ಪಾಯಿಂಟ್ ತಂಡವನ್ನು ನಾವು ಅಭಿನಂದಿಸಬೇಕಾಗಿದೆ. ಅವರು ಈ ಹಿಂದಿನ, ಅಂದರೆ 2017-18ರ ಎನ್‌ಎಎಸ್ ವರದಿಯನ್ನು ಹೊರ ತೆಗೆದು ತರಗತಿಗಳು ಮತ್ತು ವಿಷಯಗಳಲ್ಲಿ ನೂತನ ವರದಿಯ ಅಂಕಿ-ಅಂಶಗಳೊಂದಿಗೆ ಜಾಗರೂಕ ತುಲನೆಯನ್ನು ಮಾಡಿದ್ದಾರೆ.
ಈ ತುಲನೆಯ ಫಲಿತಾಂಶ ಆಘಾತಕಾರಿಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿನ ಕಲಿಕೆಯ ಮಟ್ಟದಲ್ಲಿ ಬೃಹತ್ ಕುಸಿತ ದಾಖಲಾಗಿದೆ. ಮೂರನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಸರಾಸರಿ ಅಂಕಗಳಲ್ಲಿ ಶೇ. 3 ಇಳಿಕೆ ಕಂಡುಬಂದಿದೆ. ಈ ಕುಸಿತವು ಮುಂದಕ್ಕೆ ಸಾಗಿ, 10ನೇ ತರಗತಿಯ ಗಣಿತದಲ್ಲಿ ಶೇ. 7 ಮತ್ತು ವಿಜ್ಞಾನದಲ್ಲಿ ಶೇ. 9ರವರೆಗೆ ತಲುಪಿದೆ. ಸಾಮಾಜಿಕ ಗುಂಪುಗಳಲ್ಲೂ ಇದೇ ಪರಿಣಾಮ ಗೋಚರಿಸುತ್ತದೆ. ನಗರಗಳ ಶಾಲೆಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿನ ಕುಸಿತ ಆಳವಾಗಿದೆ. ಕುಸಿತದಲ್ಲಿ ಲಿಂಗ ಭೇದವು ಹೆಚ್ಚಾಗಿ ಗಮನಕ್ಕೆ ಬಾರದಿದ್ದರೂ, ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವು ಸಾಮಾನ್ಯ ವಿಭಾಗದ ವಿದ್ಯಾರ್ಥಿಗಳ ಮಟ್ಟಕ್ಕಿಂತ ಹೆಚ್ಚು ಕುಸಿದಿದೆ.
ಕೊರೋನ ವೈರಸ್ ಮತ್ತು ಲಾಕ್‌ಡೌನ್‌ಗಳಿಂದಾಗಿ ಸಂಭವಿಸಿದ ಶಿಕ್ಷಣ ನಷ್ಟದ ಬಗ್ಗೆ ನಡೆದ ಜಾಗತಿಕ ಸಂಶೋಧನೆಯನ್ನು ಎನ್‌ಎಎಸ್ ವರದಿಯು ದೃಢೀಕರಿಸಿದೆ. ಈ ಹಿಂದೆ ನಾನು ಹೇಳಿರುವಂತೆ, ಅತಿ ಹೆಚ್ಚಿನ ಶಿಕ್ಷಣ ನಷ್ಟವನ್ನು ಅನುಭವಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಅಂಕಿಸಂಖ್ಯೆಗಳು ಲಕ್ಷಾಂತರ ಕನಸುಗಳು ಮತ್ತು ವೃತ್ತಿ ಬದುಕುಗಳ ಸಮಾಧಿಯನ್ನು ಬಿಂಬಿಸುತ್ತವೆ.
ಕೃಪೆ: (theprint.in)