ಸ್ನಾತಕೋತ್ತರ ಪದವಿ: ವಿದ್ಯಾರ್ಥಿಗಳ 1 ವರ್ಷ ವ್ಯರ್ಥ!
‘ಕೋವಿಡ್‌ನಿಂದ ಉಂಟಾದ ಶೈಕ್ಷಣಿಕ ಗೊಂದಲ ನಿವಾರಣೆಗೆ ಚರ್ಚೆಗಳೇ ನಡೆದಿಲ್ಲ’
ಬೆಂಗಳೂರು: ‘ಮಾರಕ ಕೋವಿಡ್ ಸೋಂಕಿನಿಂದಾಗಿ ರಾಜ್ಯದ ಉನ್ನತ ಶಿಕ್ಷಣದಲ್ಲಿ ಒಂದು ವರ್ಷ ವ್ಯರ್ಥವಾಗಿದ್ದು, ಈ ಶೈಕ್ಷಣಿಕ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಒಂದೇ ಒಂದು ಸಭೆಯು ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯದೇ ಇರುವುದು ಬಹಿರಂಗವಾಗಿದೆ.
ಎರಡು ವರ್ಷಗಳು ರಾಜ್ಯವು ಸೇರಿ ದೇಶದಲ್ಲಿ ಸಂಕಷ್ಟ ಎದುರಾಗಿತ್ತು. ಇದು ಶೈಕ್ಷಣಿಕ ವಲಯದಲ್ಲಿ ಗಂಭೀರ ಪರಿಣಾಮವನ್ನು ಬೀರಿತ್ತು. ಆದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪಿಯು ಕಾಲೇಜು ಶಿಕ್ಷಣದಲ್ಲಿ ಚೇತರಿಕೆ ಕಂಡಿದ್ದು, ಪರೀಕ್ಷೆಗಳು ಸಮಯಕ್ಕೆ ತಕ್ಕಂತೆ ನಡೆದಿವೆ. ಆದರೆ, ಉನ್ನತ ಶಿಕ್ಷಣದಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷೆಗಳು ನಡೆಯದೇ ಒಂದು ವರ್ಷ ವ್ಯರ್ಥವಾಗಿದೆ ಎಂಬ ಆರೋಪ ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳ ವಲಯದಿಂದ ಕೇಳಿಬಂದಿದೆ.
ರಾಜ್ಯದಲ್ಲಿ ಎಲ್ಲ ವಿವಿಗಳಲ್ಲಿ ಪ್ರತಿವರ್ಷ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೂ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ನಡೆದರೂ, ಡಿಸೆಂಬರ್ ತಿಂಗಳಿನಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ಮೇ ತಿಂಗಳಿನಲ್ಲಿ ದ್ವೀತಿಯ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತವೆ. ಆದರೆ, 2021-22ನೇ ಸಾಲಿನಲ್ಲಿ ಪ್ರಥಮ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದವರಿಗೆ ಇದುವರೆಗೂ ಯಾವುದೇ ಪರೀಕ್ಷೆಗಳು ನಡೆದಿಲ್ಲ.
ಕೋವಿಡ್‌ನಿಂದ ಹಿನ್ನಡೆ ಆಗಿದ್ದ ಶೈಕ್ಷಣಿಕ ವರ್ಷವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿಗಳು, ವಿವಿಗಳ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ ಅವರು ಸಭೆಗಳನ್ನು ಆಯೋಜಿಸಿ ಕ್ರಮ ತೆಗೆದುಕೊಂಡಿದ್ದರೆ, ವಿದ್ಯಾರ್ಥಿಗಳು ಈಗಾಗಲೇ ಪ್ರಥಮ ಸೆಮಿಸ್ಟರನ್ನು ಮುಗಿಸಿ, ದ್ವೀತಿಯ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಆದರೆ ಉನ್ನತ ಶಿಕ್ಷಣ ಇಲಾಖೆಯ ನಿರ್ಲಕ್ಷತನದಿಂದ ರಾಜ್ಯದ ಎಲ್ಲ ವಿವಿಗಳಲ್ಲಿ ಒಂದು ವರ್ಷ ಹಿನ್ನಡೆ ಆಗಿದೆ.
ಎನ್‌ಇಪಿ ಜಾರಿಗೊಳಿಸುವ ಬರದಲ್ಲಿ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಕೋವಿಡ್‌ನಿಂದಾಗಿ ಹಿಂದುಳಿದ ಶೈಕ್ಷಣಿಕ ವರ್ಷವನ್ನು ಮರೆತಂತಿದೆ. 2019ರಲ್ಲಿ ಕೋವಿಡ್‌ನಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಆನ್‌ಲೈನ್ ಶಿಕ್ಷಣವನ್ನು ಪರ್ಯಾಯವಾಗಿ ನೀಡಲಾಗುತ್ತಿತ್ತು. ಆದರೂ, ವಿವಿಗಳಲ್ಲಿ ಶೈಕ್ಷಣಿಕ ವರ್ಷ ಹಿಂದುಳಿದಿದೆ. ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಗಳು ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯವನ್ನು ಸಂಪೂರ್ಣವಾಗಿ ಮರೆತಂತಿವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 2019ರಿಂದ ಇಲ್ಲಿಯವರೆಗೂ ಶೈಕ್ಷಣಿಕ ಹಿನ್ನಡೆಯನ್ನು ಸರಿದೂಗಿಸಲು ಸಭೆಗಳನ್ನೇ ನಡೆಸಿಲ್ಲ.
ಈಗಾಗಲೇ ಪಿಯುಸಿ ಪರೀಕ್ಷೆಗಳು ನಡೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿ ಪದವಿಗೆ ದಾಖಲಾಗಬೇಕಾಗುತ್ತದೆ. ಆದರೆ ಪ್ರಥಮ ಪದವಿಯ ವಿದ್ಯಾರ್ಥಿಗಳು ಮೊದಲನೆಯ ಸೆಮಿಸ್ಟರ್‌ನ ಪರೀಕ್ಷೆಯನ್ನು ಬರೆದು, ಎರಡನೆಯ ಸೆಮಿಸ್ಟರ್‌ನ ತರಗತಿಗಳಿಗೆ ಇತ್ತಿಚೆಗಷ್ಟೇ ಹೋಗುತ್ತಿದ್ದಾರೆ. ಹೀಗಾಗಿ ಮೊದಲನೇ ಸೆಮಿಸ್ಟರ್‌ಗೆ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳು ಹಾಗೂ ಎರಡನೆಯ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಓದುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಪ್ರಥಮ ಪದವಿಯ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಎರಡರಲ್ಲೂ ವಿದ್ಯಾರ್ಥಿಗಳು ಇರಲಿದ್ದು, ಅಧ್ಯಾಪಕರಿಗೆ ಬೋಧಿಸಲು ಅಸಾಧ್ಯವಾದ ವಾತಾವರಣವನ್ನು ಉನ್ನತ ಶಿಕ್ಷಣ ಇಲಾಖೆಯು ನಿರ್ಮಿಸಿದೆ.
ಕೇಂದ್ರ ಸರಕಾರವನ್ನು ಮೆಚ್ಚಿಸಲು ಎನ್‌ಇಪಿಯನ್ನು ಮೊಟ್ಟ ಮೊದಲಬಾರಿಗೆ ಜಾರಿಗೊಳಿಸಿದ ರಾಜ್ಯ ಎಂಬಹೆಸರನ್ನು ಪಡೆಯುವುದಕ್ಕಾಗಿ ಇಂತಹ ಸಮಸ್ಯೆಯನ್ನು ರಾಜ್ಯದ ಉನ್ನತ ಶಿಕ್ಷಣದಲ್ಲಿ ಸೃಷ್ಟಿ ಮಾಡಿದ್ದಾರೆ. ಉನ್ನತ ಶಿಕ್ಷಣದಲ್ಲಿ ಮೂಲಭೂತ ಸೌಲಭ್ಯಗಳತ್ತ ಗಮನ ಹರಿಸಿಲ್ಲ. ಉನ್ನತ ಶಿಕ್ಷಣ ಸಚಿವರಿಗೆ ಒಂದು ನಿರ್ದಿಷ್ಟ ದೃಷ್ಟಿಕೋನ ಇಲ್ಲ. ಉನ್ನತ ಶಿಕ್ಷಣದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಸಚಿವರು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು.
ಡಾ.ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಕೇವಲ ವೈದ್ಯರೇ ಹೊರತು, ವಿವಿಗಳಲ್ಲಿ ಓದಿದವರಲ್ಲ. ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಲು ಅವರು ಅನರ್ಹರು ಎನ್ನುವುದನ್ನು ಎರಡು ವರ್ಷಗಳಿಂದ ವಿವಿಗಳಲ್ಲಿ ನಡೆಯುತ್ತಿರುವ ವಿಧ್ಯಮಾನಗಳೇ ಹೇಳುತ್ತವೆ. ಕೋವಿಡ್‌ನಿಂದ ವಿವಿಗಳಿಗೆ ಶೈಕ್ಷಣಿಕವಾಗಿ ಒಂದು ವರ್ಷ ಹಿನ್ನಡೆ ಆಗುತ್ತಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮತೆಗೆದುಕೊಳ್ಳಲು ಸಚಿವರು ವಿಫಲರಾಗಿದ್ದಾರೆ. ಕೇವಲ ಹಣ ಸಂಪಾದನೆಗಾಗಿ ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿದ್ದಾರೆಯೇ ಹೊರತು, ವಿವಿಗಳ ಶಿಕ್ಷಣವನ್ನು ಉನ್ನತೀಕರಿಸಲು ಅವರು ಶ್ರಮಿಸುತ್ತಿಲ್ಲ. ಪಠ್ಯಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಹೇಗೆ ಅಸಮರ್ಥರೋ, ಉನ್ನತ ಶಿಕ್ಷಣ ಸಚಿವರಾಗಲು ಡಾ.ಅಶ್ವತ್ಥ ನಾರಾಯಣ ಅವರೂ ಅಸಮರ್ಥರಾಗಿದ್ದಾರೆ.
ಪ್ರೊ.ಮಹೇಶ್‌ಚಂದ್ರ ಗುರು, ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ
ರಾಜ್ಯದ ವಿವಿಗಳಿಗೆ ಸ್ವಾಯತ್ತತೆಯನ್ನು ನೀಡಲಾಗಿದೆ ಎಂದು ರಾಜ್ಯ ಸರಕಾರವು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಪ್ರಯೋಜನವಿಲ್ಲ. ಈಗ ಉನ್ನತ ಶಿಕ್ಷಣದಲ್ಲಿ ಒಂದು ವರ್ಷ ಹಿಂದಕ್ಕೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರವು ವಿವಿಗಳಿಗೆ ಸರಿಯಾಗಿ ನಿರ್ದೇಶನವನ್ನು ನೀಡದ ಹೊರತು, ಭ್ರಷ್ಟಾಚಾರದಲ್ಲಿ ತೊಡಗಿರುವ ವಿವಿ ಕುಲಪತಿಗಳು ಗಮನ ಹರಿಸುವುದಿಲ್ಲ.
ಗಂಗಾಧರ, ಬೆಂಗಳೂರು ವಿವಿಯ ವಿದ್ಯಾರ್ಥಿ