ಅರ್ಧ ಶತಮಾನದ ಹಿಂದೆ ನಡೆದ ಆ ಸರಳ ಮದುವೆ
ಇಂದಿಗೆ ಸರಿಯಾಗಿ 50 ವರ್ಷಗಳ ಹಿಂದೆ ದಿನಾಂಕ 08.06.1972ರಂದು ‘ಮೂಢ ಸಂಪ್ರದಾಯ ವಿರೋಧಿ ಸಮ್ಮೇಳನ’ ಎಂಬ ಹೆಸರಿನಲ್ಲಿ ನಡೆದ ಸರಳ ಮದುವೆಯೊಂದು ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರಾಂತಿಕಾರಕವಾದ ಬದಲಾವಣೆಗೆ ನಾಂದಿ ಹಾಡಿತು. ಮದುವೆಯು ಬ್ರಾಹ್ಮಣ ಪುರೋಹಿತರಿಲ್ಲದೆ ಕೇವಲ ವರನೇ ಸಿದ್ಧಪಡಿಸಿದ ಸರಳ ವಾಕ್ಯಗಳನ್ನು ಪ್ರಮಾಣವಚನ ಸ್ವೀಕರಿಸುವ ಮೂಲಕ ಯಶಸ್ವಿಯಾಗಿ ನೆರವೇರಿತು. ಈ ವಿವಾಹ ಬೇರೆ ಯಾರದೂ ಅಲ್ಲ ಲೋಹಿಯಾ, ಅಂಬೇಡ್ಕರ್ ಮತ್ತು ಬುದ್ಧನ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನಾಡಿನ ಹೆಸರಾಂತ ಸಾಹಿತಿ, ಜಾನಪದ ತಜ್ಞ ಮತ್ತು ಪ್ರಗತಿಪರ ಚಿಂತಕ ಡಾ.ಕಾಳೇಗೌಡ ನಾಗವಾರ ಅವರದು. ವೈಚಾರಿಕ ಸಂಪನ್ನತೆಯ ಕಾಳೇಗೌಡ ನಾಗವಾರ ಅವರು ಆಗಿನ್ನೂ ಎಂಎ ಪದವಿ ಮುಗಿಸಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ವೇಳೆಗಾಗಲೇ ಅವರು ದಲಿತ ಕೇರಿಗಳಲ್ಲಿ ಕುಳಿತು ಅವರ ಕಷ್ಟಗಳನ್ನು ಆಲಿಸುತ್ತಿದ್ದರು. ಶಾಲೆ, ಕಾಲೇಜು, ಕೆರೆಕಟ್ಟೆ, ರಸ್ತೆ, ಆಸ್ಪತ್ರೆ, ವಿದ್ಯಾರ್ಥಿನಿಲಯಗಳೇ ಹೊಸ ಕಾಲದ ದೇವಾಲಯಗಳು ಎಂದು ಭಾವಿಸಿದ್ದರು. ಅವರನ್ನು ನೋಡಿದರೆ ಊರಿನ ಜನ ಬೆರಗಿನಿಂದ, ಗೌರವದಿಂದ ಹಾಗೆಯೇ ಆತಂಕದಿಂದ ಕುದಿಯುತ್ತಿದ್ದರು. 1972ರಲ್ಲಿ ತಮ್ಮ ಸ್ವಂತ ಊರಾದ ನಾಗವಾರದ ಪಕ್ಕದ ಹಳ್ಳಿ ಅಬ್ಬೂರಿನ ಕೆಂಪಮ್ಮನವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದರು. ಹಳ್ಳಿಗಾಡಿನ ಮದುವೆಗಳು ಹೆಚ್ಚು ಸರಳವಾಗಿರಬೇಕು, ವರ್ಗಭೇದ, ಲಿಂಗಭೇದ, ಜಾತಿಭೇದ, ಮತ್ತು ಅಸ್ಪಶ್ಯತೆಯ ಸೋಂಕಿಲ್ಲದಂತೆ ನಿರಾಡಂಬರ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ನಡೆಯಬೇಕೆಂಬ ಹಂಬಲವನ್ನು ಅವರು ಇಟ್ಟುಕೊಂಡಿದ್ದರು. ಆದರಂತೆ ತಮ್ಮ ಮದುವೆ ತಾವು ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ ಮತ್ತು ಸಿದ್ಧಾಂತಗಳಿಗೆ ಪೂರಕವಾಗಿರಬೇಕೆಂದು ನಿರ್ಧರಿಸಿದ ಅವರು ಮದುವೆ ಯಾವುದೇ ರೀತಿಯ ಖರ್ಚಿಲ್ಲದೆ ಅತ್ಯಂತ ಸರಳವಾಗಿ ನಡೆಯಬೇಕು. ಮದುವೆಯಲ್ಲಿ ಬ್ರಾಹ್ಮಣ ಪೌರೋಹಿತ್ಯದ ಬದಲು ತನ್ನ ಹಳ್ಳಿಯ ದಲಿತನೊಬ್ಬ ನೇತೃತ್ವ ವಹಿಸಿ ನಡೆಸಿಕೊಡಬೇಕು, ಕೊಡುವುದು ತೆಗೆದುಕೊಳ್ಳುವುದು ಯಾವುದೂ ಇರಬಾರದು ಎಂಬ ಖಚಿತ ನಿಲುವನ್ನು ತಾಳಿದ್ದರು. ಇದಕ್ಕೆ ಪೂರಕವಾಗಿ ತಮ್ಮ ಊರಿನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದಲಿತ ಮಿತ್ರ ಸಿಂಗ್ರಯ್ಯನವರನ್ನು ಮದುವೆಯಲ್ಲಿ ವಧು-ವರರಿಗೆ ಪ್ರಮಾಣವಚನ ಬೋಧಿಸಬೇಕೆಂದು ಒಪ್ಪಿಸಿದ್ದರು. ಅರ್ಧ ಶತಮಾನದ ಹಿಂದೆ ಅಂದಿನ ಕಾಲಘಟ್ಟದಲ್ಲಿ ಇಂತಹದ್ದೊಂದು ಕ್ರಾಂತಿಕಾರಕ ನಿಲುವನ್ನು ತೆಗೆದುಕೊಳ್ಳುವುದು ಅಷ್ಟೊಂದು ಸುಲಭದ ವಿಷಯವಾಗಿರಲಿಲ್ಲ. ಸುತ್ತಲಿನ ಸಮಾಜವನ್ನು ಎದುರು ಹಾಕಿಕೊಂಡು ಸಮಾಜವನ್ನು ತಿದ್ದುವ ಕಾರ್ಯಕ್ಕೆ ಇಳಿದ ನಾಗವಾರರು ಅದರಲ್ಲಿ ಯಶಸ್ವಿಯಾದುದು ಇಂದಿಗೂ ಪ್ರಮುಖ ಸಂಗತಿಯಾಗಿದೆ.
ಆದರೆ ಊರಿನ ಸಂಪ್ರದಾಯಸ್ಥ ಜನ ಮದುವೆಯು ಊರಿನ ದಲಿತ ಬಂಧುವಿನ ನೇತೃತ್ವದಲ್ಲಿ ನಡೆಯುವುದನ್ನು ಅರಗಿಸಿಕೊಳ್ಳದಾದರು. ಮದುವೆಯ ದಿನ ಹತ್ತಿರ ಬಂದಂತೆ ಸಿಂಗ್ರಯ್ಯರ ತಲೆ ಕೆಡಿಸಿದರು. ‘‘ಆತನ ಮಾತು ಕೇಳಿಕೊಂಡು ನೀನು ಪುರೋಹಿತ-ಗಿರೋಹಿತ ಅಂತ ಮುಂದೆ ನಿಂತರೆ ನಾವು ಕೇಳುವುದಿಲ್ಲ. ನಮ್ಮ ಕುಲಾಚಾರಕ್ಕೆ, ದೇವರು-ದಿಂಡರಿಗೆ ಅಪಚಾರವಾಗುತ್ತದೆ. ಗಲಾಟೆಯಾಗಿ ಮದುವೆಯ ದಿನ ಯಾರಾದರೂ ಸಿಟ್ಟಿನಲ್ಲಿ ನಿನ್ನ ಕೈಕಾಲು ಮುರಿದರೆ ನಾವು ಜವಾಬ್ದಾರರಲ್ಲ’’ ಎಂದೆಲ್ಲಾ ಹೇಳಿ ಅವರನ್ನು ಹೆದರಿಸಿಬಿಟ್ಟರು. ಇದರಿಂದ ವಿಚಲಿತರಾದ ಸಿಂಗ್ರಯ್ಯ ಮದುವೆ ಪ್ರಮಾಣವಚನ ಬೋಧಿಸಲು ಹಿಂದೇಟು ಹಾಕಿದರು. ಅದರೆ ಕಾಳೇಗೌಡರು ಪಟ್ಟು ಬಿಡಲಿಲ್ಲ. ಆತ್ಮೀಯರಾಗಿದ್ದ ಸಮಾಜವಾದಿ ಹಿನ್ನೆಲೆಯ ಕೆ.ಎಚ್.ರಂಗನಾಥ್‌ರವರನ್ನು ಭೇಟಿ ಮಾಡಿ ತಮ್ಮ ಮನೋಭಿಲಾಷೆಯನ್ನು ನಿವೇದಿಸಿಕೊಂಡರು. ‘‘ನಾನು ಹುಟ್ಟಿನಿಂದ ದಲಿತ. ಏನೇ ಕಷ್ಟ ಬಂದರೂ ಈ ಕೆಲಸ ಆಗಲೇ ಬೇಕು. ನಾನೇ ಖುದ್ದಾಗಿ ಮದುವೆಗೆ ಬರುತ್ತೇನೆ. ಅಂದು ಯಾವುದೇ ರೀತಿಯ ಗಲಾಟೆ ನಡೆದರೂ ನೀವು ತಾಳ್ಮೆಯಿಂದ ಇರಬೇಕು. ನಾಗರಿಕತೆಯ ಸಂಪರ್ಕ ಅಷ್ಟಾಗಿ ಇಲ್ಲದೇ ಇದ್ದ ಹಳ್ಳಿಯಲ್ಲಿ ಈ ಬಗೆಯ ಆದರ್ಶಪ್ರಾಯವಾದ ಕಾರ್ಯಕ್ರಮ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆ ಮತ್ತು ಸಂತಸದ ಸಂಗತಿ’’ ಎಂದು ಕೈಜೋಡಿಸಿದರು. ಆಗ ಕೆ.ಎಚ್.ರಂಗನಾಥ್‌ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಕಾಳೇಗೌಡರು ‘‘ಹಳ್ಳಿಯ ಜನ ರೊಚ್ಚಿಗೇಳಲೂಬಹುದು. ಕುತೂಹಲಕ್ಕಾಗಿ ಹೆಚ್ಚು ಜನ ಸೇರಬಹುದು. ಒಂದು ವೇಳೆ ಗಲಾಟೆ ನಡೆದರೆ ಏಟುಗಳು ಬೀಳುವ ಸಾಧ್ಯತೆ ಕೂಡ ಇದೆ. ನನಗೂ ಜನ ಹೊಡೆಯಬಹುದು. ನೀವು ಶಾಸಕರು ನಿಮ್ಮನ್ನೂ ಅವರು ಲೆಕ್ಕಕ್ಕೆ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿರುವುದಿಲ್ಲ. ನೀವು ಎಲ್ಲದ್ದಕ್ಕೂ ಸಿದ್ಧರಿರಬೇಕು’’ ಎಂದರು. ರಂಗನಾಥ್‌ರವರು ಮತ್ತಷ್ಟು ಗಟ್ಟಿ ಧ್ವನಿಯಲ್ಲಿ ‘‘ಆ ದಿನ ಏನೇ ಆಗಲಿ, ನಾನು ನಿಮ್ಮ ಜೊತೆಗೆ ಇರುತ್ತೇನೆ’’ ಎಂದು ಯಾವುದೇ ಅತಿರೇಕಗಳಿಲ್ಲದೆ ಹೊಸ ಸಮಾಜದ ಚಿಂತನೆಯಲ್ಲಿ ತೊಡಗಿದ್ದ ಅವರು ನಾಗವಾರರಿಗೆ ಅಭಯ ನೀಡಿದರು.
ಮದುವೆ ಕಾರ್ಯಕ್ರಮವನ್ನು ನಾಗವಾರರವರು ತಮ್ಮ ಊರಿನ ಗೆಳೆಯರೊಡಗೂಡಿ ರಚಿಸಿಕೊಂಡಿದ್ದ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿದಳದ ಸದಸ್ಯರು ‘ಮೂಢ ಸಂಪ್ರದಾಯ ವಿರೋಧಿ ಸಮ್ಮೇಳನ’ ಎಂದು ಕರೆದು ಆಹ್ವಾನ ಪತ್ರಿಕೆಯ ಬದಲು ಕರಪತ್ರಗಳನ್ನು ಅಚ್ಚು ಹಾಕಿಸಿ ಎಲ್ಲಾ ಕಡೆ ಹಂಚಿದರು. ‘‘ಮದುವೆಗೆ ಬರುವವರಿಗೆ ಯಾವುದೇ ರೀತಿಯ ಊಟೋಪಚಾರದ ವ್ಯವಸ್ಥೆ ಇರುವುದಿಲ್ಲ. ಪ್ರಗತಿಪರ ವಿಚಾರಗಳಲ್ಲಿ ನಂಬಿಕೆಯಿರುವ ಎಲ್ಲರೂ ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಪ್ರೀತಿಯಿಂದ ಸ್ವಾಗತಿಸುತ್ತೇವೆ’’ ಎಂದು ಕರಪತ್ರದಲ್ಲಿ ಮುದ್ರಿಸಲಾಯಿತು. 08.06.1972ರಂದು ನಡೆದ ಸರಳ ಮದುವೆ ಹಾಗೂ ನಮ್ಮ ಸಮಾಜದ ಪ್ರಗತಿಗೆ ಕಂಠಕವಾಗಿರುವ ‘ಮೂಢನಂಬಿಕೆಗಳು ಮತ್ತು ಸಂಪ್ರದಾಯಗಳು’ ಎಂಬ ವಿಷಯ ಕುರಿತ ವಿಚಾರ ಮಂಡನೆಗೆ ಕೆ.ಎಚ್.ರಂಗನಾಥ್, ಅಂದಿನ ಶಿಕ್ಷಣ ಮಂತ್ರಿಗಳಾದ ಮಲ್ಲಿಕಾರ್ಜುನಸ್ವಾಮಿ, ಪತ್ರಕರ್ತರಾದ ಕಲ್ಲೇ ಶಿವೋತ್ತಮರಾವ್ ಮತ್ತು ಎಸ್.ವಿ.ಜಯಶೀಲರಾವ್ ಹಾಗೂ ಲೇಖಕ ಬೆಸಗರಹಳ್ಳಿ ರಾಮಣ್ಣ ಆಗಮಿಸಿದ್ದರು. ವರ ಕಾಳೇಗೌಡರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಮೂಢನಂಬಿಕೆ, ಅಂಧಪದ್ಧತಿ ಹಾಗೂ ಕಂದಾಚಾರಗಳನ್ನು ಹೋಗಲಾಡಿಸುವುದೇ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿದಳದ ಉದ್ದೇಶ ಎಂದು ತಿಳಿಸಿದರು. ಸಮ್ಮೇಳನವನ್ನು ಶಿಕ್ಷಣ ಸಚಿವರಾದ ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿ ಜಾತಿ ಮತಗಳ ಸಂಕೋಲೆಯಿಂದ ಹೊರಬರಬೇಕೆಂದು ಕರೆ ನೀಡಿದರು. ಮದುವೆಯ ವಧು-ವರ ಹೂವಿನ ಹಾರ ಬದಲಿಸಿಕೊಂಡರು. ವರನಾದ ಕಾಳೇಗೌಡರೇ ಬರೆದಿದ್ದ ‘‘ಬದುಕಿರುವಷ್ಟು ದಿನವೂ ಪರಸ್ಪರ ಪ್ರೀತಿಯಿಂದ, ಪರಸ್ಪರ ಗೌರವದಿಂದ ಇದ್ದು ಈ ಬದುಕಿನಲ್ಲಿ ಯಾವುದು ಸತ್ಯ ಮತ್ತು ಸೂಕ್ತ ಅಂತ ಚರ್ಚೆಯ ಮೂಲಕ ಗೋಚರವಾಗುತ್ತದೆಯೋ ಆ ಕಡೆಗೆ ನಡೆಯುತ್ತೇವೆ’’ ಎಂಬ ವಾಕ್ಯಗಳನ್ನು ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನರ ಸಮಕ್ಷಮದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೆ.ಎಚ್.ರಂಗನಾಥ್‌ರವರು ವಧು-ವರರಿಗೆ ಬೋಧಿಸಿದರು. ಬೋಧನೆಯನ್ನು ವಧು ಮತ್ತು ವರ ಇಬ್ಬರು ಪಠಿಸಿದರು. ವರ ಕಾಳೇಗೌಡರು ವಧುವಿಗೆ ತಾಳಿ ಕಟ್ಟಿ ಹಾರ ಬದಲಾಯಿಸಿಕೊಂಡರು. ಇಷ್ಟೆ, ಮದುವೆ ಶಾಸ್ತ್ರ, ಮಂತ್ರ ಎಲ್ಲಾ ಮುಗಿದು ಹೋಯಿತು ಎಂದು ಅಧ್ಯಕ್ಷರು ಘೋಷಿಸಿದರು.
ಅಂದಿಗೆ ಇದೊಂದು ಅಪೂರ್ವ ಘಟನೆಯಾದ್ದರಿಂದ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಕಾರ್ಯಕ್ರಮದ ವರದಿಗಾಗಿ ಬೆಂಗಳೂರಿನಿಂದ ಪತ್ರಕರ್ತರನ್ನು ಕರೆದುಕೊಂಡು ಬಂದಿದ್ದರು. ಎಲ್ಲಾ ಪತ್ರಿಕೆಗಳಲ್ಲೂ ಮುಖಪುಟದಲ್ಲಿ ಮದುವೆಯ ಸುದ್ದಿ ಪ್ರಕಟವಾಯಿತು. ಕುವೆಂಪುರವರ ಮಂತ್ರಮಾಂಗಲ್ಯದ ಮಾದರಿಯಲ್ಲಿಯೇ ಹಳ್ಳಿಗಾಡಿನಲ್ಲಿ ಮೊದಲ ಬಾರಿಗೆ ಸಾಗಿದ ಈ ಮದುವೆಯು ಅನೇಕ ವಿಚಾರವಂತರ, ಸಂವೇದನಾಶೀಲರ, ಪ್ರಗತಿಪರರ, ಚಿಂತಕರ ಅಪಾರವಾದ ಮೆಚ್ಚುಗೆ ಮತ್ತು ಶ್ಲಾಘನೆಗೆ ಒಳಗಾಯಿತು. ಮದುವೆಯ ಕುರಿತ ಪರ-ವಿರೋಧದ ಚರ್ಚೆಗಳು ಹಲವಾರು ಪತ್ರಿಕೆಗಳಲ್ಲಿ ಬಹಳ ದಿನಗಳವರೆಗೂ ನಡೆದವು. ನಾಗವಾರರವರು ತಮ್ಮ ಮದುವೆಯ ಖರ್ಚಿಗಾಗಿ ತೆಗೆದಿಟ್ಟಿದ್ದ 500 ರೂಪಾಯಿಗಳನ್ನು ತಮ್ಮೂರಿನ ಸರಕಾರಿ ಆಸ್ಪತ್ರೆಯ ನಿಧಿಗೆ ಕಾಣಿಕೆಯಾಗಿ ನೀಡಿದರು.
ಆನಂತರದ ದಿನಗಳಲ್ಲಿ ಸರಳ ಮದುವೆಗಳು ಒಂದು ಚಳವಳಿಯ ರೂಪವನ್ನು ಪಡೆದುಕೊಂಡವು. ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ ಬಲಿಷ್ಠವಾದಾಗ ಈ ಸರಳ ಮದುವೆಗಳ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದು ಇತಿಹಾಸದ ಮುಖ್ಯ ಭಾಗವೇ ಆಗಿದೆ. ಕಾಳೇಗೌಡರ ಅಂದಿನ ದಿಟ್ಟ ನಡೆ ಮುಂದಿನ ದಿನಗಳಲ್ಲಿ ಹಲವರಿಗೆ ಪ್ರೇರಣೆಯಾದದ್ದು ನಿಜ.