ಬೆಲೆ ಕುಸಿತದಿಂದ ಕಂಗೆಟ್ಟಿರುವ ತೆಂಗು ಬೆಳೆಗಾರರ ರಕ್ಷಣೆ: ಸರಕಾರಕ್ಕೆ ಭಾಕಿಸಂ ಆಗ್ರಹ
ಕುಂದಾಪುರ : ಕರಾವಳಿಯಲ್ಲಿ ತೆಂಗಿನ ಕೃಷಿ ಅವಸಾನದ ಅಂಚಿಗೆ ಬಂದು ನಿಂತಿದೆ. ಎಲ್ಲಾ ಕೃಷಿ ಉತ್ಪನ್ನಗಳ ಬೆಲೆ ಏರುಗತಿಯನ್ನು ಕಂಡಿದ್ದರೆ, ತೆಂಗಿನಕಾಯಿ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಪ್ರತಿ ಮನೆಯಲ್ಲೂ ತೆಂಗಿನ ಮರಗಳಿದ್ದು, ಅದರಿಂದ ವರ್ಷದಿಂದ ವರ್ಷಕ್ಕೆ ಬರುವ ಆದಾಯ ಮಾತ್ರ ಇಳಿಮುಖದಲ್ಲಿದ್ದು, ಮರಕ್ಕೆ ಹಾಕಿದ ನೀರು, ಗೊಬ್ಬರದ ವೆಚ್ಚಕ್ಕೂ ಸಾಕಾಗುತ್ತಿಲ್ಲಿ. ಹೀಗಾಗಿ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ತೆಂಗಿನಕಾಯಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಮಂಗಳವಾರ ಇಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಸಭೆ ಸರಕಾರ ವನ್ನು ಆಗ್ರಹಿಸಲು ತೀರ್ಮಾನಿಸಿದೆ.
ಒಂದು ಕಡೆ ಮಂಗಗಳ ಉಪಟಳದಿಂದ ಮರಗಳಲ್ಲಿ ಕಾಯಿಗಳೇ ಇಲ್ಲವಾಗಿವೆ. ಬಿಳಿಕೀಟದ ಸಮಸ್ಯೆ, ಕುರುವಾಯಿ ಸಮಸ್ಯೆಗಳಿಂದ ಮರಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಹೊಸ ಮರಗಳನ್ನು ನಡಲು ರೈತರು ಮುಂದೆ ಬರುತ್ತಿಲ್ಲ. ಹೀಗಿದ್ದರೂ ಬೆಲೆ ಹತ್ತು ವರ್ಷಗಳಲ್ಲಿ ಇದ್ದ ಅತೀ ಕಡಿಮೆ ದರವನ್ನು ತಲುಪಿದೆ. ಇದರೊಂದಿಗೆ ಕರಾವಳಿಯಲ್ಲಿ ತೆಂಗಿನ ಉತ್ಪನ್ನ ಗಳಲ್ಲಾಗುತ್ತಿರುವ ಕಲಬೆರಕೆಯನ್ನು ತಡೆಗಟ್ಟಿ, ಶುದ್ಧ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು ಎಂದು ಸಭೆ ಸರಕಾರಕ್ಕೆ ಮನವಿ ಮಾಡಿದೆ.
ಭಾಕಿಸಂ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಉತ್ಪಾದನೆಯಾಗುತ್ತಿದ್ದರೂ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬೆಲೆಯ ಮೇಲೆ ಸರಕಾರದ ನಿಯಂತ್ರಣವಿಲ್ಲ. ಆ ಕಾರಣಕ್ಕೆ ಕೂಡಲೇ ಬೆಂಬಲ ಬೆಲೆ ಘೋಷಿಸಿ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂಬ ನಿರ್ಣಯಕ್ಕೆ ಬರಲಾಯಿತು.
ತೆಂಗಿಗೆ ದೊಡ್ಡ ಪ್ರಮಾಣದಲ್ಲಿ ಮಂಗಗಳ ಉಪಟಳವಿದೆ. ಇದನ್ನು ಹತೋಟಿಗೆ ತರಲು ಅರಣ್ಯಗಳಲ್ಲಿ ಅರಣ್ಯ ಇಲಾಖೆಯ ಮೂಲಕ ಹಣ್ಣಿನ ಮರಗಳನ್ನೆ ನೆಡುವಂತೆ ಒತ್ತಡ ಹೇರಲು ಸಭೆ ತೀರ್ಮಾನಿಸಿತು.
ನಂಬಿಕೆ ಕಳೆದುಕೊಂಡ ರೈತ: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಈ ಭಾಗದ ರೈತರಿಗೆ ಉಪಯುಕ್ತವಾದ ಯೋಜನೆಯಾಗಿದ್ದರೂ, ಜಿಲ್ಲಾಡಳಿತ ಹಾಗೂ ವಿಮಾ ಸಂಸ್ಥೆಗಳ ನಿರ್ಲಕ್ಷದಿಂದ ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ಪರಿಹಾರ ಪಾವತಿಯಾಗದೆ ರೈತರೇ ಈ ಯೋಜನೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ಬಾರಿ ಜೂನ್ ೩೦ ವಿಮಾ ಕಂತು ಪಾವತಿಸಲು ಕೊನೆಯ ದಿನವಾಗಿದ್ದರೂ ಸಂಬಂಧಪಟ್ಟ ಇಲಾಖೆಗಳು ಆ ಬಗ್ಗೆ ರೈತರಿಗೆ ಉತ್ತರಿಸಲಾಗದೆ ಬಾಯಿಮುಚ್ಚಿ ಕುಳಿತಿವೆ. ಈ ಕೂಡಲೇ ಪಾವತಿಗೆ ಬಾಕಿ ಇರುವ ಪರಿಹಾರದ ಹಣವನ್ನು ಪಾವತಿಸಿ, ರೈತರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿಮೆ ಮಾಡುವಂತೆ ಪ್ರೇರೆಪಿಸಬೇಕೆಂದು ಸಂಘಟನೆ ಅಭಿಪ್ರಾಯ ಪಟ್ಟಿತು.
ಕಿಸಾನ್ ಸಮ್ಮಾನ್ ಯೋಜನೆಯ ಕೆವೈಸಿ ನವೀಕರಣ, ಭತ್ತದ ಬೆಳೆ ನಾಟಿಗೆ ಸಂಬಂಧಿಸಿದ ತೊಡಕುಗಳು ಹಾಗೂ ಅಡಿಕೆಗೆ ಇರುವ ಬೇರು ಹುಳು ಸಮಸ್ಯೆಗೆ ಪರಿಹಾರ ಮೊದಲಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ ಹಾಗೂ ಜಿಲ್ಲಾಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸಭೆಯಲ್ಲಿ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉಡುಪ ವಂಡ್ಸೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕು ಉಪಾಧ್ಯಕ್ಷ ಅನಂತಪದ್ಮನಾಭ ಉಡುಪ, ಕೋಶಾಧಿಕಾರಿ ಸುಧಾಕರ ನಾಯಕ್ ಜಪ್ತಿ, ಸಮಿತಿಯ ಸದಸ್ಯರಾದ ನಾರಾಯಣ ಶೆಟ್ಟಿ ಬೆಳ್ಳಾಲ, ನಾಗಯ್ಯ ಶೆಟ್ಟಿ ನಾಡ, ತೇಜಪ್ಪ ಶೆಟ್ಟಿ ಆಲೂರು, ಚಂದ್ರಶೇಖರ, ಸುಧಾಕರ ನಾಯಕ್ ಮಡಾಮಕ್ಕಿ, ಚನ್ನಕೇಶವ ಕಾರಂತ್ ಕಿರಿಮಂಜೇಶ್ವರ, ರವಿರಾಜ್ ಮಂಜ ಮಡಾಮಕ್ಕಿ, ನಾಗರಾಜ ಉಡುಪ ಹಾಲಾಡಿ, ಶೇಷು ಆಚಾರ್ಯ, ಅಣ್ಣಯ್ಯ ಗಾಣಿಗ, ನಾರಾಯಣ ಖಾರ್ವಿ, ಸುಬ್ಬಣ್ಣ ಶೆಟ್ಟಿ, ಜಗದೀಶ್ ರಾವ್, ಪದ್ಮನಾಭ ಹೆಬ್ಬಾರ್, ನಾಗರಾಜ್ ಮಂಜ ಮೊದಲಾದವರು ಉಪಸ್ಥಿತರಿದ್ದರು.