varthabharthi


ಅನುಗಾಲ

ನೂಪುರದ ಸದ್ದು

ವಾರ್ತಾ ಭಾರತಿ : 9 Jun, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇನ್ನೊಬ್ಬರ ಆಶ್ರಯ, ಸಖ್ಯವಿಲ್ಲದೆ ಮನುಷ್ಯ ಬದುಕಬಹುದು ಎಂದು ಯಾವ ವಿವೇಕಿಯೂ ಹೇಳಲಿಲ್ಲ. ಅದನ್ನು ಹೇಳುವುದು ಅವಿವೇಕಿಗಳು ಮಾತ್ರ. ಮಕ್ಕಳ ಪಠ್ಯದಲ್ಲಿ ‘ನೀ ನನಗಿದ್ದರೆ ನಾ ನಿನಗೆ, ನೆನಪಿರಲೀ ನುಡಿ ನಮ್ಮೊಳಗೆ’ ಎಂಬುದನ್ನು ಸರಕಾರ ನೆನಪುಮಾಡಿಕೊಂಡು ಕಾರ್ಯಪ್ರವೃತ್ತವಾಗದಿದ್ದರೆ ಮಸೀದಿ ಅಗೆದು ಶಿವಲಿಂಗ ಹುಡುಕುವ ಕಾರ್ಯಕ್ಕಿಂತ ಹೆಚ್ಚು ಹಾನಿಯನ್ನು ನೂಪುರದ ಧ್ವನಿ ಮಾಡೀತು.


ರಾಮಾಯಣದ ಸೂತ್ರವು ಕೈಕೆ-ಮಂಥರೆಯರಲ್ಲಿತ್ತು ಎಂದು ಹೇಳುವವರಿದ್ದಾರೆ. ಅವರನ್ನು ಯಾರು ಎಷ್ಟೇ ಟೀಕಿಸಿದಾಗಲೂ ಶ್ರೀರಾಮಚಂದ್ರನು ಎಲ್ಲವೂ ತನ್ನ ಒಳ್ಳೆಯದಕ್ಕೇ ಎಂಬ ರೀತಿಯಲ್ಲಿ ವರ್ತಿಸಿದನಂತೆ. ಮಹಾಭಾರತದಲ್ಲಿ ಶಕುನಿಯೆಂಬ ಒಬ್ಬ ಪ್ರಧಾನ ಪಾತ್ರಧಾರಿ. ಈತ ಗಾಂಧಾರಿಯ ತಮ್ಮ. ಹಸ್ತಿನಾವತಿಗೆ ಬಂದು ಅಕ್ಷರಶಃ ತನ್ನ ದಾಳಗಳ ಮೂಲಕ ಪಾಂಡವರಿಗೆ ವನವಾಸ ಮಾಡಿಸಿದ್ದು ಮಾತ್ರವಲ್ಲ, ಅರಗಿನ ಮನೆಯಂತಹ ತಂತ್ರದ ಮೂಲಕ ನಯವಂಚಕತನದ ಅತ್ಯುಚ್ಚ ಶಿಖರದಂತೆ ಮೆರೆದ ಶಕುನಿ ನಿಜಕ್ಕೂ ಧರ್ಮಸಂಸ್ಥಾಪನೆಗೆ ನೆರವಾದ ಎಂಬ ವಾದವಿದೆ. ಹೀಗೆ ಕೆಟ್ಟದ್ದನ್ನು ಮಾಡುತ್ತಲೇ ಒಳ್ಳೆಯದಕ್ಕೆ ಬೆಳಕು ತೋರುವ, ತೋರಿದ ಮಹನೀಯರು ಅನೇಕರಿದ್ದಾರೆ. ಪರಿಣಾಮದಿಂದ ಕ್ರಿಯೆಯನ್ನು ಊಹಿಸುವಾಗ ಹೀಗೆಲ್ಲ ಇರಬಹುದೆನ್ನಿಸುತ್ತದೆ. ಧರ್ಮದ ತಳಹದಿಯ ಮೇಲೆ ಮೂಲಭೂತವಾದಿ ಜನರು ಬಡಿದಾಡಿಕೊಂಡು ವಿವೇಕಿಗಳನ್ನು ಚಿಂತೆಗೆ ನೂಕಿರುವ ಪರ್ವಕಾಲದಲ್ಲಿ ನೂಪುರ್ ಶರ್ಮಾ ಎಂಬ ವಕೀಲೆ ಈ ದೇಶದ ಧರ್ಮಕ್ಕೊಂದು ಹೊಸ ಆಯಾಮವನ್ನು ನೀಡಿದ್ದಾಳೆ. ಈಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿ ಈ ಮೊದಲು ನೀಡಿದ ಎಲ್ಲ ಹೇಳಿಕೆಗಳಿಗೂ ಕಲಶಪ್ರಾಯವಾದ ಮಾತನ್ನಾಡಿ ದೇಶವನ್ನು ಮತಾಂಧತೆಯ ಕೂಪದಲ್ಲಿ ವಿರಾಜಮಾನವಾಗಿಸಿದ್ದಾಳೆ. ಮುಸ್ಲಿಮರನ್ನು ಹಳಿಯುವ, ದ್ವಿತೀಯ ದರ್ಜೆಯ ಪ್ರಜೆೆಗಳಂತೆ ಕಾಣುವ, ಅವರ ಪೂಜಾಸ್ಥಾನಗಳನ್ನು ಅಗೆಯುವ ಹಿಂದುತ್ವ (ಹಿಂದೂ ಅಲ್ಲ!) ರಾಷ್ಟ್ರಪಿತರು ತಲ್ಲಣಗೊಳ್ಳುವಂತೆ ಆಕೆ ವರ್ತಿಸಿದ್ದಾಳೆ. ಈಗ ಸರ್ವವಿಧಿತವಾದ ಆಕೆಯ ಮಾತುಗಳು ಭಾರತದೊಳಗೆ ಮುಸ್ಲಿಮರ ಕುರಿತಾದ ಸರ್ಜಿಕಲ್ ಸ್ಟ್ರೈಕ್ ಎಂದು ಭಾವಿಸಲಾಗಿತ್ತು. ಇದಕ್ಕೆ ಪೋಷಕವಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಪ್ರತಿಭಟನೆಯ ಹೊರತಾಗಿ ಇತರೆಡೆ ದೇಶದ ಮುಸ್ಲಿಮರು ಸುಮ್ಮನಿದ್ದರು. ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯ ತೀರ್ಪನ್ನು ನೀಡಿದ ಆನಂತರದಲ್ಲಿ ಮುಸ್ಲಿಮರು ತೋರಿದ ಅಪಾರ ಮತ್ತು ಅನಿವಾರ್ಯ ತಾಳ್ಮೆ ಈ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಸಹನೆ ದೌರ್ಬಲ್ಯವಲ್ಲ ಎಂಬ ಗಾಂಧೀಸೂಕ್ತಿಯನ್ನು ಪರೀಕ್ಷೆ ಮಾಡುವಂತೆ ಎಲ್ಲೆಡೆ ಹಿಂದುತ್ವದ ದಾದಾಗಿರಿ ನಡೆಯಲಾರಂಭಿಸಿತು. ಸಾತ್ವಿಕ ಹಿಂದೂಗಳು ನಾಚಿಕೆಪಡುವಷ್ಟರ ಮಟ್ಟಿಗೆ ಈ ಕಿರಿಕಿರಿ ಮುಂದುವರಿಯಿತು. ಆಳುವವರು ಇದನ್ನು ಗಮನಿಸಿ ಮುಖಮುಚ್ಚಿಕೊಂಡು ಮುಸಿಮುಸಿನಗುತ್ತ ಚಿವುಟಿ ಸಮಾಧಾನಮಾಡುತ್ತ ನಡೆದರು.

ನೂಪುರ್ ಶರ್ಮಾಳ ಮಾತುಗಳು ದೇಶದೊಳಗೆ ಅಂತಹ ಅವಾಂತರವನ್ನು ಸೃಷ್ಟಿಸಲೇ ಇಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದಮನಿಸುವ ಪ್ರಯತ್ನ ನಡೆಯುತ್ತಿದೆಯೆಂದು ಗೊತ್ತಿದ್ದ ರಾಷ್ಟ್ರಗಳೂ ತಮ್ಮ ವ್ಯಾವಹಾರಿಕ ಅನುಕೂಲಕ್ಕಾಗಿ ಸುಮ್ಮನಿದ್ದವು. ಹೀಗಾಗಿ ವಿಶ್ವದ ಚರಿತ್ರೆಯು ಎಂದಿನಂತೆಯೇ ರಾಜಕೀಯ ಮೇಲಾಟದ ಕೈಗೂಸಾಗಿ ಸಾಗಿತು. ಇದೆಲ್ಲ ರಾಜಕೀಯ ಲಾಭವನ್ನು ತರುತ್ತದೆಯೆಂದು ಆಡಳಿತವು ಯೋಚಿಸುವ ಹೊತ್ತಿನಲ್ಲೇ ಅಮೆರಿಕವು ಭಾರತದ ಈ ವ್ಯತ್ಯಸ್ತತೆಯನ್ನು ದಾಖಲಿಸಿತು. ಉಕ್ರೇನ್ ಕಾರಣವಾಗಿ ರಶ್ಯಕ್ಕೆ ಆರ್ಥಿಕ ದಿಗ್ಬಂಧನವನ್ನು ಅಮೆರಿಕವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ವಿಧಿಸಿದ ಹೊತ್ತಿನಲ್ಲೂ ಭಾರತವು ರಶ್ಯದಿಂದ ತೈಲಖರೀದಿಯನ್ನು ಯಶಸ್ವಿಯಾಗಿ ಮಾಡಿ ಬೀಗಿತು. ಅಮೆರಿಕ ಸಹಿತ ಐರೋಪ್ಯ ರಾಷ್ಟ್ರಗಳು ಭಾರತದ ವಿರುದ್ಧ ತಲೆಹಾಕದಾದವು. ಇದಕ್ಕೆ ಭಾರತದ ಸಾಮರ್ಥ್ಯದ ಕಾರಣಕ್ಕಿಂತಲೂ ಮುಖ್ಯವಾಗಿ ಈ ಕಾರಣದಿಂದ ಭಾರತವನ್ನು ತಳ್ಳುವ ಕೆಲಸವನ್ನು ಮಾಡುವುದು ತಮ್ಮ ಹಿತವಲ್ಲವೆಂದು ಅವು ಭಾವಿಸಿದಂತಿತ್ತು. ಆದರೆ ಅಕ್ಷಾಂಶ-ರೇಖಾಂಶಗಳು ಯಾವಾಗಲೂ ಇರುವುದಲ್ಲ. ನಂಬಿಕೆಗೆ ಗಡಿಯಿಲ್ಲ. ನಮ್ಮ ವಿದೇಶಾಂಗ ಸಚಿವರ ಮಾತುಗಳು ಏರುಧ್ವನಿಯತ್ತ ಸಾಗುತ್ತಿರುವಾಗಲೇ ನೂಪುರ ಶರ್ಮಾಳ ಭ್ರಮಾಧೀನ ಮಾತುಗಳು ಮುಸ್ಲಿಮ್ ರಾಷ್ಟ್ರಗಳನ್ನು ಎಚ್ಚರಿಸಿದವು.

ಕೊಲ್ಲಿರಾಷ್ಟ್ರಗಳು ಭಾರತದೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾಗ್ಯೂ ಧರ್ಮಾಂಧರ ಇಂತಹ ಕಡಿವಾಣರಹಿತ ನಡೆನುಡಿಗಳನ್ನು ಭಾರತ ಸರಕಾರ ನಿಯಂತ್ರಿಸುವುದಿಲ್ಲವೆಂಬುದನ್ನು ಮನಗಂಡವು. ನಮ್ಮ ಖಾಯಂ ಪ್ರತಿಸ್ಪರ್ಧಿಯಾದ ಪಾಕಿಸ್ತಾನವಲ್ಲದೆ, ಅದರಾಚೆಗಿನ ಅಫ್ಘಾನಿಸ್ತಾನ ಮತ್ತು ಇರಾನ್, ಕುವೈತ್, ಖತರ್, ಒಮಾನ್, ಸೌದಿಅರೇಬಿಯ ಮುಂತಾದ ತೈಲರಾಷ್ಟ್ರಗಳು ಹಾಗೂ ಇಂಡೋನೇಶ್ಯದಂತಹ ದಕ್ಷಿಣ ಏಶ್ಯ ರಾಷ್ಟ್ರವೂ ಅಲ್ಲಿನ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡು ಭಾರತದಲ್ಲಿ ನಡೆದ ಈ ಘಟನೆಯನ್ನು ಖಂಡಿಸಿದವು. ಇವರೆಲ್ಲ ಭಾರತ ಸರಕಾರದ ಪ್ರತಿನಿಧಿಗಳು. ಪಾಪ, ತಮಗಿತ್ತ ಸೂಚನೆಯಂತೆ ಸಮಜಾಯಿಷಿಕೆ ನೀಡಿ ಭಾರತದಲ್ಲಿ ಎಲ್ಲರನ್ನೂ ಸಮನಾಗಿ ಕಾಣಲಾಗುತ್ತಿದೆಯೆಂದು ಹೇಳಿದರು. ಈ ವಿದೇಶಗಳು ಅವನ್ನು ನಂಬಿವೆಯೆಂದಲ್ಲ, ಆದರೆ ವಿವೇಕಯುತವಾಗಿ ಕೇಳಿದವು. ಈ ಸಂದರ್ಭದಲ್ಲಿ ಭಾರತದ ಉಪರಾಷ್ಟ್ರಪತಿಗಳು ಕೊಲ್ಲಿ ರಾಷ್ಟ್ರದಲ್ಲಿದ್ದರೆಂಬುದು ಗಮನಿಸಬೇಕಾದ ಅಂಶ.

ಸಮಸ್ಯೆಯಿರುವುದು ಇದಲ್ಲ. ಭಾರತದ ಪ್ರಧಾನಿ ಈ ಬಗ್ಗೆ ಚಕಾರ ಶಬ್ದವನ್ನೆತ್ತಿಲ್ಲ. ಕೆಲವೇ ದಿನಗಳ ಮೊದಲು ತಾನು ಭಾರತೀಯರು ತಲೆತಗ್ಗಿಸು ವಂತಹ ಯಾವ ಕಾರ್ಯವನ್ನೂ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದರು. ಜನರು ಮರೆತಿರಬಹುದಾದ ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ, ಸಿಎಎ, ಎನ್‌ಆರ್‌ಸಿ, ಅಲ್ಲದೆ ಈಡಿ, ಸಿಬಿಐ, ಎನ್‌ಐಎ ಮುಂತಾದ ಸರಕಾರಿ-ಆದರೂ ಸ್ವತಂತ್ರವಾಗಿರಬೇಕಾದ ಸಂಸ್ಥೆಗಳ ದುರುಪಯೋಗ, ರೈತ ಚಳವಳಿಯೆದುರು ಸೋತು ಮಸೂದೆಗಳನ್ನು ಹಿಂಪಡೆದದ್ದು, ಸಿನೆಮಾಗಳನ್ನು ಮತಪ್ರಚಾರಕ್ಕೆಂಬಂತೆ ತೆರಿಗೆ ರಿಯಾಯಿತಿ ನೀಡಿ ಉಚಿತ ಪ್ರಸಾರಕ್ಕೆ ಅವಕಾಶಕೊಟ್ಟು ಲಾಭಪಡೆಯಲು ಯತ್ನಿಸಿದ್ದು ಮತ್ತು ಇತ್ತೀಚೆಗೆ ಕಾಶ್ಮೀರಿ ಪಂಡಿತರ ಹತ್ಯೆಗಳು ಹೆಚ್ಚಾದದ್ದು, ಇವ್ಯಾವುದೂ ತಲೆ ತಗ್ಗಿಸಲು ಕಾರಣವಲ್ಲವಾದವರ ಕೊರಳಿನ ಮೇಲಿರುವುದೇನು ಎಂಬ ಪರೀಕ್ಷೆ ನಡೆಸಬೇಕಷ್ಟೆ! ರಾಜಕೀಯದಲ್ಲಿ ಮತ್ತು ಸರಕಾರದ ಅಧಿಕಾರಶಾಹಿಯಲ್ಲಿ ಅಮಾನತು ಎಂಬುವುದು ಬಹುತೇಕ ಒಂದು ಪ್ರಹಸನ. ಸರಕಾರಿ ಇಲಾಖೆಗಳಲ್ಲಿ ವರ್ಗಾವಣೆಯಂತಹ ಶಿಕ್ಷೆಯೂ ಇದೆ! ಒಬ್ಬ ಪೊಲೀಸ್ ಯಾವನಾದರೂ ಅಮಾಯಕನ ಮೇಲೆ ಹಲ್ಲೆ ಮಾಡಿದರೆ ಆತನಿಗೆ ವರ್ಗಾವಣೆಯಾಗುತ್ತದೆ. ಹಲ್ಲೆಯಾದವನಿಗೆ ಆತನ ವೆಚ್ಚದಲ್ಲೇ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ! ಅಲ್ಲಿಗೆ ಆ ಪ್ರಕರಣ ಮುಕ್ತಾಯವಾಗುತ್ತದೆ.

ಬಹುಬಾಗಿಲ ವ್ಯವಸ್ಥೆಯಲ್ಲಿ ಒಂದು ಬಾಗಿಲಲ್ಲಿ ಹೊರಹೋದವನು ಇನ್ನೊಂದು ಬಾಗಿಲಲ್ಲಿ ಒಳಬರುವುದಕ್ಕೆ ಬೇಕಾದ ತಯಾರಿ, ವಿನ್ಯಾಸಗಳಿರುತ್ತವೆ. ಜಿಂದಾಲ್ ತರಹ ಯಾವುದಕ್ಕೂ ಬೇಡದವನಾದರೆ ಆತನಿಗೆ ವಜಾದ ಶಿಕ್ಷೆ ನೀಡಬಹುದು. ಆದರೂ ಮರಳಬಹುದು. ನೂಪುರ್ ಶರ್ಮಾ ವಿರುದ್ಧ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಪ್ರವಾದಿಯನ್ನು ಹಳಿದದ್ದಕ್ಕೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಪ್ರಾಯಃ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಮೋದಿಯುಗದಲ್ಲಿ ಧರ್ಮಾಧಾರಿತ ಪ್ರಕರಣಗಳು ದಾಖಲಾದಷ್ಟು ಹಿಂದೆಂದೂ ಆಗಿರಲಾರವು. ನೂಪುರ್ ಶರ್ಮಾಳಿಗಿಂತ ಮೊದಲು ಹೀಗೆಯೇ ಬಹಿರಂಗವಾಗಿ ಎಲ್ಲ ಕಾನೂನನ್ನು ಉಲ್ಲಂಘಿಸಿದ ಬಹಳಷ್ಟು ರಾಜಕೀಯ ನಾಯಕರಿದ್ದಾರೆ. ಅವರ ಮೇಲೆ ಕೇಂದ್ರ ಸರಕಾರ ಕ್ರಮಕೈಗೊಂಡಿದ್ದರೆ ಬಹಳಷ್ಟು ಶಾಸಕರು, ಸಂಸದರು ಈಗ ಜೈಲಿನಲ್ಲಿರಬೇಕಾಗಿತ್ತು. ಬದಲಾಗಿ ಅವರಿಗೆ ರಾಜಕೀಯ ಭಡ್ತಿ ನೀಡಲಾಗಿದೆ. ಅಷ್ಟೇ ಅಲ್ಲ, ನೂಪುರ್ ಶರ್ಮಾಳಿಗೆ ನೀಡಿದಂತೆ ಹೆಚ್ಚಿನ ರಕ್ಷಣೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಮತಾಂಧ ಸರಕಾರಗಳು ಹೇಗೆ ನಡೆದುಕೊಳ್ಳುತ್ತವೆಂಬುದನ್ನು ಪರೀಕ್ಷಿಸಲು ಮ್ಯಾನ್ಮಾರ್, ಚೀನಾ, ರಶ್ಯ ಹಾಗೂ ಇತರ ರಾಷ್ಟ್ರಗಳ ಕಡೆಗೆ ಕಣ್ಣುಹಾಯಿಸಬಹುದು. ಭಾರತವೂ ಅದೇ ದಿಕ್ಕಿನಲ್ಲಿ ಸಾಕಷ್ಟು ದೂರ ಕ್ರಮಿಸಿದೆ.

ಹಾಗೆ ನೋಡಿದರೆ ಕ್ರಿಯೆಗಿಂತ ಭೀಕರವಾದ ಪ್ರತಿಕ್ರಿಯೆಗಳು ಭಾರತದಲ್ಲಿ ನಡೆದಷ್ಟು ಇತರ ದೇಶಗಳಲ್ಲಿ ನಡೆದಿಲ್ಲವೇನೋ? 1984ರ ದಿಲ್ಲಿಯ ಸಿಖ್ ಹತ್ಯಾಕಾಂಡ, 2002ರಲ್ಲಿ ಗುಜರಾತಿನಲ್ಲಿ ನಡೆದ ನರಮೇಧ ಇವೆಲ್ಲ ಈಗ ಸರಕಾರಕ್ಕೆ ಮಾದರಿಗಳು. ಇದನ್ನು ಬಲ್ಲ ಉತ್ಸಾಹಿ ರಾಜಕಾರಣಿಗಳು, ಯುವನಾಯಕರು ತಮ್ಮೆಲ್ಲ ಶಕ್ತಿ, ಪ್ರತಿಭೆ, ವಿದ್ಯೆ, ಜನಪ್ರಿಯತೆ ಇವುಗಳನ್ನು ಈ ದಿಕ್ಕಿನಲ್ಲೇ ವಿನಿಯೋಗಿಸುತ್ತಿದ್ದಾರೆ. ದೇಶದ ಸಂಸದ ಮತ್ತು ಆಡಳಿತ ಪಕ್ಷದ ಯುವ ನಾಯಕನೊಬ್ಬ ದಿಲ್ಲಿಯಲ್ಲಿ ಗುಂಪುಕಟ್ಟಿಕೊಂಡು ಮುಖ್ಯಮಂತ್ರಿಯ ಮನೆಯ ಮೇಲೆ ದಾಳಿ ಮಾಡಿದರು. ಇದೇ ಮಂದಿ ಹಿಂದೆ ಕೋಲ್ಕತಾದಲ್ಲಿ ಹಿಂಸಾಕೃತ್ಯದಲ್ಲಿ ತೊಡಗಿದ್ದರು. ಹಿಂದುತ್ವದ ಭಾಷಣವಂತೂ ದೇವರಿಗೇ ಪ್ರೀತಿ. ತಮ್ಮ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲವಾದರೆ ಇನ್ನೊಬ್ಬರಿಗೆ ಬೈಯಬೇಕಂತೆ. ಹಾಗೆ ಹೇಳುತ್ತದೆ ರಾಜನೀತಿ. ಹಿಂದೆಲ್ಲ ಮಾಧ್ಯಮಗಳಲ್ಲಿ ಇವೆಲ್ಲ ಅಪರೂಪದ ವಿಚಾರವಾಗಿದ್ದರೆ ಈಗ ಇದು ದಿನಚರಿಯಾಗಿದೆ. ನಡೆನುಡಿ ರಾಜಕೀಯದಲ್ಲಿ ಒಂದಾಗುತ್ತದೆಯೆಂದು ಬಯಸುವುದು ತಪ್ಪು. ಆದರೆ ಅದರ ನಡುವಣ ಅಂತರವನ್ನು ಹಿಗ್ಗಿಸಲು ಈಗ ನಡೆಯುತ್ತಿರುವ ಪ್ರಯತ್ನಗಳು ನಭೂತೋ. ಆದರೆ ನಭವಿಷ್ಯತಿಯಾಗಲು ಸಾಧ್ಯವಿಲ್ಲ. ಏಕೆಂದರೆ ತಾವೇ 2050ರ ವರೆಗೂ ಗೆಲ್ಲುತ್ತೇವೆ ಎಂದು ಮೋದಿ-ಶಾದ್ವಯರು ಹೇಳುತ್ತಾರೆ.


ನೂಪುರದ ಸದ್ದಿಗೆ ಹಿನ್ನೆಲೆಯನ್ನು ಧರ್ಮಸಂಸತ್ತು ಸೃಷ್ಟಿಸಿತ್ತು. ಅದೊಂದು ಸಣ್ಣ ಸಂಗತಿಯೆಂದು ಸರಕಾರ ಬಿಂಬಿಸಿತ್ತು. ಈಗ ಅದರ ಜ್ವಾಲೆಗಳು ಕಿಡಿಯೆಬ್ಬಿಸಿವೆ. ಹೊಗೆ ಮತ್ತು ಬೆಂಕಿ ಎಲ್ಲಕಡೆ ಆಕ್ರಮಿಸಿವೆ. ಕರ್ನಾಟಕದ ಅನೇಕ ಪೇಟೆಪಟ್ಟಣಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರು ಹಿಂದೂ ಗ್ರಾಹಕರನ್ನು ಕಳೆದುಕೊಂಡಿದ್ದಂತಹ ಒಬ್ಬ ಮುಸ್ಲಿಮ್ ವ್ಯಾಪಾರಿ ತನ್ನಿಂದ ಅನೇಕ ವರ್ಷಗಳಿಂದ ಕೊಳ್ಳುತ್ತಿದ್ದ ಹಿಂದೂ ಗ್ರಾಹಕನನ್ನು ವೈಯಕ್ತಿಕವಾಗಿ ಸಂಪರ್ಕಿಸಿದಾಗ ಆತ ತನಗೆ ಆತನ ಮೇಲೆ ಯಾವ ದ್ವೇಷವೂ ಇಲ್ಲವೆಂದೂ ಆದರೆ ಕೆಲವು ಹಿಂದುತ್ವ ಸಂಘಟನೆಗಳು ಮನೆಮನೆ ಭೇಟಿಮಾಡಿ ಮುಸ್ಲಿಮರ ಅಂಗಡಿಗೆ ಹೋಗದಂತೆ ಎಚ್ಚರಿಸಿದ್ದಾರೆ; ಅವರ ಭಯದಿಂದ ತಾನು ಆತನ ಅಂಗಡಿಗೆ ಬರುತ್ತಿಲ್ಲವೆಂದು ಹೇಳಿದನಂತೆ. ಇಂತಹ ಆಂತರಿಕ ಭಯೋತ್ಪಾದನೆಗಳು ಮನುಷ್ಯನನ್ನು ಮತ್ತು ಸಮಾಜದ ಸಾಮರಸ್ಯವನ್ನು ನಿಧಾನವಾಗಿ ಕೊಲ್ಲಲು ಶಕ್ತವಾಗಿವೆ. ಇಂತಹ ಬೆದರಿಕೆಯನ್ನು ಮಾಡುವ ಸಂಘಟನೆಗಳ ಮೇಲೆ ಸರಕಾರದ ಯಾವ ಇಲಾಖೆಯೂ ಕ್ರಮ ಕೈಗೊಂಡಿಲ್ಲ. ಆಳುವವರ ಇಚ್ಛಾಶಕ್ತಿಯನ್ನು ಅನುಸರಿಸಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಸ್ವಂತ ಅನ್ನುವುದು ಏನೂ ಇರುವುದಿಲ್ಲ. ಆದರೆ ಜನ ಈ ಪರಿಸ್ಥಿತಿಯನ್ನು ಎಷ್ಟು ಸಮಯ ತಾಳಿಕೊಳ್ಳಬಲ್ಲರು? ವ್ಯವಸ್ಥೆಯ ಲೋಪದೋಷಗಳನ್ನು ಸರಕಾರವು ತನ್ನ ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಮತ್ತು ಸ್ಥಳೀಯ ಜನರೊಡನೆ ನಡೆಸುವ ಮಾತುಕತೆಯಿಂದ ಬಗೆಹರಿಸಬಹುದು. ಆದರೆ ಜನನಾಯಕರೆನ್ನಿಸಿಕೊಂಡವರು ಹಿಂಸೆಯನ್ನೇ ಮಾತನಾಡಿದರೆ, ಆಗ ಒಂದಿಲ್ಲೊಂದು ಹಂತದಲ್ಲಿ ಅವರು ಹಿಂಸೆಯನ್ನೇ ಎದುರಿಸಬೇಕಾಗುತ್ತದೆ. ಇದು ಹಿಂದೂ-ಮುಸ್ಲಿಮ್ ಅನ್ನುವುದಕ್ಕಿಂತ ಬಹುಸಂಖ್ಯಾತರು-ಅಲ್ಪಸಂಖ್ಯಾತರು ಎಂಬ ರೀತಿಯಲ್ಲಿ ಕಾಣಬಹುದು. ಜಮ್ಮು-ಕಾಶ್ಮೀರವನ್ನು ಉದ್ದಕ್ಕೆ ಸೀಳಿ ತಿರುಗಾಮುರುಗಾ ಮಾಡಿ ಜರಾಸಂಧನ ದೇಹದಂತೆ ವಿಭಜಿಸಿದರೆ ಶಾಂತಿ ನೆಲೆಸುತ್ತದೆಯೆಂಬ ತಪ್ಪುಹಾಗೂ ಜನಪ್ರಿಯ ಪ್ರಮೇಯ ಈಗ ಕಾಶ್ಮೀರಿ ಪಂಡಿತರಿಗೆ ಮಾತ್ರವಲ್ಲ, ವೈಷ್ಣೋದೇವಿ ಮತ್ತಿತರ ತೀರ್ಥಯಾತ್ರಿಗಳಿಗೆ ಎರವಾಗಿದೆ. ಎಲ್ಲವೂ ಸರಿಯಿದೆಯೆಂದು ಭಾಷಣ ಮಾಡಿ ಜನರನ್ನು ಉಬ್ಬಿಸಿ ಕಳುಹಿಸಿ ಪ್ರಯೋಗಪಶುಗಳಂತೆ ಬಲಿನೀಡುವುದು ಸರಕಾರದ ವೈಖರಿ. ಜಮ್ಮು-ಕಾಶ್ಮೀರವು ಗಡಿಭಾಗದಲ್ಲಿರುವುದರಿಂದ ಅಲ್ಲಿ ಪೊಲೀಸಲ್ಲದೆ, ಸೇನೆಯಿದೆ, ಗಡಿಭದ್ರತಾ ಪಡೆಯಿದೆ. ಇಷ್ಟಿದ್ದೂ ಅಲ್ಲಿ ಭಯೋತ್ಪಾದನೆ ನಡೆಯುತ್ತದೆಯೆಂದಾದರೆ ನಮ್ಮ ಆಡಳಿತದ ದಕ್ಷತೆಯನ್ನು ಅಳೆಯಬಹುದು. ಈಗ ಸಾವಿರಾರು ಭಾರತೀಯ ಮುಸ್ಲಿಮೇತರರು ಕೊಲ್ಲಿ ಮತ್ತಿತರ ಮುಸ್ಲಿಮ್ ರಾಷ್ಟ್ರಗಳಲ್ಲಿ ಕೆಲಸಕಳೆದುಕೊಂಡು ಮರಳಬೇಕಾಗುತ್ತದೆಂಬ ವರದಿಯಿದೆ. ವರದಿಯಲ್ಲದಿದ್ದರೂ ಗುಮಾನಿಯಿದೆ. ಇದು ಸರಕಾರಕ್ಕೂ ಇತ್ತು; ಆದರೆ ಅದು ಹೇಳಿರಲಿಲ್ಲ. ಯಥಾಪ್ರಕಾರ ಕಾಶ್ಮೀರಿ ಪಂಡಿತರ ಕುರಿತು ನಡೆದುಕೊಂಡಂತೆ ಈ ಉದ್ಯೋಗಿಗಳ ಕುರಿತೂ ಸರಕಾರ ನಡೆದುಕೊಂಡಿತು. ಇಲ್ಲಿ ನಡೆಯುವುದು ಅಲ್ಲಿಯೂ ನಡೆದರೆ ಎಂಬುದನ್ನು ಸರಕಾರ ಯೋಚಿಸದಿದ್ದರೆ ಸರಕಾರಗಳಿಗೆ ನಷ್ಟವಿಲ್ಲ; ಸಂಬಂಧಿತ ಉದ್ಯೋಗಿ ಜನಗಳಿಗೆ ನಷ್ಟ. ಅವರ ಬಾಳು ದಿಕ್ಕಾಪಾಲು. ಕೋವಿಡ್-19ರ ಕಾಲದಲ್ಲಿ ಸರಕಾರ ಜನರ ಬಾಳನ್ನು ಕಿತ್ತುಕೊಂಡಂತೆ ಈ ಸಂದರ್ಭದಲ್ಲೂ ಮಾಡುತ್ತಿದೆ. ಹೀಗೆ ಮರಳುವವರಿಗೆ ನಮ್ಮ ಸರಕಾರ ನೆಲೆ ಕಲ್ಪಿಸುತ್ತದೆಯೆಂದು ನಂಬುವುದು ಭ್ರಮೆ. ನೂಪುರಳು ಈ ಸರಕಾರದ ನಾಶಕ್ಕಾಗಿ ಬಂದ ಶಕುನಿಯೋ ಅಥವಾ ದೇಶದ ಭವಿಷ್ಯಕ್ಕೆ ದಿಕ್ಸೂಚಿಯಾಗಬಲ್ಲ ವಿವೇಕವನ್ನು ತರುವ ಬೆಳಕೋ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನೊಬ್ಬರ ಆಶ್ರಯ, ಸಖ್ಯವಿಲ್ಲದೆ ಮನುಷ್ಯ ಬದುಕಬಹುದು ಎಂದು ಯಾವ ವಿವೇಕಿಯೂ ಹೇಳಲಿಲ್ಲ. ಅದನ್ನು ಹೇಳುವುದು ಅವಿವೇಕಿಗಳು ಮಾತ್ರ. ಮಕ್ಕಳ ಪಠ್ಯದಲ್ಲಿ ‘ನೀ ನನಗಿದ್ದರೆ ನಾ ನಿನಗೆ, ನೆನಪಿರಲೀ ನುಡಿ ನಮ್ಮೊಳಗೆ’ ಎಂಬುದನ್ನು ಸರಕಾರ ನೆನಪುಮಾಡಿಕೊಂಡು ಕಾರ್ಯಪ್ರವೃತ್ತವಾಗದಿದ್ದರೆ ಮಸೀದಿ ಅಗೆದು ಶಿವಲಿಂಗ ಹುಡುಕುವ ಕಾರ್ಯಕ್ಕಿಂತ ಹೆಚ್ಚು ಹಾನಿಯನ್ನು ನೂಪುರದ ಧ್ವನಿ ಮಾಡೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)