ನದಿಗಳ ಜೋಡಣೆ: ಅತ್ಯಂತ ದುಬಾರಿ ಪ್ರಮಾದವಾಗುತ್ತದೆಯೇ?
ಈ ಅತ್ಯಂತ ದುಬಾರಿ ಯೋಜನೆಗೆ ಸೀಮಿತ ಸಂಪನ್ಮೂಲಗಳನ್ನು ಅಗಾಧ ಪ್ರಮಾಣದಲ್ಲಿ ಹೂಡುವ ಮುನ್ನ ಎಲ್ಲಾ ರಾಜ್ಯಗಳು, ಎಲ್ಲ ಸಂಬಂಧಪಟ್ಟವರು ಮತ್ತು ಸ್ವತಂತ್ರ ಪರಿಣಿತರೊಂದಿಗೆ ವಿಸ್ತೃತ ಸಮಾಲೋಚನೆಗಳು ನಡೆಯಬೇಕು. ಇಂತಹ ಸಮಾಲೋಚನೆಗಳ ವೇಳೆ, ಈ ಸಮಗ್ರ ಯೋಜನೆಯನ್ನೇ ಕೈಬಿಡುವ ಸಾಧ್ಯತೆಯ ಬಗ್ಗೆಯೂ ಮುಕ್ತ ಮನೋಭಾವವನ್ನು ಸರಕಾರ ಹೊಂದಬೇಕು. ಅಂತಹ ಸಮಾಲೋಚನೆಗಳಿಗೆ ಇದು ಸಕಾಲ.
ಭಾರತದ ‘ನದಿಗಳ ಆಂತರಿಕ ಜೋಡಣೆ’ (ಐಎಲ್‌ಆರ್)ಯೋಜನೆಯು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಬೃಹತ್ ನೀರು ಹಂಚಿಕೆ ಯೋಜನೆಗಳ ಪೈಕಿ ಒಂದಾಗಿದೆ. ಯೋಜನೆಯು ದೇಶಾದ್ಯಂತದ 37 ನದಿಗಳನ್ನು 30 (ಅಥವಾ 29) ಸ್ಥಳಗಳಲ್ಲಿ ಜೋಡಿಸುತ್ತದೆ. ಯೋಜನೆಯ ವೆಚ್ಚವನ್ನು 2016ರಲ್ಲಿ 11 ಲಕ್ಷ ಕೋಟಿ ರೂ. ಎಂಬುದಾಗಿ ಅಧಿಕೃತವಾಗಿ ಬಿಂಬಿಸಲಾಗಿತ್ತು. ಆದರೆ ಈ ವೆಚ್ಚವು ವಾಸ್ತವಿಕ ವೆಚ್ಚಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಎಂಬುದಾಗಿ ಈಗ ಪರಿಗಣಿಸಲಾಗಿದೆ.
ಈ ಯೋಜನೆಗೆ ವ್ಯಕ್ತವಾದ ಟೀಕೆಗಳು ಮತ್ತು ಅದರ ವ್ಯತಿರಿಕ್ತ ಪರಿಣಾಮಗಳನ್ನು ಪರಿಗಣಿಸಿ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಅದನ್ನು ಹೆಚ್ಚು ಕಡಿಮೆ ಕೈಬಿಡಲಾಗಿತ್ತು. ಆದರೆ, 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಸ್ವಲ್ಪವೇ ಸಮಯದ ಬಳಿಕ ಯೋಜನೆಗೆ ಮರುಚಾಲನೆ ನೀಡಲಾಯಿತು. ಈ ಯೋಜನೆಯಲ್ಲಿ 31 ಹೊಸ ನದಿಗಳನ್ನು ಸೃಷ್ಟಿಸಲಾಗುವುದು ಮತ್ತು ಇಡೀ ಯೋಜನೆಯನ್ನು ಎರಡು ದಶಕಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು 2016ರಲ್ಲಿ ಅಂದಿನ ಜಲ ಸಂಪನ್ಮೂಲಗಳ ಸಚಿವೆ ಉಮಾ ಭಾರತಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇತ್ತೀಚಿನ ಅಧಿಕೃತ ಸರಕಾರಿ ಹೇಳಿಕೆಗಳೂ ಯೋಜನೆಯ ಬಗ್ಗೆ ಸರಕಾರ ಹಿಂದಿನಷ್ಟೇ ಆಸಕ್ತಿಯಿಂದ ಇರುವುದನ್ನು ತೋರಿಸಿವೆ. ಆದರೆ, ಈ ಯೋಜನೆಗೆ ರಾಜ್ಯ ಸರಕಾರಗಳನ್ನು ಒಪ್ಪಿಸುವುದು ಹೇಗೆ ಎನ್ನುವುದು ಈಗ ಕೇಂದ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.
ಯೋಜನೆಯೊಂದಿಗೆ ಬೆಸೆದುಕೊಂಡಿರುವ ಬೃಹತ್ ಸಮಸ್ಯೆಗಳ ಆಳವನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಇದರಲ್ಲಿ ಅಂತರ್ಗತವಾಗಿರುವ 30 ಯೋಜನೆಗಳತ್ತ ಒಮ್ಮೆ ಗಮನ ಹರಿಸೋಣ. ವಾಸ್ತವವಾಗಿ, ಎರಡು ಯೋಜನೆಗಳ ಘಟಕಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆಯೇ ಇಲ್ಲವೇ ಎಂಬ ಆಧಾರದಲ್ಲಿ ಇಲ್ಲಿ 29-32 ಯೋಜನೆಗಳು ಇರಬಹುದಾಗಿದೆ. ಸಣ್ಣ ಪರ್ವತಗಳಲ್ಲಿ ಹುಟ್ಟುವ ನದಿಗಳನ್ನು ಒಳಗೊಂಡ ಸುಮಾರು 16 ಯೋಜನೆಗಳು ಮತ್ತು ಹಿಮಾಲಯದಲ್ಲಿ ಹುಟ್ಟುವ ನದಿಗಳನ್ನು ಒಳಗೊಂಡ ಸುಮಾರು 14 ಯೋಜನೆಗಳು ಇಲ್ಲಿವೆ. ಈ ಯೋಜನೆಗಳ ಪೈಕಿ ಹೆಚ್ಚಿನವುಗಳ ಸಾಧ್ಯತಾ ವರದಿಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ಕೆಲವು ಯೋಜನೆಗಳ ವಿವರವಾದ ಯೋಜನಾ ವರದಿಯನ್ನೂ ಪೂರ್ಣಗೊಳಿಸಲಾಗಿದೆ. ಇತರ ಯೋಜನೆಗಳಿಗೆ ಸಂಬಂಧಿಸಿ ಪೂರ್ವ-ಸಾಧ್ಯತಾ ವರದಿಗಳನ್ನು ತಯಾರಿಸಲಾಗಿದೆ.
ಸಣ್ಣ ಪರ್ವತಗಳಲ್ಲಿ ಹುಟ್ಟುವ ನದಿಗಳಿಗೆ ಸಂಬಂಧಿಸಿದ ಮೊದಲ ಯೋಜನೆಯು ಮಹಾನದಿ (ಮಣಿಭದ್ರಾ) ಮತ್ತು ಗೋದಾವರಿ (ದೌಲೈಸ್ವರಮ್) ನದಿಗಳನ್ನು ಜೋಡಿಸುವುದಾಗಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ 8 ರಾಜ್ಯಗಳು ಬರುತ್ತವೆ- ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಮಹಾರಾಷ್ಟ್ರ. ಇದೇ ಯೋಜನೆಯ ಎರಡನೇ ಭಾಗವು ಮಹಾನದಿ (ಬೆರ್ಮುಲ್) ಮತ್ತು ಗೋದಾವರಿ (ದೌಲೈಸ್ವರಮ್)ಯನ್ನು ಜೋಡಿಸುವುದಾಗಿದೆ. ಇದರ ವ್ಯಾಪ್ತಿಯಲ್ಲೂ ಅದೇ 8 ರಾಜ್ಯಗಳು ಬರುತ್ತವೆ.
ಎರಡನೇ ಯೋಜನೆಯು ಗೋದಾವರಿ (ಇಂಚಂಪಲ್ಲಿ) ಮತ್ತು ಕೃಷ್ಣಾ (ಪುಲಿಚಿಂಟಾಲ) ನದಿಗಳನ್ನು ಜೋಡಿಸುವುದಾಗಿದೆ. ಇದರ ವ್ಯಾಪ್ತಿಯಲ್ಲಿ ಏಳು ರಾಜ್ಯಗಳು ಬರುತ್ತವೆ- ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ. ಮೂರನೇ ಯೋಜನೆಯು ಗೋದಾವರಿ (ಇಂಚಂಪಲ್ಲಿ) ಮತ್ತು ಕೃಷ್ಣಾ (ನಾಗಾರ್ಜುನಸಾಗರ) ನದಿಗಳನ್ನು ಜೋಡಿಸುವುದಾಗಿದ್ದು, ಇದರ ವ್ಯಾಪ್ತಿಯಲ್ಲಿ ಅವೇ ಏಳು ರಾಜ್ಯಗಳು ಬರುತ್ತವೆ. ಬಳಿಕ ಗೋದಾವರಿ (ಪೊಳವರಮ್) ಮತ್ತು ಕೃಷ್ಣಾ (ವಿಜಯವಾಡ) ನದಿಗಳನ್ನು ಜೋಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಯ ವ್ಯಾಪ್ತಿಯಲ್ಲೂ ಅವೇ ಮೇಲಿನ ಏಳು ರಾಜ್ಯಗಳು ಬರುತ್ತವೆ. ನಂತರ ಕೃಷ್ಣಾ (ಆಲಮಟ್ಟಿ) ನದಿಯನ್ನು ಪೆನ್ನಾರ್ ನದಿಯೊಂದಿಗೆ ಜೋಡಿಸಲಾಗುತ್ತದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ನಾಲ್ಕು ರಾಜ್ಯಗಳು ಬರುತ್ತವೆ. ಅವುಗಳೆಂದರೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ. ಮುಂದಿನ ಹಂತದಲ್ಲಿ ಕೃಷ್ಣಾ (ಶ್ರೀಶೈಲಮ್) ನದಿಯನ್ನು ಪೆನ್ನಾರ್ ನದಿಯೊಂದಿಗೆ ಹಾಗೂ ಕೃಷ್ಣಾ (ನಾಗಾರ್ಜುನಸಾಗರ) ನದಿಯನ್ನು ಪೆನ್ನಾರ್ ನದಿಯೊಂದಿಗೆ ಜೋಡಿಸಲಾಗುವುದು. ಈ ಯೋಜನೆಗಳ ವ್ಯಾಪ್ತಿಯಲ್ಲೂ ಅವೇ ನಾಲ್ಕು ರಾಜ್ಯಗಳು ಬರುತ್ತವೆ.
ಮುಂದಿನ ಹಂತದಲ್ಲಿ ಪೆನ್ನಾರ್ (ಸೋಮಶಿಲಾ) ನದಿಯನ್ನು ಕಾವೇರಿ (ಗ್ರಾಂಡ್ ಅಣೆಕಟ್ಟು) ನದಿಯೊಂದಿಗೆ ಜೋಡಿಸಲಾಗುವುದು. ಈ ಯೋಜನೆಯ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳು ಬರುತ್ತವೆ. ಬಳಿಕ ಮೂರು ನದಿಗಳ ಜೋಡಣೆ- (ಕಾವೇರಿ (ಕಟ್ಟಲೈ), ವರ್ಗಾಯ್ ಮತ್ತು ಗುಂಡರ್ ನದಿಗಳು)- ನಡೆಯುತ್ತದೆ. ಇದರ ವ್ಯಾಪ್ತಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳು ಬರುತ್ತವೆ.
ಸಣ್ಣ ಪರ್ವತಗಳಲ್ಲಿ ಹುಟ್ಟುವ ನದಿಗಳ ವಿಭಾಗದ 10ನೇ ಯೋಜನೆಯಲ್ಲಿ ಕೆನ್ ಮತ್ತು ಬೇತ್ವಾ ನದಿಗಳನ್ನು ಜೋಡಿಸಲಾಗುವುದು. ಇದರ ವ್ಯಾಪ್ತಿಯಲ್ಲಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು ಬರುತ್ತವೆ. ಬಳಿಕ ಪರ್ಬತಿ, ಕಾಳಿಸಿಂಧು ಮತ್ತು ಚಂಬಲ್- ಈ ಮೂರು ನದಿಗಳನ್ನು ಜೋಡಿಸುವ ಯೋಜನೆ ಜಾರಿಗೊಳ್ಳಲಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಬರುತ್ತವೆ. ಈ ಯೋಜನೆಯ ಎರಡನೇ ಭಾಗದಲ್ಲೂ ಮೂರು ನದಿಗಳನ್ನು- ಪರ್ಬತ್, ಕುನೊ ಮತ್ತು ಸಿಂಧ್- ಜೋಡಿಸಲಾಗುವುದು ಹಾಗೂ ಇದರ ವ್ಯಾಪ್ತಿಯಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಬರುತ್ತವೆ.
ಪಾರ್, ತಾಪಿ ಮತ್ತು ನರ್ಮದಾ ನದಿಗಳನ್ನು ಜೋಡಿಸುವ ಯೋಜನೆಯ ವ್ಯಾಪ್ತಿಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಬರುತ್ತವೆ. ದಮನ್‌ಗಂಗಾ ಮತ್ತು ಪಿಂಜಾಲ್ ನದಿಗಳನ್ನು ಜೋಡಿಸುವ ಯೋಜನೆಯ ವ್ಯಾಪ್ತಿಯಲ್ಲೂ ಇವೇ ಎರಡು ರಾಜ್ಯಗಳು ಬರುತ್ತವೆ. ಬೇಡ್ತಿ ಮತು ವರದಾ ನದಿಗಳನ್ನು ಜೋಡಿಸುವ ಯೋಜನೆಯ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಬರುತ್ತವೆ. ನೇತ್ರಾವತಿ ಮತ್ತು ಹೇಮಾವತಿ ನದಿಗಳ ಜೋಡಣೆಯ ವ್ಯಾಪ್ತಿಯಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಬರುತ್ತವೆ. ಪಂಬಾ, ಅಚ್ಕಂಕೋವಿಲ್ ಮತ್ತು ವೈಪ್ಪರ್ ನದಿಗಳ ಜೋಡಣೆಯ ವ್ಯಾಪ್ತಿಯಲ್ಲಿ ಕೇರಳ ಮತ್ತು ತಮಿಳುನಾಡು ಬರುತ್ತವೆ.
ಈಗ ಹಿಮಾಲಯದಲ್ಲಿ ಹುಟ್ಟುವ ನದಿಗಳ ವಿಷಯಕ್ಕೆ ಬರೋಣ. ಮೊದಲನೇ ಯೋಜನೆಯು ಮಾನಸ, ಸಂಕೋಶ್, ಟೀಸ್ತಾ ಮತ್ತು ಗಂಗಾ- ಈ ನಾಲ್ಕು ನದಿಗಳನ್ನು ಜೋಡಿಸುವುದಾಗಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಭೂತಾನ್ ಮತ್ತು ಭಾರತದ ಮೂರು ರಾಜ್ಯಗಳಾದ ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಬಿಹಾರ ಬರುತ್ತವೆ.
ಎರಡನೆಯದಾಗಿ, ಕೋಸಿ ಮತ್ತು ಘಾಘ್ರಾ ನದಿಗಳನ್ನು ಜೋಡಿಸಲಾಗುತ್ತದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ನೇಪಾಳ ಮತ್ತು ಭಾರತದ ಎರಡು ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶಗಳು ಬರುತ್ತವೆ. ನಂತರದ ಗಂಡಕ್ ಮತ್ತು ಗಂಗಾ ನದಿಗಳ ಜೋಡಣೆ ಹಾಗೂ ಘಾಘ್ರಾ ಮತ್ತು ಯಮುನಾ ನದಿಗಳ ಜೋಡಣೆ ವ್ಯಾಪ್ತಿಯಲ್ಲೂ ನೇಪಾಳ ದೇಶ ಹಾಗೂ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಬರುತ್ತವೆ.
ಅದೇ ವೇಳೆ, ಯಮುನಾ ಮತ್ತು ಶಾರದಾ ನದಿಗಳ ಜೋಡಣೆಯ ವ್ಯಾಪ್ತಿಯಲ್ಲಿ ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳು ಬರುತ್ತವೆ. ಮುಂದೆ ರಾಜಸ್ಥಾನ ಮತ್ತು ಸಾಬರಮತಿ ನದಿಗಳ ಜೋಡಣೆ ನಡೆಯಲಿದೆ. ಬಳಿಕ ಚುನಾರ್-ಸೋನೆ ಬರಾಜ್ (ಅಥವಾ ಗಂಗಾ-ಸೋನೆ ನದಿಗಳ) ಜೋಡಣೆ ನಡೆಯಲಿದ್ದು, ಅದರ ವ್ಯಾಪ್ತಿಯಲ್ಲಿ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳು ಬರುತ್ತವೆ. ಮುಂದಕ್ಕೆ ಗಂಗಾ ನದಿಯ ದಕ್ಷಿಣದ ಉಪನದಿಗಳಾದ ಸೋನೆ ಮತ್ತು ಬದುವಾ (ಸೋನೆ ಡ್ಯಾಮ್ ಜೋಡಣೆ) ನದಿಗಳ ಜೋಡಣೆ ನಡೆಯಲಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಬರುತ್ತವೆ.
ಮುಂದಿನ ಹಂತದಲ್ಲಿ ಜೋಡಣೆಗೊಳ್ಳುವ ನದಿಗಳೆಂದರೆ ಗಂಗಾ (ಫರಕ್ಕ), ದಾಮೋದರ ಮತ್ತು ಸುವರ್ಣರೇಖಾ. ಈ ಯೋಜನೆಯ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳು ಬರುತ್ತವೆ. ಬಳಿಕ ಸುವರ್ಣರೇಖಾ ಮತ್ತು ಮಹಾನದಿ ನದಿಗಳನ್ನು ಜೋಡಿಸುವ ಯೋಜನೆಯಿದೆ. ಇದರ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ಬರುತ್ತವೆ. ಕೋಸಿ ಮತ್ತು ಮೇಚಿ ನದಿಗಳ ಜೋಡಣೆಯು ನೇಪಾಳ ದೇಶ ಮತ್ತು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಅಂತಿಮವಾಗಿ ಪಶ್ಚಿಮ ಬಂಗಾಳದಲ್ಲಿ ಗಂಗಾ-ಫರಕ್ಕ ಸುಂದರಬನ್ಸ್ ಅಥವಾ ಗಂಗಾ-ಇಚಮತಿ ನದಿಗಳ ಜೋಡಣೆ ನಡೆಯಲಿದೆ.
ಈವರೆಗೆ ಎರಡು ಯೋಜನೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಅವುಗಳೆಂದರೆ ಪಾರ್-ತಾಪಿ-ನರ್ಮದಾ ನದಿಗಳ ಜೋಡಣೆ ಮತ್ತು ಕೆನ್-ಬೇತ್ವಾ ನದಿಗಳ ಜೋಡಣೆ. ಮೊದಲ ಯೋಜನೆಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಮುಖ್ಯವಾಗಿ ನೆಲೆ ಕಳೆದುಕೊಳ್ಳುವ ಮತ್ತು ಇತರ ವ್ಯತಿರಿಕ್ತ ಪರಿಣಾಮಗಳ ಬೆದರಿಕೆಯನ್ನು ಎದುರಿಸುತ್ತಿರುವ ಬುಡಕಟ್ಟು ಸಮುದಾಯಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ವಿರೋಧ ಎಷ್ಟಿದೆಯೆಂದರೆ ಗುಜರಾತ್‌ನ ಚುನಾವಣಾ ವರ್ಷದಲ್ಲಿ ಯೋಜನೆಯ ಅನುಷ್ಠಾನವನ್ನೇ ಅಮಾನತಿನಲ್ಲಿಡಲಾಗಿದೆ. ಕೆನ್-ಬೇತ್ವಾ ನದಿಗಳ ಜೋಡಣೆ ಯೋಜನೆಗೂ ಭಾರೀ ಟೀಕೆ ವ್ಯಕ್ತವಾಗಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಕೆನ್ ನದಿಯಲ್ಲಿ ಹೆಚ್ಚುವರಿ ನೀರೇ ಇಲ್ಲದಿರುವುದರಿಂದ ಯೋಜನೆಯು ಕಾರ್ಯಸಾಧುವಲ್ಲ ಎನ್ನುವುದು ಒಂದು ಕಾರಣವಾದರೆ, ಯೋಜನೆಗಾಗಿ 23 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ ಎನ್ನುವುದು ಇನ್ನೊಂದು ಗಂಭೀರ ಕಾರಣವಾಗಿದೆ.
ಈ ಬೃಹತ್ ಯೋಜನೆಯನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಅದು ಹುಟ್ಟು ಹಾಕುವ ನಿರ್ವಸತಿ ಸಮಸ್ಯೆ ಮತ್ತು ನಾವು ತೆರಬೇಕಾಗುವ ಪರಿಸರ ಬೆಲೆಯು ಅತ್ಯಂತ ಅಗಾಧವಾಗಿದೆ. ಅಣೆಕಟ್ಟುಗಳ ನಿರ್ಮಾಣಕ್ಕಾಗಿ ಮಾತ್ರ ನಿರ್ವಸತಿಯಾಗುವುದಲ್ಲ, ಅಗಾಧ ವಿಸ್ತಾರದ ಕಾಲುವೆಗಳೂ ಜನವಸತಿ ಪ್ರದೇಶಗಳನ್ನು ನುಂಗುತ್ತವೆ. ಬೃಹತ್ ಪ್ರದೇಶಗಳಿಗೆ ನೀರಿನ ಹಂಚಿಕೆಯಾಗಬೇಕಾಗುವುದರಿಂದ ಅಣೆಕಟ್ಟುಗಳ ಎತ್ತರವೂ ಹೆಚ್ಚಬಹುದು. ಆಗ ನೀರೆತ್ತುವುದಕ್ಕಾಗಿ ವಿದ್ಯುತ್‌ಗೆ ಅಪಾರ ಖರ್ಚು ಮಾಡಬೇಕಾಗಬಹುದು.
ಹಲವಾರು ನದಿಗಳು ಒಂದೇ ಜೋಡಣೆಗೆ ಒಳಪಡುವುದಿಲ್ಲ. ಅವುಗಳಿಗೆ ಹಲವು ಜೋಡಣೆಗಳನ್ನು ಪ್ರಸ್ತಾಪಿಸಲಾಗಿದೆ. ಇದು ಒಟ್ಟಾರೆ ನದಿ ವ್ಯವಸ್ಥೆಯ ಮೇಲೆ ಬೇರೆಯದೇ ಆದ ಪರಿಣಾಮವನ್ನು ಬೀರಬಹುದು. ಈ ಎಲ್ಲಾ ಪರಿಣಾಮಗಳನ್ನು ಒಂದೇ ಯೋಜನಾ ವರದಿಯು ಗ್ರಹಿಸಲಾರದು. ಈ ಬೃಹತ್ ಯೋಜನೆಯು ಇಡೀ ನದಿ ವ್ಯವಸ್ಥೆಯ ಮೇಲೆ ಅಗಾಧ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಹೊರತಾಗಿಯೂ, ವಿಷಯವು ತುಂಬಾ ಗಂಭೀರವಾಗಿದ್ದರೂ ಸರಕಾರವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಈ ಯೋಜನೆಯಲ್ಲಿ ಅಂದಾಜು ಮಾಡಲು ಸಾಧ್ಯವೇ ಇಲ್ಲದ ಹಲವಾರು ಸಂಗತಿಗಳಿವೆ. ವರ್ಷಗಳ ಮಾನವ ಕಾಮಗಾರಿಯಿಂದಾಗಿ ಸಮಗ್ರ ನದಿ ವ್ಯವಸ್ಥೆಯು ಹಿಂದೆಂದೂ ಇಲ್ಲದಷ್ಟು ಮಟ್ಟದಲ್ಲಿ ಹದಗೆಡುವ ಎಲ್ಲ ಸಾಧ್ಯತೆಗಳಿವೆ. ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ನಾವು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಆದುದರಿಂದ, ಈ ಅತ್ಯಂತ ದುಬಾರಿ ಯೋಜನೆಗೆ ಸೀಮಿತ ಸಂಪನ್ಮೂಲಗಳನ್ನು ಅಗಾಧ ಪ್ರಮಾಣದಲ್ಲಿ ಹೂಡುವ ಮುನ್ನ ಎಲ್ಲಾ ರಾಜ್ಯಗಳು, ಎಲ್ಲ ಸಂಬಂಧಪಟ್ಟವರು ಮತ್ತು ಸ್ವತಂತ್ರ ಪರಿಣಿತರೊಂದಿಗೆ ವಿಸ್ತೃತ ಸಮಾಲೋಚನೆಗಳು ನಡೆಯಬೇಕು. ಇಂತಹ ಸಮಾಲೋಚನೆಗಳ ವೇಳೆ, ಈ ಸಮಗ್ರ ಯೋಜನೆಯನ್ನೇ ಕೈಬಿಡುವ ಸಾಧ್ಯತೆಯ ಬಗ್ಗೆಯೂ ಮುಕ್ತ ಮನೋಭಾವವನ್ನು ಸರಕಾರ ಹೊಂದಬೇಕು. ಅಂತಹ ಸಮಾಲೋಚನೆಗಳಿಗೆ ಇದು ಸಕಾಲ.
ಹೊಸ ದಾರಿಗಳು ಮತ್ತು ಸಂಧಿ ಸ್ಥಳಗಳನ್ನು ಸೃಷ್ಟಿಸಿಕೊಳ್ಳಲು ನಮ್ಮ ಹೆಚ್ಚಿನ ನದಿಗಳನ್ನು ಬಲವಂತಪಡಿಸುವ ಈ ಇಡೀ ಕಲ್ಪನೆಯು ದೋಷಪೂರಿತವಾಗಿದೆ. ನಮ್ಮ ಸೀಮಿತ ಸಂಪನ್ಮೂಲಗಳನ್ನು ನೀರಿನ ಸಂರಕ್ಷಣೆ, ಸಣ್ಣ ನೀರಾವರಿ, ನವೀಕರಿಸಬಹುದಾದ ಇಂಧನ ಮತ್ತು ಕುಡಿಯುವ ನೀರು ಪೂರೈಕೆಗಳನ್ನು ಒಳಗೊಂಡ ಸಣ್ಣ ಯೋಜನೆಗಳಿಗೆ ಸುರಕ್ಷಿತ ಹೂಡಿಕೆಯಾಗಿ ಉತ್ತಮ ರೀತಿಯಲ್ಲಿ ಬಳಸಬಹುದು. ನದಿಗಳನ್ನು ಜೋಡಿಸುವ ಯೋಜನೆಯ ಪ್ರಸಕ್ತ ಅಂದಾಜು ವೆಚ್ಚವನ್ನೇ ಪರಿಗಣಿಸಿದರೂ (ಈ ಅಂದಾಜು ವೆಚ್ಚವು ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ), ಅದರಿಂದ ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ಇಂತಹ 20ಕ್ಕೂ ಅಧಿಕ ಸಣ್ಣ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.
ಕೃಪೆ: countercurrents.org