ಎಕ್ಸ್ಪರ್ಟೈಸ್ ನ ಶೇಖ್ ಕರ್ನಿರೆಗೆ ಪ್ರತಿಷ್ಠಿತ ಸೌದಿ ಪ್ರೀಮಿಯಂ ರೆಸಿಡೆನ್ಸ್ ವೀಸಾ
ಕೆ.ಎಸ್. ಶೇಖ್ ಕರ್ನಿರೆ
ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರೀಮಿಯಂ ರೆಸಿಡೆನ್ಸಿ ಪಡೆದ ಕೆಲವೇ ಭಾರತೀಯರ ಸಾಲಿಗೆ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಲಿಮಿಟೆಡ್ನ ಉಪಾಧ್ಯಕ್ಷ ಕೆ.ಎಸ್. ಶೇಖ್ ಕರ್ನಿರೆ ಅವರು ಸೇರಿದ್ದಾರೆ.
ಸೌದಿ ಗ್ರೀನ್ ಕಾರ್ಡ್ ಎಂದೇ ಖ್ಯಾತಿ ಗಳಿಸಿರುವ ಖಾಯಂ ರೆಸಿಡೆನ್ಸಿ ಪಡೆದವರು ಪ್ರಾಯೋಜಕರ ಅಗತ್ಯವಿಲ್ಲದೆಯೇ ಸೌದಿ ಅರೇಬಿಯಾದಲ್ಲಿ ವ್ಯಾಪಾರ ಮತ್ತು ಆಸ್ತಿಯನ್ನು ಮಾಲಕತ್ವ ಪಡೆಯಬಹುದು.
ಈ ಕುರಿತು ಪ್ರತಿಕ್ರಿಯಿಸಿರುವ ಶೇಖ್ ಕರ್ನಿರೆ, “ಸೌದಿ ರಾಜ ಸಲ್ಮಾನ್, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಇಡೀ ಸೌದಿ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಹೆಮ್ಮೆಯ ಕ್ಷಣವಾಗಿದೆ. ಇದು ನನಗೆ ಹರ್ಷ ತಂದಿದೆ. ʼಎಕ್ಸ್ಪರ್ಟೈಸ್ʼ ಮೇಲೆ ನಂಬಿಕೆ ಇಟ್ಟಿರುವ ಜನರಿಗೆ ಮತ್ತು ʼಎಕ್ಸ್ಪರ್ಟೈಸ್ʼ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿರುವ ನನ್ನ ಸಹೋದರರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು" ಎಂದು ಹೇಳಿದ್ದಾರೆ.
ಪ್ರೀಮಿಯಂ ರೆಸಿಡೆನ್ಸಿ ಸೌದಿ ಅರೇಬಿಯಾದಲ್ಲಿ ಯಾವುದೇ ಪ್ರಾಯೋಜಕರ ಅಗತ್ಯವಿಲ್ಲದೇ ವಾಸಿಸುವ, ಕೆಲಸ ಮಾಡುವ ಮತ್ತು ವ್ಯಾಪಾರ ಮತ್ತು ಆಸ್ತಿಯನ್ನು ಹೊಂದುವ ಹಕ್ಕನ್ನು ವಲಸಿಗರಿಗೆ ನೀಡುತ್ತದೆ.
ಸೌದಿ ಅರೇಬಿಯಾದ ವಿಷನ್ 2030 ಸುಧಾರಣಾ ಯೋಜನೆಯ ಭಾಗವಾಗಿ ಪ್ರೀಮಿಯಂ ರೆಸಿಡೆನ್ಸಿಯನ್ನು ಪರಿಚಯಿಸಲಾಗಿದೆ. ಸೌದಿ ಆರ್ಥಿಕತೆಯನ್ನು ಹೆಚ್ಚಿಸಲು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ಯೋಜನೆಯನ್ನು ಘೋಷಿಸಿದ್ದಾರೆ.
1999 ರಲ್ಲಿ ಸ್ಥಾಪನೆಯಾದ ʼಎಕ್ಸ್ಪರ್ಟೈಸ್ʼ ಕಂಪನಿಯಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 5000 ಕ್ಕೂ ಹೆಚ್ಚು ಉಪಕರಣಗಳನ್ನು ಹೊಂದಿರುವ ಈ ಕಂಪೆನಿಯು ಸೌದಿ ಅರೇಬಿಯಾದ ಹೆಸರಾಂತ ಕೈಗಾರಿಕಾ ಸೇವಾ ಪೂರೈಕೆದಾರ ಕಂಪೆನಿಯಾಗಿದೆ. ಪೆಟ್ರೋಕೆಮಿಕಲ್, ತೈಲ ಮತ್ತು ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್, ನೀರಿನ ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ʼಎಕ್ಸ್ಪರ್ಟೈಸ್ʼ ಕಂಪೆನಿ ಸೇವೆ ಸಲ್ಲಿಸುತ್ತಿದೆ.
ಜುಬೈಲ್ ಇಂಡಸ್ಟ್ರಿಯಲ್ ನಗರದಲ್ಲಿ ಪ್ರಧಾನ ಕಚೇರಿಯಿರುವ ʼಎಕ್ಸ್ಪರ್ಟೈಸ್ʼ ಕಂಪೆನಿಯು ಸೌದಿ ಅರೇಬಿಯಾದ್ಯಂತ ಶಾಖೆಗಳನ್ನು ಹೊಂದಿದೆ.
ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ 10 ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳ ಮೂಲಕ ಭಾರತದ ವಿವಿಧ ನಗರಗಳಿಗೆ ಸುರಕ್ಷಿತವಾಗಿ ಕರೆತರಲು ಶೇಖ್ ಮತ್ತು ಅವರ ತಂಡ ಶ್ರಮಿಸಿತ್ತು. ಅವರು ಕೆಎಸ್ ಸಯೀದ್ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ಎನ್ಜಿಒ ಒಂದನ್ನು ನಡೆಸುತ್ತಿದ್ದು, ಅದರ ಮೂಲಕ ಹಲವಾರು ಬಡ ಕುಟುಂಬಗಳಿಗೆ ಆಹಾರ, ವಸತಿ ಮತ್ತು ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ.
ಮಂಗಳೂರಿನ ಪಡುಬಿದ್ರೆ ಸಮೀಪದ ಕರ್ನಿರೆ ಗ್ರಾಮದವರಾದ ಶೇಕ್ ಅವರು ಆಟೋಮೊಬೈಲ್ ಇಂಜಿನಿಯರ್ ಮುಗಿಸಿ ಸೌದಿ ಅರೇಬಿಯಾಕ್ಕೆ ತೆರಳಿ, ಅಲ್ಲಿ ತಮ್ಮ 5 ಸಹೋದರರೊಂದಿಗೆ ಈ ಕಂಪನಿಯನ್ನು ಸ್ಥಾಪಿಸಿದ್ದರು.