ಅಟೊಕ್ರಾಸ್ ತರಬೇತುದಾರರ ಲೈಸೆನ್ಸ್ ಪಡೆದ ಸೌದಿಯ ಪ್ರಪ್ರಥಮ ಮಹಿಳೆ
Photo: instagram.com/afnan.almarglani/
ಜೆದ್ದಾ, ಜೂ.12: ಹಲವು ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಅಫ್ನಾನ್ ಅಲ್ಮರ್ಗ್ಲನಿ ಅಟೊಕ್ರಾಸ್(ಕಾರು ರೇಸಿಂಗ್) ತರಬೇತಿ ಮತ್ತು ಸುರಕ್ಷಿತ ಚಾಲನಾ ಕೌಶಲ್ಯ ತರಬೇತುದಾರರ ಲೈಸೆನ್ಸ್ ಪಡೆದ ಸೌದಿ ಅರೆಬಿಯಾದ ಪ್ರಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಚಿಕ್ಕಂದಿನಿಂದಲೂ ಸಹೋದರನ ಜತೆ ವೀಡಿಯೊ ಗೇಮ್ನಲ್ಲಿ ಕಾರು ರೇಸಿಂಗ್ ಗೇಮ್ನಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಕಾರು ರೇಸ್ನ ಬಗ್ಗೆ ಆಸಕ್ತಿ ಹೆಚ್ಚಿತ್ತು. ಆ ಬಳಿಕ ಸೌದಿಯಲ್ಲಿ ನಡೆದ ಪ್ರಥಮ ಮಹಿಳೆಯರ ಕಾರ್ ರೇಸಿಂಗ್ನಲ್ಲಿ ಪಾಲ್ಗೊಂಡಿದ್ದೆ. ಆರಂಭದಲ್ಲಿ ಹಲವರಿಂದ ಟೀಕೆ ವ್ಯಕ್ತವಾಗಿತ್ತು. ಪುರುಷರ ಪ್ರಾಬಲ್ಯದ ಕಾರ್ ರೇಸಿಂಗ್ಗೆ ಮಹಿಳೆಯರ ಪ್ರವೇಶವನ್ನು ಸಮಾಜ ಒಪ್ಪಲು ಹಿಂಜರಿಯುತ್ತಿದ್ದ ಕಾಲವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಅಫ್ನಾನ್ ಅಲ್ಮರ್ಗ್ಲನಿ ಹೇಳಿದ್ದಾರೆ.
ಅಮೆರಿಕದ ವಿವಿಯಲ್ಲಿ ಬಯೊಮೆಡಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಅಫ್ನಾನ್, ಬಯೊಮೆಡಿಕಲ್ ಇಂಜಿನಿಯರಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾರ್ ರೇಸಿಂಗ್ ತನ್ನ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದು ಇದು ಕೆಲಸದ ಒತ್ತಡದ ಹೊರೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎಂದಿದ್ದಾರೆ.