ರಾಜೀನಾಮೆ ಬಳಿಕವೂ ಈಶ್ವರಪ್ಪರಿಂದ ಹಸ್ತಕ್ಷೇಪ: ವ್ಯಾಪಕ ಆರೋಪ
ಮುಖ್ಯಮಂತ್ರಿಯ ಮೇಲೆ ಮಾಜಿ ಸಚಿವರಿಂದ ಒತ್ತಡ?
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಿದ ನಂತರವೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ಅದರ ಅಧೀನ ಸಂಸ್ಥೆಗಳ ದೈನಂದಿನ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುತ್ತಿರುವುದು ಇದೀಗ ಬಹಿರಂಗವಾಗಿದೆ.
ಸೇವಾವಧಿ ಪೂರ್ಣಗೊಳಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಹಾಲಿ ಹುದ್ದೆಯಲ್ಲಿಯೇ ಮುಂದುವರಿಸಲು ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿಗೆ ಶಿಫಾರಸು ಪತ್ರಗಳನ್ನು ನೀಡಿರುವ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ಪ್ರಧಾನ ಇಂಜಿನಿಯರ್ ಆಗಿರುವ ಪ್ರಭಾಕರ್ ಡಿ ಹಮಿಗೆ ಅವರು ಇದೇ ಡಿಸೆಂಬರ್ 2022ರ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದಾರೆ. ಅವರ ನಿವೃತ್ತಿಯವರೆಗೆ ಹಾಲಿ ಹುದ್ದೆಯಲ್ಲಿಯೇ ಮುಂದು ವರಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಅವರು ಪ್ರಭಾವ ಬೀರಿದ್ದಾರೆ. ಈ ಸಂಬಂಧ 2022ರ ಮೇ 24ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರ ಣದಲ್ಲಿ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನೇರ ಉಸ್ತುವಾರಿಯನ್ನು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಭಾಯಿಸುತ್ತಿದ್ದಾರೆ. ಈ ಖಾತೆಗೆ ಇನ್ನು ಯಾರನ್ನೂ ನೇಮಿಸಿಲ್ಲ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಇಲಾಖೆಗೆ ನೂತನ ಸಚಿವರನ್ನು ನೇಮಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಹಲವು ಕಡತಗಳ ವಿಲೇವಾರಿಯಲ್ಲಿಯೂ ಕೆ.ಎಸ್.ಈಶ್ವರಪ್ಪ ಅವರು ಈಗಲೂ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ನಬಾರ್ಡ್‌ನ ರಸ್ತೆ ಕಾಮಗಾರಿಗಳು, ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಬಿಲ್ ಪಾವತಿಯಲ್ಲಿಯೂ ಕೆ.ಎಸ್.ಈಶ್ವರಪ್ಪ ಅವರು ಪ್ರಭಾವ ಬೀರುತ್ತಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿವೆ.
ಕೆ.ಎಸ್.ಈಶ್ವರಪ್ಪಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಮೊದಲನೇ ಆರೋಪಿಯಾಗಿದ್ದಾರೆ. ‘ಬಾಕಿ ಬಿಲ್ ಪಾವತಿಗೆ ಶೇ.40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದ್ದ ಸಂತೋಷ್ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಹಿರಂಗವಾಗಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಎಪಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.
ಪತ್ರದಲ್ಲೇನಿದೆ?
ಪ್ರಧಾನ ಇಂಜಿನಿಯರ್ ಆಗಿರುವ ಪ್ರಭಾಕರ್ ಡಿ ಹಮಿಗೆ ಅವರು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 6 ತಿಂಗಳ ಸೇವಾವಧಿ ಬಾಕಿ ಉಳಿದಿದ್ದು ಡಿಸೆಂಬರ್ 2022ರ ಅಂತ್ಯಕ್ಕೆ ವಯೋನಿವೃತ್ತಿ ಹೊಂದಲಿದ್ದಾರೆ. ಸದರಿಯವರು ಪ್ರಸ್ತುತ ಕೇಂದ್ರ ಸರಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್, ನಬಾರ್ಡ್‌ನ ರಸ್ತೆ ಕಾಮಗಾರಿಗಳು ಮತ್ತು ಗ್ರಾಮ ವಿಕಾಸ ಯೋಜನೆಯಡಿ ರಾಜ್ಯ ಸರಕಾರದಿಂದ ಅನುಷ್ಠಾನಗೊಳ್ಳುವ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಅತ್ಯವಶ್ಯವಾಗಿರುವುದರಿಂದ ಅವರ ನಿವೃತ್ತಿಯವರೆಗೆ ಹಾಲಿ ಹುದ್ದೆಯಲ್ಲಿಯೇ ಮುಂದುವರಿಸಬೇಕು,’ ಎಂದು ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.