varthabharthi


ಜನ ಜನಿತ

ಕನ್ನಡ ನಾಡಿನ ಪ್ರಸಿದ್ಧ ಭೂವಿಜ್ಞಾನಿ ಆರ್.ಎಚ್. ಸಾಹುಕಾರ್

ವಾರ್ತಾ ಭಾರತಿ : 14 Jun, 2022
ಡಾ.ಎಂ. ವೆಂಕಟಸ್ವಾಮಿ

ಆರ್.ಎಚ್. (ಆರ್.ಎಚ್.ಸಾಹುಕಾರ್) ಎಂದೇ ಭಾರತ ಮತ್ತು ವಿದೇಶ ಭೂವಿಜ್ಞಾನಿಗಳ ವಲಯದಲ್ಲಿ ಪ್ರಖ್ಯಾತಿಯಾಗಿದ್ದ ಅಪ್ಪಟ ಕನ್ನಡಿಗ ಭೂವಿಜ್ಞಾನಿ ಇತ್ತೀಚೆಗೆ (ಜೂನ್ 1ರ ಬೆಳಗ್ಗೆ) ಬೆಂಗಳೂರಿನ ತಮ್ಮ ಮನೆಯಲ್ಲಿ ಚಿರನಿದ್ದೆಗೆ ಜಾರಿಕೊಂಡರು. ಬಹಳ ವರ್ಷಗಳ ಹಿಂದೆ ನಾನು ಮೊದಲಿಗೆ ಅವರನ್ನು ಭೇಟಿಯಾದಾಗ ‘ನಾನು ಪ್ರೊಫೆಸರ್ ಜಿ.ಎಚ್.ಸಾಹುಕಾರ್ ಅವರ ಶಿಷ್ಯ’ನೆಂದು ಪರಿಚಯ ಮಾಡಿಕೊಂಡಿದ್ದೆ, ‘‘ಯಾರು, ನಮ್ಮ ಗಿರಿಯಪ್ಪನ ಶಿಷ್ಯಾನ ನೀನು. ಅವನು ನನ್ನ ತಮ್ಮ ಕಣಯ್ಯ’’ ಎಂದು ನಕ್ಕಿದ್ದರು. ಪ್ರೊ.ಜಿ.ಎಚ್.ಸಾಹುಕಾರ್ ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಜಿಯಾಲಜಿ ಮುಖ್ಯಸ್ಥರಾಗಿದ್ದರು. ನಾನು ಪಿಯುಸಿ ಮುಗಿಸಿ ಡಿಗ್ರಿ ಸೇರಲು ಸಿ.ಬಿ.ಝೆಡ್. ಕಾಂಬಿನೇಷನ್ ವಿಷಯಗಳಿಗೆ ಅಪ್ಲಿಕೇಷನ್ ಹಾಕಿದಾಗ ಪ್ರೊ.ಜಿ.ಎಚ್.ಎಸ್. ಅವರು ಅದರಲ್ಲಿದ್ದ ಒಂದು ವಿಷಯವನ್ನು ಹೊಡೆದುಹಾಕಿ ಬದಲಿಗೆ ಜಿ (ಜಿಯಾಲಜಿ) ಸೇರಿಸಿ ನನ್ನ ಹಣೆಬರಹವನ್ನು ಬರೆದುಬಿಟ್ಟಿದ್ದರು. ಅದು, ನನ್ನ ಜೀವನದಲ್ಲಿ ಭೂವಿಜ್ಞಾನಿ ಮತ್ತು ಲೇಖಕನಾಗಲು ಬಹಳ ಸಹಕಾರಿಯಾಯಿತು. ಆರ್.ಎಚ್. ಅವರು 29 ಮಾರ್ಚ್ 1934ರಂದು ಹರಪನಹಳ್ಳಿ ಹತ್ತಿರದ ಒಂದು ಹಳ್ಳಿಯಲ್ಲಿ ಜನಿಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಪ್ರೊ.ನಿಸಾರ್ ಅಹ್ಮದ್ ಅವರ ಜೊತೆಗೆ ಎಂ.ಎಸ್ಸಿ. ಮುಗಿಸಿದ ಇವರು 1959ರಲ್ಲಿ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭೂವಿಜ್ಞಾನಿಯಾಗಿ ಸೇರಿಕೊಂಡರು. ನಂತರ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ, ಚಿತ್ರದುರ್ಗ ತಾಮ್ರ ಕಂಪೆನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ, ಹಟ್ಟಿ ಚಿನ್ನದ ಗಣಿಗಳ ಕಂಪೆನಿಯಲ್ಲಿ ನಿರ್ದೇಶಕರಾಗಿ ಮತ್ತು ವಿಜಯನಗರ ಉಕ್ಕು ಕಾರ್ಖಾನೆಗೆ ಕಚ್ಚಾವಸ್ತುಗಳ ತನಿಖೆಯಲ್ಲಿ ಸೇವೆ ಮಾಡಿದ್ದರು. ಇದು ಈಗ ಪ್ರಖ್ಯಾತ ಜೆ.ಎಸ್.ಡಬ್ಲ್ಲೂ ಉಕ್ಕು ಕಂಪೆನಿಯಾಗಿದೆ. ಮೈಸೂರು ಮಿನರಲ್ಸ್ ಕಂಪೆನಿಯಲ್ಲಿ ಏಜೆಂಟಾಗಿ ಮತ್ತು ಅಜ್ಜನಹಳ್ಳಿ (ತುಮಕೂರು ಜಿಲ್ಲೆ) ಹತ್ತಿರ ಕಬ್ಬಿಣ ಶಿಲಾಸ್ತರಗಳಲ್ಲಿ ಚಿನ್ನದ ಅನ್ವೇಷಣೆಯನ್ನು ಮಾಡಿದ್ದರು. ಚಿತ್ರದುರ್ಗ ತಾಮ್ರ ಘಟಕ ಸ್ಥಾವರವನ್ನು ಚಿನ್ನದ ಘಟಕ ಸ್ಥಾವರವನ್ನಾಗಿ ಪರಿವರ್ತಿಸಿದ್ದರು.

ಅವರು ಕೊನೆಯವರೆಗೂ ಬೆಂಗಳೂರಿನಲ್ಲಿರುವ ಜಿಯಾಲಜಿಕಲ್ ಸೊಸೈಟಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ವಾಟರ್ ಮೆನ್ ಎಂದು ಕರೆಯುವ ರಾಜೇಂದ್ರಸಿಂಗ್ ಸ್ಥಾಪಿಸಿದ ಜಲಬಿರ್ದಾರಿ ಕರ್ನಾಟಕದ ಕಾರ್ಯಾಧ್ಯಕ್ಷರಾಗಿಯೂ ಇದ್ದರು. ಗಣಿಗಾರಿಕೆ ಮತ್ತು ಲೋಹಶಾಸ್ತ್ರದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಮತ್ತು ಮೈನಿಂಗ್ ಇಂಜಿನಿಯರ್ ಅಸೊಸಿಯೇಷನ್, ಬೆಂಗಳೂರು ಚಾಪ್ಟರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದೀರ್ಘ ಕಾಲದಿಂದ ದೇಶದ ಅಣೆಕಟ್ಟುಗಳ ಸುರಕ್ಷತಾ ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ ಬಹಳ ಹಿಂದಿನಿಂದಲೂ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಭೂವೈಜ್ಞಾನಿಕ ಯೋಜನಾ ಮಂಡಳಿಯ ಸದಸ್ಯರಾಗಿದ್ದರು. 1958ರಲ್ಲಿ ಸ್ಥಾಪನೆಯಾದ ಜಿಯಾಲಜಿಕಲ್ ಸೊಸೈಟಿ ಭಾರತ ದೇಶ ಮತ್ತು ದೇಶದ ಎಲ್ಲಾ ರಾಜ್ಯಗಳ ಭೂವಿಜ್ಞಾನ ಮತ್ತು ಎಲ್ಲಾ ಮುಖ್ಯ ಖನಿಜಗಳಿಗೆ ಸಂಬಂಧಪಟ್ಟ ಬಹುಅಮೂಲ್ಯ ಪುಸ್ತಕಗಳನ್ನು ಹೊರತಂದಿದೆ. ದೇಶದಲ್ಲಿ ಸೊಸೈಟಿ ಭೂವಿಜ್ಞಾನಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು.

ಇಡೀ ದೇಶದಲ್ಲಿ ಭೂವಿಜ್ಞಾನದ ಬಗ್ಗೆ ಹೊರಬರುವ ಅಂತರ್‌ರಾಷ್ಟ್ರೀಯ ಮಟ್ಟದ ಏಕೈಕ ತಿಂಗಳ ಸಂಚಿಕೆಯೆಂದರೆ ‘ಜರ್ನಲ್ ಆಫ್ ಜಿಯಾಲಜಿಕಲ್ ಸೊಸೈಟಿ. ಇದರಲ್ಲಿ ಪ್ರಪಂಚದ ಬಹಳಷ್ಟು ಭೂವಿಜ್ಞಾನಿಗಳು ಸಂಶೋಧನೆಯ ಲೇಖನಗಳನ್ನು ಬರೆಯುತ್ತಾರೆ. ಪದ್ಮಶ್ರೀ ಡಾ.ಬಿ.ಪಿ.ರಾಧಾಕೃಷ್ಣ ಅವರ ನಂತರ ಸೂಸೈಟಿಯ ಕಾರ್ಯದರ್ಶಿಯಾಗಿ ಸಾಹುಕಾರ್ ನೇಮಕಗೊಂಡು ಇದುವರೆಗೂ ಅದನ್ನು ನಡೆಸಿಕೊಂಡು ಬಂದಿದ್ದರು. ಆರ್.ಎಚ್. ಅವರು ದಕ್ಷಿಣ ಆಫ್ರಿಕಾದ ಪ್ರೊ.ವಿಲ್ಜೊಯೆನ್ ಅವರೊಂದಿಗೆ ಗಣಿ ಅಭಿವೃದ್ಧಿಯ ಅನ್ವೇಷಣೆ ಮತ್ತು ಚಿನ್ನದ ಮೇಲಿನ ಬ್ಯಾಂಕೆಬಲ್ ದಾಖಲೆಗಳ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಕೊಲಂಬೋ ಹೆಸರಿನ ಯೋಜನೆಯಲ್ಲಿ ಆಸ್ಟ್ರೇಲಿಯದಲ್ಲಿ ಚಿನ್ನದ ಗಣಿ ಅಭಿವೃದ್ಧಿಯಲ್ಲಿ ಪ್ರಖ್ಯಾತ ಭೂವಿಜ್ಞಾನಿಗಳ ಜೊತೆಯಲ್ಲಿ ಕೆಲಸ ಮಾಡಿದ್ದರು. ಭಾರತ ಮತ್ತು ವಿದೇಶಗಳಲ್ಲಿನ ಎಲ್ಲಾ ಪ್ರಮುಖ ಭೂವಿಜ್ಞಾನಿಗಳ ಸಂಘಗಳೊಂದಿಗೆ ಸಂಬಂಧ ಹೊಂದಿದ್ದ ಆರ್.ಎಚ್. ಅಂತರ್‌ರಾಷ್ಟ್ರೀಯ ಜರ್ನಲ್ ಆಫ್ ಜಿಯಾಲಜಿಕಲ್ ಸೈನ್ಸ್‌ಸ್ ಪ್ರಕಟಿಸಿದ ಸಂಚಿಕೆಗಳ ಖಜಾಂಚಿಯಾಗಿ ಕೆಲಸ ಮಾಡಿದ್ದರು. ಜೊತೆಗೆ ವಿಶ್ವ ಜಲ ಮಂಡಳಿಯಲ್ಲಿ ಜಿಯಾಲಜಿಕಲ್ ಸೊಸೈಟಿಯನ್ನು ಭಾರತದಿಂದ ಪ್ರತಿನಿಧಿಸುತ್ತಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)