varthabharthi


ಅನುಗಾಲ

ದಕ್ಷಿಣ ಕನ್ನಡದ ಪ್ರಯೋಗಗಳು

ವಾರ್ತಾ ಭಾರತಿ : 16 Jun, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದಕ್ಷಿಣ ಕನ್ನಡದ ಸದ್ಯದ ದೊಡ್ಡ ಸುದ್ದಿಗಳೆಂದರೆ ಕೊಲೆ, ಆತ್ಮಹತ್ಯೆ, ಅಪಘಾತಗಳು. ಹಿಂದೂ-ಮುಸ್ಲಿಮ್ ಹೊಡೆದಾಟ, ಹಿಂಸೆಯಲ್ಲಿ ಅನೇಕ ಜೀವಗಳು ನಷ್ಟವಾಗಿವೆ; ಇನ್ನನೇಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಒಂದೊಮ್ಮೆ ಜಾಮೀನಿನಲ್ಲಿ ಹೊರಬಂದರೂ ನ್ಯಾಯಾಲಯಕ್ಕೆ ವರ್ಷಾನುಗಟ್ಟಲೆ ಅಲೆದಾಟ. ಬದುಕಿಗೆ ಅನ್ಯ ಮಾರ್ಗವಿಲ್ಲ. ಮನೆಮಂದಿಯನ್ನು ಸಾಕುವವರಿಲ್ಲ. ಕುಮ್ಮಕ್ಕು ನೀಡಿದವರು ಎಲ್ಲೋ ಆರಾಮವಾಗಿದ್ದು, ವಿಶ್ರಾಂತಿ ಪಡೆದುಕೊಂಡು ‘ಇವರಿಗೆ ಬುದ್ಧಿಯಿಲ್ಲ’ ಎನ್ನುತ್ತಾ ತಮ್ಮ ಬದುಕನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಂಡಿದ್ದಾರೆ.

ಮನುಷ್ಯನ ಬಹಿರ್ಮುಖತೆ ಮತ್ತು ಅಂತರ್ಮುಖತೆ ಅಜಗಜಾಂತರ ವ್ಯತ್ಯಾಸಗಳನ್ನು ಹೊಂದಿದರೂ ಅಣುವಿನಿಂದ ಬ್ರಹ್ಮಾಂಡಕ್ಕೆ ವ್ಯಾಪಿಸಿದೆ. ಒಂದು ಕಡೆ ತಾನು, ಕುಟುಂಬ, ಸಮಾಜ, ಜನಪದ, ರಾಜ್ಯ, ದೇಶ, ಜಗತ್ತು, ಸೌರವ್ಯೆಹ, ಆಕಾಶಗಂಗೆ ಮತ್ತು ಅದಕ್ಕೂ ಹೊರಗಿನ ವ್ಯೋಮವೋ ಇನ್ನೊಂದೋ ಎಂಬಲ್ಲಿನವರೆಗೆ ಕಲ್ಪನೆ ವಿಸ್ತರಿಸಿದರೆ, ನಾನು, ನನ್ನೊಳಗಿನ ಜೀವಪರಿಕರ, ಮನಸ್ಸು, ಬುದ್ಧಿ, ಆತ್ಮ ಹೀಗೆಲ್ಲ ಸೂಕ್ಷ್ಮಾತಿಸೂಕ್ಷ್ಮ ಕಣಗಳ ವರೆಗೆ ದೃಷ್ಟಿ ದರ್ಶಿಸಬಹುದು. ಎಲ್ಲಿ ಯಾವುದು ಮುಖ್ಯವೋ ಎಂಬಲ್ಲಿಗೆ ಮನುಷ್ಯನ (ಸದ್ಯ ಮನುಷ್ಯನ ಮೂಲಕವೇ ಈ ಅಂದಾಜನ್ನು ಮಾಡುವುದರಿಂದ) ಅಸ್ಮಿತೆ, ಅಭಿಮಾನ, ಅರಿವು, ಗ್ರಹಿಕೆ ಕೆಲಸಮಾಡಬಹುದು.

ಹೀಗಾಗಿ ನಾವು ಯಾವುದರ ಕುರಿತು ಮಾತನಾಡುತ್ತೇವೋ ಅದು ಆ ಕಾಲಕ್ಕೆ, ಘಳಿಗೆಗೆ, ಆ ಸ್ಥಳ, ಸನ್ನಿವೇಶ, ಸಂದರ್ಭಕ್ಕೆ ಮುಖ್ಯ. ಈ ಕುರಿತೇ ಹೇಳಿದರು, ಬರೆದರು ಅನ್ನುವುದನ್ನು ಪ್ರಶ್ನಿಸಿ ಇನ್ನುಳಿದದ್ದರ ಕುರಿತು ಯಾಕೆ ಹೇಳಿಲ್ಲ, ಬರೆದಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ; ಉತ್ತರಿಸುವ ಗೋಜಿಗೆ ಹೋಗಲೂ ಬಾರದು. ಹೀಗಾದಾಗ ಮಾತ್ರ ಯಾವುದೇ ವಸ್ತುವನ್ನು ಗಮನಿಸಬಹುದು; ಚರ್ಚಿಸಬಹುದು. ತಾನು, ತನ್ನದು, ತಮ್ಮದು ಹೀಗೆ ನಾವು ಪ್ರೀತಿ, ಅಭಿಮಾನದಿಂದ, ಮಮಕಾರದಿಂದ, ಮೋಹದಿಂದ ಕೆಲವು ಸಂಗತಿಗಳನ್ನು ಯೋಚಿಸುತ್ತೇವೆ. ಅದೇ ಏಕೆ? ಬೇರೆ ಯಾಕಿಲ್ಲ? ಗೊತ್ತಿಲ್ಲ. ಬೇಕಾದವರು ಹೇಳಲಿ; ಬರೆದುಕೊಳ್ಳಲಿ.

ಮಾರ್ಗದ ದಕ್ಷಿಣ ಕನ್ನಡಿಗರು ದೇಸಿಯಲ್ಲಿ ತೌಳವರು. ತುಳುನಾಡಿನ ಈ ಜನರು ಕನ್ನಡವನ್ನೊಪ್ಪಿಕೊಂಡಿದ್ದಾರೆ; ಅಪ್ಪಿಕೊಂಡಿದ್ದಾರೆ. ವಿವಿಧ ಕನ್ನಡ, ತುಳುವನ್ನಾಡುವವರಾದರೂ ಬರಹದ ಕನ್ನಡ ಒಂದೇ-ಗ್ರಾಂಥಿಕ. ಯಾರು ಹೇಳಿದರೆಂದು ನನಗಂತೂ ಗೊತ್ತಿಲ್ಲ- ಆದರೆ ಅವಿಭಜಿತ ದಕ್ಷಿಣ ಕನ್ನಡವೆಂದರೆ ಬುದ್ಧಿವಂತರ ಜಿಲ್ಲೆಯೆಂದು ಪ್ರಸಿದ್ಧವಾಗಿದೆ. ಇದಕ್ಕೆ ಸಮರ್ಥನೀಯವಾದ ಆಕ್ಷೇಪಗಳೂ ಸಾಕಷ್ಟು ಬಂದಿವೆ. ಸಾಂಸ್ಕೃತಿಕವಾಗಿ ಶಿವಮೊಗ್ಗ, ಹಳೇ ಮೈಸೂರು ಪ್ರಾಂತ ಸಮೃದ್ಧವಾದದ್ದೇ ಆದ್ದರಿಂದ ಒಂದು ಪ್ರದೇಶದಲ್ಲಿರುವವರು ಮಾತ್ರ ಬುದ್ಧಿವಂತರು ಎಂದರೆ ಅಲ್ಲಿರುವವರಿಗೆ ಸಂತೋಷ, ಸಮಾಧಾನ ಮತ್ತು ಹೆಮ್ಮೆಯಾಗಬಹುದು. ಇದು ನಮಗೆ ಸಂತೋಷ ತರುವ ಕನ್ನಡ ಜನರು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಅಥವಾ ‘ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಅಥವಾ ಬ್ರಾಹ್ಮಣಸ್ಯ ಮುಖಮಾಸೀತ್’ ಎಂದಷ್ಟೇ ಸತ್ಯ!

ಇಲ್ಲಿನ ಜನರು ಇತರ ಎಲ್ಲರಂತೆ ತಮ್ಮ ಜಿಲ್ಲೆಯಿಂದ ಸೀಮೋಲ್ಲಂಘನೆ ಮಾಡಿದ್ದಾರೆ. ಪ್ರಾಯಃ ಕೇರಳೀಯರ ಬಳಿಕ ಇತರೆಡೆ ಹೋಗಿ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡವರೆಂದರೆ ದಕ್ಷಿಣಕನ್ನಡಿಗರು. ಬೆಂಗಳೂರಿನಲ್ಲಿ ಬಹಳಷ್ಟು ಮಂದಿ ಇದ್ದಾರಾದರೂ ಅದೇ ರೀತಿಯಲ್ಲಿ ನಾಡಿನ ಮತ್ತು ದೇಶದ ನಾನಾ ಭಾಗಗಳಿಂದ ಬಂದು ನೆಲೆ ನಿಂತವರು ಅಲ್ಲಿ ತುಂಬಾ ಇದ್ದಾರೆ. ಮುಂಬೈಯಲ್ಲಂತೂ ಸಾಕಷ್ಟು ವ್ಯಾಪಾರಸ್ಥರು, ಮುಖ್ಯವಾಗಿ ಹೊಟೇಲ್ ವ್ಯಾಪಾರಸ್ಥರು ದಕ್ಷಿಣ ಕನ್ನಡಿಗರು. ದಿಲ್ಲಿಗೆ ಹೋಗಿ ಅಲ್ಲಿ ಕನ್ನಡಿಗರಿದ್ದಾರೆ; ದಕ್ಷಿಣ ಕನ್ನಡಿಗರೂ ಇದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ, ಆಫ್ರಿಕಾ, ಯುರೋಪ್, ಅಮೆರಿಕದಲ್ಲಿ, ರಶ್ಯ-ಚೀನಾಗಳಲ್ಲಿ, ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್‌ಗಳಲ್ಲಿ, ಒಟ್ಟಾರೆ ಇಡೀ ವಿಶ್ವದಲ್ಲಿ ಕನ್ನಡಿಗರು, ಅದರಲ್ಲೂ ದಕ್ಷಿಣಕನ್ನಡಿಗರು ಇದ್ದಾರೆ. ವಿಶೇಷವೆಂದರೆ ರೋಮಿನಲ್ಲಿದ್ದಾಗ ರೋಮನ್ ಆಗು ಎಂಬ ಸಾಂಪ್ರದಾಯಿಕ ಮಾತು ಎಲ್ಲ ಕಡೆ ಸುಳ್ಳಾಗಿದೆ; ಎಲ್ಲಿ ಹೋದರೂ ಅಲ್ಲಿ ನಾವು ಜೀವನದ ಹಾದಿಗಷ್ಟೇ ಅಲ್ಲಿಯವರು; ಜೀವಪ್ರೀತಿಗೆ ನಾವು ನಾವೇ.

ದಕ್ಷಿಣ ಕನ್ನಡಕ್ಕೆ ಎಲ್ಲ ಜಿಲ್ಲೆ, ಸ್ಥಳ, ಕ್ಷೇತ್ರಗಳಂತೆ ಸಾವಿರಾರು ವರ್ಷಗಳ ಭೌಗೋಳಿಕ ಇತಿಹಾಸವಿದೆ. ಶಿಕ್ಷಣ, ವೈದ್ಯಕೀಯ, ಸಾಹಿತ್ಯ, ಕಲಾ ಪರಂಪರೆಯೂ ಇದೆ. ಎಲ್ಲ ಜನಪ್ರಿಯ ಮಹಾಪುರುಷರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವ ಜನೋತ್ಸಾಹದಿಂದಾಗಿ ಯಾರು ಎಲ್ಲಿಯವರು ಎಂದು ತೀರ್ಮಾನ ಕೈಗೊಳ್ಳುವುದು ಕಷ್ಟವೇ ಸರಿ. ಪರಶುರಾಮ ಸೃಷ್ಟಿಯೆಂದು ಹೇಳಿದವರುಂಟು. ಆತ ಚಿರಂಜೀವಿಯಾದ್ದರಿಂದ ಆತನೇ ಈ ಪ್ರಶ್ನೆಗೆ ಉತ್ತರ ನೀಡಬೇಕು! ದ್ವೈತದ ಮಧ್ವಾಚಾರ್ಯರು ಇಲ್ಲಿಯವರೇ. ಕನಕದಾಸ ಇಲ್ಲಿಯವನಲ್ಲದಿದ್ದರೂ ಉಡುಪಿಗೆ ಬಂದು ಅದರ ಕೀರ್ತಿ ಹೆಚ್ಚಿಸಿದ. ರತ್ನಾಕರವರ್ಣಿ, ಮುದ್ದಣ ಅಂತೂ ದ.ಕ.ದವರೇ. ಕೋಟಿ-ಚೆನ್ನಯ್ಯ, ಅಣ್ಣಪ್ಪರಂತಹ ಜಾನಪದೀಯ ಪ್ರಾತಃಸ್ಮರಣೀಯರಿದ್ದರು. ಆಧುನಿಕ ಕನ್ನಡ ಸಾಹಿತ್ಯ ಪ್ರವೇಶವಾದ ಬಳಿಕ ಪಂಜೆ, ಗುಲ್ವಾಡಿ, ಬೋಳಾರ, ಆನಂತರ ಗೋವಿಂದ ಪೈ, ಮುಳಿಯ, ಸೇಡಿಯಾಪು, ಕಾಮತ್, ಉಗ್ರಾಣ, ಉಳ್ಳಾಲ, ತೋನ್ಸೆ, ಕಾರಂತ, ಕಯ್ಯಾರ, ಅಡಿಗ ಹೀಗೆ ಕನ್ನಡ ಸಾಹಿತ್ಯದ ಹಿರಿಯರ, ಕಾರ್ನಾಡು ಸದಾಶಿವರಾಯ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ (ಹೊಳೆದದ್ದು ತಾರೆ, ಉಳಿದದ್ದು ಆಕಾಶ!) ದೊಡ್ಡ ಪಟ್ಟಿಯೇ ಇದೆ. ಆಗ ಕಾಸರಗೋಡು ಕೂಡಾ ದಕ್ಷಿಣ ಕನ್ನಡಕ್ಕೆ ಸೇರಿತ್ತು. ಕನ್ನಡವೆಂದಿದ್ದರೂ ಈ ಭೂಭಾಗ ಮದರಾಸು ಪ್ರೆಸಿಡೆನ್ಸಿಗೆ ಸೇರಿತ್ತು. ಗೋವಿಂದ ಪೈಗಳು ರಾಷ್ಟ್ರಕವಿಯಾದದ್ದು ಅಲ್ಲಿಂದ! ಆಧುನಿಕತೆಯನ್ನು ಬೆಳೆಸಿದ ಮತ್ತು ಆಧುನಿಕತೆಗೆ ಎರವಾದ ಅನೇಕರು ಇಲ್ಲಿ ಬದುಕಿ ಹೋದರು. ಬ್ಯಾಂಕಿಂಗ್ ಅಂತೂ ದಕ್ಷಿಣ ಕನ್ನಡದ ಮನೆಮಾತು. ಈಚೆಗೆ ಮಹತ್ವಾಕಾಂಕ್ಷೆಯ ವಿಲೀನ ಪರಂಪರೆ ಸೃಷ್ಟಿಯಾದ ಮೇಲೆ ಅವೆಲ್ಲ ಜೀರ್ಣವಾದವು. ನೆರೆಯ ಕೊಡಗಿಗಿಲ್ಲದ ವಿಮಾನನಿಲ್ದಾಣ, ರೈಲ್ವೇ ಅನುಕೂಲಗಳು ದಕ್ಷಿಣ ಕನ್ನಡಕ್ಕಿವೆ. ಟಿಪ್ಪೂ, ಅಬ್ಬಕ್ಕ ಹೀಗೆ ಸರದಾರರ ಚಾರಿತ್ರಿಕ ಪರಂಪರೆಯೂ ಇದೆ. ಜೈನರ ಕ್ಷೇತ್ರಗಳು ಇಲ್ಲಿ ಪ್ರಖ್ಯಾತ. ಬಾರಕೂರು ಈಗ ಇತಿಹಾಸ. ‘ದಕ್ಷಿಣದ ಸಿರಿನಾಡು’ ಎಂಬ ಬೃಹತ್ ಕೃತಿಯಲ್ಲಿ ಮೈಸೂರಿನ ಕೆ.ಅನಂತರಾಮು ಇಲ್ಲಿನ ಮನೆಮನೆಯ ಇತಿಹಾಸ, ಸಾಮಾಜಿಕತೆಯನ್ನು ವಿವರಿಸಿದ್ದಾರೆ. ಸರಕಾರದಲ್ಲಿಲ್ಲದ ಮಾಹಿತಿಗಳಿವೆ. ಭತ್ತದ ಗದ್ದೆಗಳಲ್ಲದೆ, ತೆಂಗಿನ, ಕಂಗಿನ, ತಾಳೆಯ, ಬಾಳೆಯ ಎಂದೆಲ್ಲ ಇರುವ ಕವಿವಾಣಿಯ ಪ್ರಕೃತಿ ಇಲ್ಲದೆ. ಈ ನಾಡು ಹತ್ತು ಹಲವು ಕಾರಣಗಳಿಗಾಗಿ ಜನಪ್ರಿಯ.

ಕಾಪುವಿನ ದೀಪಸ್ತಂಭದಂತಹ, ಹೆಂಚು, ಗೇರು ಕಾರ್ಖಾನೆಗಳಂತಹ ಕುತೂಹಲಗಳು ಈಗ ಮರೆಯಾಗಿವೆ ಅಥವಾ ಆಗುತ್ತಿವೆ. ಆಧುನಿಕತೆಯ ಸೆರಗಿನಡಿ ಎಲ್ಲವೂ ‘ಕಾಸ್ಮೋಪಾಲಿಟನ್’ ಎಂಬ ವಿಶ್ವಾತ್ಮಕತೆಯನ್ನು ಪಡೆಯಲು ಯತ್ನಿಸುತ್ತಿವೆ. ಅಪರಾಧಗಳು ಹೆಚ್ಚಿವೆ ಅಥವಾ ಹೆಚ್ಚುತ್ತಿವೆ. ಹಿಂದೆ ಮುಂಬೈಯ ಭೂಗತ ಲೋಕದ ಪಾತಕಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ದಕ್ಷಿಣ ಕನ್ನಡಕ್ಕೆ ಬಂದು ಅವಿತುಕೊಳ್ಳುತ್ತಾರೆಂಬ ಗುಮಾನಿಯಿತ್ತು. ಈಗ ಎಲ್ಲಿಗೂ ಹೋಗಬಹುದಾದ್ದರಿಂದ ಈ ಭಯ ಯಾವುದೇ ಪ್ರಾಂತಕ್ಕೂ ವಿಶಿಷ್ಟವಾಗಿಲ್ಲ.

ಭೂತಾರಾಧನೆ ಇಲ್ಲಿಯ ಭಕ್ತಿಮಾರ್ಗ. ದೇವರು ಮತ್ತು ದೈವಗಳ ನಡುವಿನ ಪಂದ್ಯದಲ್ಲಿ ದೈವಗಳಿಗೇ ಪ್ರಾಶಸ್ತ್ಯ. ತುಳು ಜನಪದ ಪಾಡ್ದನ ಜನರಿಂದ ಮರೆಯಾದರೂ ವಿಶ್ವವಿದ್ಯಾನಿಲಯದ ಸಂಗ್ರಹಾಲಯದಲ್ಲಿದೆ. ಕಂಬಳ, ಕೋಳಿಕಟ್ಟದಂತಹ ಊರ ಆಟಗಳು ಮರೆಯಾಗುತ್ತಿದ್ದು ಅವನ್ನು ದಮನಿಸಲು ಸರಕಾರದ ಕಾನೂನು ಎಲ್ಲಿಲ್ಲದ ತಂತ್ರವನ್ನು ಹೂಡಿದೆ. ಆದರೂ ಅವುಗಳ ಜೀಣೋದ್ಧಾರ ನಡೆಯುತ್ತಿದೆ. ಅವರವರ ಧರ್ಮದ ದೇವರನ್ನು ಆರಾಧಿಸುವವರು ಮತ್ತು ದೈವಗಳನ್ನು ಅರಾಧಿಸುವವರು ತಮ್ಮ ತಮ್ಮ ಹಾದಿಗಳಲ್ಲಿ ಸಂಚರಿಸುತ್ತಲೇ ಸಾಮಾಜಿಕ ಸಾಮರಸ್ಯವನ್ನು ಹೊಂದಿದ್ದರು. ಜನ್ಮಣೋ ಜಾಯತೇ ಜಂತುಃ ಎಂಬುದಷ್ಟೇ ಸತ್ಯ. ಆನಂತರದ್ದೆಲ್ಲ ಕೃತಕ ಸುಳ್ಳುಗಳು ಎಂಬ ರೀತಿಯಲ್ಲಿ ಜನರು ಬದುಕುತ್ತಿದ್ದರು. ಹೊರಜಗತ್ತಿನ ಮತೀಯ ತಂತ್ರಗಳು ಇಲ್ಲ ಅಷ್ಟಾಗಿ ಫಲಿಸುತ್ತಿರಲಿಲ್ಲ. ಬಪ್ಪಬ್ಯಾರಿಯ ದುರ್ಗಾಪರಮೇಶ್ವರಿ, ಜೈನ ಹೆಗಡೆಯವರ ಧರ್ಮಸ್ಥಳ ಎಲ್ಲರ ದೇವರುಗಳೇ.

ಆದರೆ ಎಲ್ಲ ಪ್ರದೇಶಗಳಿಗೂ ಸಾಮಾನ್ಯವಾದ ಈ ದುಸ್ಥಿತಿಯಲ್ಲದ ಹೊಸ ಬೆಳವಣಿಗೆ ಈಗ ದಕ್ಷಿಣ ಕನ್ನಡದಲ್ಲಿ ಕಾಣಿಸುತ್ತಿದೆ. ಅದೆಂದರೆ ತುಳುವಿನಂತಹ ಜಾನಪದ ದೇಸಿ ಸಂಸ್ಕೃತಿಯಿಂದ ಜನತೆ ವಿಮುಖವಾಗುತ್ತಿರುವುದು. ಇದು ಭಾಷೆ, ಸಂಸ್ಕೃತಿಯ ಮುಖಾಮುಖಿಯಲ್ಲ. ಮತಗಳಿಕೆಯ ರಾಜಕೀಯದ ಕಾರಣಕ್ಕಾಗಿ ಮತಾಂಧತೆಯ ಬೇರುಗಳು ಆಳಕ್ಕಿಳಿಯುತ್ತಿರುವುದು. ಇದು ೨೦ನೇ ಶತಮಾನದ ಕೊನೆಯಲ್ಲಿ ಆರಂಭವಾದ ಹಿಂದುತ್ವ ರಾಜಕಾರಣದಿಂದಲೇ ಎಂಬುದು ಶತಸ್ಸಿದ್ಧ. ಹಿಂದೂ ಧರ್ಮದ ವರ್ಣಾಶ್ರಮ ಧರ್ಮದ ಮುಂದುವರಿಕೆಯನ್ನು ಬಿಡದೆ ರಾಷ್ಟ್ರೀಯತೆಯ ಹೆಸರಿನಲ್ಲಿ ಇತರ ಮತಧರ್ಮಗಳ ವಿರುದ್ಧ ದಕ್ಷಿಣ ಕನ್ನಡದ ತುಳುವರನ್ನು ಎತ್ತಿಕಟ್ಟಿದ್ದು ಮತೀಯ ಮೂಲಭೂತವಾದದ ಬಹುದೊಡ್ಡ ಸಾಧನೆ. ಈಗ ಎಲ್ಲ ಮನೆಮನೆಗಳ ನಡುವೆ ದೇವರು, ಧರ್ಮಗಳ ಹೆಸರಿನಲ್ಲಿ ಗೋಡೆ ಕಟ್ಟಲಾಗಿದೆ. ತಿನ್ನುವ ಅನ್ನ, ಹರಿಯುವ ನೀರು, ಕೊನೆಗೆ ಮೈಯ್ಯಲ್ಲಿರುವ ರಕ್ತವನ್ನು ಮತಾಧಾರಿತವಾಗಿ ವಿಂಗಡಿಸುವ ಕ್ರಾಂತಿ ದೇಶದ ಎಲ್ಲೆಡೆ ಹೇಗೆ ನಡೆಯುತ್ತಿದೆಯೋ ಅದಕ್ಕಿಂತಲೂ ತ್ವರಿತವಾಗಿ ಇಲ್ಲಿ ನಡೆಯುತ್ತಿದೆ.

ಇದರ ಪೂರ್ವಭಾವಿಯಾಗಿ ಎಲ್ಲ ‘ಕೆಳ’ ಎಂದು ಭಾವಿಸಲಾಗುವ ಅಥವಾ ಆರೋಪಿಸಲಾಗುತ್ತಿರುವ ಮತ್ತು ಬಹುಪಾಲು ತುಳುಭಾಷಿಕ (ಬ್ರಾಹ್ಮಣರಲ್ಲದ- ಏಕೆಂದರೆ ಮಾಧ್ವ ಸಂಪ್ರದಾಯದವರೂ ತುಳು ಮಾತನಾಡುತ್ತಾರೆ)ರನ್ನು ಈ ವ್ಯೆಹಕ್ಕೆ ಸಿಲುಕಿಸಲಾಗಿದೆ. ದೇವರುಗಳನ್ನು ಹೆಚ್ಚು ಮೆರವಣಿಗೆ ಮಾಡಿ ಭೂತಾರಾಧನೆಯು ನಮ್ಮ ಧಾರ್ಮಿಕ ಮಹತ್ವದ ಆಚಾರವಲ್ಲವೆಂಬಂತೆ ಬಿಂಬಿಸಲಾಗಿದೆ. ಇದನ್ನು ಅಮಲು ಪದಾರ್ಥದಂತೆ ನೀಡಿ ಮೈಯ್ಯೆಲ್ಲ ವಿಷವನ್ನು ವ್ಯಾಪಿಸುವಂತೆ ಪ್ರಯೋಗಿಸಲಾಗಿದೆ. ಈಗ ದಕ್ಷಿಣ ಕನ್ನಡದಲ್ಲಿ ಬಹುತೇಕ ಮತೀಯ ಸಂಘರ್ಷದಲ್ಲಿ ಭಾಗಿಯಾಗುವವರು, ಬಲಿಯಾಗುವವರು ಹಿಂದೂಧರ್ಮದ ಮೇಲ್ಜಾತಿಯವರಲ್ಲ; ಹಾಗೆಯೇ ಕೆಳ ಜಾತಿಯ ಶ್ರೀಮಂತರಲ್ಲ; ಬಡ ನಿರುದ್ಯೋಗಿಗಳು; ಮುಗ್ಧರು; ಒಟ್ಟಾರೆ ಬಡವರು. ಅವರಿಗೆ ದಿನ ಕಳೆದರೆ ಸಾಕು. ಇಂದಿಗೆ ತಕ್ಕ ಅಕ್ಕಿ, ಚಿಮಿಣಿ ಎಣ್ಣೆ ಇವನ್ನೇ ನಂಬಿದ ಅಮಾಯಕರಿಗೆ ರಾಜಕೀಯದ ಈ ತಂತ್ರದಲ್ಲೂ ಅಷ್ಟು ಸಿಕ್ಕರೆ (ಕೆಲವೊಮ್ಮೆ ಮೆನು ಬದಲಾಗಬಹುದು-ಹೊಸರೂಪದಲ್ಲಿ!) ಸಾಕು. ಭಾಷಣಮಾಡಿ ಮೆದುಳಿನೊಳಗೆ ದ್ವೇಷದ ಹುಲ್ಲನ್ನು ತುಂಬಿಸಿದರೆ ಬೇಕಾದಾಗ ಅದಕ್ಕಿಷ್ಟು ಕಿಡಿ ಹಚ್ಚಿದರೆ ಸಾಕು, ಸಿಡಿಯುವುದು ಸಿಡಿಯುತ್ತದೆ; ಉರಿಯುವುದು ಉರಿಯುತ್ತದೆ. ಬೆಳಕು ಯಾರಿಗೆ ಬೇಕಾಗಿದೆ?

ಆದರೆ ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ಅಡ್ಡ ಪರಿಣಾಮಗಳೆಂದರೆ ಈ ಭ್ರಮೆಯ ಹಿಂದೆ ಹೋದ ಬಹಳ ಮಂದಿ ವಾಸ್ತವವನ್ನು ಅರಿಯುವಾಗ ತೀರ ತಡವಾಗುವುದು; ತನ್ನ ಪರಿಶ್ರಮದ ಫಲವನ್ನು ಯಾರೋ ಉಣ್ಣುವುದು; ತಾನು ಅಲಕ್ಷಿತನಾಗುವುದು. ಹೊಸ ತಂತ್ರಗಳನ್ನನುಸರಿಸಿ ಈಗ ಹಳೆಯ ಬದುಕಿಗೆ ಮರಳಲಾಗದಿರುವುದು.

ಇದರ ಇನ್ನೊಂದು ಫಲಶ್ರುತಿಯೆಂದರೆ ರಾಷ್ಟ್ರದ ಅಭಿವೃದ್ಧಿಯ ನೊಗಕ್ಕೆ ಹೆಗಲು ನೀಡಬೇಕಾದ ಯುವಕರು ಮತೀಯ ದ್ವೇಷರಾಜಕಾರಣಕ್ಕೆ ಬಲಿಯಾಗಿ ಭೂಗತ ಜಗತ್ತಿಗೆ ಇಳಿದವರಂತೆ ವರ್ತಿಸುತ್ತಿರುವುದು. ಹುಲಿಗೆ ಒಮ್ಮೆ ಮನುಷ್ಯನ ರಕ್ತದ ರುಚಿ ಸಿಕ್ಕಿತೆಂದರೆ ಅದು ಮತ್ತೆ ಇತರ ಪ್ರಾಣಿಗಳನ್ನು ಲೆಕ್ಕಿಸುವುದಿಲ್ಲವಂತೆ. ಅದರ ಆಕರ್ಷಣೆ ಮನುಷ್ಯ ಮಾತ್ರ- ಅರ್ಥಾತ್ ನರಭಕ್ಷಣೆ. ಯುವಕರ ಈ ಹೊಣೆಗೇಡಿತನಕ್ಕೆ ಅವರ ಹಿರಿಯರು ಬಲಿಯಾಗುವುದೂ ಉಂಟು. ವ್ಯಾಪಾರದಲ್ಲಿ ಅತೀವ ಸೋಲು, ಕಷ್ಟಪಡುವ ಮನೆಮಂದಿಯ ಅಭಾವ ಇವುಗಳಿಂದಾಗಿ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಯುವಕರು ಹಿಂಸೆಯ ಉದ್ರೇಕಕ್ಕೆ ಸಿಕ್ಕಿ ಅಪಘಾತವೂ ಸೇರಿದಂತೆ ಬದುಕಿನ ಕೊನೆಯನ್ನು ಕಾಣುತ್ತಾರೆ. ದಕ್ಷಿಣ ಕನ್ನಡದ ಸದ್ಯದ ದೊಡ್ಡ ಸುದ್ದಿಗಳೆಂದರೆ ಕೊಲೆ, ಆತ್ಮಹತ್ಯೆ, ಅಪಘಾತಗಳು. ಹಿಂದೂ-ಮುಸ್ಲಿಮ್ ಹೊಡೆದಾಟ, ಹಿಂಸೆಯಲ್ಲಿ ಅನೇಕ ಜೀವಗಳು ನಷ್ಟವಾಗಿವೆ; ಇನ್ನನೇಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಒಂದೊಮ್ಮೆ ಜಾಮೀನಿನಲ್ಲಿ ಹೊರಬಂದರೂ ನ್ಯಾಯಾಲಯಕ್ಕೆ ವರ್ಷಾನುಗಟ್ಟಲೆ ಅಲೆದಾಟ. ಬದುಕಿಗೆ ಅನ್ಯ ಮಾರ್ಗವಿಲ್ಲ. ಮನೆಮಂದಿಯನ್ನು ಸಾಕುವವರಿಲ್ಲ. ಕುಮ್ಮಕ್ಕು ನೀಡಿದವರು ಎಲ್ಲೋ ಆರಾಮವಾಗಿದ್ದು, ವಿಶ್ರಾಂತಿ ಪಡೆದುಕೊಂಡು ‘ಇವರಿಗೆ ಬುದ್ಧಿಯಿಲ್ಲ’ ಎನ್ನುತ್ತಾ ತಮ್ಮ ಬದುಕನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಂಡಿದ್ದಾರೆ.

ಕೆಲವು ಮಂದಿಯಾದರೂ ಮತೀಯ ಸಂಘರ್ಷ ಅಂತ್ಯಗೊಂಡರೂ ರಕ್ತಪಿಪಾಸೆ ತಣಿಯದೆ ಇತರ ಗೂಂಡಾಗಿರಿಯನ್ನು ನಡೆಸುತ್ತಿದ್ದಾರೆ. ಹೀಗಾಗಿ ಹಿಂದೂ-ಮುಸ್ಲಿಮ್ ಮತೀಯ ಕಲಹದಿಂದ ಸಾಯುವವರಿಗಿಂತಲೂ ಹೆಚ್ಚು ಸಂಖ್ಯೆಯ ಜನರು ಅವರವರ ಧರ್ಮ-ಜಾತೀಯ ಕಲಹದಿಂದಲೇ ಬಳಲಿದ್ದಾರೆ; ಸಾಯುತ್ತಿದ್ದಾರೆ. ಈಗ ಸಾಯುತ್ತಿರುವವರು ‘ಜಾತ್ಯತೀತ’ ಯೋಧರು. ಈ ಕುರಿತು ನಿತ್ಯ ಬರುವ ಮಾಧ್ಯಮ ವರದಿಗಳೇ ಸಾಕು ಅರ್ಥಮಾಡಿಕೊಳ್ಳುವವರಿಗೆ. ಇವರ ಪಾಲಿಗೆ ಯಾವ ದೇವರೂ ಬರಲಾರ. ನಾಯಕರಂತೂ ಗಾವುದ ದೂರ.

ಪ್ರಚಲಿತ ಪರಿಸ್ಥಿತಿಯನ್ನವಲೋಕಿಸಿದರೆ ಈ ಪರಿಸ್ಥಿತಿ ಶಮನವಾಗಬೇಕಾದರೆ ‘ಧೀಯೋ ಯೋ ನಃ ಪ್ರಚೋದಯಾತ್’ ಆಗಬೇಕು. ಸ್ವತಃ ಜಾಗೃತಿ ಮೂಡಬೇಕು. ಕಟ್ಟಿಕೊಟ್ಟ ಬುತ್ತಿಯಾಗಲೀ ಹೇಳಿಕೊಟ್ಟ ಬುದ್ಧಿಯಾಗಲೀ ವಿನಾಶಕ್ಕೆ ಸಾಕು; ಸೃಷ್ಟಿಗೆ ಸಾಲದು. ಬುದ್ಧಿವಂತರು ಇತರರ ಸಂಕಷ್ಟ ನೋಡಿ ಜಾಗೃತರಾಗುತ್ತಾರೆ. ದಡ್ಡರು ತಮಗೇ ಬಿದ್ದ ಏಟನ್ನೂ ಇದು ನನಗಲ್ಲ ಎಂದುಕೊಳ್ಳುತ್ತಾರೆ.

ಈಗ ಹೇಳಿ: ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ ಹೌದೇ? ಹೌದಾದರೆ ಸಂತೋಷ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)