ಜೋನಿ ಮರಿಯಭೂಮಿಗೆ ದಾಂತಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಉಡುಪಿ : ಕಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಸಮಿತಿ ವತಿ ಯಿಂದ ನೀಡಲಾಗುವ ೨೦೨೨ನೇ ಸಾಲಿನ ರಾಜ್ಯ ಮಟ್ಟದ ದಾಂತಿ ಸಾಹಿತ್ಯ ಪುರಸ್ಕಾರವನ್ನು ಲೇಖಕ ಜೋನಿ ಮರಿಯಭೂಮಿ ಅವರ ‘ಸ್ವಚ್ಛಂದಾವರೆ’ ಕೃತಿಗೆ ಪ್ರದಾನ ಮಾಡಲಾಯಿತು.
ಪತ್ರಕರ್ತ ಹಾಗೂ ಟಿವಿ ನಿರೂಪಕರಾಗಿರುವ ವಾಲ್ಟರ್ ನಂದಳಿಕೆ ಅವರು ಉಡುಪಿ ಶೋಕಮಾತಾ ಚರ್ಚ್‌ನ ಡೋನ್ ಬೊಸ್ಕೊ ಸಭಾಂಗಣದಲ್ಲಿ ಜೊನಿ ಮರಿಯಭೂಮಿ ಅವರಿಗೆ ಗುರುವಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿಯು ೨೫,೦೦೦ರೂ. ನಗದು, ಪುರಸ್ಕಾರ ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋನಿ ಮರಿಯಭೂಮಿ ಅವರು ನೈಜ ಬರಹಗಾರರನ್ನು ಹುಡುಕಿ ಅವರ ಕೃತಿಗಳಿಗೆ ಪ್ರೋತ್ಸಾಹ ನೀಡುವ ಇಂಥ ಕ್ರಮ ಶ್ಲಾಘನಾರ್ಹವಾಗಿದೆ. ಈ ಮೂಲಕ ಇನ್ನಷ್ಟು ಲೇಖಕರು ತಮ್ಮ ಕೃತಿಗಳನ್ನು ಪ್ರಕಟಿಸುವ ಮನಸ್ಸು ಮಾಡುತ್ತಾರೆ. ಇಂದು ಯುವಜನತೆಯಲ್ಲಿ ಓದುವ ಆಸಕ್ತಿ ಕಡಿಮೆಯಾಗಿದ್ದು ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ಕೂಡ ಸಾಗಬೇಕಾಗಿದೆ ಎಂದರು.
ಕೆಥೊಲಿಕ್ ಸಭಾ ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ದಾಂತಿ ಸ್ಮಾರಕ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ನೀಡಿದರು. ಇದೇ ವೇಳೆ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನವನ್ನು ವಿಜೇತರಿಗೆ ವಿತರಿಸಲಾಯಿತು. ಆಲ್ಫೋನ್ಸ್ ಡಿಕೋಸ್ತಾ ಬಹುಮಾನಿತರ ವಿವರಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಪ್ರದೇಶ ಕೆಥೊಲಿಕ್ ಸಭಾದ ಅಧ್ಯಕ್ಷೆ ಮೇರಿ ಡಿಸೋಜಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ರೋಬರ್ಟ್ ಮಿನೇಜಸ್, ಉಪಾಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಸಹ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಐದು ವಲಯಗಳ ಅಧ್ಯಕ್ಷರು ಹಾಗೂ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಎಲ್‌ರೊಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ ವಂದಿಸಿದರು. ಕ್ಯಾರಲ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು.