ಬೈಂದೂರು: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಬೈಂದೂರು : ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮುಂಬೈಯ ಈಶ್ವರ್ ದಲಿಚಂದ್ ಪೊರ್ವಾಲ್ ಎಂಬವರು ಮುಂಬೈಯಿಂದ ಮಂಗಳೂರಿಗೆ ಮಾರಾಟ ಮಾಡಲು ಖಾಸಗಿ ಬಸ್ಸಿನಲ್ಲಿ ತರುತಿದ್ದಾಗ ಅಪರಿಚಿತರು ಶಿರೂರು ಗ್ರಾಮದ ಸಮೀಪ ಚಿನ್ನಾಭರಣ ಇದ್ದ ಬಾಕ್ಸ್‌ನ್ನು ಅಪಹರಿಸಿ ಪರಾರಿಯಾದ ಘಟನೆ ವರದಿಯಾಗಿದೆ.
ಈಶ್ವರ್ ಅವರು ಕಳೆದ ಹತ್ತು ವರ್ಷಗಳಿಂದ ಮುಂಬೈಯಲ್ಲಿ ಚಿನ್ನ ಖರೀದಿಸಿ ಅದರಿಂದ ಚಿನ್ನಾಭರಣ ತಯಾರಿಸಿ ಮಂಗಳೂರು, ಹೈದರಾಬಾದ್ ಕಡೆಗಳಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುತಿದ್ದರು. ಅದೇ ರೀತಿ ಇತ್ತೀಚೆಗೆ ಮುಂಬೈಯ ಜವೇರಿ ಬಜಾರ್‌ನ ಚಿನ್ನದಂಗಡಿಯಿಂದ 18 ಲಕ್ಷ ರೂ. ಮೌಲ್ಯದ ಚಿನ್ನ ತಯಾರಿಸಿ ಅದರ ಚಿನ್ನಾಭರಣಗಳನ್ನು ಸ್ಟೀಲ್‌ಬಾಕ್ಸ್‌ನಲ್ಲಿರಿಸಿ ಅದನ್ನು ಸೂಟ್‌ಕೇಸ್‌ನಲ್ಲಿ ಭದ್ರ ಪಡಿಸಿ ಜೂ.15ರಂದು ಮಂಗಳೂರಿಗೆ ಬರಲು ಮೀರಾ ರೋಡ್‌ನಿಂದ ಕೆನರಾ ಪಿಂಟೊ ಬಸ್ಸನ್ನೇರಿದ್ದರು.
ಜೂ.16ರ ಬೆಳಗ್ಗೆ 7.15ರ ಸುಮಾರಿಗೆ ಬಸ್ಸು ಶಿರೂರು ಗ್ರಾಮದ ನಿರ್ಗದ್ದೆ ಎಂಬಲ್ಲಿ ಉಪಹಾರಕ್ಕಾಗಿ ಶಿವಸಾಗರ್ ಹೊಟೇಲ್ ಎದುರು ನಿಂತಿದ್ದಾಗ, ಈಶ್ವರ್ ದಲಿಚಂದ್ ತಿಂಡಿ ತಿನ್ನಲು ತೆರಳಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಬಸ್ಸನ್ನೇರಿ ಬ್ಯಾಗ್‌ನ್ನು ಪರಿಶೀಲಿಸಿ ಬಸ್ಸಿನಿಂದ ಇಳಿದು ಅಲ್ಲೇ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಬ್ರೀಜಾ ಬಿಳಿ ಬಣ್ಣದ ಕಾರಿನಲ್ಲಿ ಹೋಗಿದ್ದಾಗಿ ಬಸ್‌ನ ಕ್ಲೀನರ್ ಪ್ರಯಾಣಿಕರಿಗೆ ತಿಳಿಸಿದರು.
ತಕ್ಷಣ ಈಶ್ವರ್ ಬಂದು ನೋಡಿದಾಗ ಸೀಟಿನಡಿ ಇಟ್ಟಿದ್ದ ಸೂಟ್‌ಕೇಸ್ ಕಾಣಿಸಲಿಲ್ಲ. ಹುಡುಕಿದಾಗ ಬಸ್‌ನ ಹಿಂಭಾಗದಲ್ಲಿ ಅದು ಬೀಗ ಒಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಅದರೊಳಗೆ ಸ್ಟೀಲ್ ಬಾಕ್ಸ್‌ನಲಿರಿಸಿದ್ದ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿತ್ತು.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.