varthabharthi


ಮನೋ ಚರಿತ್ರ

ಕಲಿಕೆಯ ಗುಣಮಟ್ಟ

ವಾರ್ತಾ ಭಾರತಿ : 19 Jun, 2022
ಯೋಗೇಶ್ ಮಾಸ್ಟರ್

ಕಲಿಕೆಯ ಗುಣಮಟ್ಟದ ಆಧಾರದಲ್ಲಿ ವ್ಯಕ್ತಿಯ ವಿದ್ಯಾರ್ಹತೆಯು ರೂಪುಗೊಳ್ಳುತ್ತದೆ. ಯಾವುದೇ ವ್ಯಕ್ತಿಯು ಪಡೆಯುವ ಶಿಕ್ಷಣದ ಗುಣಮಟ್ಟದ ಆಧಾರದಲ್ಲಿ ವ್ಯಕ್ತಿತ್ವ ನಿರ್ಮಾಣದ ಸಾಮರ್ಥ್ಯ ಮತ್ತು ಆ ವ್ಯಕ್ತಿ ಸಮಾಜಕ್ಕೆ ಸ್ಪಂದಿಸುವ ಗುಣ ನಿರ್ಧಾರವಾಗುತ್ತದೆ. ವ್ಯಕ್ತಿಯು ಪ್ರಾರಂಭದಿಂದಲೇ ಸ್ಪರ್ಧಾತ್ಮಕ ಮನಸ್ಥಿತಿಯನ್ನು ಹೊಂದಿದರೆ ಅವನು ಸೋಲನ್ನು ಎಂದಿಗೂ ಒಪ್ಪದವನೂ ಮತ್ತು ಇತರರ ಗೆಲುವನ್ನು ಸಹಿಸದವನೂ ಆಗುತ್ತಾನೆ. ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಸಂಘಟಿತವಾಗಿ ಮಗುವಿನ ಮನಸ್ಥಿತಿಯನ್ನು ರೂಪಿಸುವವರಾಗಿದ್ದಾರೆ.

ವ್ಯಕ್ತಿಯ ಮುಂದಿನ ಬದುಕಿನ ಸಫಲತೆ ಮತ್ತು ವಿಫಲತೆಯ ಮೇಲೆ ಪೋಷಕರ ಮತ್ತು ಶಿಕ್ಷಕರ ನೇರಾನೇರ ಪ್ರಭಾವವಿರುತ್ತದೆ. ಶಿಕ್ಷಕರಿಗೆ ಸರಕಾರದಿಂದ ನಿರ್ದೇಶಿತವಾಗಿರುವ ಶಿಕ್ಷಣ ಇಲಾಖೆಯು ಇದ್ದು, ಅದು ಮಗುವಿನ ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗ್ರಹಿಕೆಗಳನ್ನು ರೂಪಿಸುವಂತಹದ್ದಾಗಿರುತ್ತದೆ. ಆದ್ದರಿಂದ ಭಾರತದಂತಹ ಬಹುತ್ವದ ಭೂಮಿಗೆ ಶಿಕ್ಷಣದ ಪಠ್ಯವನ್ನು ರೂಪಿಸುವಾಗ ಬಹಳ ಎಚ್ಚರಿಕೆಯನ್ನೂ, ಸಂವೇದನೆಯನ್ನೂ ಮತ್ತು ದೂರದೃಷ್ಟಿತ್ವವನ್ನೂ ಹೊಂದಿರಬೇಕಾಗುತ್ತದೆ. ಹಾಗಾಗಿಯೇ ಮಗುವಿನ ವ್ಯಕ್ತಿಗತ ಮತ್ತು ಸಾಮಾಜಿಕ ಮನಸ್ಸನ್ನು ರೂಪುಗೊಳಿಸುವ ಪಠ್ಯಗಳ ಬಗ್ಗೆ ಸಮಾಜವು ಜಾಗರೂಕವಾಗಿರಬೇಕು. ನಮ್ಮ ಮಗುವಿನ ಮನಸ್ಸನ್ನು ಕಾಪಾಡಿದರೆ ಅದರ ಬದುಕನ್ನೇ ಕಾಪಾಡಿದಂತೆ. ನಮ್ಮಲ್ಲಿ ಬಹುಪಾಲು ಜನರು ಮಗುವಿನ ಮನಸ್ಸನ್ನು ಕುಗ್ಗಿಸುತ್ತಾ ಬದುಕನ್ನು ಹಿಗ್ಗಿಸುವ ಪ್ರಯತ್ನ ಮಾಡುತ್ತಾರೆ. ಇದು ಎಂದಿಗೂ ಸಾಧ್ಯವಾಗದು. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಹೊಂದುವುದು ಎಂದರೆ ಆಯಾ ದೇಶದ ಸಂಸ್ಕೃತಿ, ಆ ದೇಶದ ಸಮಾಜ ಮತ್ತು ಆ ದೇಶದ ಜೀವನ ಶೈಲಿಗೆ ಅವರು ರಾಜಿಮಾಡಿಕೊಳ್ಳಬೇಕು ಎಂದುಕೊಳ್ಳುವ ಅಗತ್ಯವಿಲ್ಲ. ಮಗುವಿನ ಮತ್ತು ಮನಸ್ಸಿನ ಬಗ್ಗೆ ಯಾವುದೇ ದೇಶದವರು, ಯಾವುದೇ ಸಂಸ್ಕೃತಿಯವರು ಏನೇ ರಚನಾತ್ಮಕವಾಗಿರುವುದನ್ನು ಮತ್ತು ಸೂಕ್ಷ್ಮ ಅವಲೋಕನಗಳನ್ನು ಹೇಳಿದರೂ ಅದು ಎಲ್ಲರಿಗೂ ಅನ್ವಯಿಸುತ್ತದೆ.

ಸಂಸ್ಕೃತಿ, ಜೀವನಶೈಲಿ ಇತ್ಯಾದಿಗಳೆಲ್ಲಾ ಸಾಮಾಜಿಕ ಸ್ತರಗಳಲ್ಲಿ ಸ್ಥೂಲವಾದದ್ದು. ಆದರೆ ಮನಸ್ಸಿನ ವಿಷಯದಲ್ಲಿ ಅದು ಸೂಕ್ಷ್ಮವಾದದ್ದು. ಎಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಮಗುವೂ ಕೂಡಾ ಅದರದೇ ಆದ ಪ್ರಾದೇಶಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆಗಳನ್ನು ಹೊಂದಿರುವುದರಿಂದ ಯಾವುದೇ ಸಂಸ್ಕೃತಿ ಅಥವಾ ಧರ್ಮವನ್ನು ಪಠ್ಯದಲ್ಲಿ ಪ್ರಕಟಿಸಿದರೂ ಅದು ಪರಿಚಯಾತ್ಮಕವೇ ಆಗಿರುತ್ತದೆ. ಎಲ್ಲರಿಗೂ ಅನ್ವಯವಾಗುವುದಿಲ್ಲ. ಹಾಗಾಗಿ ಎಲ್ಲದರ ಬಗ್ಗೆ ಎಲ್ಲರೂ ತಿಳಿಯುವುದು, ಎಲ್ಲದರ ಬಗ್ಗೆ ಎಲ್ಲರೂ ಗೌರವವನ್ನು ತಾಳುವುದರ ಬಗ್ಗೆ ಪಠ್ಯವನ್ನು ರೂಪಿಸಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಪಠ್ಯವು ಯಾವುದೋ ಒಂದು ಸಂಸ್ಕೃತಿಯನ್ನು ಹೆಚ್ಚುಗಾರಿಕೆಯನ್ನು ಕೊಂಡಾಡುವುದು, ಯಾವುದೋ ಒಂದು ಧರ್ಮವನ್ನು ಮೆರೆಸುವುದು, ಯಾವುದೋ ಒಂದು ಸಿದ್ಧಾಂತದವರನ್ನು ಮುನ್ನೆಲೆಗೆ ತರುವುದು; ಇತ್ಯಾದಿಗಳನ್ನು ಮಾಡಿದರೆ, ಬಹುತ್ವದ ಭಾರತದಲ್ಲಿ ಅದು ಅಕ್ಷಮ್ಯ ಮಾತ್ರವಲ್ಲ, ಅಸಾಧುವೂ ಕೂಡಾ. ಏಕೆಂದರೆ ಅವನ್ನು ಎಲ್ಲಾ ಮಕ್ಕಳೂ ಪ್ರಶಂಸಿಸಲಾರರು. ಒಪ್ಪಿಕೊಳ್ಳಲಾರರು. ತಮ್ಮದು ಎಂಬ ಭಾವಕ್ಕೆ ಒಳಗಾಗಲಾರರು. ಅಂತಹ ಏಕಪಕ್ಷೀಯ ಪಠ್ಯಗಳು ಕೆಲವು ಮಕ್ಕಳಲ್ಲಿ ಕೀಳರಿಮೆಯನ್ನು ಉಂಟುಮಾಡಿದರೆ, ಕೆಲವರಲ್ಲಿ ಮೇಲರಿಮೆಯನ್ನು ಉಂಟು ಮಾಡುತ್ತದೆ. ಬಹಳ ಮುಖ್ಯವಾಗಿ ಕಲ್ಚರ್ ಕಾಂಪ್ಲೆಕ್ಸ್ ಅಥವಾ ಸಾಂಸ್ಕೃತಿಕ ಹೆಚ್ಚುಗಾರಿಕೆ ಎಂಬ ಮನೋವೈಕಲ್ಯ ಉಂಟಾಗುತ್ತದೆ. ಅದು ಉಲ್ಬಣಗೊಂಡಷ್ಟೂ ಇತರ ಸಾಂಸ್ಕೃತಿಕ ನೆಲೆಗಳನ್ನು ತಿರಸ್ಕರಿಸುವುದು, ದ್ವೇಷಿಸುವುದು, ತಮ್ಮದನ್ನು ಮಾತ್ರವೇ ಶ್ರೇಷ್ಠವೆಂದು ಮುನ್ನೆಲೆಗೆ ತರುವುದು; ಇತ್ಯಾದಿ ಮನಸ್ಥಿತಿಗಳು ಉಂಟಾಗುತ್ತವೆ. ಇದರಿಂದಾಗಿ ಅವರು ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಅಸಹನೆಯನ್ನು ಹೊಂದಿರುವುದೇ ಅಲ್ಲದೆ ಸದಾ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಏಕೆಂದರೆ ಅವರಿಗೆ ಬಹುತ್ವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಸುತ್ತಲೂ ಬಹುತ್ವವನ್ನು ಹೊಂದಿದ್ದು ತಮ್ಮ ಮನಸ್ಸು ಮಾತ್ರ ಏಕಪಕ್ಷೀಯವಾಗಿದ್ದು ಸಿಡಿಮಿಡಿಗೊಳ್ಳುತ್ತಿರುತ್ತದೆ. ಇಂತಹ ವೈಯಕ್ತಿಕ ಸಮಸ್ಯೆಯು ಸಾಮಾಜಿಕ ಸಮಸ್ಯೆಯಾಗಿ ಅನಪೇಕ್ಷಣೀಯ ಸಂಗತಿಗಳಿಗೆ ಕಾರಣವಾಗುತ್ತದೆ.

ಜೀವನ ಪ್ರೀತಿ ಮತ್ತು ಮಾನವಹಕ್ಕುಗಳನ್ನು ಪ್ರತಿಪಾದಿಸುವಂತಹ ಮಾನವೀಯ ಮೌಲ್ಯಾಧಾರಿತ ಶಿಕ್ಷಣ ಮಾತ್ರವೇ ಭಾರತಕ್ಕೆ ಅಗತ್ಯವಿರುವುದು. ಅಂತಹುದರಿಂದ ಮಕ್ಕಳ ಮನಸ್ಸುಗಳನ್ನು ಎಳೆವೆಯಲ್ಲಿಯೇ ಕಾಪಾಡಲು ಸಾಧ್ಯ. ಮುಖ್ಯವಾಗಿ ಶಾಲೆ ಎಂಬುದೇ ಮಕ್ಕಳಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಾನು ಇರುವ ವಾತಾವರಣದಿಂದ ಕಲಿಯುವಂತಹ ಅವಕಾಶ ಒದಗಿಸುವ ಸ್ಥಳವಾಗಿರುತ್ತದೆ. ಕಲಿಕೆಗೆ ಪೂರಕವಾಗಿರುವಂತಹ ನೈತಿಕ ಮತ್ತು ಮೌಲಿಕ ವಾತಾವರಣ ಮತ್ತು ಪರಿಸರವನ್ನು ರೂಪಿಸಬೇಕು. ಮಗುವಿನ ಆರೋಗ್ಯ ರಕ್ಷಣೆ, ಅದಕ್ಕೆ ಪೂರಕವಾದ ಆಹಾರ, ಮನೋಬಲದ ಸಂವರ್ಧನೆಗೆ ಅನುಕೂಲವಾದಂತಹ ಸಮಾಲೋಚನೆಗಳು ಪ್ರತಿಯೊಂದು ಮಗುವಿಗೂ ಉಚಿತವಾಗಿ ದೊರೆಯಬೇಕು. ಮಕ್ಕಳು ತಮ್ಮ ಆಸಕ್ತಿಯನ್ನು ಮತ್ತು ಅಗತ್ಯವನ್ನು ಗುರುತಿಸಿಕೊಳ್ಳುವುದಕ್ಕೆ ವಿಶೇಷ ಗಮನ ನೀಡಬೇಕು. ಹಿರಿಯರ ಆಸಕ್ತಿಗಳನ್ನು ಮತ್ತು ಇತರರು ಊಹಿಸುವ ಅಗತ್ಯವನ್ನು ಮಕ್ಕಳ ಮನಸ್ಸಿನ ಮೇಲೆ ಹೇರಲೇ ಬಾರದು. ಆ ಸಬ್ಜೆಕ್ಟಿಗೆ ಸ್ಕೋಪ್ ಇದೆ, ಈ ಫೀಲ್ಡಲ್ಲಿ ಕೆಲಸ ಮಾಡಿದರೆ ಒಳ್ಳೆ ದುಡ್ಡು ಬರತ್ತೆ - ಇತ್ಯಾದಿ ಹಿರಿಯರ ಆಲೋಚನೆಗಳು ಮಕ್ಕಳ ಬೆಳವಣಿಗೆಯನ್ನು ಮತ್ತು ಮಾನಸಿಕ ವಿಕಾಸವನ್ನು ನಿಯಂತ್ರಿಸುತ್ತದೆ. ಒಂದು ವಿಷಯ, ಕಲಿಕೆಯ ವಿಷಯದಲ್ಲಿ ಮಗುವಿನ ಮನಸ್ಥಿತಿಯೇ ಕೇಂದ್ರ ವಸ್ತು ಆಗದಿದ್ದಲ್ಲಿ ಸಮಾಜದ ಸಂಕಲಿತ ಮನಸ್ಥಿತಿ ಕೆಟ್ಟು ಭೀಕರ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಎಚ್ಚರಿಕೆ ಶಿಕ್ಷಣ ಇಲಾಖೆಗಳಿಗೆ ಇರಲೇಬೇಕು. ಮಕ್ಕಳ ಮನಸ್ಸನ್ನು ಅರಳಿಸುವಂತಹ ಶಿಕ್ಷಣ ಮನೆಯಿಂದಲೂ ಮತ್ತು ಶಾಲೆಯಿಂದಲೂ ದೊರಕಿದರೆ, ಅವರು ಸಹಜವಾಗಿ ಸಮಾಜದಲ್ಲಿ ಕೆರಳಿಸುವಂತಹ ಪ್ರಜೆಗಳಾಗದೇ ಇರಲು ಸಾಧ್ಯ, ಅಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)