varthabharthi


ರಾಷ್ಟ್ರೀಯ

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವ ಪ್ರಸ್ತಾವವನ್ನು ತಿರಸ್ಕರಿಸಿದ ಗೋಪಾಲಕೃಷ್ಣ ಗಾಂಧಿ

ವಾರ್ತಾ ಭಾರತಿ : 20 Jun, 2022

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ತಮ್ಮ ಜಂಟಿ ರಾಷ್ಟ್ರಪತಿ ಅಭ್ಯರ್ಥಿಯಾಗಬೇಕೆಂಬ ವಿರೋಧ ಪಕ್ಷದ ಮನವಿಯನ್ನು ಸೋಮವಾರ ತಿರಸ್ಕರಿಸಿದ್ದಾರೆ ಎಂದು PTI ವರದಿ ಮಾಡಿದೆ.

"ರಾಷ್ಟ್ರೀಯ ಒಮ್ಮತವನ್ನು ಸೃಷ್ಟಿಸುವ ಮತ್ತು ಏಕತೆಯನ್ನು ಖಾತ್ರಿಪಡಿಸುವ ಅಭ್ಯರ್ಥಿಯ ಅಗತ್ಯವಿದೆ" ಎಂದು ಮಹಾತ್ಮ ಗಾಂಧಿಯ ಮೊಮ್ಮಗ ಹಾಗೂ ಮಾಜಿ ನಾಗರಿಕ ಸೇವಕ ಗೋಪಾಲಕೃಷ್ಣ ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನಾನು ಅವರಿಗೆ (ಪ್ರತಿಪಕ್ಷಗಳಿಗೆ) ಅತ್ಯಂತ ಕೃತಜ್ಞನಾಗಿದ್ದೇನೆ. ನನಗಿಂತ ಉತ್ತಮವಾಗಿ ಈ ಕಾರ್ಯವನ್ನು ನಿರ್ವಹಿಸುವ ಇತರರು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಇನ್ನೊಬ್ಬರಿಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದೇನೆ ಎಂದು ಗಾಂಧಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

"ಈ ಹಿಂದೆ ಗವರ್ನರ್ ಜನರಲ್ ಆಗಿ ರಾಜಾಜಿ ಅವರು ಪ್ರಸ್ತಾಪಿಸಿದ ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರು ನಮ್ಮ ಮೊದಲ ರಾಷ್ಟ್ರಪತಿಯಾಗಿ ಉದ್ಘಾಟಿಸಿದ ಕಚೇರಿಗೆ ಯೋಗ್ಯವಾದ ರಾಷ್ಟ್ರಪತಿಯನ್ನು ಭಾರತವು ಪಡೆಯಲಿ" ಎಂದು ಅವರು ಹೇಳಿದರು.

ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾಕ್ಕೆ ಭಾರತದ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ 77 ವರ್ಷ ವಯಸ್ಸಿನ ಗೋಪಾಲಕೃಷ್ಣ ಗಾಂಧಿ ಮಹಾತ್ಮ ಗಾಂಧಿ ಮತ್ತು ಭಾರತದ ಮಾಜಿ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗರಾಗಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ಹಿಂಪಡೆದ ಮೂರನೇ ರಾಜಕೀಯ ಮುಖಂಡರಾಗಿದ್ದು, ಕಳೆದ ವಾರ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಪ್ರಸ್ತಾವವನ್ನು ನಿರಾಕರಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)