ಪಠ್ಯಪುಸ್ತಕ ಮರುಪರಿಷ್ಕರಣೆ: ಪರಿಣತಿ ಮತ್ತು ವಿಷಯ ತಜ್ಞತೆಗೆ ಇದು ಕಾಲವಲ್ಲವೇ?
ಪರಿಣತಿ ಎಂದರೆ ಯೂಟ್ಯೂಬ್ ಚಾನೆಲ್ನಲ್ಲಿ ಮಿಲಿಯನ್ಗಟ್ಟಲೆ ಸಬ್ಸ್ಕ್ರೈಬರ್ಸ್ ಹೊಂದಿರುವುದು, ವಾಕ್ ಚಾತುರ್ಯವಿದ್ದು ಜನರ ಭಾವನೆಗಳನ್ನು ತಲುಪುವ ಛಾತಿ ಇರುವುದು, ಸಮೂಹ ಮಾಧ್ಯಮಗಳ ತಮ್ಮ ಪೋಸ್ಟ್ಗಳಿಗೆ ವೈರಲ್ ಆಗುವ ಗುಣಗಳಿರುವುದು ಆಗಿದೆ! ಇಂತಹ ತಜ್ಞರನ್ನು ಒಂದು ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ಪಠ್ಯ ಪುಸ್ತಕ ಪರಿಷ್ಕರಣೆಯ ಸಮಿತಿಗೆ ನೇಮಿಸುವ ಬೇಜವಾಬ್ದಾರಿ ಕೆಲಸವನ್ನು ಸರಕಾರವೇಕೆ ಮಾಡಿತು? ಹಾಗಾದರೆ ವಿಷಯ ತಜ್ಞತೆ, ಪರಿಣತಿ ಇವುಗಳಿಗೆ ಸ್ಥಾನವಿಲ್ಲವೇ?
ಕರ್ನಾಟಕ ರಾಜ್ಯ ಸರಕಾರ ಪಠ್ಯ ಪುಸ್ತಕ ಮರುಪರಿಷ್ಕರಣೆಯನ್ನು ಅವಸರದಲ್ಲಿ ಮಾಡಿಮುಗಿಸಿದೆ. ಮರುಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚಿರುವ, ಸತ್ಯಕ್ಕೆ ದೂರವಾದ ಭಾವುಕ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಕಟ್ಟಿಕೊಡುವ ಪಾಠಗಳು ಕಾಣಿಸುತ್ತಿವೆ. ಅದಕ್ಕಾಗಿ ನೇಮಿಸಿದರೆನ್ನಲಾದ ಸಮಿತಿಯ ಅಧ್ಯಕ್ಷರ ಕ್ಷಮತೆಯಲ್ಲಿಯೇ ಹಲವಾರು ಅನುಮಾನಗಳಿರುವುದೆಲ್ಲಾ ಬಯಲಾಗಿದೆ. ಇಂತಹ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಭಾರತೀಕರಣ-ಒಂದು ಚಿಂತನೆ’ (ಹೊಸ ವಿಚಾರಗಳು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪು. 447) ಎನ್ನುವ ಲೇಖನದಲ್ಲಿ ‘ಭಾರತೀಕರಣ’ ಎಂಬ ಪರಿಕಲ್ಪನೆಯ ಬಗ್ಗೆ ವಿವರಿಸುತ್ತಾ ಹೀಗೆ ಹೇಳುತ್ತಾರೆ: ‘ಭಾರತೀಕರಣದ ಹಿಂದಿರುವ ಕಲ್ಪನೆ ಒಂದು ಬಗೆಯ ಭಾವುಕ ಧಾರ್ಮಿಕ ಕಲ್ಪನೆ. ಇವತ್ತಿಗೂ ಭಾರತೀಯ ಎಂದರೆ ನಮ್ಮ ಜನರ ಮನಸ್ಸಿನಲ್ಲಿ ಮಾರ್ನುಡಿಯುವುದು ಈ ಧಾರ್ಮಿಕ ಮೂಲವಾದ ಅಸೇತು ಹಿಮಾಚಲ ಪರ್ಯಂತದ ಅಖಂಡ ಭಾರತದ ಕಲ್ಪನೆಯೇ. ಆದರೆ ಈಗ ಈ ಕಲ್ಪನೆಯನ್ನು ತೀವ್ರವಾದ ವಿಶ್ಲೇಷಣೆಯ ಮುಖಾಂತರ ಅವಲೋಕಿಸಬೇಕಾಗಿದೆ. ವಿವೇಕಾನಂದ, ರಾಜಾರಾಮ್ ಮೋಹನ್ ರಾಯ್, ಗಾಂಧಿಯಂತಹ ಮಹಾನುಭಾವರಿಗೂ ಈ ಕಲ್ಪನೆ ಸ್ಫೂರ್ತಿ ಕೊಟ್ಟಿತೆಂಬುದನ್ನು ಮರೆಯುವಂತಿಲ್ಲವಾದರೂ ಜನಾಂಗ ದ್ವೇಷ, ಪರಸ್ಪರ ಅವಹೇಳನ, ಸಂಕುಚಿತ ದೃಷ್ಟಿ, ಮಾನವೀಯ ದೃಷ್ಟಿಯೇ ಇಲ್ಲದ ಅಮಾನುಷ ಪಂಥಗಳು, ಎಲ್ಲಕ್ಕಿಂತ ಹೆಚ್ಚಾಗಿ ಈ ಶತಮಾನದ ಉಸಿರಾದ ವಿಜ್ಞಾನಕ್ಕೆ ಮುಖ ತಿರುಗಿಸಿ ನಿಲ್ಲುವ ಪರಮ ಅವೈಜ್ಞಾನಿಕತೆ ಇತ್ಯಾದಿಗಳಿಗೆಲ್ಲ ಇದು ಸ್ಫೂರ್ತಿ ಕೊಟ್ಟಿದೆ.’ ಈ ಮಾತುಗಳು ಇಂದಿನ ಪರಿಸ್ಥಿತಿಯ ಅವಲೋಕನಕ್ಕೆ ಅತ್ಯಂತ ಸೂಕ್ತವಾಗಿವೆ. ಅಲೆಮಾರಿ ಜೀವನಶೈಲಿಯಿಂದ ಕೃಷಿ ಪದ್ಧತಿಗೆ ಸ್ಥಿತ್ಯಂತರಗೊಂಡ ನಂತರ ಮಾನವನ ವಿಕಾಸದಲ್ಲಿ ಮೊತ್ತಮೊದಲ ಬಾರಿಗೆ ಸಾಮಾಜಿಕ ವ್ಯವಸ್ಥೆ, ಸಮುದಾಯ ಪ್ರಜ್ಞೆ ಜನನವಾಯಿತು.
ಈ ಪ್ರಜ್ಞೆಯಲ್ಲಿ ಇನ್ನಷ್ಟು ಜಾಗೃತವಾದದ್ದು ವಿಜ್ಞಾನವೆಂಬ ಮಾರ್ಗ. ವಿಜ್ಞಾನವು ಪರಿಕಲ್ಪನೆಯಲ್ಲ. ಒಂದು ಪರಿಕಲ್ಪನೆಯನ್ನು ಪರೀಕ್ಷೆಗೊಳಪಡಿಸಿ ಅದರ ಸಾಧಕ-ಬಾಧಕಗಳನ್ನು, ಸಿಂಧುತ್ವವನ್ನು ಖಾತರಿಪಡಿಸಿಕೊಳ್ಳುವ ಒಂದು ಕ್ರಮಬದ್ಧ ವಿಧಾನ. ಒಳ-ಹೊರ ಜಗತ್ತಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಮಾನವ ಸಮಾಜಕ್ಕಿರುವ ಏಕೈಕ ಮಾರ್ಗ. ಅಪರೂಪದ ವಿಧಾನ. ಈ ವಿಧಾನದಲ್ಲಿ ಪ್ರಗತಿ ಕಂಡಂತೆ ಎಲ್ಲಾ ಜ್ಞಾನ ಕ್ಷೇತ್ರಗಳೂ ಪ್ರಗತಿ ಕಂಡಿವೆ. ಅದು ಸಮಾಜ ಶಾಸ್ತ್ರವಿರಲಿ, ಗಣಿತ ಶಾಸ್ತ್ರವಿರಲಿ, ಭೌತ ವಿಜ್ಞಾನವಿರಲಿ, ವೈದ್ಯಕೀಯ ಶಾಸ್ತ್ರವಿರಲಿ, ನೀತಿಶಾಸ್ತ್ರವಿರಲಿ ಅಥವಾ ಭಾಷಾ ಶಾಸ್ತ್ರವಿರಲಿ. ಯಾವುದೇ ಜ್ಞಾನ ಶಾಖೆಯ ವಿಕಸನದಲ್ಲಿ ಆಯಾ ಶಾಖೆಯ ಕ್ರಮಬದ್ಧ ಅಧ್ಯಯನ, ಸಂಶೋಧನಾ ವಿಧಾನಗಳು, ವ್ಯಾಖ್ಯಾನ ವಿಧಾನಗಳಿಗೆ ಬೇಕಾಗುವ ವೈಚಾರಿಕ ಬುದ್ಧಿಶಕ್ತಿಯನ್ನು ನೀಡುವ ವಿಜ್ಞಾನ ಎಂಬ ಪದ್ಧತಿಯು ಹಾಸುಹೊಕ್ಕಾಗಿದೆ. ಈ ಪದ್ಧತಿಯ ಆಳ-ಅಗಲಗಳನ್ನು ಬಲ್ಲ ಸೈದ್ಧಾಂತಿಕ ಜ್ಞಾನವಷ್ಟೇ ಅಲ್ಲದೆ, ಈ ಜ್ಞಾನವನ್ನು ಕಾರ್ಯರೂಪಕ್ಕೆ ಇಳಿಸಿ ಆಯಾ ಕ್ಷೇತ್ರಗಳಲ್ಲಿ ವ್ಯಾವಹಾರಿಕ ಪ್ರಾಯೋಗಿಕತೆಯನ್ನು ರೂಢಿಸಿಕೊಳ್ಳುವವರು ಮಾತ್ರ ಪರಿಣಿತರು ಎನ್ನಿಸಿಕೊಳ್ಳುತ್ತಾರೆ. ಇದಕ್ಕೆ ಆಯಾ ಕ್ಷೇತ್ರಗಳಲ್ಲಿನ ಹಲವು ವರ್ಷಗಳ ದುಡಿಮೆ, ಅನುಭವ, ಅನುಭವಗಳ ಮುಖೇನ ಅರಿವಿಗೆ ಬರುವ ಸೂಕ್ಷ್ಮತೆಗಳು, ಒಳನೋಟಗಳು ಒಬ್ಬ ವ್ಯಕ್ತಿಯನ್ನು ಪರಿಣಿತಳ/ನನ್ನಾಗಿ ಮಾಡುತ್ತವೆ. ಇಂತಹವರನ್ನು ವಿಷಯ ತಜ್ಞರು, ವಿದ್ವಾಂಸರು ಎಂದು ನಾವು ಪರಿಗಣಿಸುತ್ತೇವೆ. ಆದರೆ ಇಂದಿನ ಸಮೂಹ ಮಾಧ್ಯಮದ ಯುಗದಲ್ಲಿ ಎಲ್ಲರೂ ತಜ್ಞರೇ ಆಗುತ್ತಿರುವಾಗ ವಿಷಯ ತಜ್ಞತೆ, ಪರಿಣಿತಿ ಮತ್ತು ನೈಪುಣ್ಯತೆಗಳನ್ನು ಗುರುತಿಸುವ ಸೂಕ್ಷ್ಮತೆಯನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಈಗ ನಮ್ಮ ಮುಂದಿರುವ ಪಠ್ಯಪುಸ್ತಕ ಮರುಪರಿಷ್ಕರಣೆಯ ಸಮಿತಿಯ ಅಧ್ಯಕ್ಷರು ಮತ್ತು ಬಹುಪಾಲು ಸದಸ್ಯರು ಎನ್ನಬಹುದಾಗಿದೆ. ಸಮಾಜದ ಒಂದು ವರ್ಗ ಈ ಸಮಿತಿಯನ್ನು ಹಾಡಿ ಹೊಗಳುತ್ತಿದೆ. ಇನ್ನೊಂದು ವರ್ಗ ಈ ಸಮಿತಿಯನ್ನು ತಿರಸ್ಕರಿಸಿದೆ. ಪರಸ್ಪರ ವಾದ ವಿವಾದಗಳು ಸಮೂಹ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟರ್, ಕ್ಲಬ್ ಹೌಸ್ ಮುಂತಾದ ಕಡೆ ನಡೆಯುತ್ತಿವೆ.
ರಸ್ತೆಗಿಳಿದು ಹೋರಾಟಗಳಾಗುತ್ತಿದ್ದರೂ ಸಮಾಜದ ಬಹುಪಾಲು ವರ್ಗ ಈ ಸಂವಾದದಿಂದ ದೂರ ಉಳಿದಿದೆ. ಇಲ್ಲವೇ ವಾಟ್ಸ್ಆ್ಯಪ್ನಲ್ಲಿ ಬರುವ ವಿವರಣೆಗಳಿಗೆ ತಲೆಯಾಡಿಸುತ್ತಿವೆ. ಇಲ್ಲಿ ತಜ್ಞರ ಮಾತುಗಳನ್ನು ಕೇಳುತ್ತಿರುವವರು ಯಾರು? ಮೊದಲಿಗೆ ಸಮಾಜಕ್ಕೆ ತಜ್ಞರು ಯಾರು ಎಂಬುದರಲ್ಲೇ ಗೊಂದಲವಿದೆ. ಹಲವಾರು ಸಾಮಾಜಿಕ ಪರಿಕಲ್ಪನೆಗಳನ್ನು ಸಂಕ್ಷಿಪ್ತ ರೂಪದಲ್ಲಿ ಒಮ್ಮೆಲೇ ಓದುವ ಇಂದಿನ ಜನರು ಯಾವುದೇ ವಿಷಯವನ್ನು ಆಳವಾಗಿ ಅರಿಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ತಕ್ಷಣಕ್ಕೆ ಸಿಗುವ ಸುದ್ದಿಗಳು ಮತ್ತು ಪ್ರಸಿದ್ಧರ ಮಾತುಗಳನ್ನೇ ವಿಷಯದ ಸತ್ಯಾಸತ್ಯತೆಯನ್ನು ನಿರ್ಧರಿಸಲು ಉಪಯೋಗಿಸುತ್ತಾರೆ. ತಾಳ್ಮೆ, ಶ್ರಮ ಮತ್ತು ವೈಚಾರಿಕತೆ ಇವು ವಿಷಯದ ಸಮಗ್ರತೆಯನ್ನು ಅರಿಯಲು ಬೇಕಾಗುವ ಮೂಲಭೂತ ಗುಣಗಳು. ಆದರೆ ಈಗಿನ ಸಮೂಹ ಮಾಧ್ಯಮದ ಬಳಕೆ ನಮ್ಮಲ್ಲಿ ಇವೆಲ್ಲವುಗಳನ್ನೂ ಸಾರಾಸಗಟಾಗಿ ಕಿತ್ತೆಸೆದು ಇವುಗಳ ಬದಲಾಗಿ ಕ್ಷಣಿಕ ಗಮನ ಸೆಳೆಯುವ ಅತ್ಯಂತ ಕಡಿಮೆ ಶ್ರಮ ಬೇಡುವ ಓದು ನಮ್ಮದಾಗಿಸಿದೆ. ಅರಿವಿಗೆ ಬದಲಾಗಿ ಭಾವುಕತೆ, ರೋಚಕತೆ ನಮಗೆ ಬೇಕಾಗಿದೆ. ಯಾವುದೇ ವಿದ್ಯಮಾನವು ನಮ್ಮ ಗಮನ ಸೆಳೆಯಲು ಈ ಅಂಶಗಳಿದ್ದರೆ ಸಾಕು. ಇದರಿಂದ ವಿಚಾರ ಮಾಡುವ ನಮ್ಮ ಬುದ್ಧಿಮತ್ತೆ ಮಂದಗೊಂಡಿದೆ. ವೈಚಾರಿಕ ದೃಷ್ಟಿ ಮಾಯವಾಗಿದೆ. ಇದಕ್ಕೆ ಉದಾಹರಣೆಯಾಗಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಒಂದರ ಮೇಲೊಂದರಂತೆ ಮುನ್ನೆಲೆಗೆ ಬರುವ ವಿವಾದಗಳನ್ನು ಗಮನಿಸಿ: ಸಿಎಎ, ಕೋವಿಡ್ ಸುಳ್ಳು ಸುದ್ದಿಗಳು, ಹಿಜಾಬ್ ಮತ್ತು ಈಗಿನ ಪಠ್ಯಪುಸ್ತಕದ ಮರು ಪರಿಷ್ಕರಣೆಯಲ್ಲಿ ತುಂಬಿರುವ ರಾಷ್ಟ್ರೀಯವಾದದ ಹೆಸರಿನಲ್ಲಿ ಜಾತಿ ಮತ್ತು ಲಿಂಗ ತಾರತಮ್ಯ. ಮರು ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳನ್ನು ವಿವರಿಸಿ ವಿಷಯ ತಜ್ಞರು ಪತ್ರಿಕೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದಾರೆ. ಕೆಲವು ದಿನ ಪತ್ರಿಕೆಗಳು ರಾಜ್ಯ ಸರಕಾರದ ಪಠ್ಯ ಮರುಪರಿಷ್ಕರಣೆ ಮತ್ತು ಎನ್ಸಿಇಆರ್ಟಿ ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯ ಸತ್ಯಾಸತ್ಯತೆಗಳನ್ನು ಸಂಶೋಧಿಸಿ ಜನರ ಮುಂದಿಡುತ್ತಿವೆ. ಆದರೆ ಇವು ಜನರ ಪ್ರಜ್ಞೆಗೆ ತಾಕುವುದರಲ್ಲಿ ಯಶಸ್ವಿಯಾಗುತ್ತಿಲ್ಲ. ಸಮೂಹ ಮಾಧ್ಯಮ ಮತ್ತು ಟಿವಿ ಮಾಧ್ಯಮದ ಸುದ್ದಿ ಪಸರಿಸುವಿಕೆಯ ಮಧ್ಯೆ ಈ ತಜ್ಞರ ಲೇಖನಗಳು ಮತ್ತು ತಜ್ಞ ವರದಿಗಳು ಮೂಲೆಗುಂಪಾಗಿವೆ. ಏಕೆಂದರೆ ಇವುಗಳಲ್ಲಿ ಯಾವುದೇ ಅತಿಯಾದ ಭಾವುಕತೆಯಿಲ್ಲದೆ ವಿಷಯವನ್ನು ಸಂಯಮದಿಂದ ಚರ್ಚಿಸಲಾಗಿರುತ್ತದೆ. ವಿಷಯದ ಹಿನ್ನೆಲೆ ಮತ್ತು ಅದರ ಪರಿಣಾಮಗಳ ಬಗ್ಗೆ ಅಂಕಿ ಅಂಶಗಳು, ಆಕರಗಳು, ಪುರಾವೆಗಳನ್ನು ಪರಿಶೀಲಿಸಲಾಗಿರುತ್ತದೆ. ಈ ವಿಷಯಗಳನ್ನು ಸುಲಭದ ಭಾಷೆಯಲ್ಲಿಯೂ ತಿಳಿಸಲಾಗಿರುತ್ತದೆ. ಆದರೆ ಇವು ಏಕಾಗ್ರತೆಯ ಓದನ್ನು ಬೇಡುತ್ತವೆ. ಓದುಗರ ಈ ಕ್ಷಮತೆ ವಿಷಯದ ಗ್ರಹಿಕೆಗೆ ಸಾಕಾಗುತ್ತದೆ. ಆದರೆ ಜನರ ವಿಷಯ ಗ್ರಹಿಸುವ ಕ್ಷಮತೆಯ ಸ್ವರೂಪವೇ ಬದಲಾವಣೆಗೊಂಡಿದೆ. ಇಂದು 250 ಪದಗಳಿಗಿಂತ ಹೆಚ್ಚು ಓದುವ ಅಥವಾ ಹತ್ತು ನಿಮಿಷಗಳಿಗಿಂತ ಹೆಚ್ಚಾದ ವೀಡಿಯೊಗಳನ್ನು ಕೇಳುವಷ್ಟು ತಾಳ್ಮೆ ಜನರು ಕಳೆದುಕೊಂಡಿದ್ದಾರೆ. ಇದು ಸಮೂಹ ಮಾಧ್ಯಮದ ಅತಿಯಾದ ಗಮನ ಸೆಳೆಯುವ ತಂತ್ರಜ್ಞಾನದ ಫಲವಾಗಿದೆ.
ಪರಿಣತಿ ಎಂದರೆ ಯೂಟ್ಯೂಬ್ ಚಾನೆಲ್ನಲ್ಲಿ ಮಿಲಿಯನ್ಗಟ್ಟಲೆ ಸಬ್ಸ್ಕ್ರೈಬರ್ಸ್ ಹೊಂದಿರುವುದು, ವಾಕ್ ಚಾತುರ್ಯವಿದ್ದು ಜನರ ಭಾವನೆಗಳನ್ನು ತಲುಪುವ ಛಾತಿ ಇರುವುದು, ಸಮೂಹ ಮಾಧ್ಯಮಗಳ ತಮ್ಮ ಪೋಸ್ಟ್ಗಳಿಗೆ ವೈರಲ್ ಆಗುವ ಗುಣಗಳಿರುವುದು ಆಗಿದೆ! ಇಂತಹ ತಜ್ಞರನ್ನು ಒಂದು ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ಪಠ್ಯ ಪುಸ್ತಕ ಪರಿಷ್ಕರಣೆಯ ಸಮಿತಿಗೆ ನೇಮಿಸುವ ಬೇಜವಾಬ್ದಾರಿ ಕೆಲಸವನ್ನು ಸರಕಾರವೇಕೆ ಮಾಡಿತು? ಹಾಗಾದರೆ ವಿಷಯ ತಜ್ಞತೆ, ಪರಿಣತಿ ಇವುಗಳಿಗೆ ಸ್ಥಾನವಿಲ್ಲವೇ? ಈ ವಿದ್ಯಮಾನವನ್ನು ನಾವು ಈಗಿನ ಸಮೂಹ ಮಾಧ್ಯಮ ಮತ್ತು ಅದನ್ನು ರೂಪಿಸುತ್ತಿರುವ ಕೃತಕ ಬುದ್ಧಿಮತ್ತೆಯ ಹಿನ್ನೆಲೆಯಲ್ಲಿ ಅರಿಯಬೇಕು. ಈ ಪ್ರಕ್ರಿಯೆಯಲ್ಲಿ ಈಗಿನ ಸರಕಾರಗಳ ಪ್ರಜ್ಞಾಪೂರ್ವಕ ಪಾತ್ರವನ್ನೂ ನಾವು ಗಮನಿಸಬೇಕು. ಕೃತಕ ಬುದ್ಧಿಮತ್ತೆಯ ವ್ಯಾಪಕ ಬಳಕೆಯಿಂದ ಜನರ ಗಮನವನ್ನು ನಿರಂತರವಾಗಿ ಸೆಳೆಯುವ ವ್ಯವಸ್ಥೆಯನ್ನು ಈಗಿನ ಸರಕಾರಗಳು ಪರೋಕ್ಷವಾಗಿಯಾದರೂ ಬಳಸಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪ್ರಜೆಗಳ ಮೇಲಿನ ತಮ್ಮ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲು ಈ ವಿದ್ಯಮಾನ ಅತ್ಯಂತ ಅನುಕೂಲಕರವಾಗಿದೆ ಎಂಬುದನ್ನು ನಾವು ಗಮನಿಸಬೇಕು. ಕರ್ನಾಟಕ ಸರಕಾರ ಮರು ಪರಿಷ್ಕೃತ ಪಠ್ಯಗಳು ಸರಿಯೋ ತಪ್ಪೋ ಎಂದು ಜನರ ಅಭಿಮತವನ್ನು ಕೇಳಿರುವುದು ಇದಕ್ಕೆ ಉದಾಹರಣೆಯಾಗಿದೆ. ಕಸ್ಟಮರ್ ಈಸ್ ಆಲ್ವೇಸ್ ರೈಟ್ ಎನ್ನುವ ಬಂಡವಾಳಶಾಹಿ ಸೂತ್ರವನ್ನು ಪಠ್ಯ ಪುಸ್ತಕದ ಸಾಧಕ ಬಾಧಕಗಳನ್ನು ನಿರ್ಧರಿಸಲು ಬಳಸುವ ಸರಕಾರದ ಧೋರಣೆ ಏನನ್ನು ತೋರಿಸುತ್ತದೆ? ಇದು ವಿಷಯ ತಜ್ಞರ ಮೇಲಿನ ನಂಬಿಕೆ ಮತ್ತು ಸಿಂಧುತ್ವವನ್ನು ದುರ್ಬಲಗೊಳಿಸುತ್ತದೆ.
ಈಗ ನಾವು ತಿಳಿದುಕೊಂಡಿರುವ ವಿಷಯಗಳು ಸರಿಯಾಗಿವೆಯೇ ಮತ್ತು ಅವು ನಮ್ಮದೆ ಅಭಿಪ್ರಾಯವೇ ಎಂದು ನಾವು ಯೋಚಿಸಿದಾಗ ಸಮೂಹ ಮಾಧ್ಯಮದ ಪ್ರಭಾವದ ಅರಿವು ನಮಗಾಗುತ್ತದೆ. ನನ್ನ ಅಭಿಪ್ರಾಯ ನನ್ನ ಸ್ವಂತ ಅಭಿಪ್ರಾಯವಾಗಿರದೆ ಸಮೂಹ ಮಾಧ್ಯಮದ ಸುಳ್ಳು ಸುದ್ದಿಯ ಆಗರದಲ್ಲಿ ರೂಪುಗೊಂಡ ವಿಚಾರಗಳಾಗಿರುತ್ತವೆ. ಇದನ್ನೇ ನಮ್ಮ ಸ್ವಂತ ಅಭಿಪ್ರಾಯವೆಂದು ಭ್ರಮಿಸುವ ಕಾಲದಲ್ಲಿ ನಾವಿದ್ದೇವೆ. ಇದು ಕೃತಕ ಬುದ್ಧಿಮತ್ತೆ ನಮ್ಮ ಆಲೋಚನೆಗಳನ್ನು ಬಿತ್ತುವ ಪ್ರಕ್ರಿಯೆಯಾಗಿದೆ. ಇದನ್ನು ಅರಿಯಲೇ ಬೇಕಾದ ತುರ್ತು ಮಾನವ ಸಮುದಾಯಕ್ಕಿದೆ. ಇಂತಹ ಜನಾಭಿಪ್ರಾಯ ಪಠ್ಯ ಪುಸ್ತಕ ಪರಿಷ್ಕರಣೆಯಂತಹ ಗಂಭೀರ ವಿಷಯಕ್ಕೆ ಪೂರಕವಾದ ಜ್ಞಾನವನ್ನು ನೀಡುತ್ತದೆಯೇ?
ಸ್ವಂತ ಬುದ್ಧಿಯ ವಿಚಾರವಂತಿಕೆಗೆ ಬೇಕಾಗುವ ವೈಚಾರಿಕತೆ ಮತ್ತು ವೈಜ್ಞಾನಿಕ ವಿಧಾನವನ್ನು ರೂಪುಗೊಳಿಸಲು ಸರಕಾರಗಳು ಗುರುತರ ಜವಾಬ್ದಾರಿ ಹೊರಬೇಕಾಗುತ್ತದೆ. ಸುಳ್ಳು ಸುದ್ದಿಗಳ ಜಾಲದಲ್ಲಿ ಬೀಳದಂತೆ ಸಮೂಹ ಮಾಧ್ಯಮ ಮತ್ತು ಇಂಟರ್ನೆಟ್ ಬಳಕೆಗೆ ಸೂಕ್ತ ನಿಯಂತ್ರಣದ ಕಾನೂನುಗಳನ್ನು ತರಬೇಕಾಗುತ್ತದೆ. ಯಾವುದೇ ವಿಷಯವನ್ನು ಉಚಿತವಾಗಿ ದೊರಕಿಸಿಕೊಡುವ ಇಂಟರ್ನೆಟ್ ಬಳಕೆಯನ್ನು ಬದಲಿಸಿ ವಿಷಯ/ಸುದ್ದಿಗೆ ಶುಲ್ಕ ಪಾವತಿಸಿ ಓದುವ ಅಥವಾ ಸ್ವೀಕರಿಸುವ ವಿಧಾನವನ್ನು ಪರಿಚಯಿಸಬೇಕು ಎಂದು ಹಲವು ಡಿಜಿಟಲ್ ಮತ್ತು ನೀತಿಶಾಸ್ತ್ರ ತಜ್ಞರು ಚರ್ಚಿಸುತ್ತಿದ್ದಾರೆ. ಆದರೆ ಅಭಿವ್ಯಕ್ತಿ ಸ್ವಾತಂತ್ರದ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಈ ರೀತಿಯ ಬದಲಾವಣೆಗಳನ್ನು ತರುವುದು ಸದ್ಯಕ್ಕೆ ಸರಕಾರಗಳಿಗಿರುವ ಸವಾಲಾಗಿದೆ. ಅಂತೆಯೇ ಬಂಡವಾಳಶಾಹಿ ಉದ್ಯಮಿಗಳ ಕೈಯಲ್ಲಿ ಸಿಲುಕಿರುವ ಟಿವಿ ಮತ್ತು ಸಮೂಹ ಮಾಧ್ಯಮಗಳನ್ನು ಕೃತಕ ಬುದ್ಧಿಮತ್ತೆಯ ದುರ್ಬಳಕೆಯಿಂದ ತಪ್ಪಿಸಲು ಪ್ರಜಾಪ್ರಭುತ್ವ-ಜೀವಪರ ಪರಿಕಲ್ಪನೆಯಲ್ಲಿ ಬದ್ಧತೆಯಿರುವ ಸರಕಾರಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಈ ರೀತಿಯ ಸರಕಾರಗಳನ್ನು ರೂಪಿಸಲು ಜನರು ತಮ್ಮ ಸ್ವಂತ ಬುದ್ಧಿ ಶಕ್ತಿಯನ್ನು ಮತ್ತೆ ಮರು ಪಡೆಯಬೇಕಿದೆ.
ತಮ್ಮ ಸ್ವಾರ್ಥ, ಭಾವುಕತೆ ಮತ್ತು ಜಾತಿವಾದವನ್ನು ಬಿಟ್ಟು ಸೌಹಾರ್ದ, ಜೀವಪರ ದೃಷ್ಟಿ ಮತ್ತು ವೈಚಾರಿಕ ಸಂಯಮವನ್ನು ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ವೈಚಾರಿಕತೆ ಮತ್ತು ಮಾನವತೆಯನ್ನು ಅರಳಿಸುವಂತಹ ಜವಾಬ್ದಾರಿ ಹೊರಲಿ. ಸಮಾಜದಲ್ಲಿ ಜಾತಿ ಮತ್ತು ಧರ್ಮ ತಾರತಮ್ಯವನ್ನು ಬೆಳೆಸಿ ವಿಜ್ಞಾನದಿಂದ ನಮ್ಮ ಯುವ ಮನಸ್ಸುಗಳನ್ನು ವಿಮುಖಗೊಳಿಸದಿರಲಿ. ವಿಷಯ ತಜ್ಞತೆ ಮತ್ತು ಅನುಭವಕ್ಕೆ ಮಾನ್ಯತೆ ಸಿಗಲಿ.